ಗುರುವಾರ, 3 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಯಾನಿ ಆ್ಯಂಟೊನಿಯೊಗೆ ‘ಡಬಲ್’ ಸಂಭ್ರಮ

ಅಖಿಲ ಭಾರತ ಫಿಡೆ ರೇಟೆಡ್‌ ರ‍್ಯಾಪಿಡ್ ಚೆಸ್ ಟೂರ್ನಿ: ಜೀವಿತೇಶ್‌, ಮಾರ್ತಾಂಡನ್ ರನ್ನರ್ ಅಪ್
Published : 3 ಅಕ್ಟೋಬರ್ 2024, 16:19 IST
Last Updated : 3 ಅಕ್ಟೋಬರ್ 2024, 16:19 IST
ಫಾಲೋ ಮಾಡಿ
Comments

ಮಂಗಳೂರು: ಮೊದಲ ಸುತ್ತಿನಿಂದಲೇ ಪಾರಮ್ಯ ಮೆರೆದ ಅಗ್ರಶ್ರೇಯಾಂಕಿತ ಆಟಗಾರ ಮಂಗಳೂರಿನ ವಿಯಾನಿ ಆ್ಯಂಟೊನಿಯೊ ಡಿಕುನ್ಹಾ ಗುರುವಾರ ಮುಕ್ತಾಯಗೊಂಡ ಅಖಿಲ ಭಾರತ ಫಿಡೆ ರೇಟೆಡ್‌ ರ‍್ಯಾಪಿಡ್ ಮುಕ್ತ ಚೆಸ್ ಟೂರ್ನಿಯ ಪ್ರಶಸ್ತಿ ಗೆದ್ದುಕೊಂಡರು. ಬ್ಲಿಜ್ ಟೂರ್ನಿಯ ಪ್ರಶಸ್ತಿಯೂ ಅವರ ಪಾಲಾಯಿತು.

ದಕ್ಷಿಣ ಕನ್ನಡ ಜಿಲ್ಲಾ ಚೆಸ್ ಸಂಸ್ಥೆ ನಗರದ ಪುರಭವನದಲ್ಲಿ ಆಯೋಜಿಸಿದ್ದ ಟೂರ್ನಿಯ ಕೊನೆಯ ಹಾಗೂ 9ನೇ ಸುತ್ತಿನ ಮುಕ್ತಾಯಕ್ಕೆ ಇಂಟರ್‌ನ್ಯಾಷನಲ್ ಮಾಸ್ಟರ್‌ಗಳಾದ ವಿಯಾನಿ ಮತ್ತು ತೆಲಂಗಾಣದ ಸಾಯ್ ಅಗ್ನಿ ಜೀವಿತೇಶ್ ತಲಾ 8.5 ಪಾಯಿಂಟ್ ಗಳಿಸಿ ಸಮಬಲ ಸಾಧಿಸಿದ್ದರು. ಉತ್ತಮ ಟೈಬ್ರೇಕರ್ ಆಧಾರದಲ್ಲಿ ವಿಯಾನಿ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಕೇರಳದ ಮಾರ್ತಾಂಡನ್‌, ತಮಿಳುನಾಡಿನ ರಾಮನಾಥನ್ ಬಾಲಸುಬ್ರಹ್ಮಣ್ಯಂ, ಕರ್ನಾಟಕದ ಸಿದ್ಧಾಂತ್ ಪೂಂಜಾ, ಲಕ್ಷಿತ್ ಸಾಲಿಯಾನ್, ಕೇರಳದ ಸಾವಂತ್ ಕೃಷ್ಣನ್‌ ಮತ್ತು ಗೋವಾದ ಚೈತನ್ಯ ಗಾಂವ್ಕರ್ ತಲಾ 7.5 ಪಾಯಿಂಟ್ ಗಳಿಸಿದರು. ಟೈಬ್ರೇಕರ್ ಆಧಾರದಲ್ಲಿ ಅವರಿಗೆ ಕ್ರಮವಾಗಿ 3ರಿಂದ 8ನೇ ಸ್ಥಾನ ನೀಡಲಾಯಿತು. ವಿಜೇತರು ₹ 30 ಸಾವಿರ ನಗದು ಮತ್ತು ಟ್ರೋಫಿ, ರನ್ನರ್ ಅಪ್ ₹ 20 ಸಾವಿರ ಮತ್ತು ಟ್ರೋಫಿ, ಮೂರನೇ ಸ್ಥಾನ ಗಳಿಸಿದವರು ₹ 10 ಸಾವಿರ ಮತ್ತು ಟ್ರೋಫಿ ಪಡೆದರು.

ಬ್ಲಿಜ್ ಟೂರ್ನಿಯಲ್ಲಿ ವಿಯಾನಿ 8.5 ಪಾಯಿಂಟ್ ಕಲೆ ಹಾಕಿದರೆ 8 ಪಾಯಿಂಟ್ ಗಳಿಸಿದ ಮಾರ್ತಾಂಡನ್ ರನ್ನರ್ ಅಪ್ ಆದರು. ಸಾಯ್ ಅಗ್ನಿ ಜೀವಿತೇಶ್ 7.5 ಪಾಯಿಂಟ್‌ಗಳೊಂದಿಗೆ ಮೂರನೇ ಸ್ಥಾನಕ್ಕೆ ಸಮಾಧಾನಪಟ್ಟುಕೊಂಡರು. ಇವರಿಗೆ ಕ್ರಮವಾಗಿ ₹ 5 ಸಾವಿರ, ₹ 4 ಸಾವಿರ ಮತ್ತು ₹ 3 ಸಾವಿರ ಮೊತ್ತದ ಪ್ರಶಸ್ತಿ ನೀಡಲಾಯಿತು. ಕರ್ನಾಟಕದ ದೃಕ್ಷು ವಸಂತ್‌, ಅಪೂರ್ವ ಕಾಂಬ್ಳೆ, ಕೇರಳದ ಜ್ಯೋತಿಲಾಲ್‌, ಕರಣ್‌, ಕರ್ನಾಟಕದ ಆಗಸ್ಟಿನ್‌, ಗೋವಾದ ಚೈತನ್ಯ ಗಾಂವ್ಕರ್ ಮತ್ತು ಕೇರಳದ ಮಧುಸೂದನನ್ ಕ್ರಮವಾಗಿ 4ರಿಂದ 10ರ ವರೆಗಿನ ಸ್ಥಾನ ಗಳಿಸಿದರು.

ರ‍್ಯಾಪಿಡ್ ಮುಕ್ತ ಚೆಸ್ ಟೂರ್ನಿಯ ಕೊನೆಯ ಸುತ್ತಿನ ಪ್ರಮುಖ ಫಲಿತಾಂಶಗಳು: ತೆಲಂಗಾಣದ ಸಾಯ್ ಅಗ್ನಿ ಜೀವಿತೇಶ್‌ಗೆ ಕರ್ನಾಟಕದ ಅಪೂರ್ವ ಕಾಂಬ್ಳೆ ವಿರುದ್ಧ ಜಯ; ಕರ್ನಾಟಕದ ವಿಯಾನಿ ಆ್ಯಂಟೊನಿಯೊ ಡಿಕುನ್ಹಾಗೆ ಕೇರಳದ ಜ್ಯೋತಿಲಾಲ್ ಎದುರು ಗೆಲುವು; ಕರ್ನಾಟಕದ ಲಕ್ಷಿತ್ ಸಾಲಿಯಾನ್‌ಗೆ ಕರ್ನಾಟಕದ ಆಗಸ್ಟಿನ್ ವಿರುದ್ಧ, ಕೇರಳದ ಮಾರ್ತಾಂಡನ್‌ಗೆ ಕರ್ನಾಟಕದ ಚರಿತ್ ಭಟ್‌ ವಿರುದ್ಧ, ತಮಿಳುನಾಡಿನ ರಾಮನಾಥನ್‌ಗೆ ಕೇರಳದ ಅಬ್ದುಲ್ ಮಜೀದ್ ವಿರುದ್ಧ, ಕರ್ನಾಟಕದ ಸಿದ್ಧಾಂತ್ ಪೂಂಜಾಗೆ ಗೋವಾದ ಪರಬ್ ವಿರುದ್ಧ, ಗೋವಾದ ಚೈತನ್ಯ ಗಾಂವ್ಕರ್‌ಗೆ ತೆಲಂಗಾಣದ ಕಾರ್ತಿಕ್ ಸಾಯ್ ವಿರುದ್ಧ, ಕೇರಳದ ಸಾವಂತ್ ಕೃಷ್ಣನ್‌ಗೆ ಕೇರಳದ ಅಭಿಷೇಕ್ ವಿರುದ್ಧ, ಕೇರಳದ ಮಧುಸೂದನನ್‌ಗೆ ಕರ್ನಾಟಕದ ರವೀಶ್ ಕೋಟೆ ವಿರುದ್ಧ, ಕರ್ನಾಟಕದ ಲೀಲಾ ಜಯಕೃಷ್ಣನ್‌ಗೆ ಕೇರಳದ ಸಂದೀಪ್‌ ವಿರುದ್ಧ ಜಯ.

ಬ್ಲಿಜ್‌ ಟೂರ್ನಿಯ ಕೊನೆಯ ಸುತ್ತಿನ ಪ್ರಮುಖ ಫಲಿತಾಂಶಗಳು: ವಿಯಾನಿ ಆ್ಯಂಟೊನಿಯೊ ಮತ್ತು ಸಾಯ್ ಅಗ್ನಿ ಜೀವಿತೇಶ್ ನಡುವಿನ ಪಂದ್ಯ ಡ್ರಾ; ಮಾರ್ತಾಂಡನ್‌ಗೆ ಅಪೂರ್ವ ಕಾಂಬ್ಳೆ ವಿರುದ್ಧ ಜಯ; ದೃಕ್ಷು ವಸಂತ್‌ಗೆ ಚಿನ್ಮಯ್ ಕೌಶಿಕ್ ಎದುರು, ಆಗಸ್ಟಿನ್‌ಗೆ ವಿಹಾನ್ ಲೋಬೊ ವಿರುದ್ಧ ಜಯ; ರಾಮನಾಥನ್‌ ಬಾಲಸುಬ್ರಹ್ಮಣ್ಯಂ ಮತ್ತು ಆರಾದ್ಯೊ ಭಟ್ಟಾಚಾರ್ಯ ನಡುವೆ ಡ್ರಾ, ಚೈತನ್ಯ ಗಾಂವ್ಕರ್‌ಗೆ ಸಿದ್ಧಾಂತ್ ಪೂಂಜಾ ವಿರುದ್ಧ, ಜ್ಯೋತಿಲಾಲ್‌ಗೆ ಗೌರಿಶಂಕರ್ ವಿರುದ್ಧ, ಮಧುಸೂದನನ್‌ಗೆ ಆರುಷ್‌ ಭಟ್ ವಿರುದ್ಧ, ಕರಣ್‌ಗೆ ಲಕ್ಷಿತ್ ಸಾಲಿಯಾನ್‌ ವಿರುದ್ಧ ಮತ್ತು ಪರಬ್‌ಗೆ ಸುಶಾಂತ್‌ ವಿರುದ್ಧ ಗೆಲುವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT