ಗುರುವಾರ, 3 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಹಾಯಕ ಪ್ರಾಧ್ಯಾಪಕನ ವಿರುದ್ಧ ಪ್ರತಿಭಟನೆ

ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಂತರ ರೂಪಾಯಿ ವಂಚನೆ ಆರೋಪ
Published : 3 ಅಕ್ಟೋಬರ್ 2024, 16:14 IST
Last Updated : 3 ಅಕ್ಟೋಬರ್ 2024, 16:14 IST
ಫಾಲೋ ಮಾಡಿ
Comments

ಬೆಂಗಳೂರು: ಕೋರಮಂಗಲದ ಜ್ಯೋತಿ ನಿವಾಸ್‌ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಚಿರಾಗ್‌ ಎಸ್‌. ಅವರು  ನಕಲಿ ದಾಖಲೆಗಳನ್ನು ಸೃಷ್ಟಿಸಿ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಗುರುವಾರ ಪ್ರತಿಭಟನೆ ನಡೆಸಿದರು.

ಸಹಾಯಕ ಪ್ರಾಧ್ಯಾಪಕ ಚಿರಾಗ್ ಅವರು ಎವಿಎಸ್‌ ಎಂಟರ್‌ಪ್ರೈಸಸ್‌ ಸಂಸ್ಥೆಯ ಹೆಸರಲ್ಲಿ ಕಾನೂನು ಬಾಹಿರವಾಗಿ ಬಿಬಿಎಂಪಿಯಿಂದ ಗುತ್ತಿಗೆ ಪಡೆದುಕೊಂಡಿದ್ದರು. ಯಾವುದೇ ಕೆಲಸ ನಿರ್ವಹಿಸದೇ ಬಿಬಿಎಂಪಿಗೆ ನಕಲಿ ದಾಖಲೆಗಳನ್ನು ನೀಡಿ ಹಣ ಪಡೆದಿದ್ದಾರೆ ಎಂದು ಪ‍್ರತಿಭಟನಕಾರರು ಆರೋಪಿಸಿದರು.

ಬೊಮ್ಮನಹಳ್ಳಿ ವಲಯದಲ್ಲಿ 2020–21ರಲ್ಲಿ ₹ 24.64 ಲಕ್ಷ, ಆರ್.ಆರ್ ನಗರ ವಲಯದಲ್ಲಿ ಕೋವಿಡ್ ಚಿಕಿತ್ಸೆಗೆ ವೈದ್ಯರನ್ನು ನಿಯೋಜಿಸಿರುವುದಾಗಿ ತಿಳಿಸಿ ₹ 33.12 ಕೋಟಿಯ ಬಿಲ್‌ಗಳನ್ನು ನೀಡಿ ಹಣ ಪಡೆದು ವಂಚಿಸಿದ್ದಾರೆ. ಯಲಹಂಕ ವಲಯದಲ್ಲಿ 2021ರಲ್ಲಿ ನಿಯಂತ್ರಣ ಕೊಠಡಿ ನಿರ್ವಹಣೆ ಮಾಡಿರುವುದಾಗಿ ನಕಲಿ ದಾಖಲೆ ನೀಡಿ
₹ 11.09 ಲಕ್ಷ ಪಡೆದಿದ್ದಾರೆ. ಪೂರ್ವ ವಲಯದಲ್ಲಿ ಕೋವಿಡ್ ನಿಯಂತ್ರಣ, ನಿರ್ವಹಣೆ ಸಂದರ್ಭದಲ್ಲಿ ಪರೀಕ್ಷಾ ಮಾದರಿಗಳ ಸಂಗ್ರಹಕಾರರು, ಕಂಪ್ಯೂಟರ್‌ ನಿರ್ವಾಹಕರ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ  ಕೆಲಸ ನಿರ್ವಹಿಸಿರುವುದಾಗಿ ಬಿಂಬಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಹಿರಿಯ ಆರೋಗ್ಯ ಪರಿವೀಕ್ಷಕರು ಮತ್ತು ಅವರ ಕುಟುಂಬ ಸದಸ್ಯರ ಖಾತೆಗೆ ಸುಮಾರು ₹ 35.04 ಲಕ್ಷ ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ್ದಾರೆ ಎಂದು ಪ್ರತಿಭಟನಕಾರರು ದೂರಿದರು.

ಪೌರಕಾರ್ಮಿಕರ ಅವಲಂಬಿತರು ಮತ್ತು ನಿರುದ್ಯೋಗಿಗಳಿಗೆ ಮೀಸಲಾಗಿದ್ದ ಈ ಗುತ್ತಿಗೆಗಳನ್ನು ಪಡೆದು ವಂಚಿಸಿರುವ ಚಿರಾಗ್‌ ಅವರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು.

ಪೌರ ಕಾರ್ಮಿಕರ ಅವಲಂಬಿತರ ಒಕ್ಕೂಟದ ಅಧ್ಯಕ್ಷ ಮೋಹನ್ ಕೆ., ರಾಜ್ಯ ಘಟಕದ ಅಧ್ಯಕ್ಷ ಎಂ.ಸಿ. ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಸಿ.ದಾಸ್, ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಜನಜಾಗೃತಿ ಸಮಿತಿಯ ಅಧ್ಯಕ್ಷ ಸೂರ್ಯಚಂದ್ರ ಮಂಜಣ್ಣ, ಜೈಭೀಮ್ ನೀಲಿ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ತ್ಯಾಗರಾಜು, ಸುವರ್ಣ ಕರ್ನಾಟಕ ರಾಜ್ಯದಲಿತ ಕ್ರಿಯಾ ಸಮಿತಿ  ಅಧ್ಯಕ್ಷ ಜಿ. ವೇಲು, ದಲಿತ ಸಫಾಯಿ ಕರ್ಮಚಾರಿ ಸಂಘದ ಅಧ್ಯಕ್ಷ ಚಂದ್ರು, ದಲಿತ ಪರ ಹೋರಾಟಗಾರ ವಿಜಯ್ ಕುಮಾರ್, ದಲಿತ ಸಂರಕ್ಷಣೆ ವೇದಿಕೆ ಅಧ್ಯಕ್ಷ ರಾಬರ್ಟ್, ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ಅಧ್ಯಕ್ಷ  ಎ.ಅಮೃತ್ ರಾಜ್, ಭೀಮಪುತ್ರಿ ಬ್ರಿಗೇಡ್ ಸಂಸ್ಥಾಪಕಿ ರೇವತಿ, ಮಾದಿಗ ನಿರುದ್ಯೋಗಿಗಳ ಹೋರಾಟ ಸಮಿತಿ ಅಧ್ಯಕ್ಷ ಹರೀಶ್, ದ್ರಾವಿಡ ಸ್ವಾಭಿಮಾನ ಸೇನೆ ಅಧ್ಯಕ್ಷ ಜೈಭೀಮ್ ಪರ್ತಿಬಾನ್, ಭ್ರಷ್ಟಾಚಾರ ನಿರ್ಮೂಲನೆ ವೇದಿಕೆ ಅಧ್ಯಕ್ಷ ಜೋಸೆಫ್, ಕಾರ್ಮಿಕ ಹಕ್ಕುಗಳ ಸಂರಕ್ಷಣಾ ಸಮಿತಿ ಅಧ್ಯಕ್ಷ ಎನ್. ಓಬಳೇಶ್, ಅನಿಕೇತನ ಕನ್ನಡ ಬಳಗ ಅಧ್ಯಕ್ಷ ಹೇಮರಾಜು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT