ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪೆರಿಫೆರಲ್‌ ರಿಂಗ್‌ ರಸ್ತೆ: ಶೀಘ್ರದಲ್ಲಿ ದರ ನಿಗದಿ

ಟೆಂಡರ್‌ದಾರರು ಆಸಕ್ತಿ ವಹಿಸದ ಕಾರಣ ಪಿಆರ್‌ಆರ್‌ ಸ್ವತಃ ನಿರ್ಮಿಸಲು ಮುಂದಾಗಿರುವ ಬಿಡಿಎ
Published : 5 ಅಕ್ಟೋಬರ್ 2024, 0:05 IST
Last Updated : 5 ಅಕ್ಟೋಬರ್ 2024, 0:05 IST
ಫಾಲೋ ಮಾಡಿ
Comments

ಬೆಂಗಳೂರು: ತುಮಕೂರು ರಸ್ತೆ–ಹೊಸೂರು ರಸ್ತೆ ಸಂಪರ್ಕಿಸಲು ಅಷ್ಟಪಥ ನಿರ್ಮಿಸುವ ಪೆರಿಫೆರಲ್‌ ವರ್ತುಲ ರಸ್ತೆ (ಪಿಆರ್‌ಆರ್‌) ಯೋಜನೆಗೆ ಸ್ವಾಧೀನಪಡಿಸಿಕೊಳ್ಳಲಿರುವ ಜಮೀನುಗಳಿಗೆ ಪರಿಹಾರದ ದರ ನಿಗದಿ ಮಾಡುವ ಪ್ರಕ್ರಿಯೆ ಆರಂಭಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಸಿದ್ಧತೆ ನಡೆಸಿದೆ.

2007ರಲ್ಲಿ ರೂಪಿಸಲಾಗಿರುವ ಈ ಯೋಜನೆ 17 ವರ್ಷಗಳಿಂದ ನನೆಗುದಿಗೆ ಬಿದ್ದಿತ್ತು. ಪಿಆರ್‌ಆರ್‌ ನಿರ್ಮಾಣಕ್ಕಾಗಿ ಮೂರ್ನಾಲ್ಕು ಬಾರಿ ಟೆಂಡರ್‌ ಆಹ್ವಾನಿಸಿದರೂ ಯಾರೂ ಬಿಡ್‌ ಸಲ್ಲಿಸಿರಲಿಲ್ಲ. ಜೊತೆಗೆ ಜಮೀನು ಕಳೆದುಕೊಳ್ಳುವ ಭೂ ಮಾಲೀಕರಿಗೆ ಪರಿಹಾರ ನಿಗದಿ ಮಾಡುವ ವಿಚಾರದಲ್ಲಿಯೂ ಗೊಂದಲಗಳು ಉಂಟಾಗಿದ್ದವು. ಸಹಭಾಗಿತ್ವದಲ್ಲಿ ಯೋಜನೆ ಅನುಷ್ಠಾನಗೊಳಿಸುವ ಪ್ರಸ್ತಾವವನ್ನು ಕೈಬಿಟ್ಟು ಸ್ವತಃ ಯೋಜನೆ ಪೂರ್ಣಗೊಳಿಸಲು ಬಿಡಿಎ ನಿರ್ಧರಿಸಿದೆ. ಇದಕ್ಕಾಗಿ ₹ 37 ಸಾವಿರ ಕೋಟಿ ಸಾಲ ಪಡೆಯಲು ತೀರ್ಮಾನಿಸಿದೆ.

ಭೂಸ್ವಾಧೀನ ಪ್ರಕ್ರಿಯೆ ಮುಂದುವರಿಸಲು ನ್ಯಾಯಾಲಯ ಕೂಡ ಅನುಮತಿ ನೀಡಿರುವುದರಿಂದ ಯೋಜನೆ ವೇಗ ಪಡೆದುಕೊಂಡಿದೆ. 

9 ಅಧಿಕಾರಿಗಳ ನೇಮಕ: ತುಮಕೂರು ರಸ್ತೆ–ಹೊಸೂರು ರಸ್ತೆ ಸಂಪರ್ಕಿಸುವ ಈ ರಸ್ತೆಯು 100 ಮೀಟರ್‌ ಅಗಲ, 73 ಕಿ.ಮೀ. ಉದ್ದ ಇರಲಿದ್ದು, 2,596 ಎಕರೆ ಜಮೀನು ಬೇಕಾಗಿದೆ. ಅದರಲ್ಲಿ 1,800 ಎಕರೆ ವಿಸ್ತೀರ್ಣದ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ಅಂತಿಮ ಹಂತಕ್ಕೆ ಬಂದಿದೆ ಎಂದು ಬಿಡಿಎ ಆಯುಕ್ತ ಎನ್‌. ಜಯರಾಂ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಭೂಸ್ವಾಧೀನ ಪ್ರಕ್ರಿಯೆ ನಡೆಸಲು ಒಂಬತ್ತು ಕೆಎಎಸ್‌ ಅಧಿಕಾರಿಗಳನ್ನು ಪಿಆರ್‌ಆರ್‌ ಯೋಜನೆಯ ವಿಶೇಷ ಭೂಸ್ವಾಧೀನಾಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಅವರು ಭೂಸ್ವಾಧೀನ, ಪರಿಹಾರ ವಿತರಣೆ ಪ್ರಕ್ರಿಯೆ ನಡೆಸುತ್ತಾರೆ. ವಿಶೇಷ ಭೂಸ್ವಾಧೀನ ಅಧಿಕಾರಿಗಳು, ತಹಶೀಲ್ದಾರ್‌ಗಳು, ಭೂಮಾಪಕರು ಮತ್ತು ಡೇಟಾ ಎಂಟ್ರಿ ಆಪರೇಟರ್‌ಗಳು ಸೇರಿ 68 ಸಿಬ್ಬಂದಿ ಈ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.

ಬೆಂಗಳೂರು ‘ಬಿಸಿನೆಸ್‌ ಕಾರಿಡಾರ್‌’ ಎಂದು ಮರುನಾಮಕರಣಗೊಂಡಿರುವ ಹೊಸೂರು–ತುಮಕೂರು ರಸ್ತೆ ಸಂಪರ್ಕಿಸುವ ‘ಪಿಆರ್‌ಆರ್‌’ ಯೋಜನೆಯು ಬಳ್ಳಾರಿ ರಸ್ತೆ, ಹಳೆ ಮದ್ರಾಸ್‌ ರಸ್ತೆ ಮತ್ತು ಹಳೆ ವಿಮಾನ ನಿಲ್ದಾಣ ರಸ್ತೆ ಮೂಲಕ ಮತ್ತು ಬೆಂಗಳೂರು ಉತ್ತರ, ಬೆಂಗಳೂರು ಪೂರ್ವ ಮತ್ತು ಆನೇಕಲ್‌ ತಾಲ್ಲೂಕುಗಳನ್ನು ಹಾದುಹೋಗಲಿದೆ.

ನಗರಾಭಿವೃದ್ಧಿ ಸಚಿವರ ಮುತುವರ್ಜಿ: ‘ನಗರದ ವಾಹನ ದಟ್ಟಣೆಯನ್ನು ಕಡಿಮೆ ಮಾಡುವುದಕ್ಕಾಗಿ ನಗರದ ಸುತ್ತ ಅರ್ಧ ವೃತ್ತಾಕಾರದಲ್ಲಿ ಪಿಆರ್‌ಆರ್‌ ನಿರ್ಮಿಸಲು 2007ರಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಭೂ ಸ್ವಾಧೀನ ಪ್ರಕ್ರಿಯೆ, ಭೂ ಪರಿಹಾರ ಬಿಕ್ಕಟ್ಟು, ಪರಿಸರ ಇಲಾಖೆ ಅನುಮತಿ ವಿಳಂಬ, ಬಿಡ್‌ ಸಲ್ಲಿಸಲು ಗುತ್ತಿಗೆದಾರರ ನಿರಾಸಕ್ತಿ ಸೇರಿದಂತೆ ವಿವಿಧ ಕಾರಣಗಳಿಂದ ಯೋಜನೆ ಪ್ರಗತಿ ಕಂಡಿರಲಿಲ್ಲ. ಡಿ.ಕೆ. ಶಿವಕುಮಾರ್‌ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಬಳಿಕ ಈ ಯೋಜನೆ ಬಗ್ಗೆ ಹೆಚ್ಚು ಆಸಕ್ತಿ ವಹಿಸಿದ್ದರು. ಬಿಡ್‌ದಾರರು ಬಾರದೇ ಇದ್ದ ಕಾರಣದಿಂದ ಯೋಜನೆಯನ್ನೇ ಮೂರು ಭಾಗಗಳನ್ನಾಗಿ ವಿಭಜಿಸಲು ಸೂಚಿಸಿದ್ದರು.  ಆನಂತರ ಬಿಡಿಎಯಿಂದಲೇ ಯೋಜನೆ ಪೂರ್ಣಗೊಳಿಸಲು ಕ್ರಮ ವಹಿಸುವಂತೆ ತಿಳಿಸಿದ್ದರು. ಈ ಎಲ್ಲ ಕಾರಣದಿಂದ ಈಗ ಯೋಜನೆಗೆ ಜೀವ ಬಂದಿದೆ’ ಎಂದು ಬಿಡಿಎ ಅಧಿಕಾರಿಯೊಬ್ಬರು ವಿವರ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT