ಭಾನುವಾರ, 29 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೊದಲ ಓದು: ಕವಿತೆಯ ರಸಾಸ್ವಾದ ಉಣಬಡಿಸುವ ಕೃತಿ

Published : 29 ಸೆಪ್ಟೆಂಬರ್ 2024, 0:32 IST
Last Updated : 29 ಸೆಪ್ಟೆಂಬರ್ 2024, 0:32 IST
ಫಾಲೋ ಮಾಡಿ
Comments

ನವ್ಯ ಕಾವ್ಯ, ಬೇಂದ್ರೆ ಕಾವ್ಯ ಹಾಗೂ ಪಾಶ್ಚಿಮಾತ್ಯ ಸಾಹಿತ್ಯವನ್ನು ತಮ್ಮ ಓದಿನ ನಿಷ್ಕಕ್ಕೆ ಒಡ್ಡಿದ್ದಾರೆ ಲೇಖಕರು. ಬೇಂದ್ರೆ ಕಾವ್ಯದ ಒಳನೋಟವನ್ನು ನೀಡುತ್ತಲೇ, ಇಂಗ್ಲಿಷ್‌ ಕಾವ್ಯದೊಂದಿಗೆ ಅನುಸಂಧಾನವಾಗುವ ಬಗೆಯನ್ನು ಬಿಚ್ಚಿಟ್ಟಿದ್ದಾರೆ. ಸಾಹಿತ್ಯದ ಮಜಲುಗಳನ್ನು ಲಹರಿಯಲ್ಲಿ ವಿಂಗಡಿಸುತ್ತಲೇ ಕೆಲವೆಡೆ ಹೃದ್ಯವಾಗಿಯೂ, ಕೆಲವೆಡೆ ವಾಚ್ಯವಾಗಿಯೂ ವಿಸ್ತರಿಸುತ್ತ ಹೋಗಿದ್ದಾರೆ.

ಕಾವ್ಯ ಮೀಮಾಂಸೆ, ತತ್ವಜ್ಞಾನ, ಬದುಕಿನ ಹದ, ಭಾಷೆಯ ಪದಗಳಲ್ಲಿ ಬಣ್ಣಿಸುತ್ತಲೇ ಕಳೆದೆರಡು ಶತಮಾನಗಳ ಸಾಹಿತ್ಯದಲ್ಲಿಯ ಬದಲಾವಣೆಗಳನ್ನು ಗುರುತಿಸುತ್ತ ಹೋಗುತ್ತಾರೆ. ಬೇಂದ್ರೆಯವರ ಅಷ್ಟಪದಿಗಳನ್ನು ಉಲ್ಲೇಖಿಸುತ್ತಲೇ ಪಾಶ್ಚಾತ್ಯ ಸಾಹಿತ್ಯದ ಜಿಜ್ಞಾಸೆಯನ್ನೂ ತರುತ್ತಾರೆ. ಲೋಕಜ್ಞಾನ ಮತ್ತು ಅಲೌಕಿಕ ಪ್ರಜ್ಞೆ ಎರಡನ್ನೂ ತರುತ್ತ ತಮ್ಮ ಅನುಭವದ ಜೀವನಾಮೃತ ಮತ್ತು ಸಾಹಿತ್ಯದ ಅರಿವು ಎರಡನ್ನೂ ತೂಕ ಹಾಕುತ್ತಲೇ ಓದುಗರಿಗೆ ಉಣಬಡಿಸುತ್ತಾರೆ. ಅಲ್ಲಮಪ್ರಭು ಆಪ್ತವಾದಷ್ಟೇ, ಇಂಗ್ಲಿಷ್‌ ಮೆಟಫಿಜಿಕಲ್‌ ವಾದವೂ ಆಪ್ತವಾಗುತ್ತದೆ. ಇನ್ನಷ್ಟು ಓದಿಗೆ ಪ್ರೇರೇಪಿಸುತ್ತದೆ.

ಕವಿತೆಯ ರಸಾಸ್ವಾದವನ್ನು ಅನುಭವಿಸುವವರಿಗೆ, ಸಾಹಿತ್ಯವನ್ನು ಅಧ್ಯಯನ ಮಾಡುವವರಿಗೆ ಈ ಪುಸ್ತಕ ಆಕರಗ್ರಂಥವಾಗಲಿದೆ. 

ಕೃತಿಯ ಮೊದಲ ಭಾಗ ಲಹರಿ ಒಂದು ಎಂದು ಕರೆಯಿಸಿಕೊಳ್ಳುವುದರಲ್ಲಿ ನಾಟುನುಡಿ, ತಿರುಳ್ನುಡಿ, ರೂಪಕ, ಬ್ರಹ್ಮಕಲ್ಪ, ವಾಗ್ಗೇಯ, ಚಿದಂಬರ ಕವಿತೆಗಳು ಓದುಗರನ್ನು ಸೆಳೆದಿಡುತ್ತವೆ. ಮಧ್ಯಂತರದ ಓದು ಅರ್ಥೈಸಿಕೊಳ್ಳಲು ಸಮಯ ಬೇಡುತ್ತದೆ. ಲಹರಿ ಎರಡು ಎಂದು ಕರೆಯಿಸಿಕೊಳ್ಳುವ ಎರಡನೆಯ ಭಾಗದಲ್ಲಿ ಅನುಭಾವ, ಅನುಭೂತಿ ಅಧ್ಯಾತ್ಮಗಳೆಲ್ಲವೂ ಅಡಕವಾಗಿವೆ. ಸುದೀರ್ಘ ಓದಿನ ನಡುನಡುವೆ ಅಲ್ಪವಿರಾಮ ಬೇಡುವಂಥ ಬರಹಗಳಿವು. ಮನದೊಳಗೆ ಇಳಿಯಲು, ತರ್ಕ ಮಾಡಿ, ಜಿಜ್ಞಾಸೆಗಿಳಿದು, ನಿಮ್ಮೊಳಗೆ ಹಿಡಿದಿಟ್ಟುಕೊಳ್ಳುವಂತೆ ಮಾಡುತ್ತವೆ.

ಆದರೆ, ಲೇಖಕರು ಒಂದೊಳ್ಳೆಯ ಬರವಣಿಗೆಯಲ್ಲಿ, ನಡುನಡುವೆ ನನ್ನ ಅನಿಸಿಕೆಯ ಪ್ರಕಾರ, ನಾನು ಅಂದುಕೊಂಡಂತೆ, ನನ್ನ ಗ್ರಹಿಕೆಯಂತೆ ಎಂದು ಮಧ್ಯಪ್ರವೇಶಿಸುವುದರಿಂದ ಓದಿನ ಓಘಕ್ಕೆ ತಡೆ ಬೀಳುತ್ತದೆ. ಕೆಲವು ಅಂಶಗಳನ್ನು ಮೇಲಿಂದ ಮೇಲೆ ಪ್ರಸ್ತಾಪಿಸುತ್ತ, ಆ ಅಂಶವನ್ನು ಹಿಂದೆ ಹೇಳಿದ್ದೇಕೆ, ಈಗ ಹೇಳುತ್ತಿರುವುದೇಕೆ ಎಂದೂ ಬಣ್ಣಿಸುವಲ್ಲಿ ಚೂರು ಓದುಗರ ಸಂಯಮವನ್ನು ಬೇಡುತ್ತದೆ. 

ತುಯ್ತವೆಲ್ಲ ನವ್ಯದತ್ತ ಅಂದತ್ತರ ಉಯ್ಯಾಲೆ ಮತ್ತು ಅದರ ಸುತ್ತ

ಲೇ: ರಘುನಂದನ

ಪ್ರ: ಥಿಯೇಟರ್‌ ತತ್ಕಾಲ್‌ ಬುಕ್ಸ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT