ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡ ಗೌಡರನ್ನು ಮಣಿಸಿದ್ದ ತೇಜಸ್ವಿನಿ

ಸಂಸತ್‌ನಲ್ಲಿ ಕನಕಪುರ ಕ್ಷೇತ್ರ ಪ್ರತಿನಿಧಿಸಿದ್ದ ಮೊದಲ ಮಹಿಳೆ
Published 24 ಏಪ್ರಿಲ್ 2024, 4:34 IST
Last Updated 24 ಏಪ್ರಿಲ್ 2024, 4:34 IST
ಅಕ್ಷರ ಗಾತ್ರ

ರಾಮನಗರ: ಹಿಂದಿನ ಕನಕಪುರ ಲೋಕಸಭಾ ಕ್ಷೇತ್ರ ಹಾಗೂ ಈಗಿನ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರವನ್ನು ಮಹಿಳೆಯೊಬ್ಬರು ಪ್ರತಿನಿಧಿಸಿದ್ದ ದಾಖಲೆ ತೇಜಸ್ವಿನಿ ಗೌಡ ಹೆಸರಲ್ಲಿದೆ. 

2004ರಲ್ಲಿ ಚುನಾವಣಾ ರಾಜಕೀಯ ಪ್ರವೇಶಿಸಿದ್ದ ಅವರು, ಜೆಡಿಎಸ್ ನಾಯಕ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ವಿರುದ್ಧ ಗೆಲುವು ಸಾಧಿಸುವ ಮೂಲಕ ದೇಶದ ಗಮನ ಸೆಳೆದಿದ್ದರು.

ವೃತ್ತಿಯಲ್ಲಿ ಪತ್ರಕರ್ತೆಯಾಗಿದ್ದ ತೇಜಸ್ವಿನಿ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡರಾಯಪ್ಪನಹಳ್ಳಿಯವವರು. ರಾಜ್ಯಶಾಸ್ತ್ರ  ಸ್ನಾತಕೋತ್ತರ ಮತ್ತು ಕಾನೂನು ಪದವೀಧರೆ. ಸಂಶೋಧಕಿಯೂ ಆಗಿದ್ದ ಅವರು ಬುಡಕಟ್ಟು ಪ್ರದೇಶಗಳ ಸ್ಥಿತಿಗತಿ ಕುರಿತು ಸಾಕ್ಷ್ಯಚಿತ್ರ ನಿರ್ಮಿಸಿದ್ದರು. 

ಖಾಸಗಿ ಸುದ್ದಿವಾಹನಿಯೊಂದರಲ್ಲಿ ನಡೆಸಿ ಕೊಡುತ್ತಿದ್ದ ರಾಜಕಾರಣಿಗಳ ಸಂದರ್ಶನದ ಕಾರ್ಯಕ್ರಮ ದೊಡ್ಡ ಜನಪ್ರಿಯತೆ ತಂದುಕೊಟ್ಟಿತ್ತು. ರಾಜ್ಯದ ಘಟಾನುಘಟಿ ರಾಜಕಾರಣಿಗಳನ್ನು ಸಂದರ್ಶಿಸಿದ್ದ ತೇಜಸ್ವಿನಿ ತಮ್ಮ ಮಾತಿನ ವೈಖರಿ ಹಾಗೂ ಖಡಕ್‌ ಪ್ರಶ್ನೆಗಳಿಂದಾಗಿ  ಹೆಸರುವಾಸಿಯಾಗಿದ್ದರು.

2004ರಲ್ಲಿ ರಾಜಕೀಯ ಪ್ರವೇಶ: ಮಾಧ್ಯಮ ಕ್ಷೇತ್ರದ ಜನಪ್ರಿಯತೆ ಲಾಭ ಪಡೆದ ತೇಜಸ್ವಿನಿ ಗೌಡ 2004ರಲ್ಲಿ ಕಾಂಗ್ರೆಸ್ ಪಕ್ಷದ ಮೂಲಕ ರಾಜಕೀಯ ಪ್ರವೇಶಿಸಿದರು. 14ನೇ ಲೋಕಸಭಾ ಚುನಾವಣೆಯಲ್ಲಿ ಕನಕಪುರ ಕ್ಷೇತ್ರದಿಂದ ನಾಮಪತ್ರ ಸಲ್ಲಿಕೆಯ ಕೊನೆಯ ದಿನ ಅವರಿಗೆ ಟಿಕೆಟ್ ಕೊಟ್ಟು ಕಣಕ್ಕಿಳಿಸಲಾಯಿತು.

ಅವರಿಗೆ ಎದುರಾಳಿಯಾಗಿದ್ದ ಜೆಡಿಎಸ್ ನಾಯಕ ಎಚ್‌.ಡಿ. ದೇವೇಗೌಡರು ಕನಕಪುರದ ಜೊತೆಗೆ ಹಾಸನದಿಂದಲೂ ಸ್ಪರ್ಧಿಸಿದ್ದರು. ಬಿಜೆಪಿಯಿಂದ ರಾಮಚಂದ್ರೇಗೌಡ ಕಣದಲ್ಲಿದ್ದರು.

ಇಬ್ಬರಿಗೂ ತೀವ್ರ ಪೈಪೋಟಿ ಒಡ್ಡಿದ ತೇಜಸ್ವಿನಿ ಅಂತಿಮವಾಗಿ ಜಯಭೇರಿ ಬಾರಿಸಿದರು. ಒಟ್ಟು 5,84,238 ಮತ ಪಡೆದಿದ್ದ ಅವರು 1,16,663 ಮತಗಳ ಅಂತರದಿಂದ ಗೆಲುವು ಸಾಧಿಸಿ ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದರು.

ಬಿಜೆಪಿಯ ರಾಮಚಂದ್ರೇಗೌಡ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟರೆ, ದೇವೇಗೌಡರು ಮೂರನೇ ಸ್ಥಾನಕ್ಕೆ ಕುಸಿದು ಮುಖಭಂಗ ಅನುಭವಿಸಿದರು. ಆದರೆ, ಹಾಸನದಲ್ಲಿ ಅವರು ಗೆಲುವು ಸಾಧಿಸಿದರು.

ದೇವೇಗೌಡ ಅವರ ಕುಟುಂಬಕ್ಕೆ ಜಿಲ್ಲೆಯಲ್ಲಿ ಪ್ರಬಲ ರಾಜಕೀಯ ಎದುರಾಳಿಯಾಗಿರುವ ಕಾಂಗ್ರೆಸ್‌ನ ಡಿ.ಕೆ. ಶಿವಕುಮಾರ್, ತೇಜಸ್ವಿನಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಪಕ್ಷಾಂತರ: 2004ರಲ್ಲಿ ಕಾಂಗ್ರೆಸ್ ಸೇರಿ ಒಮ್ಮೆ ಸಂಸದೆಯಾಗಿದ್ದ ತೇಜಸ್ವಿನಿ ಹತ್ತು ವರ್ಷಗಳ ಬಳಿಕ 2014ರಲ್ಲಿ ಬಿಜೆಪಿ ಸೇರಿದರು. ಅಲ್ಲಿ ವಿಧಾನ ಪರಿಷತ್ ಸದಸ್ಯೆಯಾಗಿದ್ದ ಅವರು ತಮ್ಮ ಅವಧಿ ಮುಗಿಯುತ್ತಾ ಬರುತ್ತಿದ್ದಂತೆಯೇ ಇತ್ತೀಚೆಗೆ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಇದೀಗ ಹತ್ತು ವರ್ಷಗಳ ಬಳಿಕ ಮತ್ತೆ ‘ಕೈ’ ಹಿಡಿದಿದ್ದಾರೆ.

ಎರಡನೇ ಬಾರಿ ಠೇವಣಿ ಕಳೆದುಕೊಂಡರು!

2008ರಲ್ಲಿ ಕ್ಷೇತ್ರ ಪುನರ್‌ವಿಂಗಡಣೆ ಬಳಿಕ ಕನಕಪುರ ಲೋಕಸಭಾ ಕ್ಷೆತ್ರವು ಬೆಂಗಳೂರು ಗ್ರಾಮಾಂತರ ಕ್ಷೇತ್ರವಾಗಿ ಬದಲಾಯಿತು. ಕ್ಷೇತ್ರ ವಿಂಗಡಣೆ ಬಳಿಕ 2009ರಲ್ಲಿ ನಡೆದ ಚುನಾವಣೆಯಲ್ಲಿ ಎರಡನೇ ಸಲ ತೇಜಸ್ವಿನಿ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದರು. ಆಗ ಅವರಿಗೆ ಎದುರಾಳಿಯಾಗಿ ಜೆಡಿಎಸ್‌ನಿಂದ ಎಚ್‌.ಡಿ. ಕುಮಾರಸ್ವಾಮಿ ಮತ್ತು ಬಿಜೆಪಿಯಿಂದ ಸಿ.ಪಿ. ಯೋಗೇಶ್ವರ ಸ್ಪರ್ಧಿಸಿದ್ದರು. ಕುಮಾರಸ್ವಾಮಿ 493302 ಮತ ಪಡೆದು ಜಯಶಾಲಿಯಾಗುವ ಮೂಲಕ ಹಿಂದಿನ ಚುನಾವಣೆಯಲ್ಲಿ ತಂದೆಗಾಗಿದ್ದ ಸೋಲಿನ ಸೇಡು ತೀರಿಸಿಕೊಂಡಿದ್ದರು. ಸಿ.ಪಿ. ಯೋಗೇಶ್ವರ 363027 ಮತ ಪಡೆದರೆ ತೇಜಸ್ವಿನಿ ಗೌಡ ಕೇವಲ 192822 ಮತ ಪಡೆದು ಠೇವಣಿ ಕಳೆದುಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT