ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇವಿಎಂಗಳಿಗೆ 3 ಹಂತದ ಭದ್ರತೆ: ಹಿರಿಯ ಅಧಿಕಾರಿಗಳಿಂದ ನಿತ್ಯ ಪರಿಶೀಲನೆ

Published 27 ಏಪ್ರಿಲ್ 2024, 15:28 IST
Last Updated 27 ಏಪ್ರಿಲ್ 2024, 15:28 IST
ಅಕ್ಷರ ಗಾತ್ರ

ಬೆಂಗಳೂರು: ಮೊದಲ ಹಂತದಲ್ಲಿ ಮತದಾನ ಪೂರ್ಣಗೊಂಡಿರುವ 14 ಲೋಕಸಭಾ ಕ್ಷೇತ್ರಗಳ ವಿದ್ಯುನ್ಮಾನ ಮತ ಯಂತ್ರಗಳನ್ನು ಇರಿಸಿರುವ ಭದ್ರತಾ ಕೊಠಡಿಗಳಿಗೆ ಮೂರು ಹಂತದ ಭದ್ರತೆ ಕಲ್ಪಿಸಲಾಗಿದೆ. ಭದ್ರತಾ ಕೊಠಡಿಗಳ ಮೇಲೆ ತೀವ್ರ ಕಣ್ಗಾವಲನ್ನೂ ಇರಿಸಲಾಗಿದೆ.

14 ಕ್ಷೇತ್ರಗಳಲ್ಲಿ ಶುಕ್ರವಾರ ಸಂಜೆ 5 ಗಂಟೆಗೆ ಮತದಾನ ಮುಕ್ತಾಯಗೊಂಡಿತ್ತು. ಮತದಾನದ ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ ವಿದ್ಯುನ್ಮಾನ ಮತ ಯಂತ್ರಗಳನ್ನು (ಇವಿಎಂ) ಮೊಹರು ಮಾಡಿ, ಭದ್ರತಾ ಕೊಠಡಿಗಳಿಗೆ ಸ್ಥಳಾಂತರಿಸಲಾಗಿದೆ. ಮರು ಮತದಾನ ಬಾಕಿ ಇರುವ ಹನೂರು ತಾಲ್ಲೂಕಿನ ಇಂಡಿಗನತ್ತ ಮತಗಟ್ಟೆ ಹೊರತುಪಡಿಸಿ ಉಳಿದ ಎಲ್ಲ ಇವಿಎಂಗಳೂ ಭದ್ರತಾ ಕೊಠಡಿಗಳಲ್ಲಿವೆ ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್‌ ಮೀನಾ ‘ಪ್ರಜಾವಾಣಿ’ಗೆ ತಿಳಿಸಿದರು.

ಬಿಬಿಎಂಪಿ ವ್ಯಾಪ್ತಿಯ ಮೂರು ಕ್ಷೇತ್ರಗಳ ಇವಿಎಂಗಳನ್ನು ಬೆಂಗಳೂರು ನಗರದಲ್ಲಿ ಇರಿಸಲಾಗಿದೆ. ಉಳಿದ 11 ಕ್ಷೇತ್ರಗಳ ಇವಿಎಂಗಳನ್ನು ಜಿಲ್ಲಾ ಕೇಂದ್ರಗಳಲ್ಲಿ ಇರಿಸಲಾಗಿದೆ. ಭದ್ರತಾ ಕೊಠಡಿಗಳ ಹೊರ ವಲಯದಲ್ಲಿ ಕೇಂದ್ರೀಯ ಮೀಸಲು ಪೊಲೀಸ್‌ ಪಡೆಯ ಸಿಬ್ಬಂದಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳೊಂದಿಗೆ ಪಹರೆ ಕಾಯುತ್ತಿದ್ದಾರೆ ಎಂದು ವಿವರಿಸಿದರು.

ಎರಡನೇ ಹಂತದಲ್ಲಿ ರಾಜ್ಯ ಸಶಸ್ತ್ರ ಮೀಸಲು ಪೊಲೀಸ್‌ ಪಡೆಯ ಸಿಬ್ಬಂದಿ ಭದ್ರತೆ ಒದಗಿಸುತ್ತಿದ್ದಾರೆ. ಇವಿಎಂಗಳನ್ನು ಇರಿಸಿರುವ ಕೊಠಡಿಗಳ ಬಾಗಿಲುಗಳ ಸಮೀಪದಲ್ಲಿ ಮೂರನೇ ಹಂತದ ಭದ್ರತೆಗೆ ಸಿವಿಲ್‌ ಪೊಲೀಸ್‌ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದರು.

ದಿನದ 24 ಗಂಟೆಯೂ ಮೂರು ಹಂತದ ಭದ್ರತಾ ವ್ಯವಸ್ಥೆ ಇರುತ್ತದೆ. ಭದ್ರತಾ ಪಡೆಗಳು ಮತ್ತು ಪೊಲೀಸ್‌ ಸಿಬ್ಬಂದಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ ಎಂದು ತಿಳಿಸಿದರು.

ನಿತ್ಯವೂ ಪರಿಶೀಲನೆ: ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಚುನಾವಣಾ ವೀಕ್ಷಕರು ಪ್ರತಿನಿತ್ಯ ಭದ್ರತಾ ಕೊಠಡಿಗಳಿಗೆ ಭೇಟಿನೀಡಿ ಪರಿಶೀಲನೆ ನಡೆಸುತ್ತಾರೆ. ದೈನಂದಿನ ಭೇಟಿಯ ಕುರಿತು ವರದಿಯನ್ನೂ ದಾಖಲಿಸಿಕೊಳ್ಳುತ್ತಾರೆ ಎಂದು ಮೀನಾ ಹೇಳಿದರು.

ಭದ್ರತಾ ಕೊಠಡಿಗಳ ಒಳಾಂಗಣ ಮತ್ತು ಹೊರಾಂಗಣಗಳಿಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಕ್ಯಾಮೆರಾದಲ್ಲಿ ಸೆರೆಯಾಗುವ ದೃಶ್ಯಾವಳಿಗಳನ್ನು ಟಿ.ವಿ ಮೂಲಕ ನೇರಪ್ರಸಾರದ ವ್ಯವಸ್ಥೆ ಮಾಡಲಾಗಿದೆ. ಅಭ್ಯರ್ಥಿಗಳು ಅಥವಾ ಅವರ ಏಜೆಂಟರು ಅಲ್ಲಿ ಭದ್ರತಾ ಕೊಠಡಿಗಳಲ್ಲಿನ ಸ್ಥಿತಿಗತಿ ಕುರಿತು ಮಾಹಿತಿ ಪಡೆಯಬಹುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT