ಶನಿವಾರ, 28 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

3ಡಿ ತಂತ್ರಜ್ಞಾನಕ್ಕೆ ಒತ್ತು: ಸಲಹೆ

Published : 19 ಸೆಪ್ಟೆಂಬರ್ 2013, 19:53 IST
ಫಾಲೋ ಮಾಡಿ
Comments

ಬೆಂಗಳೂರು: ‘ದೇಶದಲ್ಲಿ ಹೊಸ ತಂತ್ರಜ್ಞಾನದ ಪರಿಕಲ್ಪನೆ ಹಾಗೂ ಅನುಷ್ಠಾನದ ನಡುವಿನ ಅಂತರ ಕಡಿಮೆಯಾಗಬೇಕು. ಈಗ ಪರಿಕಲ್ಪನೆ ರೂಪಿಸಿ ಹತ್ತಾರು ವರ್ಷ ಕಳೆದ ಬಳಿಕ ಹೊಸ ತಂತ್ರಜ್ಞಾನ ಮಾರುಕಟ್ಟೆಗೆ ಬರುವ ಸ್ಥಿತಿ ಇದೆ’ ಎಂದು ಎಂದು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಂ.ಎನ್‌.ವಿದ್ಯಾಶಂಕರ್‌ ಬೇಸರ ವ್ಯಕ್ತಪಡಿಸಿದರು.

ಕಂಪ್ಯೂಟರ್‌ ಸೊಸೈಟಿ ಆಪ್‌ ಇಂಡಿಯಾದ ವತಿಯಿಂದ ನಗರದ ನಿಮ್ಹಾನ್ಸ್‌ ಸಮಾವೇಶ ಸಭಾಂಗಣದಲ್ಲಿ ಗುರುವಾರ ನಡೆದ ಕ್ಲೌಡ್‌ ಕಂಪ್ಯೂಟಿಂಗ್‌ ಕುರಿತ ಎರಡನೇ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.

‘ತಂತ್ರಜ್ಞಾನ ಕ್ಷೇತ್ರದಲ್ಲಿ ಅಗಾಧ ಬದಲಾವಣೆ ಆಗುತ್ತಿದೆ. ತಂತ್ರಜ್ಞಾನ ಇಲ್ಲದೆ ಮನುಷ್ಯ ಬದುಕಲು ಸಾಧ್ಯ ಇಲ್ಲ ಎಂಬ ಸ್ಥಿತಿ ನಿರ್ಮಾಣ ಆಗಿದೆ. ಹೊಸ ಕಾರು ಅಥವಾ ಬೈಕಿನ ಪರಿಕಲ್ಪನೆ ಬೇಗ ರೂಪಿಸಲಾಗುತ್ತದೆ. ಕಾರು ಮಾರುಕಟ್ಟೆಗೆ ಬರುವಾಗ ದಶಕಗಳೇ ಕಳೆದಿರುತ್ತದೆ. ಈ ಸಮಸ್ಯೆಗಳಿಗೆ 3 ಡಿ ತಂತ್ರಜ್ಞಾನದ ನೆರವಿನಿಂದ ಪರಿಹಾರ ಕಂಡುಕೊಳ್ಳಬಹುದು’ ಎಂದು ಅವರು ಸಲಹೆ ನೀಡಿದರು.

‘ಸರ್ಕಾರಿ ಕಚೇರಿಗಳಲ್ಲಿ ದತ್ತಾಂಶ ಗಳನ್ನು ಸಂಗ್ರಹಿಸಿ ಇಡುವುದು ದೊಡ್ಡ ಸವಾಲಾಗಿದೆ. ಹೊರಗುತ್ತಿಗೆ ನೀಡುವ ಸ್ಥಿತಿ ಇದೆ. ಈ ಅಮೂಲ್ಯ ದತ್ತಾಂಶ ಗಳನ್ನು ಗೌಪ್ಯತೆ ಕಾಪಾಡುವ ಸಹ ಮುಖ್ಯ. 2013–14ನೇ ಸಾಲಿನಲ್ಲಿ ಬ್ಯಾಂಕಿಂಗ್‌ ವಲಯದಲ್ಲಿ ಕಂಪ್ಯೂಟರ್‌ ತಂತ್ರಜ್ಞಾನಕ್ಕಾಗಿ 128 ಶತಕೋಟಿ ಡಾಲರ್ ವೆಚ್ಚ ಮಾಡಲಾಗಿದೆ’ ಎಂದರು.

‘ಅಮೆರಿಕದಲ್ಲಿ ಮೊಬೈಲ್‌ ನೆರವಿನಿಂದಲೇ ವಾಷಿಂಗ್‌ ಮೆಷಿನ್‌, ಮೈಕ್ರೋ ವೇವ್‌ಗಳ ಕಾರ್‍ಯಾಚರಣೆ ನಡೆಸುವಷ್ಟು ತಂತ್ರಜ್ಞಾನ ಮುಂದುವರಿದಿದೆ’ ಎಂದು ಅವರು ತಿಳಿಸಿದರು.

ಭಾರತೀಯ ವಿಜ್ಞಾನ ಸಂಸ್ಥೆಯ ಗೌರವ ಪ್ರಾಧ್ಯಾಪಕ ಪ್ರೊ.ವಿ.ರಾಜಾರಾಮನ್‌ ಸಮ್ಮೇಳನ ಉದ್ಘಾಟಿಸಿ, ‘ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸುರಕ್ಷತೆಯ ಸಮಸ್ಯೆಯನ್ನು ಪರಿಹರಿಸಬಹುದು. ಇದೊಂದು ದೊಡ್ಡ ಸಮಸ್ಯೆಯಾಗಿ ಕಾಣುತ್ತಿಲ್ಲ. ತಂತ್ರಜ್ಞಾನ ಕ್ಷೇತ್ರದಲ್ಲೂ ಕಾನೂನಿನ ಮೊರೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಅಮೂಲ್ಯ ದತ್ತಾಂಶದ ರಕ್ಷಣೆಗಾಗಿ ಅಮೆರಿಕದಲ್ಲಿ ಕಾನೂನು ಜಾರಿಗೆ ತರಲಾಗಿದೆ. ಯಾವುದನ್ನು ಹೊರಗುತ್ತಿಗೆ ನೀಡಬೇಕು ಹಾಗೂ ನೀಡಬಾರದು ಎಂಬುದನ್ನು ನಿರ್ಧರಿಸುವುದು ಸಹ ದೊಡ್ಡ ಸವಾಲು’ ಎಂದರು.

ರಾಜ್ಯ ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಇಲಾಖೆಯ ನಿರ್ದೇಶಕ ಬಿ.ಎಂ.ವಿಜಯ್‌ ಶಂಕರ್‌, ‘ಕ್ಲೌಡ್‌ ಕಂಪ್ಯೂಟಿಂಗ್‌ ಮೂಲಕ ಹೊಸ ಹೊಸ ತಂತ್ರಜ್ಞಾನಗಳು ಜನರನ್ನು ತಲುಪಬೇಕಿದೆ’ ಎಂದರು.

ಕಂಪ್ಯೂಟರ್‌ ಸೊಸೈಟಿ ಆಫ್‌ ಇಂಡಿಯಾದ ನಿಯೋಜಿತ ಅಧ್ಯಕ್ಷ ಎಚ್‌.ಆರ್‌.ಮೋಹನ್‌, ಸಂಘಟನಾ ಸಮಿತಿಯ ಬಿ.ಎಸ್‌.ಬಿಂದುಮಾಧವ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT