ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡ್ರೋನ್ ದಾಳಿ: ಇಸ್ರೇಲ್‌ನಿಂದ ಪ್ರತಿರೋಧ?

ಇರಾನ್‌ನ ಇಸ್ಪಾಹಾನ್‌ ನಗರದ ಸೇನಾ ನೆಲೆ ಗುರಿಯಾಗಿಸಿ ದಾಳಿ * ಹೊಡೆದುರುಳಿಸಿದೆ –ಇರಾನ್‌ ಹೇಳಿಕೆ
Published 19 ಏಪ್ರಿಲ್ 2024, 16:09 IST
Last Updated 19 ಏಪ್ರಿಲ್ 2024, 16:09 IST
ಅಕ್ಷರ ಗಾತ್ರ

ವಾಷಿಂಗ್ಟನ್‌/ದುಬೈ: ಇರಾನ್‌ನ ಇಸ್ಫಹಾನ್‌ ನಗರದಲ್ಲಿರುವ ಸೇನಾ ನೆಲೆಯನ್ನು ಗುರಿಯಾಗಿಸಿ ಇಸ್ರೇಲ್‌ ಶುಕ್ರವಾರ ಬೆಳಗಿನ ಜಾವ ಡ್ರೋನ್‌ ದಾಳಿಯನ್ನು ನಡೆಸಿದೆ.

ಈ ಬೆಳವಣಿಗೆ ಕುರಿತು ಮಾಹಿತಿ ಇರುವ ಮೂವರು ಇದನ್ನು ದೃಢಪಡಿಸಿದ್ದಾರೆ ಎಂದು ಇರಾನ್‌ನ ಅಧಿಕೃತ ಮಾಧ್ಯಮ ವರದಿ ಮಾಡಿದೆ. ರಕ್ಷಣಾತ್ಮಕವಾಗಿ ಸೇನೆಯು ಡ್ರೋನ್‌ಗಳನ್ನು ಹೊಡೆದುರುಳಿಸಿದೆ ಎಂದು ಹೇಳಿದೆ.

ಈ ದಾಳಿ ಪ್ರಕ್ರಿಯೆಯಲ್ಲಿ ಅಮೆರಿಕದ ಸೇನೆ ನೇರವಾಗಿ ಭಾಗಿಯಾಗಿಲ್ಲ. ಆದರೆ, ದಾಳಿಗೂ ಮುನ್ನ ಇಸ್ರೇಲ್‌ ಈ ಕುರಿತು ಅಮೆರಿಕಕ್ಕೆ ಮಾಹಿತಿ ನೀಡಿತ್ತು ಎಂದು ಮೂಲಗಳು ದೃಢಪಡಿಸಿವೆ.

ಇರಾನ್‌ನ ಫಾರ್ಸ್‌ ಸುದ್ದಿ ಸಂಸ್ಥೆಯ ಪ್ರಕಾರ, ನಗರದಲ್ಲಿರುವ ಸೇನಾ ನೆಲೆಯ ಸಮೀಪ ಮೂರು ಸ್ಫೋಟ ಸಂಭವಿಸಿವೆ. ‘ಮಧ್ಯರಾತ್ರಿ ಬಳಿಕ ಮೂರು ಡ್ರೋನ್‌ಗಳು ವಾಯುಗಡಿಯಲ್ಲಿ ಕಂಡುಬಂದವು.

‘ವಾಯುದಾಳಿ ರಕ್ಷಣಾ ವ್ಯವಸ್ಥೆಯು ಪ್ರತಿದಾಳಿ ನಡೆಸಿದ್ದು, ಅವುಗಳನ್ನು ಆಗಸದಲ್ಲೇ ಹೊಡೆದು ಉರುಳಿಸಲಾಯಿತು. ಈಗ ಸಹಜ ಪರಿಸ್ಥಿತಿ ನೆಲೆಸಿದೆ’ ಎಂದು ಇರಾನ್‌ನ ಅಧಿಕೃತ ಟಿ.ವಿ ವರದಿ ಮಾಡಿದೆ.

‘ಕ್ಷಿಪಣಿ ದಾಳಿ ನಡೆದಿಲ್ಲ. ಇರಾನ್‌ನ ವಾಯುದಾಳಿ ರಕ್ಷಣಾ ವ್ಯವಸ್ಥೆ ಚಾಲನೆಗೊಳಿಸಿದ್ದರ ಪರಿಣಾಮ ಸ್ಫೋಟದ ಶಬ್ದ ಕೇಳಿಸಿದೆ‘ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇರಾನ್‌ ಕಳೆದ ವಾರಾಂತ್ಯದಲ್ಲಿ ಇಸ್ರೇಲ್‌ ಮೇಲೆ ಡ್ರೋನ್‌ ಮತ್ತು ಕ್ಷಿಪಣಿ ದಾಳಿ ನಡೆಸಿತ್ತು. ಇದಕ್ಕೆ ಪ್ರತಿರೋಧವಾಗಿ ದಾಳಿ ನಡೆಸಲಾಗುವುದು ಎಂದು ಇಸ್ರೇಲ್‌ ಪ್ರತಿಕ್ರಿಯಿಸಿತ್ತು.

ಇಸ್ರೇಲ್‌ನಿಂದ ಸಂಭವನೀಯ ದಾಳಿ ನಡೆದಿದೆ ಎಂಬ ಕುರಿತಂತೆ ಇರಾನ್‌ನ ಯಾವುದೇ ಅಧಿಕಾರಿ ಪ್ರತಿಕ್ರಿಯಿಸಿಲ್ಲ. ಇಸ್ರೇಲ್‌ ಸೇನೆ ಕೂಡ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಗಾಜಾ ಪಟ್ಟಿಯಲ್ಲಿ ನಡೆಯುತ್ತಿರುವ ಹಮಾಸ್‌ ವಿರುದ್ಧದ ಯುದ್ಧದ ನಡುವೆಯೂ ಈ ಬೆಳವಣಿಗೆಯು ಬಿಗುವಿನ ಸ್ಥಿತಿಯನ್ನು ನಿರ್ಮಾಣ ಮಾಡಿದೆ.

ಒಟ್ಟು ಬೆಳವಣಿಗೆ ಕುರಿತು ಅಮೆರಿಕ ಅಧಿಕೃತವಾಗಿ ಪ್ರತಿಕ್ರಿಯಿಸಿಲ್ಲ. ಆದರೆ, ‘ದ ನ್ಯೂಯಾರ್ಕ್ ಟೈಮ್ಸ್‌’ನಲ್ಲಿ ಈ ದಾಳಿಯನ್ನು ಇಸ್ರೇಲ್ ನಡೆಸಿದೆ ಎಂದು ಅಮೆರಿಕದ ಅಧಿಕಾರಿಯೊಬ್ಬರ ಹೇಳಿಕೆ ಆಧರಿಸಿ ವರದಿ ಮಾಡಲಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT