ಶನಿವಾರ, 28 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕೋಡಿ | ಸೈಬರ್‌ ಅಪರಾಧ ತಡೆಗೆ ಯುವಕರ ತಂಡ; ಜನರಿಗೂ ಡಿಜಿಟಲ್ ಸಾಕ್ಷರತೆ

ಸೈಬರ್‌ ವಂಚನೆಗಳನ್ನು ಭೇದಿಸುವಲ್ಲಿ ಪೊಲೀಸರಿಗೆ ನೆರವು
–ಚಂದ್ರಶೇಖರ ಎಸ್. ಚಿನಕೇಕರ
Published : 28 ಸೆಪ್ಟೆಂಬರ್ 2024, 4:58 IST
Last Updated : 28 ಸೆಪ್ಟೆಂಬರ್ 2024, 4:58 IST
ಫಾಲೋ ಮಾಡಿ
Comments

ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ಜಿಲ್ಲೆಯಲ್ಲಿ ಸೈಬರ್‌ ಅಪರಾಧಗಳನ್ನು ತಡೆಯಲು ಹಾಗೂ ಜನರನ್ನು ಜಾಗೃತಗೊಳಿಸಲು ಯುವಕರ ತಂಡವೊಂದು ನಾಲ್ಕು ವರ್ಷಗಳಿಂದ ಸದ್ದಿಲ್ಲದೇ ಕೆಲಸ ಮಾಡುತ್ತಿದೆ.

‘ಸೈಬರ್‌ ಕ್ರೈಂ ಅವೇರ್‌ನೆಸ್‌ ಟೀಮ್‌ ಚಿಕ್ಕೋಡಿ’ ಎಂಬ ಹೆಸರಿನಲ್ಲಿ ಎಂಟು ಯುವಕರು ತಂಡ ಉಚಿತವಾಗಿ ಡಿಜಿಟಲ್‌ ಸಾಕ್ಷರತೆ ನಡೆಸಿದೆ. 2020ರಲ್ಲಿ ರಚನೆಯಾದ ತಂಡವು ಈವರೆಗೆ 3,700ಕ್ಕೂ ಹೆಚ್ಚು ಸೈಬರ್‌ ವಂಚನೆ ಪ್ರಕರಣಗಳನ್ನು ಭೇದಿಸುವಲ್ಲಿ ಪೊಲೀಸ್‌ ಇಲಾಖೆಗೆ ನೆರವಾಗಿದೆ.

2,500 ‘ಲೋನ್‌ ಆ್ಯಪ್’ ವಂಚನೆ ಪ್ರಕರಣ, 1,000 ವಿಡಿಯೊ ಕಾಲ್ ವಂಚನೆ, 200ಕ್ಕೂ ಹೆಚ್ಚು ‘ಆನ್‌ಲೈನ್ ಜಾಬ್’ ಆಮಿಷದ ಪ್ರಕರಣಗಳು ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯಲ್ಲಿ ಪತ್ತೆಯಾಗಿವೆ. ವಂಚಕರ ಮೂಲ ಪತ್ತೆ ಮಾಡುವಲ್ಲಿ ಹಾಗೂ ವಂಚನೆಗೆ ಒಳಗಾದವರಿಗೆ ನ್ಯಾಯ ದೊರಕಿಸುವಲ್ಲಿ ತಂಡದವರು ಸಕ್ರಿಯರಾಗಿದ್ದಾರೆ. ಆನ್‌ಲೈನ್‌ ಉದ್ಯಮಕ್ಕೆ ಹೂಡಿಕೆ ಮಾಡುವವರಿಗೆ, ಆನ್‌ಲೈನ್‌ ಕೆಲಸಗಳಿಗೆ ಅರ್ಜಿ ಹಾಕುವವರು, ವಿಡಿಯೊ ಗೇಮ್‌ಗಳಲ್ಲಿ ಹಣ ಹೂಡುವವರು ಮುಂತಾದವರಿಗೆ ಯಾವುದು ನಿಜ, ಯಾವುದು ಸುಳ್ಳು ಎಂಬ ಮಾಹಿತಿಯನ್ನೂ ನೀಡುತ್ತಿದ್ದಾರೆ.

ಕಳೆದ ಒಂದು ವರ್ಷದಿಂದ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರಗಿ ಜಿಲ್ಲೆಗಳ ಗ್ರಾಹಕರು ಕೂಡ ಇವರ ನೆರವು ಪಡೆದಿದ್ದಾರೆ. ಸ್ವತಃ ಪೊಲೀಸ್‌ ಸಿಬ್ಬಂದಿ ಕೂಡ ಇವರಿಂದ ತರಬೇತಿ ಪಡೆದುಕೊಂಡಿದ್ದಾರೆ.

2020ರಲ್ಲಿ ಕೋವಿಡ್‌ ಸಂದರ್ಭದಲ್ಲಿ ಸೈಬರ್‌ ಅಪರಾಧಗಳ ಸಂಖ್ಯೆ ಹೆಚ್ಚಿತು. ಜನರಿಗೆ ನೆರವಾಗುವ ದೃಷ್ಟಿಯಿಂದ ಕೇರೂರಿನ ಆನಂದ ಮಾಳಿ ಅವರ ನೇತೃತ್ವದಲ್ಲಿ ಅರಿವು ಮೂಡಿಸುವ ಕೆಲಸ ಶುರು ಮಾಡಲಾಯಿತು. ಅಮಿತ ಮಾಳಿ (ಎಂ.ಕಾಂ, ಬಿ.ಇಡಿ), ರಾಮಗೌಡ ಪಾಟೀಲ (ಬಿ.ಕಾಂ), ಬಸವರಾಜ ನಾಗರಾಳೆ (ಎಲ್‌ಎಲ್‌ಬಿ ), ಮಹಾದೇವ ಧನವಡೆ (ಡಿಪ್ಲೊಮಾ), ಬಸವಪ್ರಭು ಶಿರಗಾಂವಿ (ಡಿಪ್ಲೊಮಾ), ರಾಹುಲ್‌ ಶೇಡಬಾಳೆ (ಬಿಸಿಎ), ಮಲಗೌಡ ಪಾಟೀಲ (ಬಿಇ) ತಂಡದಲ್ಲಿದ್ದಾರೆ. ಮತ್ತಷ್ಟು ಯುವಕರು ಬಿಡುವಿದ್ದಾಗ ಕೈ ಜೋಡಿಸುತ್ತಾರೆ.

ಓಟಿಪಿ ಹ್ಯಾಕ್‌, ವಿಡಿಯೊ ಕರೆ, ಟೆಲಿಗ್ರಾಂ ಪ್ರಿಪೇಡ್ ಟಾಸ್ಕ್ ಸ್ಕ್ಯಾಮ್, ಇನ್ವೆಸ್ಟ್‌ಮೆಂಟ್‌ ಮತ್ತು ಅರ್ನಿಂಗ್ ಸ್ಕ್ಯಾಮ್, ಕ್ರಿಪ್ಟೊ ಟ್ರೇಡಿಂಗ್, ಡಿಜಿಟಲ್ ಅರೆಸ್ಟ್ ಸೇರಿದಂತೆ ವಿವಿಧ ಅಪರಾಧಗಳ ಬಗ್ಗೆ ಈವರೆಗೆ 300ಕ್ಕೂ ಹೆಚ್ಚು ಶಾಲೆ, ಕಾಲೇಜುಗಳಲ್ಲಿ ಅರಿವು ಮೂಡಿಸಿದ್ದಾರೆ.

ಚಿಕ್ಕೋಡಿಯಲ್ಲಿ ಪೊಲೀಸರೊಂದಿಗೆ ಸೇರಿ ಡಿಜಿಟಲ್ ಸಾಕ್ಷರತಾ ಜಾಗೃತಿ ನಡೆಸಿದ ಸೈಬರ್ ಕ್ರೈಂ ಜಾಗೃತಿ ತಂಡ
ಚಿಕ್ಕೋಡಿಯಲ್ಲಿ ಪೊಲೀಸರೊಂದಿಗೆ ಸೇರಿ ಡಿಜಿಟಲ್ ಸಾಕ್ಷರತಾ ಜಾಗೃತಿ ನಡೆಸಿದ ಸೈಬರ್ ಕ್ರೈಂ ಜಾಗೃತಿ ತಂಡ
ಚಿಕ್ಕೋಡಿಯಲ್ಲಿ ಡಿಜಿಟಲ್ ಸಾಕ್ಷರತಾ ಜಾಗೃತಿ ನಡೆಸಿದ ಸೈಬರ್ ಕ್ರೈಂ ಜಾಗೃತಿ ತಂಡ
ಚಿಕ್ಕೋಡಿಯಲ್ಲಿ ಡಿಜಿಟಲ್ ಸಾಕ್ಷರತಾ ಜಾಗೃತಿ ನಡೆಸಿದ ಸೈಬರ್ ಕ್ರೈಂ ಜಾಗೃತಿ ತಂಡ
ಆನ್‌ಲೈನ್‌ ತರಗತಿಗಳು ಆರಂಭವಾದಾಗ ಸೈಬರ್‌ ಬಳಕೆ ಹೆಚ್ಚಿತು. ಅದರಂತೆ ಅಪರಾಧಗಳೂ ಹೆಚ್ಚಿದವು. ಡಿಜಿಟಲ್‌ ಅನಕ್ಷರತೆ ಹೋಗಲಾಡಿಸಲು ತಂಡ ಕಟ್ಟಿದೆವು
–ಆನಂದ ಮಾಳಿ ಅಧ್ಯಕ್ಷ ಸೈಬರ್ ಕ್ರೈಂ ಜಾಗೃತಿ ತಂಡ

Quote - ಆನ್‌ಲೈನ್‌ ಉದ್ಯಮದಲ್ಲಿ ಹೂಡಿಕೆ ಮಾಡಿ ₹50 ಸಾವಿರ ಕಳೆದುಕೊಂಡಿದ್ದೆ. ಸೈಬರ್‌ ಕ್ರೈಂ ಜಾಗೃತಿ ತಂಡ ಹಣ ಪತ್ತೆ ಮಾಡಿ ಮರಳಿಸಿತು ಉಮೇಶ ನಿಡಗುಂದಿ ಉಮರಾಣಿ ಗ್ರಾಮಸ್ಥ

ಸೈಬರ್ ಅಪರಾಧ ಪತ್ತೆ ಹಾಗೂ ನಿಯಂತ್ರಣಕ್ಕೆ ಈ ಯುವಕರ ತಂಡ ಪೊಲೀಸರಿಗೆ ನೆರವಾಗಿದೆ. ಡಿಜಿಟಲ್‌ ಸಾಕ್ಷರತೆಗೆ ಇಂಥ ಯುವಕರು ಮುಂದಾಗಲಿ
–ಬಸಗೌಡ ನೇರ್ಲಿ ಪಿಎಸ್‍ಐ ಚಿಕ್ಕೋಡಿ

300 ಪುಟಗಳ ಮಾಹಿತಿ ಪುಸ್ತಕ

300 ಪುಟಗಳನ್ನು ಹೊಂದಿದ ‘ಸೈಬರ್ ಸುರಕ್ಷತೆ– ಮಾರ್ಗದರ್ಶಕ’ ಎಂಬ ಪುಸ್ತಕವನ್ನು ಪ್ರಕಟಿಸಿದ್ದಾರೆ. ಸೈಬರ್ ಅಪರಾಧ ಲೋಕದ ದೊಡ್ಡ ಪ್ರಕರಣಗಳು ಸಣ್ಣ ವಂಚನೆಗಳು ಮೊಬೈಲ್‌ ಹ್ಯಾಕ್‌ ಕಂಪ್ಯೂಟರ್‌ ಹ್ಯಾಕ್‌ ಸೇರಿದಂತೆ ಎಲ್ಲ ರೀತಿಯ ಅಪರಾಧ ಕೃತ್ಯಗಳು ಹೇಗೆ ನಡೆಯುತ್ತವೆ. ಅವುಗಳಿಂದ ಪಾರಾಗುವುದು ಹೇಗೆ ಎಂಬ ಬಗ್ಗೆಯೂ ಪುಸ್ತಕದಲ್ಲಿ ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT