ಭಾನುವಾರ, 22 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಗಳೂರು | ಹೆಚ್ಚುವರಿ ಭದ್ರತಾ ಠೇವಣಿ ಹೆಸರಿನಲ್ಲಿ ದುಬಾರಿ ಬಿಲ್‌

ಗೃಹಜ್ಯೋತಿ ಯೋಜನೆಯ ಫಲಾನುಭವಿಗೆ ₹ 5000 ಎಎಸ್‌ಡಿ ಪಾವತಿಗೆ ನೋಟಿಸ್‌, ಕಟ್ಟದಿದ್ದರೆ ದಂಡ ವಿಧಿಸಲಿದೆ ಮೆಸ್ಕಾಂ
Published : 22 ಸೆಪ್ಟೆಂಬರ್ 2024, 6:29 IST
Last Updated : 22 ಸೆಪ್ಟೆಂಬರ್ 2024, 6:29 IST
ಫಾಲೋ ಮಾಡಿ
Comments

ಮಂಗಳೂರು: ಮಂಗಳೂರು ವಿದ್ಯುತ್ ಸರಬರಾಜು ಕಂಪನಿಯು ಸೆಪ್ಟೆಂಬರ್‌ ತಿಂಗಳ ಬಿಲ್‌ನಲ್ಲಿ ಗೃಹಬಳಕೆದಾರರಿಗೆ ಹೆಚ್ಚುವರಿ ಭದ್ರತಾ ಠೇವಣಿ (ಎಎಸ್‌ಡಿ)  ಹೆಸರಿನಲ್ಲಿ ದುಬಾರಿ ವಿದ್ಯುತ್‌ ಬಿಲ್‌ಗಳನ್ನು ನೀಡಿದೆ. ತಿಂಗಳಿಗೆ 199 ಯೂನಿಟ್‌ಗಿಂತ ಕಡಿಮೆ ವಿದ್ಯುತ್ ಬಳಸುವ ಕೆಲವು ಗೃಹಜ್ಯೋತಿ ಬಳಕೆದಾರರೊಬ್ಬರಿಗೆ ₹ 5000  ಎಎಸ್‌ಡಿ ಕಟ್ಟುವಂತೆ ನೋಟಿಸ್ ನೀಡಲಾಗಿದೆ. ಈ ದುಬಾರಿ ಮೊತ್ತವನ್ನು ಕಂಡು ವಿದ್ಯುತ್‌ ಬಳಕೆದಾರರು ಕಂಗಾಲಾಗಿದ್ದಾರೆ.

‘ಗೃಹಜ್ಯೋತಿ ಯೋಜನೆ ಆರಂಭವಾದ ಬಳಿಕ ನಮಗೆ ವಿದ್ಯುತ್‌ ಬಿಲ್‌ ಉಳಿತಾಯವಾಯಿತು ಎಂಬ ಖುಷಿಯಲ್ಲಿದ್ದೆವು. ಕಳೆದ ತಿಂಗಳ ವಿದ್ಯುತ್ ಬಳಕೆಯ ಬಿಲ್‌ ಜೊತೆಗೆ ₹ 3,800 ಹೆಚ್ಚುವರಿ ಭದ್ರತಾ ಠೇವಣಿಯನ್ನು ಸೇರಿಸಿ ಕಟ್ಟುವಂತೆ ಮೆಸ್ಕಾಂ ನೋಟಿಸ್‌ ನೀಡಿದೆ. ಸೆ. 26ರ ಒಳಗೆ ಎಎಸ್‌ಡಿಯನ್ನು ಕಟ್ಟದಿದ್ದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಾಗಿ ತಿಳಿಸಿದೆ’ ಎಂದು ಮೆಸ್ಕಾಂ ಗ್ರಾಹಕರೊಬ್ಬರು ತಿಳಿಸಿದರು.

‘ಇದು ಸರ್ಕಾರ ಒಂದು ಕೈಯಲ್ಲಿ ಕೊಟ್ಟ ಸವಲತ್ತನ್ನು ಇನ್ನೊಂದು ಕೈಯಿಂದ ಕಿತ್ತುಕೊಂಡಂತಲ್ಲವೇ’ ಎಂದು ಅವರು ಪ್ರಶ್ನಿಸಿದರು.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾದ ಪದ್ಮಾವತಿ ಡಿ., ‘ಕಳೆದ ಆರ್ಥಿಕ ವರ್ಷದಲ್ಲಿ ವಿದ್ಯುತ್‌ ಶುಲ್ಕವನ್ನು ಪರಿಷ್ಕರಿಸಲಾಗಿತ್ತು. ಅದರ ಪ್ರಕಾರ ಭದ್ರತಾ ಠೇವಣಿಯನ್ನೂ ಪರಿಷ್ಕರಿಸಲಾಗಿದೆ’ ಎಂದರು.

‘ಒಂದು ವರ್ಷದ ವಿದ್ಯುತ್‌ ಬಳಕೆಯ ಸರಾಸರಿ ಆಧರಿಸಿ ಎರಡು ತಿಂಗಳ ವಿದ್ಯುತ್‌ ಬಿಲ್‌ಗಳ ಸರಾಸರಿ ಮೊತ್ತವನ್ನು ಬಳಕೆದಾರರು ಭದ್ರತಾ ಠೇವಣಿಯಾಗಿ ಕಟ್ಟಬೇಕು. ಬಳಕೆದಾರರು ಈ ಹಿಂದೆ ಠೇವಣಿ ಮಾಡಿದ್ದ ಭದ್ರತಾ ಠೇವಣಿ ಮೊತ್ತವನ್ನು ಹಳೆದ ವಿದ್ಯುತ್‌ ಬಿಲ್‌ ದರಕ್ಕೆ ಅನುಗುಣವಾಗಿ ನಿಗದಿಪಡಿಸಲಾಗಿತ್ತು.  ಈಗ ಬಿಲ್ ದರವು ಪರಿಷ್ಕೃತವಾಗಿರುವುದರಿಂದ, ಅದಕ್ಕನುಗುಣವಾಗಿ ಭದ್ರತಾ ಠೇವಣಿಯೂ ಪರಿಷ್ಕರಣೆ ಆಗುತ್ತದೆ. ಬಳಕೆದಾರರು ಈ ಹಿಂದೆ ಕಟ್ಟಿರುವ ಭದ್ರತಾ ಠೇವಣಿ ಹಾಗೂ ಪರಿಷ್ಕೃತ ದರದಲ್ಲಿ ಎಷ್ಟು ಠೇವಣಿ ಕಟ್ಟಬೇಕಾಗುತ್ತದೆ ಎಂದು ಲೆಕ್ಕಾಚಾರ ಹಾಕಿ ವ್ಯತ್ಯಾಸದ ಮೊತ್ತವನ್ನು ಸೆಪ್ಟೆಂಬರ್‌ ತಿಂಗಳ ಬಿಲ್‌ನಲ್ಲಿ ನಮೂದಿಸಲಾಗಿದೆ’ ಎಂದು ಮೆಸ್ಕಾಂ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ದಕ್ಷಿಣ ಕನ್ನಡ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಭರತ್ ಮುಂಡೋಡಿ, ‘ಗೃಹಜ್ಯೋತಿ ಯೋಜನೆಯಡಿ ಶೂನ್ಯ ವಿದ್ಯುತ್‌ ಬಿಲ್‌ ಪಡೆಯುತ್ತಿರುವ ಫಲಾನುಭವಿಗಳಿಂದ ಮೆಸ್ಕಾಂ ಹೆಚ್ಚುವರಿ ಭದ್ರತಾ ಠೇವಣಿಯನ್ನು ಸಂಗ್ರಹಿಸುತ್ತಿರುವುದು ಸಮಂಜಸವಲ್ಲ’ ಎಂದರು.  

ಭರತ್‌ ಮುಂಡೋಡಿ
ಭರತ್‌ ಮುಂಡೋಡಿ
ವಿದ್ಯುತ್‌ ಬಳಕೆದಾರರು ಹೆಚ್ಚುವರಿ ಭದ್ರತಾ ಠೇವಣಿಯನ್ನು ನಿಗದಿತ ದಿನದೊಳಗೆ ಕಟ್ಟಲೇ ಬೇಕು. ಇಲ್ಲದಿದ್ದರೆ ಎಎಸ್‌ಡಿ ಮೊತ್ತಕ್ಕೆ ಶೇ 1ರಷ್ಟು ದಂಡ ವಿಧಿಸಲಾಗುತ್ತದೆ
ಪದ್ಮಾವತಿ ಡಿ. ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ
ಗೃಹಜ್ಯೋತಿ ಯೋಜನೆಯಡಿ ಶೂನ್ಯ ಬಿಲ್‌ ಪಡೆಯುವ ವಿದ್ಯುತ್ ಬಳಕೆದಾರರಿಂದ ಹೆಚ್ಚುವರಿ ಭದ್ರತಾ ಠೇವಣಿ ಸಂಗ್ರಹಿಸುವ ಅಗತ್ಯ ಕಾಣಿಸುತ್ತಿಲ್ಲ. ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳ ಜೊತೆ ಚರ್ಚಿಸುತ್ತೇನೆ
ಭರತ್‌ ಮುಂಡೋಡಿ ದಕ್ಷಿಣ ಕನ್ನಡ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ

ಸರ್ಕಾರವೇ ಬಿಲ್‌ ಕಟ್ಟುವಾಗ ಭದ್ರತಾ ಠೇವಣಿ ಏಕೆ ? ‘ಗೃಹಜ್ಯೋತಿ ಯೋಜನೆ ಆರಂಭವಾದ ಬಳಿಕ ನಮಗೆ ಶೂನ್ಯ ವಿದ್ಯುತ್‌ ಬಿಲ್‌ ಬರುತ್ತಿದೆ. ನಾವು ಬಳಸುವ ಅಷ್ಟೂ ಬಿಲ್‌ ಸರ್ಕಾರವೇ ಪಾವತಿ ಮಾಡುತ್ತಿದೆ. ಸರ್ಕಾರವೇ ಬಿಲ್‌ ಪಾವತಿಯ ಹೊಣೆಯನ್ನು ವಹಿಸಿಕೊಂಡಿರುವಾಗ ಗ್ರಾಹಕರಿಂದ ಮೆಸ್ಕಾಂನವರು ಭದ್ರತಾ ಠೇವಣಿ ಕಟ್ಟುವಂತೆ ಹೇಳುವುದರಲ್ಲಿ ಅರ್ಥವಿದೆಯೇ’ ಎಂದು ಬಿಕರ್ನಕಟ್ಟೆಯ ಗ್ರಾಹಕ ರಾಜೇಶ್‌ ಪ್ರಶ್ನಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಮೆಸ್ಕಾಂ ಅಧಿಕಾರಿಯೊಬ್ಬರು ‘ಇದು ನೀತಿ ನಿರೂಪಣೆಗೆ ಸಂಬಂಧಿಸಿದ ವಿಷಯ. ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗದ ಸೂಚನೆ ಪ್ರಕಾರ ನಾವು ಹೆಚ್ಚುವರಿ ಭದ್ರತಾ ಠೇವಣಿಯನ್ನು ಬಳಕೆದಾರರಿಂದ ಸಂಗ್ರಹಿಸುತ್ತಿದ್ದೇವೆ. ಗೃಹಜ್ಯೋತಿ ಫಲಾನುಭವಿಗಳಿಂದ ಹೆಚ್ಚುವರಿ ಭದ್ರತಾ ಠೇವಣಿ ಸಂಗ್ರಹಿಸುವುದು ಬೇಡ ಎಂದು ಸರ್ಕಾರ ಆದೇಶ ಮಾಡಿದರೆ ನಾವು ಬಳಕೆದಾರರಿಂದ ಎಎಸ್‌ಡಿಯನ್ನು ಸಂಗ್ರಹಿಸುವುದಿಲ್ಲ’ ಎಂದರು.

‘ಮರುಪಾವತಿಯಾಗುತ್ತದೆ ಭದ್ರತಾ ಠೇವಣಿ’ ‘ಬಳಕೆದಾರರಿಂದ ಸಂಗ್ರಹಿಸುವ ಭದ್ರತಾ ಠೇವಣಿಗೆ ನಾವು ಎಸ್‌ಬಿಐ ಬಡ್ಡಿ ದರದ ಪ್ರಕಾರ ಬಡ್ಡಿಯನ್ನು ನೀಡುತ್ತೇವೆ. ಏಪ್ರಿಲ್‌ ತಿಂಗಳ ವಿದ್ಯುತ್‌ ಬಿಲ್‌ ಪಡೆಯುವಾಗ ಬಿಲ್‌ ಮೊತ್ತದಿಂದ ಭದ್ರತಾ ಠೇವಣಿಯ ಬಡ್ಡಿಯ ಮೊತ್ತವನ್ನು ಕಡಿತಗೊಳಿಸಲಾಗುತ್ತದೆ. ಅಲ್ಲದೇ ಬಳಕೆದಾರರು ವಿದ್ಯುತ್‌ ಸಂಪರ್ಕವನ್ನು ಕಡಿತಗೊಳಿಸಲು ಬಯಸಿದರೆ  ಭದ್ರತಾ ಠೇವಣಿಯನ್ನು ಅವರಿಗೆ ಮರುಪಾವತಿ ಮಾಡಲಾಗುತ್ತದೆ. ಒಂದು ವೇಳೆ ಗ್ರಾಹಕರು ಈಗಿನ ಮನೆಯನ್ನು ಮಾರಾಟ ಮಾಡಿದರೆ ಮನೆ ಖರೀದಿಸಿದವರಿಗೆ ಭದ್ರತಾ ಠೇವಣಿಯ ಮೊತ್ತವನ್ನು  ವರ್ಗಾಯಿಸುವಂತೆ ಸೂಚಿಸಿದರೆ ಮಾತ್ರ ಅದನ್ನು ವರ್ಗಾಯಿಸುತ್ತೇವೆ. ಇಲ್ಲದಿದ್ದರೆ ಮರಳಿಸುತ್ತೇವೆ’ ಎಂದು ಮೆಸ್ಕಾಂ ಅಧಿಕಾರಿಯೊಬ್ಬರು ವಿವರಿಸಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT