ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ 28 ಆರೋಗ್ಯ ಉಪಕೇಂದ್ರಕ್ಕೆ ಪ್ರಸ್ತಾವ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ವಿವಿಧ ಕಾಮಗಾರಿಗಳಿಗೆ ಆರೋಗ್ಯ ಸಚಿವರಿಂದ ಚಾಲನೆ
Published : 5 ಅಕ್ಟೋಬರ್ 2024, 14:49 IST
Last Updated : 5 ಅಕ್ಟೋಬರ್ 2024, 14:49 IST
ಫಾಲೋ ಮಾಡಿ
Comments

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ 28 ಆರೋಗ್ಯ ಉಪ ಕೇಂದ್ರಗಳನ್ನು ಹೊಸದಾಗಿ ಆರಂಭಿಸುವಂತೆ ಕೋರಿ ಜಿಲ್ಲಾಡಳಿತ ಪ್ರಸ್ತಾವ ಸಲ್ಲಿಸಿದೆ. ಸದ್ಯ 12 ಕೇಂದ್ರಗಳಿಗೆ ನಿವೇಶನ ಸಿದ್ದವಿದೆ. ಮೊದಲ ಹಂತದಲ್ಲಿ 6 ಮತ್ತು ಎರಡನೇ ಹಂತದಲ್ಲಿ 6 ಆರೋಗ್ಯ ಉಪಕೇಂದ್ರಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗುಂಡೂರಾವ್ ಅವರು ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರತಿ ಉಪ ಕೇಂದ್ರ ₹ 65 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಲಿದೆ. 12 ಉಪ ಕೇಂದ್ರಗಳನ್ನೂ ₹ 3.50 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುವುದು. ಜಿಲ್ಲೆಯಲ್ಲಿ 4 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸಲು ಬೇಡಿಕೆ ಬಂದಿದೆ. ಈ ಬಗ್ಗೆ ನಿಯಮಾನುಸಾರ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ವೈದ್ಯರು, ಶುಶ್ರೂಷಕಿಯರ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಅನುಚಿತವಾಗಿ ವರ್ತಿಸುವವರ ವಿರುದ್ಧವೂ ಕ್ರಮವಹಿಸಲಾಗುತ್ತದೆ. ಅಂತವರಿಗೆ 3 ತಿಂಗಳ ಕಾರಾಗೃಹ ಶಿಕ್ಷೆ ಇರುತ್ತದೆ ಎಂದರು. 

ನಕಲಿ ವೈದ್ಯರ ಹಾವಳಿ ತಡೆಯಲು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ.
ರಾಜ್ಯದ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿಯೂ ಡೇ ಕೇರ್ ಕಿಮೋ ಥೆರಫಿ ಕೇಂದ್ರಗಳನ್ನು ಶೀಘ್ರದಲ್ಲಿಯೇ ಆರಂಭಿಸಲಾಗುವುದು. ವೈದ್ಯರ ಮೇಲೆ ಹಲ್ಲೆ ನಡೆಸುವವರಿಗೆ 7 ವರ್ಷ ಕಾರಾಗೃಹ ಶಿಕ್ಷೆಯ ಜೊತೆಗೆ ₹ 1.5 ಲಕ್ಷ ದಂಡ ವಿಧಿಸುವುದಕ್ಕೂ ಕಾನೂನು ತಿದ್ದುಪಡಿ ಮಾಡಲಾಗಿದೆ ಎಂದರು.

ನಟ ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ಜಾರಿ ಮಾಡಿರುವ ಹೃದಯ ಜ್ಯೋತಿ ಯೋಜನೆಯಡಿ ಇಲ್ಲಿಯವರೆಗೆ 75 ಜನರ ಪ್ರಾಣಗಳು ಉಳಿದಿವೆ. ಇದುವರೆಗೆ 1200 ಜನರು ಈ ಯೋಜನೆಯಡಿ ಚಿಕಿತ್ಸೆ ಪಡೆದಿದ್ದಾರೆ. ರಾಜ್ಯದಲ್ಲಿ ಡೆಂಗಿ ನಿಯಂತ್ರಣದಲ್ಲಿದೆ ಎಂದರು.

ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಸಹಕಾರದೊಂದಿಗೆ ಡೆಂಗಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಮುಂದಿನ ವರ್ಷ ಡೆಂಗಿ ಹರಡುವಿಕೆ ನಿಯಂತ್ರಿಸಲು ಮುಂಜಾಗ್ರತಾ ಕ್ರಮಗಳನ್ನು ಯೋಜಿತ ರೀತಿಯಲ್ಲಿ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದರು.

ಇದಕ್ಕೂ ಮುನ್ನ ತಾಲ್ಲೂಕಿನ ನಂದಿ ಮತ್ತು ನಾಯನಹಳ್ಳಿ ಗ್ರಾಮಗಳಲ್ಲಿ ಉನ್ನತೀಕರಿಸಿದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕಟ್ಟಡಗಳನ್ನು ಸಚಿವರು ಉದ್ಘಾಟಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ ಸುಧಾಕರ್, ಶಾಸಕರಾದ ಪ್ರದೀಪ್ ಈಶ್ವರ್, ಕೆ.ಎಚ್. ಪುಟ್ಟಸ್ವಾಮಿಗೌಡ, ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರಕಾಶ್ ಜಿ.ಟಿ ನಿಟ್ಟಾಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ, ಉಪವಿಭಾಗಾಧಿಕಾರಿ ಡಿ.ಎಚ್. ಅಶ್ವಿನ್, ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್.ಎಸ್ ಮಹೇಶ್ ಕುಮಾರ್, ಜಿಲ್ಲಾ ಶಸ್ತ್ರ ಚಿಕಿತ್ಸಕಿ ಮಂಜುಳಾದೇವಿ ಹಾಗೂ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.

‘ತಪ್ಪು ಮಾಡದಿದ್ದರೆ ಭಯಪಡುವುದು ಬೇಡ’

ಕೋವಿಡ್ ಹಗರಣದ ವಿಚಾರವಾಗಿ ತನಿಖೆ ನಡೆಸಿ ನ್ಯಾಯಮೂರ್ತಿ ಕುನ್ಹಾ ಅವರ ಆಯೋಗವು ಮಧ್ಯಂತರ ವರದಿ ನೀಡಿದೆ. ಶೀಘ್ರದಲ್ಲಿಯೇ ಅಂತಿಮ ವರದಿ ನೀಡುತ್ತಾರೆ. ತಪ್ಪು ಮಾಡದಿದ್ದರೆ ಭಯಪಡುವುದು ಬೇಡ ಎಂದು ಹೇಳಿದರು. ಯಾವ ವಸ್ತುಗಳು ಸಲಕರಣೆಗಳನ್ನು ಹೆಚ್ಚು ಬೆಲೆಗೆ ಮತ್ತು ಅನಗತ್ಯವಾಗಿ ಖರೀದಿಸಿದ್ದಾರೆ ಎಂದು ಸಂಬಂಧಿಸಿದ ಅಧಿಕಾರಿಗಳನ್ನು ಕರೆಸಿ ಮಾಹಿತಿ ಪಡೆಯಲಾಗುತ್ತಿದೆ. ನಮ್ಮದು ಜವಾಬ್ದಾರಿ ಸರ್ಕಾರ. ವೈಯಕ್ತಿಕ ದ್ವೇಷದಿಂದ ಮಾಡುತ್ತಿಲ್ಲ ಎಂದರು.

‘ನಮ್ಮ ಕ್ಲಿನಿಕ್‌’ಗಳು ಉತ್ತಮವಾಗಿ ನಡೆಯುತ್ತಿವೆ. ಅಲ್ಲಿ ಸೌಲಭ್ಯಗಳನ್ನು ಹೆಚ್ಚಿಸಲಾಗಿದೆ. ಶೇ 100ರಷ್ಟು ಸರ್ಕಾರಿ ವೈದ್ಯಕೀಯ ವ್ಯವಸ್ಥೆ ಮತ್ತು ವೈದ್ಯರು ಸರಿ ಇದ್ದಾರೆ ಎಂದು ಹೇಳುತ್ತಿಲ್ಲ. ಆದರೆ ಸರ್ಕಾರಿ ವೈದ್ಯರು ತಮ್ಮ ಸರ್ಕಾರಿ ಕೆಲಸದ ಅವಧಿಯಲ್ಲಿ ಬೇರೆ ಕಡೆ ಕೆಲಸ ಮಾಡುವಂತಿಲ್ಲ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT