ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇನಲ್ಲಿ ವಾಡಿಕೆಗಿಂತ ಹೆಚ್ಚು ತಾಪಮಾನ, ಬಿಸಿಗಾಳಿ ದಿನಗಳು ಅಧಿಕ: ಐಎಂಡಿ

Published 1 ಮೇ 2024, 23:30 IST
Last Updated 1 ಮೇ 2024, 23:30 IST
ಅಕ್ಷರ ಗಾತ್ರ

ನವದೆಹಲಿ: ಮೇ ತಿಂಗಳಲ್ಲಿ ದೇಶದ ಬಹುತೇಕ ಭಾಗಗಳಲ್ಲಿ ವಾಡಿಕೆಯ ಗರಿಷ್ಠ ಮಟ್ಟಕ್ಕಿಂತ ಅಧಿಕ ತಾಪಮಾನ ಇರಲಿದೆ. ಅಲ್ಲದೇ, ಉತ್ತರದ ಬಯಲು ಪ್ರದೇಶಗಳು ಮತ್ತು ಕೇಂದ್ರೀಯ ಪ್ರದೇಶದಲ್ಲಿ ಬಿಸಿ ಗಾಳಿ ಬೀಸುವ ದಿನಗಳ ಸಂಖ್ಯೆಯೂ ಅಧಿಕವಿರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಬುಧವಾರ ಹೇಳಿದೆ.

ದೇಶದ ಪೂರ್ವ, ಈಶಾನ್ಯ ಹಾಗೂ ದಕ್ಷಿಣ ಪ್ರದೇಶಗಳಲ್ಲಿ ಏಪ್ರಿಲ್‌ನಲ್ಲಿ ಬಿಸಿಗಾಳಿ ಜನರನ್ನು ಹೈರಾಣಾಗಿಸಿದೆ. ಆರೋಗ್ಯ ಸಮಸ್ಯೆಗಳು ಎದುರಾಗುವ ಕುರಿತು ಸರ್ಕಾರ ಜನರಿಗೆ ಎಚ್ಚರಿಕೆ ನೀಡಿತ್ತು. ಹಲವು ರಾಜ್ಯಗಳ ಶಾಲೆಗಳಲ್ಲಿ ಭೌತಿಕ ತರಗತಿಗಳನ್ನು ರದ್ದುಗೊಳಿಸಲಾಗಿತ್ತು. ಈಗ, ಮೇನಲ್ಲಿ ಸಹ ಬಿಸಿಗಾಳಿ ದಿನಗಳು ಎದುರಾಗಲಿವೆ ಎಂಬ ಮುನ್ಸೂಚನೆ ಎಚ್ಚರಿಕೆ ಗಂಟೆಯಾಗಿದೆ.

ಬಿಸಿಗಾಳಿ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಇಲಾಖೆಯ ಮಹಾ ನಿರ್ದೇಶಕ ಮೃತ್ಯುಂಜಯ ಮಹಾಪಾತ್ರ, ‘ಕರ್ನಾಟಕದ ಉತ್ತರ ಒಳನಾಡು ಮತ್ತು ತೆಲಂಗಾಣದಲ್ಲಿ ಈ ತಿಂಗಳು 5–7 ದಿನಗಳಷ್ಟು ಕಾಲ ಬಿಸಿಗಾಳಿ ಬೀಸಲಿದೆ’ ಎಂದರು.

‘ರಾಜಸ್ಥಾನದ ದಕ್ಷಿಣ ಭಾಗ, ಮಧ್ಯಪ್ರದೇಶದ ಪಶ್ಚಿಮ ಭಾಗ, ಮಹಾರಾಷ್ಟ್ರದ ವಿದರ್ಭ, ಮರಾಠವಾಡ ಹಾಗೂ ಗುಜರಾತ್‌ನಲ್ಲಿ ಈ ತಿಂಗಳು 8–11 ದಿನಗಳಷ್ಟು ಕಾಲ ಬಿಸಿಗಾಳಿ ಬೀಸುವ ಸಾಧ್ಯತೆ ಇದೆ’ ಎಂದು ತಿಳಿಸಿದರು.

‘ರಾಜಸ್ಥಾನದ ಉಳಿದ ಪ್ರದೇಶಗಳು, ಮಧ್ಯಪ್ರದೇಶದ ಪೂರ್ವಭಾಗ, ಪಂಜಾಬ್‌, ಹರಿಯಾಣ, ಚಂಡೀಗಢ, ದೆಹಲಿ, ಉತ್ತರ ಪ್ರದೇಶ, ಛತ್ತೀಸಗಢದ ಕೆಲ ಭಾಗಗಳು, ಪಶ್ಷಿಮ ಬಂಗಾಳ, ಜಾರ್ಖಂಡ್, ಬಿಹಾರದಲ್ಲಿ 5–7 ದಿನಗಳಷ್ಟು ಕಾಲ ಬಿಸಿ ಗಾಳಿ ಬೀಸುವ ಸಾಧ್ಯತೆ ಇದೆ’ ಎಂದೂ ಮಹಾಪಾತ್ರ ತಿಳಿಸಿದರು.

‘ಈಶಾನ್ಯ ಭಾರತದ ಬಹುತೇಕ ಪ್ರದೇಶಗಳು, ದೇಶದ ವಾಯವ್ಯ ಮತ್ತು ಕೇಂದ್ರೀಯ ಭಾಗಗಳಲ್ಲಿ ಸಾಮಾನ್ಯ ಇಲ್ಲವೇ ವಾಡಿಕೆಯ ಗರಿಷ್ಠ ತಾಪಮಾನಕ್ಕಿಂತ ಕಡಿಮೆ ಉಷ್ಣಾಂಶ ಕಂಡುಬರುವ ಸಾಧ್ಯತೆ ಇದೆ’ ಎಂದು ಹೇಳಿದರು.

ದೇಶದ ಪಶ್ಚಿಮ ಭಾಗದಲ್ಲಿ ಕಂಡುಬಂದ ಪ್ರಕ್ಷುಬ್ಧತೆಯಿಂದಾಗಿ ದೇಶದ ಉತ್ತರ ಮತ್ತು ಕೇಂದ್ರೀಯ ಪ್ರದೇಶಗಳಲ್ಲಿ ಆಲಿಕಲ್ಲು ಸಹಿತ ಮಳೆಯಾಯಿತು. ಇದು ಈ ಪ್ರದೇಶಗಳಲ್ಲಿ ಏಪ್ರಿಲ್‌ನಲ್ಲಿ ಸ್ವಲ್ಪಮಟ್ಟಿಗೆ ಬಿಸಿಗಾಳಿ ಬೀಸುವುದನ್ನು ತಡೆಯಲು ನೆರವಾಯಿತು ಎಂದು ಹೇಳಿದರು.

'ಬಂಗಾಳ ಕೊಲ್ಲಿಯ ಪಶ್ಚಿಮ ಕೇಂದ್ರ ಭಾಗ ಹಾಗೂ ದೇಶದ ಪೂರ್ವ ಕರಾವಳಿಯ ಕೆಳಮಟ್ಟದಲ್ಲಿ ಬಹಿರ್ಮುಖಿ ಚಂಡಮಾರುತ ಮುಂದುವರಿದಿತ್ತು. ಚಂಡಮಾರುತದಿಂದ ಕೂಡಿದ ಮಳೆಯೂ ಬಿದ್ದಿಲ್ಲ. ಈ ಪ್ರಾಕೃತಿಕ ವಿದ್ಯಮಾನ, ಏಪ್ರಿಲ್‌ ತಿಂಗಳಿನಲ್ಲಿ ದೇಶದ ದಕ್ಷಿಣ ಹಾಗೂ ಪೂರ್ವ ಭಾಗದಲ್ಲಿ ದೀರ್ಘಾವಧಿಗೆ ಬಿಸಿಗಾಳಿ ಬೀಸುವುದಕ್ಕೆ ಕಾರಣವಾಗಿತ್ತು’ ಎಂದು ಮಹಾಪಾತ್ರ ವಿವರಿಸಿದರು.

ಕೇಂದ್ರದಲ್ಲಿ ಅಧಿಕ ಒತ್ತಡ ಪ್ರದೇಶವಿದ್ದು, ಸುತ್ತಲೂ ಚಕ್ರಾಕಾರವಾಗಿ ಬೀಸುವ ಮತ್ತು ಸುತ್ತಮುತ್ತಲ ವಿಶಾಲ ಪ್ರದೇಶದಲ್ಲಿ ತಂಪಾದ ಒಣ ಹವೆಯನ್ನು ಉತ್ಪತ್ತಿ ಮಾಡುವ ಮಾರುತಗಳು ಕಂಡುಬರುವ ವಿದ್ಯಮಾನಕ್ಕೆ ಬಹಿರ್ಮುಖಿ ಚಂಡಮಾರುತ (ಆ್ಯಂಟಿ ಸೈಕ್ಲೋನ್‌) ಎಂದು ಹೇಳಲಾಗುತ್ತದೆ.

ಆ್ಯಂಟಿ ಸೈಕ್ಲೋನ್‌ ವಿದ್ಯಮಾನವು, ಒಡಿಶಾ ಮತ್ತು ಪಶ್ಚಿಮ ಬಂಗಾಳದತ್ತ ಕಡಲಗಾಳಿ ಬೀಸುವುದರ ಮೇಲೆಯೂ ಪರಿಣಾಮ ಬೀರಿತ್ತು.

ದಕ್ಷಿಣ ಭಾರತದಲ್ಲಿ ಏಪ್ರಿಲ್‌ನಲ್ಲಿ ಸರಾಸರಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿತ್ತು. ಇದು 1901ರಿಂದ ಈ ವರೆಗೆ ದಾಖಲಾದ ಎರಡನೇ ಗರಿಷ್ಠ ತಾಪಮಾನವಾಗಿದೆ ಎಂದು ಇಲಾಖೆ ಹೇಳಿದೆ.

1980ರ ನಂತರ ದಕ್ಷಿಣ ಭಾರತದಲ್ಲಿ ವಾಡಿಕೆಯ ಗರಿಷ್ಠ ತಾಪಮಾನಕ್ಕಿಂತ ಹೆಚ್ಚು ಉಷ್ಣಾಂಶ ದಾಖಲಾಗುವುದು ಪುನರಾವರ್ತನೆಯಾಗುತ್ತಿದೆ.
–ಮೃತ್ಯುಂಜಯ ಮಹಾಪಾತ್ರ, ಮಹಾನಿರ್ದೇಶಕ ಐಎಂಡಿ

ಪ್ರಮುಖ ಅಂಶಗಳು

* ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿಯ ಏಪ್ರಿಲ್‌ನಲ್ಲಿ ಬಿಸಿಗಾಳಿ ತೀವ್ರತೆ ಅಧಿಕವಿತ್ತು.

* 2023 ಈ ವರೆಗೆ ದಾಖಲಾದ ಅಧಿಕ ತಾಪಮಾನದಿಂದ ಕೂಡಿದ ವರ್ಷವೆನಿಸಿದೆ.

* ಮೇ ತಿಂಗಳಲ್ಲಿ ವಾಡಿಕೆ ಮಳೆ ಬೀಳುವ ಸಾಧ್ಯತೆ ಇದೆ (ದೀರ್ಘ ಅವಧಿಯ ಸರಾಸರಿಯ ಶೇ 91–ಶೇ 109ರಷ್ಟು)

* ದಕ್ಷಿಣ ಭಾಗದಲ್ಲಿ ಏಪ್ರಿಲ್‌ನಲ್ಲಿ 12.6 ಮಿ.ಮೀ.ನಷ್ಟು ಮಳೆ ಬಿದ್ದಿದೆ. 1901ರಿಂದ ಈವರೆಗೆ ಬಿದ್ದಿರುವ 5ನೇ ಕನಿಷ್ಠ ಪ್ರಮಾಣದ ಮಳೆ ಇದಾಗಿದೆ.

* ಲೋಕಸಭಾ ಚುನಾವಣೆಯ ಮತದಾನ ಮೇಲೆಯೂ ಬಿಸಿಗಾಳಿ ಬಿಸಿಲ ಧಗೆ ಪರಿಣಾಮ ಬೀರಿದ್ದು ಕೆಲವೆಡೆ ಕಡಿಮೆ ಪ್ರಮಾಣದ ಮತದಾನವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT