ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ದಾಖಲೆಯ ಶೇ 76.72ರಷ್ಟು ಮತದಾನ

Published 27 ಏಪ್ರಿಲ್ 2024, 6:04 IST
Last Updated 27 ಏಪ್ರಿಲ್ 2024, 6:04 IST
ಅಕ್ಷರ ಗಾತ್ರ

ಚಾಮರಾಜನಗರ: ಹನೂರು ತಾಲ್ಲೂಕಿನ ಇಂಡಿಗನತ್ತ ಗ್ರಾಮದಲ್ಲಿ ನಡೆದ ಅಹಿತಕರ ಘಟನೆ ಬಿಟ್ಟು, ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶುಕ್ರವಾರ ಶಾಂತಿಯುತವಾಗಿ ದಾಖಲೆಯ ಮತದಾನ ನಡೆದಿದೆ. 

ಎಂಟು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ  ಶೇ 76.72ರಷ್ಟು ಮತದಾನವಾಗಿದೆ. ಲೋಕಸಭಾ ಕ್ಷೇತ್ರದಲ್ಲಿ ಈವರೆಗೆ ನಡೆದಿರುವ ದಾಖಲೆಯ ಮತದಾನ ಇದು. 2019ರಲ್ಲಿ 75.22ರಷ್ಟು ಮತದಾನವಾಗಿತ್ತು. 

ಒಟ್ಟು 17,78,310 ಮತದಾರರ ಪೈಕಿ, 6,81,965 ಪುರುಷರು, 6,82,341 ಮಹಿಳೆಯರು, 32 ಲಿಂಗತ್ವ ಅಲ್ಪ ಸಂಖ್ಯಾತರು ಸೇರಿದಂತೆ ಒಟ್ಟು 13,64,338 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.  

ಎಚ್‌.ಡಿ. ಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಶೇ 76.93, ನಂಜನಗೂಡಿನಲ್ಲಿ ಶೇ 76.79, ವರುಣ ಕ್ಷೇತ್ರದಲ್ಲಿ ಶೇ 78.35, ತಿ.ನರಸೀಪುರದಲ್ಲಿ ಶೇ 74.18, ಹನೂರಿನಲ್ಲಿ ಶೇ 71.99, ಕೊಳ್ಳೇಗಾಲದಲ್ಲಿ ಶೇ 74.43, ಚಾಮರಾಜನಗರದಲ್ಲಿ ಶೇ 78.54 ಮತ್ತು ಗುಂಡ್ಲುಪೇಟೆ ಕ್ಷೇತ್ರದಲ್ಲಿ ಶೇ 82.30 ರಷ್ಟು ಮತದಾನವಾಗಿದೆ. 

ಕ್ಷೇತ್ರದಲ್ಲಿ 2014ರಲ್ಲಿ ಶೇ 72.83ರಷ್ಟು ಮತ್ತು 2009ರಲ್ಲಿ ಶೇ 67.9ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು. 

ಇವಿಎಂನಲ್ಲಿ ಭವಿಷ್ಯ: ಎನ್‌ಡಿಎ ಮೈತ್ರಿ ಅಭ್ಯರ್ಥಿ ಎಸ್‌.ಬಾಲರಾಜು, ಕಾಂಗ್ರೆಸ್‌ನ ಸುನಿಲ್‌ಬೋಸ್‌, ಬಿಎಸ್‌ಪಿಯ ಎಂ.ಕೃಷ್ಣಮೂರ್ತಿ ಸೇರಿದಂತೆ 14 ಅಭ್ಯರ್ಥಿಗಳ ರಾಜಕೀಯ ಭವಿಷ್ಯವನ್ನು ಮತದಾರರು ಇವಿಎಂನಲ್ಲಿ ದಾಖಲಿಸಿದ್ದಾರೆ. 

ಎಂಟೂ ಕ್ಷೇತ್ರಗಳ ಮತಯಂತ್ರಗಳನ್ನು ನಗರದ ಹೊರವಲಯದ ಬೇಡರಪುರದಲ್ಲಿರುವ ಎಂಜಿನಿಯರಿಂಗ್‌ ಕಾಲೇಜಿನ ಸ್ಟ್ರಾಂಗ್‌ ರೂಂನಲ್ಲಿ ಇರಿಸಲಾಗಿದೆ. 

ಚಾಮರಾಜನಗರ ತಾಲ್ಲೂಕಿನ ಹೊಂಗನೂರಿನ ಮತಗಟ್ಟೆಯಲ್ಲಿ ಇವಿಎಂನಲ್ಲಿ ಕೆಲ ಕಾಲ ತಾಂತ್ರಿಕ ಕಾಣಿಸಿಕೊಂಡಿದ್ದು ಬಿಟ್ಟರೆ ಬೇರೆಲ್ಲೂ, ಸಮಸ್ಯೆ ಆಗಿರುವ ಬಗ್ಗೆ ವರದಿಯಾಗಿಲ್ಲ.  

ಬಿರುಸಿನ ಮತದಾನ: ಕ್ಷೇತ್ರದಾದ್ಯಂತ 2,000 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಬೆಳಿಗ್ಗೆ 7ಗಂಟೆಗೆ ಮತದಾನ ಪ್ರಾರಂಭವಾಯಿತು. ಸಂಜೆ 6ರವರೆಗೆ ಮತದಾನ ನಡೆಯಿತು.  

ಮಧ್ಯಾಹ್ನದ ಹೊತ್ತು ಬಿಸಿಲಿನ ತೀವ್ರತೆ ಇದ್ದುದರಿಂದ, ಮತದಾರರು ಮಧ್ಯಾಹ್ನ 12ರ ಒಳಗೆ ಮತ್ತು ಸಂಜೆ 4 ಗಂಟೆಯ ನಂತರ ಹೆಚ್ಚು ಮಂದಿ ಹಕ್ಕು ಚಲಾಯಿಸಿದರು. 

ಬೆಳಿಗ್ಗೆ 7 ಗಂಟೆಯಿಂದ 9 ಗಂಟೆಯವರೆಗೆ ಶೇ 7.70ರಷ್ಟು ಮತದಾನ ನಡೆಯಿತು. ಬೆಳಿಗ್ಗೆ 11ರ ಹೊತ್ತಿಗೆ ಶೇ 22.81, ಮಧ್ಯಾಹ್ನ 1ರ ಹೊತ್ತಿಗೆ ಶೇ 39.57, ಮಧ್ಯಾಹ್ನ 3 ಗಂಟೆಯ ಹೊತ್ತಿಗೆ ಶೇ 54.82ರಷ್ಟು ಮತದಾನ ಆಗಿತ್ತು. ಸಂಜೆ 5 ಗಂಟೆಯ ಹೊತ್ತಿಗೆ ಒಟ್ಟು ಮತದಾರರ ಪೈಕಿ ಶೇ 69.60 ರಷ್ಟು ಮಂದಿ ಹಕ್ಕು ಚಲಾಯಿಸಿದ್ದರು. 

ಕೆಲವರು ಸುಡುವ ಬಿಸಿಲು ಲೆಕ್ಕಿಸಿದ ಮತಗಟ್ಟೆಗಳಿಗೆ ಬಂದರೆ, ಕೆಲಸಕ್ಕೆ ಹೋಗಿದ್ದ ಕಾರ್ಮಿಕರು ಸಂಜೆಯ ಹೊತ್ತಿಗೆ ಮತಗಟ್ಟೆಗಳಿಗೆ ಬಂದರು. 

ಮತಗಟ್ಟೆಯಿಂದ 100 ಮೀಟರ್‌ ವ್ಯಾಪ್ತಿಯಲ್ಲಿ ರಾಜಕೀಯ ಮುಖಂಡರಿಗಾಗಲೀ, ಪಕ್ಷದ ಕಾರ್ಯಕರ್ತರಿಗಾಗಲೀ ಪ‍್ರವೇಶ ಇರಲಿಲ್ಲ. ಹಾಗಾಗಿ, ದೂರದಲ್ಲೇ ನಿಂತಿದ್ದ ಮುಖಂಡರು ಹಾಗೂ ಕಾರ್ಯಕರ್ತರು, ಮತಗಟ್ಟೆಗೆ ತೆರಳುತ್ತಿದ್ದ ಮತದಾರರಿಗೆ ತಮ್ಮ ಪಕ್ಷದ ಅಭ್ಯರ್ಥಿಗೆ ಮತ ಹಾಕುವಂತೆ ಹೇಳುತ್ತಿದ್ದರು. 

ವಾಹನ ವ್ಯವಸ್ಥೆ: ಕಾಡಂಚಿನ ಗ್ರಾಮಗಳಲ್ಲಿ ನೆಲೆಸಿರುವವರಿಗೆ ಹಾಗೂ ಅಂಗವಿಕಲರಿಗೆ ಮತಗಟ್ಟೆಗಳಿಗೆ ಬರಲು ಚುನಾವಣಾ ಆಯೋಗ ಉಚಿತ ವಾಹನ ವ್ಯವಸ್ಥೆ ಮಾಡಿತ್ತು. ಮತದಾನದ ನಂತರ ಅವರನ್ನು ಅದೇ ವಾಹನದಲ್ಲಿ ಮನೆಗಳಿಗೆ ಬಿಡಲಾಗುತ್ತಿತ್ತು.

ಎಲ್ಲ ಮತಗಟ್ಟೆಗಳಲ್ಲಿ ಅಂಗವಿಕಲರು, ದುರ್ಬಲರು ಮತ್ತು ವೃದ್ಧರಿಗಾಗಿ ಗಾಲಿ ಕುರ್ಚಿಯ ವ್ಯವಸ್ಥೆ ಮಾಡಲಾಗಿತ್ತು. 

ಬಿಗಿ ಭದ್ರತೆ: ಮತಗಟ್ಟೆಗಳಿಗೆ ಬಿಗಿ ಪೊಲೀಸ್‌ ಭದ್ರತೆ ಒದಗಿಸಲಾಗಿತ್ತು. ಸೂಕ್ಷ್ಮ ಮತಗಟ್ಟೆಗಳು ಎಂದು ಗುರುತಿಸಿರುವ ಕಡೆಗಳಲ್ಲಿ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ನಂಜನಗೂಡಿನ ಹದಿನಾರು ಗ್ರಾಮದ ಮತಗಟ್ಟೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸುನಿಲ್‌ ಬೋಸ್‌ ಅವರು ಹಕ್ಕು ಚಲಾಯಿಸಿದರು
ನಂಜನಗೂಡಿನ ಹದಿನಾರು ಗ್ರಾಮದ ಮತಗಟ್ಟೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸುನಿಲ್‌ ಬೋಸ್‌ ಅವರು ಹಕ್ಕು ಚಲಾಯಿಸಿದರು
ಇಂಡಿಗನತ್ತ ಪ್ರಕರಣ ಬಿಟ್ಟು ಬೇರೆ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಕ್ಷೇತ್ರದಲ್ಲಿ ಇದು ಈವರೆಗಿನ ದಾಖಲೆಯ ಮತದಾನ
ಸಿ.ಟಿ.ಶಿಲ್ಪಾ ನಾಗ್‌ ಜಿಲ್ಲಾ ಚುನಾವಣಾಧಿಕಾರಿ
ಗಿರಿಜನರ ಉತ್ಸಾಹ
ಗಿರಿಜನರು ವಾಸವಾಗಿರುವ ಪ್ರದೇಶಗಳಲ್ಲೂ ಬಿರುಸಿನ ಮತದಾನವಾಯಿತು. ಬಿಳಿಗಿರಿರಂಗಬೆಟ್ಟದ ಒಂಬತ್ತು ಪೋಡುಗಳು ಬೇಡಗುಳಿಯ ಆರು ಹಾಡಿಗಳ ನಿವಾಸಿಗಳು ಮತದಾನ ಬಹಿಷ್ಕರಿಸುವ ಎಚ್ಚರಿಕೆ ನೀಡಿದ್ದರು. ಅಧಿಕಾರಿಗಳು ಮತದಾನ ಮಾಡುವಂತೆ ಮನವೊಲಿಸಿದ್ದರು.  ಹಾಗಾಗಿ ಎಲ್ಲ ಕಡೆಗಳಲ್ಲೂ ಗಿರಿಜನರು ಉತ್ಸಾಹದಿಂದಲೇ ಜನತಂತ್ರದ ಹಬ್ಬದಲ್ಲಿ ಪಾಲ್ಗೊಂಡರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT