ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತ್ಯೇಕ ರಾಜ್ಯದ ಬೇಡಿಕೆ: ನಾಗಾಲ್ಯಾಂಡ್‌ನ 6 ಜಿಲ್ಲೆಗಳಲ್ಲಿ ಶೂನ್ಯ ಮತದಾನ

Published 19 ಏಪ್ರಿಲ್ 2024, 13:10 IST
Last Updated 19 ಏಪ್ರಿಲ್ 2024, 13:10 IST
ಅಕ್ಷರ ಗಾತ್ರ

ಕೋಹಿಮಾ: ಪೂರ್ವ ನಾಗಾಲ್ಯಾಂಡ್‌ನ ಆರು ಜಿಲ್ಲೆಗಳಲ್ಲಿ ಶುಕ್ರವಾರ ಯಾರೊಬ್ಬರೂ ಮನೆಯಿಂದ ಹೊರಗೆ ಬಂದು ಮತ ಚಲಾಯಿಸಲಿಲ್ಲ. ಈ ಭಾಗದ ಮತಗಟ್ಟೆಗಳಲ್ಲಿ ಮತಗಟ್ಟೆ ಅಧಿಕಾರಿಗಳನ್ನು ಹೊರತುಪಡಿಸಿದರೆ, ಮತದಾರರು ಸುಳಿಯಲಿಲ್ಲ.

ಈ ಪ್ರದೇಶದ ಏಳು ಬುಡಕಟ್ಟು ಸಂಘಟನೆಗಳ ಉನ್ನತ ಸಂಸ್ಥೆಯಾದ ‘ಈಸ್ಟರ್ನ್‌ ನಾಗಾಲ್ಯಾಂಡ್‌ ಪೀಪಲ್ಸ್‌ ಆರ್ಗನೈಸೇಷನ್‌’ (ಇಎನ್‌ಪಿಒ) ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ, ಅನಿರ್ದಿಷ್ಟಾವಧಿ ಬಂದ್‌ ಹಾಗೂ ಚುನಾವಣೆಯನ್ನು ಬಹಿಷ್ಕರಿಸಲು ಕರೆ ನೀಡಿತ್ತು.

ಜಿಲ್ಲಾಡಳಿತ ಮತ್ತು ಇತರ ತುರ್ತು ಸೇವೆಗಳನ್ನು ಹೊರತುಪಡಿಸಿ ಯಾವುದೇ ವ್ಯಕ್ತಿ ಅಥವಾ ವಾಹನಗಳ ಸಂಚಾರ ಇರಲಿಲ್ಲ ಎಂದು ಮೂಲಗಳು ತಿಳಿಸಿವೆ. 

ಈ ಪ್ರದೇಶದ ಆರು ಜಿಲ್ಲೆಗಳಲ್ಲಿ 738 ಮತಗಟ್ಟೆಗಳಿದ್ದು, ಚುನಾವಣಾ ಕಾರ್ಯದ ನಿಮಿತ್ತ ಚುನಾವಣಾ ಸಿಬ್ಬಂದಿ ಮತಗಟ್ಟೆಗಳಲ್ಲಿ ಹಾಜರಿದ್ದರು ಎಂದು ನಾಗಾಲ್ಯಾಂಡ್‌ನ ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ಅವಾ ಲೋರಿಂಗ್‌ ತಿಳಿಸಿದ್ದಾರೆ.

ಈ ಆರು ಜಿಲ್ಲೆಗಳಲ್ಲಿ ಒಟ್ಟು 4,00,632 ಮತದಾರು ಇದ್ದು, ಮಧ್ಯಾಹ್ನದವರೆಗೆ ಯಾವುದೇ ಮತದಾನವಾಗಿರಲಿಲ್ಲ ಎಂದು ಮೂಲಗಳು ತಿಳಿಸಿವೆ.

ಈ ಆರು ಜಿಲ್ಲೆಗಳಲ್ಲಿ ಏಳು ನಾಗಾ ಬುಡಕಟ್ಟುಗಳಾದ ಚಾಂಗ್‌, ಕೊನ್ಯಾಕ್‌, ಸಾಂಗ್ಟಮ್‌, ಪೋಮ್‌, ಯಿಮ್ಖಿಯುಂಗ್‌, ಖಿಯಾಮ್ನಿಯುಂಗನ್‌ ಮತ್ತು ಟಿಖರ್‌ ಜನರು ನೆಲೆಸಿದ್ದಾರೆ. ಇವರ ಜತೆಗೆ ಪ್ರತ್ಯೇಕ ರಾಜ್ಯದ ಬೇಡಿಕೆಗೆ ಈ ಪ್ರದೇಶದ ಸುಮಿ ಬುಡಕಟ್ಟಿನ ಒಂದು ಭಾಗವೂ ಬೆಂಬಲ ಸೂಚಿಸಿದೆ.

ಇಎನ್‌ಪಿಒ ಸಂಘಟನೆಯು ಮಾರ್ಚ್‌ 5ರಂದು, ಪೂರ್ವ ನಾಗಾಲ್ಯಾಂಡ್‌ ಪ್ರದೇಶದಲ್ಲಿ ಏಪ್ರಿಲ್‌ 18ರಿಂದ ಅನಿರ್ದಿಷ್ಟಾವಧಿ ಬಂದ್‌ ಆಚರಿಸಲು ಕರೆ ನೀಡಿತ್ತು.  2010ರಿಂದ ಪ್ರತ್ಯೇಕ ರಾಜ್ಯಕ್ಕೆ ಈ ಸಂಘಟನೆ ಬೇಡಿಕೆ ಮುಂದಿಟ್ಟು, ಹೋರಾಟಗಳನ್ನು ನಡೆಸಿದೆ.

ನೋಟಿಸ್‌: ಚುನಾವಣಾ ಪ್ರಕ್ರಿಯೆಗೆ ಅಡ್ಡಿಪಡಿಸಿದ ಇಎನ್‌ಪಿಒಗೆ ನಾಗಾಲ್ಯಾಂಡ್‌ನ ಮುಖ್ಯ ಚುನಾವಣಾ ಅಧಿಕಾರಿ ಶೋಕಾಸ್‌ ನೋಟಿಸ್‌ ಜಾರಿಗೊಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT