ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣಿಪುರ | ಕುಕಿ ಉಗ್ರರಿಂದ ದಾಳಿ, ಇಬ್ಬರು ಸಿಆರ್‌ಪಿಎಫ್ ಸಿಬ್ಬಂದಿ ಸಾವು

Published 27 ಏಪ್ರಿಲ್ 2024, 1:54 IST
Last Updated 27 ಏಪ್ರಿಲ್ 2024, 1:54 IST
ಅಕ್ಷರ ಗಾತ್ರ

ಇಂಫಾಲ್: ಮಣಿಪುರದ ಬಿಷ್ಣುಪುರ ಜಿಲ್ಲೆಯಲ್ಲಿರುವ ಭದ್ರತಾ ಪಡೆಗಳ ಶಿಬಿರದ ಮೇಲೆ ಶುಕ್ರವಾರ ಮಧ್ಯರಾತ್ರಿ ನಡೆದ ಉಗ್ರರ ದಾಳಿಯಲ್ಲಿ ಇಬ್ಬರು ಸಿಆರ್‌ಪಿಎಫ್ ಸಿಬ್ಬಂದಿ ಮೃತಪಟ್ಟಿದ್ದು, ಮತ್ತಿಬ್ಬರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

‘ಮೊಯಿರಾಂಗ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ನಾರನ್ಸೀನಾ ಎಂಬಲ್ಲಿರುವ ಭದ್ರತಾ ಸಿಬ್ಬಂದಿಯ ಶಿಬಿರದ ಮೇಲೆ ಉಗ್ರರು ಶುಕ್ರವಾರ ಮಧ್ಯರಾತ್ರಿ 12.30ರಿಂದ 2.15ರವರೆಗೆ ಗುಂಡಿನ ದಾಳಿ ನಡೆಸಿದ್ದಾರೆ. ಅಲ್ಲದೆ, ಉಗ್ರರು ಬಾಂಬ್‌ಗಳನ್ನು ಸಹ ಹಾಕಿದ್ದು, ಇದರಲ್ಲಿ ಒಂದು ಸಿಆರ್‌ಪಿಎಫ್‌ನ 128ನೇ ಬೆಟಾಲಿಯನ್ ಬಳಿ ಸ್ಫೋಟಗೊಂಡಿದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿ ಶನಿವಾರ ಮಾಹಿತಿ ನೀಡಿದ್ದಾರೆ. 

ಈ ಕೃತ್ಯವೆಸಗಿದ ಉಗ್ರರ ಹೆಡೆಮುರಿ ಕಟ್ಟಲು ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಜೊತೆಗೆ ಉಗ್ರರ ದಾಳಿಯಿಂದ ರಕ್ಷಣೆಗಾಗಿ ಭಾರತ ಮೀಸಲು ಪಡೆ (ಐಆರ್‌ಬಿ) ಶಿಬಿರದ ಸ್ಥಳದಲ್ಲಿ ಸಿಆರ್‌ಪಿಎಫ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ. 

ಸಿಆರ್‌ಪಿಎಫ್ ಸಬ್‌ಇನ್‌ಸ್ಪೆಕ್ಟರ್ ಎನ್. ಸರ್ಕಾರ್ ಮತ್ತು ಹೆಡ್‌ ಕಾನ್‌ಸ್ಟೆಬಲ್ ಅರೂಪ್ ಸೈನಿ ಮೃತಪಟ್ಟವರು. ಗಾಯಗೊಂಡ ಇನ್‌ಸ್ಪೆಕ್ಟರ್ ಜಾದವ್ ದಾಸ್ ಮತ್ತು ಕಾನ್‌ಸ್ಟೆಬಲ್ ಅಫ್ತಾಬ್ ದಾಸ್ ಅವರಿಗೆ ಇಂಫಾಲ್‌ನಲ್ಲಿರುವ ಪ್ರಾಂತೀಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದಿದ್ದಾರೆ. 

ಉಗ್ರ ಸಂಘಟನೆಗೆ ಎಚ್ಚರಿಕೆ ಇಂಫಾಲ್

ಮಣಿಪುರದ ಬಿಷ್ಣುಪುರ ಜಿಲ್ಲೆಯಲ್ಲಿ ಇಬ್ಬರು ಸಿಆರ್‌ಪಿಎಫ್ ಸಿಬ್ಬಂದಿ ಕೊಲೆಗೆ ಕಾರಣವಾದ ಉಗ್ರ ಸಂಘಟನೆಯು ತಕ್ಕ ಪರಿಣಾಮವನ್ನು ಎದುರಿಸಲಿದೆ ಎಂದು ಮಣಿಪುರ ಸರ್ಕಾರದ ಭದ್ರತಾ ಸಲಹೆಗಾರ ಕುಲದೀಪ್ ಸಿಂಗ್ ಅವರು ಉಗ್ರ ಸಂಘಟನೆಗೆ ಕಠಿಣ ಎಚ್ಚರಿಕೆ ರವಾನಿಸಿದ್ದಾರೆ. 

ಎರಡು ಸ್ಥಳಗಳಲ್ಲಿ ಗುಂಡಿನ ದಾಳಿ

ಈಚೆಗೆ ಇನ್ನರ್‌ ಮಣಿಪುರ ಲೋಕಸಭಾ ಕ್ಷೇತ್ರದ ಎರಡು ಸ್ಥಳಗಳಲ್ಲಿ ಗುಂಡಿನ ದಾಳಿ ನಡೆದ ಘಟನೆಗಳು ವರದಿಯಾಗಿದ್ದವು.

ಬಿಷ್ಣುಪುರ ಜಿಲ್ಲೆಯ ಮೊಯಿರಾಂಗ್‌ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತಮ್ನಾಪೊಕ್ವಿಯಲ್ಲಿ ಶಸ್ತ್ರಸಜ್ಜಿತ ವ್ಯಕ್ತಿಗಳು ಮತಗಟ್ಟೆ ಬಳಿ ಗಾಳಿಯಲ್ಲಿ ಹಲವು ಸುತ್ತು ಗುಂಡು ಹಾರಿಸಿ ಮತದಾರರನ್ನು ಓಡಿಸಿದ್ದಾರೆ ಎಂದು ಪೊಲೀಸರು ಹೇಳಿದ್ದರು. ಪರಿಸ್ಥಿತಿ ನಿಯಂತ್ರಿಸಲು ಹೆಚ್ಚುವರಿ ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಕರೆಸಲಾಯಿತು ಎಂದು ಅವರು ತಿಳಿಸಿದ್ದರು.

ಇಂಫಾಲ್‌ ಪಶ್ಚಿಮ ಜಿಲ್ಲೆಯ ಉರಿಪೋಕ್‌ ಮತ್ತು ಇರೊಯಿಶೆಂಬಾದಲ್ಲಿ ಶಸ್ತ್ರಸಜ್ಜಿತ ವ್ಯಕ್ತಿಗಳು ನಿರ್ದಿಷ್ಟ ರಾಜಕೀಯ ಪಕ್ಷದ ಚುನಾವಣಾ ಏಜೆಂಟರನ್ನು ಬೆದರಿಸಿ, ಮತಗಟ್ಟೆಗಳಿಂದ ಹೊರ ಹೋಗುವಂತೆ ಹೆದರಿಸಿದರು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದರು.

ಇರೊಯಿಶೆಂಬಾದಲ್ಲಿ ಮತಗಟ್ಟೆಗಳಲ್ಲಿನ ಚುನಾವಣಾ ಸಾಮಗ್ರಿಗಳು ಮತ್ತು ಸಲಕರಣೆಗಳನ್ನು ನಾಶಪಡಿಸಿರುವ ಘಟನೆ ನಡೆದಿತ್ತು. ಇಂಫಾಲ್‌ ಪೂರ್ವ ಜಿಲ್ಲೆಯ ಖೋಂಗ್‌ಮನ್‌ ವಲಯ 4ರಲ್ಲಿ ಮತದಾರರು ಮತ್ತು ಅಪರಿಚಿತ ವ್ಯಕ್ತಿಗಳ ನಡುವೆ ವಾಗ್ವಾದ ನಡೆದು, ಇವಿಎಂಗಳು ಹಾನಿಯಾಗಿದ್ದವು. ಕೀರಾವೊ ವ್ಯಾಪ್ತಿಯ ಕಿಯಾಮ್‌ಗೆಯಲ್ಲಿ ಶಸ್ತ್ರಸಜ್ಜಿತ ವ್ಯಕ್ತಿಗಳು ಖಾಲಿ ಗುಂಡುಗಳನ್ನು ಹಾರಿಸಿ, ಮತಗಟ್ಟೆಗಳಿಂದ ಕಾಂಗ್ರೆಸ್‌ ಏಜೆಂಟರನ್ನು ಬೆದರಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT