ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತ್ರಿವೇಣಿ ಸಂಗಮ’ದಲ್ಲಿ ತ್ರಿಕೋನ ಸ್ಪರ್ಧೆ

ಅಶ್ವಿನ್‌ ಕುಮಾರ್‌ಗೆ ಡಾ.ಎಚ್‌.ಸಿ.ಮಹದೇವಪ್ಪ ನೇರ ಸ್ಪರ್ಧೆ; ಹುರುಪು ಹೆಚ್ಚಿಸಿದ ಡಾ.ರೇವಣ್ಣ
Published 7 ಮೇ 2023, 6:39 IST
Last Updated 7 ಮೇ 2023, 6:39 IST
ಅಕ್ಷರ ಗಾತ್ರ

ಮೈಸೂರು: ಕಾವೇರಿ, ಕಪಿಲಾ ಹಾಗೂ ಗುಪ್ತಗಾಮಿನಿ ಸ್ಫಟಿಕ ಸರೋವರದ ಸಂಗಮವಾಗಿರುವ ‘ತಿರುಮಕೂಡಲು ನರಸೀಪುರ’ ಕ್ಷೇತ್ರದಲ್ಲಿ  ಕಾಂಗ್ರೆಸ್‌, ಜೆಡಿಎಸ್ ಅಬ್ಬರಿಸುತ್ತಿದ್ದು, ಬಿಜೆಪಿ ಕಡೆಗಿನ ಒಲವು ಗುಪ್ತಗಾಮಿನಿಯಂತಿದೆ. ಇಬ್ಬರ ಜಿದ್ದಾಜಿದ್ದಿಗಷ್ಟೇ ಸಾಕ್ಷಿಯಾಗುತ್ತಿದ್ದ ಕ್ಷೇತ್ರದಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

ಕಾಂಗ್ರೆಸ್‌ನಿಂದ ಡಾ.ಎಚ್‌.ಸಿ.ಮಹದೇವಪ್ಪ, ಜೆಡಿಎಸ್‌ನಿಂದ ಎಂ.ಅಶ್ವಿನ್‌ ಕುಮಾರ್‌ ಹಾಗೂ ಬಿಜೆಪಿಯಿಂದ ಡಾ.ರೇವಣ್ಣ ಸೇರಿದಂತೆ 9 ಅಭ್ಯರ್ಥಿಗಳಿದ್ದಾರೆ.

1985ರಿಂದ 2004ರವರೆಗೆ ಜನತಾ ಪಕ್ಷ, ಜೆಡಿಎಸ್‌ ಮೂಲಕ ರಾಜಕೀಯ ನಡೆಸಿದ್ದ ಮಹದೇವಪ್ಪ, 2004, 2018 ಹಾಗೂ 2013ರಲ್ಲಿ ಕಾಂಗ್ರೆಸ್‌ನಿಂದಲೇ ಸ್ಪರ್ಧಿಸಿ ಹ್ಯಾಟ್ರಿಕ್‌ ಗೆಲುವು ಪಡೆದಿದ್ದರು. 2018ರಲ್ಲಿ ಅವರ ಓಟಕ್ಕೆ ಜೆಡಿಎಸ್‌ನ ಅಶ್ವಿನ್‌ ಕುಮಾರ್‌ ತಡೆಯೊಡ್ಡಿದ್ದರು. ಇಬ್ಬರ ಸ್ಪರ್ಧೆಯನ್ನೇ ನಿರೀಕ್ಷಿಸಿದ್ದ ಮತದಾರರು ಬಿಜೆಪಿಯಿಂದ ಡಾ.ರೇವಣ್ಣ ಕಣಕ್ಕಿಳಿದ ಬಳಿಕ ಯೋಚಿಸಿ ಹಕ್ಕು ಚಲಾಯಿಸಲು ನಿರ್ಧರಿಸಿದ್ದಾರೆ.

ಶಾಸಕ ಅಶ್ವಿನ್‌ಕುಮಾರ್‌ ಜನರೊಂದಿಗೆ ನಿರಂತರ ಒಡನಾಟದಲ್ಲಿದ್ದಾರೆ. ಜಾತಿ– ಧರ್ಮ ನೋಡದೆ, ಸಭೆ, ಸಮಾರಂಭಗಳಲ್ಲಿ ಭಾಗವಹಿಸುತ್ತಾರೆ. 15 ದಿನಕ್ಕೊಮ್ಮೆ ‘ಜನಸ್ಪಂದನ’ದ ಮೂಲಕ ಹತ್ತಿರವಾಗಿದ್ದಾರೆ. 29 ಸರ್ಕಾರಿ ಶಾಲೆಗಳಿಗೆ ಪ್ರೊಜೆಕ್ಟರ್ ವ್ಯವಸ್ಥೆ, ಸ್ಮಾರ್ಟ್ ಕ್ಲಾಸ್‌, ಮುಖ್ಯರಸ್ತೆಗಳ ಡಾಂಬರೀಕರಣ ಮಾಡಿದ್ದಾರೆ. ಆದರೆ, ‘ಪಟ್ಟಣದಲ್ಲಿ ರಸ್ತೆ ನಿರ್ಮಿಸಿಲ್ಲ, ಪುರಸಭೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದರೂ ಕಣ್ಮುಚ್ಚಿ ಕೂತಿದ್ದಾರೆ. ತಾಲ್ಲೂಕು ಕೇಂದ್ರಕ್ಕೆ ಇದುವರೆಗೂ ಸುಸಜ್ಜಿತ ಕ್ರೀಡಾಂಗಣ ಒದಗಿಸಿಲ್ಲ’ ಎಂಬ ಕೊರಗಿದೆ.

ಡಾ.ಎಚ್‌.ಸಿ. ಮಹದೇವಪ್ಪ ಐದು ಅವಧಿಗೆ ಶಾಸಕರಾಗಿ, ನಂತರ ಸಚಿವರಾಗಿ ಮಾಡಿದ ಅಭಿವೃದ್ಧಿ ಕೆಲಸ ಆಧರಿಸಿ ಮತಯಾಚಿಸುತ್ತಿದ್ದಾರೆ. ಗುಂಜಾ ನರಸಿಂಹ ದೇವಾಲಯ ಸುತ್ತಮುತ್ತ ಅಭಿವೃದ್ಧಿ, ಸೋಪಾನಕಟ್ಟೆ, ಮಿನಿ ವಿಧಾನಸೌಧ, ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ, ಪಟ್ಟಣಕ್ಕೆ ಸೇತುವೆ ನಿರ್ಮಾಣ, ಪದವಿ ಕಾಲೇಜು, ಆಸ್ಪತ್ರೆ ಉನ್ನತೀಕರಣ, 24x7 ವ್ಯವಸ್ಥೆ ಕುಡಿಯುವ ನೀರಿನ ವ್ಯವಸ್ಥೆ, ಚರಂಡಿ, ಪ್ರಮುಖ ರಸ್ತೆಗಳ ನಿರ್ಮಾಣ ದೊಡ್ಡ ಪ್ರಮಾಣದಲ್ಲಿ ನಡೆದಿದೆ ಎಂಬುದನ್ನು ಇಲ್ಲಿನ ಮತದಾರರು ನೆನಪಿಸುತ್ತಾರೆ. ‘ಮಹದೇವಪ್ಪ ಅವರು ಕಾರ್ಯಕರ್ತರಿಂದ ಅಂತರ ಕಾಯ್ದುಕೊಳ್ಳುವುದು, ಜನರು ತಮ್ಮ ಸಮಸ್ಯೆ ಹೇಳಿಕೊಂಡರೆ ತಕ್ಷಣಕ್ಕೆ ಸ್ಪಂದಿಸುವುದಿಲ್ಲ’ ಎಂಬ ಆರೋಪವೂ ಇದೆ.

ತಾಲ್ಲೂಕು ಆಸ್ಪತ್ರೆಯಲ್ಲಿ ಮೂರು ವರ್ಷದಿಂದ ಬೆಳಿಗ್ಗೆಯಿಂದ ತಡರಾತ್ರಿ 1 ಗಂಟೆಯವರೆಗೂ ಉಚಿತವಾಗಿ ಜನರಿಗೆ ಚಿಕಿತ್ಸೆ ನೀಡುತ್ತಿದ್ದ ಡಾ.ರೇವಣ್ಣ ಮನೆಮಾತಾಗಿದ್ದಾರೆ. ಪಕ್ಷಕ್ಕೆ ಸಂಘಟನೆ ಬಲದ ಕೊರತೆಯಿದ್ದರೂ, ನಾಮಪತ್ರ ಸಲ್ಲಿಕೆ ವೇಳೆ ಅವರೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗಿಯಾಗಿದ್ದಾರೆ. ನೆರೆಯ ಕ್ಷೇತ್ರದಲ್ಲಿ ವಿ.ಸೋಮಣ್ಣ ಸ್ಪರ್ಧಿಸಿರುವುದು ಹಾಗೂ ಅಭ್ಯರ್ಥಿಯಾಗಿ ವೈಯಕ್ತಿಕ ವರ್ಚಸ್ಸು ಕೈ ಹಿಡಿಯುವ ನಿರೀಕ್ಷೆಯಿದೆ. ಸ್ವಯಂನಿವೃತ್ತಿ ಪಡೆದು, ಕೊನೆಯ ಕ್ಷಣದಲ್ಲಿ ಚುನಾವಣಾ ಕಣಕ್ಕಿಳಿದಿರುವುದು ಹಿನ್ನಡೆಯಾಗಬಹುದೆನ್ನಲಾಗಿದೆ.

ತಾಲ್ಲೂಕಿನ ಕಸಬಾ ಹೋಬಳಿ, ಪುರಸಭೆಯ 16 ವಾರ್ಡ್‌ಗಳು ವರುಣ ಕ್ಷೇತ್ರಕ್ಕೆ ಸೇರುತ್ತವೆ. ಉಳಿದ 7 ವಾರ್ಡ್‌, ತಲಕಾಡು, ಸೋಸಲೆ, ಬನ್ನೂರು, ಮೂಗೂರು ಹೋಬಳಿಗಳು ಕ್ಷೇತ್ರದ ವ್ಯಾಪ್ತಿಯಲ್ಲಿವೆ. ಇಲ್ಲಿ ಪರಿಶಿಷ್ಟ ಜಾತಿ, ಪಂಗಡದ ಮತದಾರರೇ ನಿರ್ಣಾಯಕರು. ನಂತರ ಲಿಂಗಾಯತರಿದ್ದಾರೆ. ಉಳಿದಂತೆ, ನಾಯಕ, ಕುರುಬ ಸಮುದಾಯಗಳ ಮತಗಳೂ ಮುಖ್ಯ. ಮೂವರು ಅಭ್ಯರ್ಥಿಗಳೂ ಎಸ್‌ಸಿ ಸಮುದಾಯಕ್ಕೆ ಸೇರಿದವರು. ಮಹದೇವಪ್ಪ ವರುಣ ಕ್ಷೇತ್ರದ ‘ಹದಿನಾರು’ ಗ್ರಾಮದವರು. ಅಶ್ವಿನ್‌ ಕುಮಾರ್‌ ಕೊಳ್ಳೇಗಾಲದ ಅಗರ ಮುಂಬಳ್ಳಿಯವರು. ಡಾ.ರೇವಣ್ಣ ತಿ.ನರಸೀಪುರ ಕ್ಷೇತ್ರದಲ್ಲಿ ಹುಟ್ಟಿ ಬೆಳೆದಿದ್ದು, ‘ಸ್ಥಳೀಯ’ ಎಂದು ಬಿಂಬಿಸುತ್ತಿದ್ದಾರೆ. ಇಬ್ಬರ ನಡುವೆ ಮತ ವಿಭಜನೆಯಾದರೆ, ಮೂರನೇ ವ್ಯಕ್ತಿ ಗೆದ್ದರೂ ಅಚ್ಚರಿಯಿಲ್ಲ.

ಎಂ.ಅಶ್ವಿನ್ ಕುಮಾರ್‌
ಎಂ.ಅಶ್ವಿನ್ ಕುಮಾರ್‌
ಡಾ.ರೇವಣ್ಣ
ಡಾ.ರೇವಣ್ಣ

ಪ್ರವಾಸೋದ್ಯಮ: ಕೈ ಚೆಲ್ಲಿದ ಅವಕಾಶ ದಕ್ಷಿಣ ಭಾರತದಲ್ಲಿ ಮೊದಲ ಕುಂಭಮೇಳ ನಡೆದ ಖ್ಯಾತಿಯೂ ಕ್ಷೇತ್ರಕ್ಕಿದೆ. ತಾಲ್ಲೂಕಿನಿಂದ 8 ಕಿ.ಮೀ ಅಂತರದಲ್ಲಿ ಪ್ರಾಚೀನ ಸ್ಮಾರಕ ಹೊಂದಿರುವ ಸೋಮನಾಥಪುರ 17 ಕಿ.ಮೀ ದೂರದಲ್ಲಿ ತಲಕಾಡು ಕ್ಷೇತ್ರವಿದೆ. 12 ಕಿ.ಮೀ ದೂರದಲ್ಲಿ ಮೂಗೂರು ತ್ರಿಪುರ ಸುಂದರಿ ದೇವಾಲಯವಿದೆ. ಹೀಗಿದ್ದರೂ ಯಾತ್ರಿ ಭವನ ಇಲ್ಲ ಮೂಲಸೌಕರ್ಯವಿಲ್ಲ. ನಾಲ್ಕು ತಾಣಗಳನ್ನು ಪರಸ್ಪರ ಬೆಸೆಯುವ ‘ಪ್ರವಾಸಿ ಸರ್ಕೀಟ್‌’ ನಿರ್ಮಾಣ ಕಾಗದಕ್ಕಷ್ಟೇ ಸೀಮಿತವಾಗಿದೆ. ಮೈಸೂರಿಗೆ ಹತ್ತಿರವಿದ್ದು ಪ್ರವಾಸೋದ್ಯಮ ಅಭಿವೃದ್ಧಿಗೆ ಸಾಕಷ್ಟು ಅವಕಾಶವಿದ್ದರೂ ಬಳಕೆಯಾಗಿಲ್ಲ.

ಮತದಾರರ ವಿವರ 204824; ತಿ.ನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ಮತದಾರರು 101420;ಪುರುಷರು 103389;ಮಹಿಳೆಯರು 15;ತೃತೀಯ ಲಿಂಗಿಗಳು 12; ಕಣದಲ್ಲಿರುವ ಅಭ್ಯರ್ಥಿಗಳು ********* ಫಲಿತಾಂಶದ ಹಿನ್ನೋಟ 2008; ಕಾಂಗ್ರೆಸ್‌ 2013; ಕಾಂಗ್ರೆಸ್‌ 2018; ಜೆಡಿಎಸ್‌ ************* ತಿ.ನರಸೀಪುರ ವಿಧಾನಸಭಾ ಕ್ಷೇತ್ರ; ಕಣದಲ್ಲಿರುವವರು ಡಾ.ಎಚ್‌.ಸಿ.ಮಹದೇವಪ್ಪ; ಕಾಂಗ್ರೆಸ್‌ ಡಾ.ಎಂ.ರೇವಣ್ಣ; ಬಿಜೆಪಿ ಅಶ್ವಿನ್ ಕುಮಾರ್‌.ಎಂ; ಜೆಡಿಎಸ್‌ ಸಿದ್ದರಾಜು ಎಂ;ಆಮ್‌ ಆದ್ಮಿ ಪಕ್ಷ ಶ್ರೀನಿವಾಸ; ಇಂಡಿಯನ್‌ ಮೂವ್‌ಮೆಂಟ್‌ ಪಕ್ಷ ರೇಣುಕಾ ಸುರೇಶ್‌; ಕಂಟ್ರಿ ಸಿಟಿಜನ್‌ ಪಕ್ಷ ಚಂದ್ರಪ್ಪ;ರಾಣಿ ಚೆನ್ನಮ್ಮ ಪಕ್ಷ ಎಂ.ಡಿ.ಮಂಜುನಾಥ್‌; ಕರ್ನಾಟಕ ರಾಷ್ಟ್ರ ಸಮಿತಿ ಎ.ಎನ್‌.ಶಿವಲಿಂಗಪ್ಪ; ಸಮಾಜವಾದಿ ಜನತಾ ಪಕ್ಷ ಬಿ.ಆರ್‌.ಪುಟ್ಟಸ್ವಾಮಿ; ಬಿಎಸ್ಪಿ ಆಲಗೂಡು ಚಂದ್ರಶೇಖರ್‌ ಕೆ.ಕೆಂಚಯ್ಯ; ಪಕ್ಷೇತರರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT