ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಬಳ್ಳಾಪುರ | ಹರಾಜಿನ ಲಾಬಿ; ಕೊನೆಗೂ ಪೌರಾಯುಕ್ತರ ವರ್ಗ

ಜಿಲ್ಲೆಯ ಇತರೆ ನಗರ ಸ್ಥಳೀಯ ಸಂಸ್ಥೆಗಳಲ್ಲಿಯೂ ಪಟ್ಟಭದ್ರರ ‘ಕೈ’ ಮೇಲಾಗುವ ಆತಂಕ
Published : 6 ಜುಲೈ 2024, 7:48 IST
Last Updated : 6 ಜುಲೈ 2024, 7:48 IST
ಫಾಲೋ ಮಾಡಿ
Comments

ಚಿಕ್ಕಬಳ್ಳಾಪುರ: ಹರಾಜಿನ ಲಾಬಿ ಕೊನೆಗೂ ಚಿಕ್ಕಬಳ್ಳಾಪುರ ನಗರಸಭೆ ಪೌರಾಯುಕ್ತರ ವರ್ಗಾವಣೆಗೆ ಕಾರಣವಾಗಿದೆ. ನಗರಸಭೆಯ ಆದಾಯ ಖೋತಾ ತಡೆಗೆ ಮುಂದಾಗಿದ್ದ ಪೌರಾಯುಕ್ತ ಮಂಜುನಾಥ್ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿದೆ. 

ಈ ವಿಚಾರ ಈಗ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಪೌರಾಯುಕ್ತರ ‘ಅರ್ಹತೆ’ಯ ಮೇಲೆ ತೂಗುಗತ್ತಿಯಾಗಿದೆ. ಪೌರಾಯುಕ್ತರು ತಮ್ಮ ಕೆಲಸ ಕಾರ್ಯಗಳಿಗೆ ಅಡ್ಡಿಯಾದರೆ ಅಥವಾ ಪಟ್ಟಭದ್ರರಿಗೆ ಮಣೆ ಹಾಕದಿದ್ದರೆ, ‘ಇವರು ಪೌರಾಯುಕ್ತರ ಹುದ್ದೆಗೆ ಅರ್ಹರಲ್ಲ’ ಎಂದು ನ್ಯಾಯಾಲಯದ ಮೊರೆ ಹೋಗಲು ಪಟ್ಟಭದ್ರರಿಗೆ ಅವಕಾಶ ಒದಗಿ ಬಂದಿದೆ.

ಚಿಕ್ಕಬಳ್ಳಾಪುರ ನಗರಸಭೆಯ ಈ ಪ್ರಕರಣ ಜಿಲ್ಲೆಯ ನಗರಸ್ಥಳೀಯ ಸಂಸ್ಥೆಗಳ ಪೌರಾಯುಕ್ತರು ನಿರ್ಭಿತಿಯಿಂದ ಮತ್ತು ಆದಾಯ ಸೋರಿಕೆ ತಡೆಗೆ ಕ್ರಮವಹಿಸಲು ಅಡ್ಡಿ ಎನ್ನುವಂತೆ ಆಗಿದೆ.  

ಕಾನೂನು ಉಲ್ಲಂಘನೆ: ಮಂಜುನಾಥ್ ನಗರದ ‌ಬಜಾರ್ ರಸ್ತೆಯ ತರಕಾರಿ ಮಾರುಕಟ್ಟೆಯಲ್ಲಿ ನಗರಸಭೆಗೆ ಸೇರಿದ 99 ಅಂಗಡಿ ಮಳಿಗೆಗಳ ಹರಾಜು ನಡೆಸಲು ಮುಂದಾಗಿದ್ದೇ ಅವರ ವರ್ಗಾವಣೆಗೆ ಮೂಲ ಕಾರಣ. 

30 ವರ್ಷಗಳ ಹಿಂದೆ ನಗರದ ಸಂತೆ ಮಾರುಕಟ್ಟೆಯಲ್ಲಿರುವ ನಗರಸಭೆಯ ಮಳಿಗೆಗಳ ಹರಾಜು ನಡೆದಿತ್ತು. ಆದರೆ ಪೌರಾಡಳಿತ ನಿಯಮಗಳ ಪ್ರಕಾರ 12 ವರ್ಷಗಳಿಗೆ ಮರು ಹರಾಜು ನಡೆಯಬೇಕು. ಮರು ಹರಾಜು ನಡೆಸಲು ಮಂಜುನಾಥ್ ಅವರು ನಿಯಮಾವಳಿಗಳ ರೀತಿ ಅಂಗಡಿಗಳ ಬಾಡಿಗೆದಾರರಿಗೆ ನೋಟಿಸ್ ಜಾರಿಗೊಳಿಸಿದ್ದರು. ಅಲ್ಲದೆ ಈ ಹಿಂದೆ ನಗರಸಭೆ ಸಾಮಾನ್ಯ ಸಭೆಯಲ್ಲಿಯೂ ಮರು ಹರಾಜಿಗೆ ತೀರ್ಮಾನಿಸಲಾಗಿತ್ತು. ಮಂಜುನಾಥ್, ಹರಾಜು ನಡೆಸಲಾಗುವುದು ಎಂದು ನೋಟಿಸ್‌ ನೀಡಿದ್ದರು. ಆಟೊ ಮೂಲಕ ಪ್ರಚಾರ ನಡೆಸಿದ್ದರು. ದಿನಾಂಕವನ್ನೂ ಗೊತ್ತು ಮಾಡಿದ್ದರು. ಇದೆಲ್ಲವೂ ಇದು ಬಾಡಿಗೆದಾರರ ಕೆಂಗಣ್ಣಿಗೆ ಗುರಿಯಾಗಿತ್ತು.

ಮಳಿಗೆ ಹರಾಜು ಮಾತ್ರವಲ್ಲ ವಾರ್ಡ್‌ ನಂ 20ರ ಸರ್ಕಾರಿ ಪದವಿ ಪೂರ್ವ ಕಾಲೇಜು ಮುಂಭಾಗದಲ್ಲಿ ಶೌಚಾಲಯ ನಿರ್ವಹಣೆ ಮತ್ತು ಶುಲ್ಕ ವಸೂಲಿ ಮಾಡುವ ಹಕ್ಕು, ಖಾಸಗಿ ಬಸ್‌ಗಳ ಸುಂಕ ವಸೂಲಿ, ನೆಲ ಸುಂಕ ವಸೂಲಿ, ನಕ್ಕಲಕುಂಟೆ ಹುಣಸೆಮರಗಳು ಹರಾಜು, ಅಂಗಡಿ ಮಳಿಗೆಗಳ ಹರಾಜಿಗೂ ಮುಂದಾಗಿದ್ದರು.

ಅಂಗಡಿ ಮಳಿಗೆಗಳ ಹರಾಜಿಗೆ ನೋಟಿಸ್ ನೀಡುತ್ತಿದ್ದಂತೆ ಬಾಡಿಗೆದಾರರು ಪೌರಾಯುಕ್ತರ ವರ್ಗಾವಣೆಗೆ ಲಾಬಿ ನಡೆಸಿದರು. 

ನಗರಸಭೆ ಸದಸ್ಯ ಎಸ್‌.ಎಂ.ರಫೀಕ್, ‘ನಗರಸಭೆ ಪೌರಾಯುಕ್ತರಾಗಿ ಕಾರ್ಯನಿರ್ವಹಿಸುತ್ತಿರುವ ಮಂಜುನಾಥ್ ಕೇವಲ ಮುಖ್ಯಾಧಿಕಾರಿ ಅಷ್ಟೇ. ಅವರು ಪೌರಾಯುಕ್ತರಾಗಿ ಕೆಲಸ ಮಾಡಲು ಮುನಿಸಿಪಾಲ್ ಕಾಯ್ದೆ ಪ್ರಕಾರ ವಿದ್ಯಾರ್ಹತೆ ಹೊಂದಿಲ್ಲ.  ಅವರನ್ನು ಕೂಡಲೇ ಬದಲಾವಣೆ ಮಾಡಬೇಕು’ ಎಂದು ಹೈಕೋರ್ಟ್ ಮೊರೆ ಹೋದರು. ವಾದ, ಪ್ರತಿವಾದ ಆಲಿಸಿದ ಹೈಕೋರ್ಟ್ ನಾಲ್ಕು ವಾರದ ಒಳಗೆ ಅರ್ಹರನ್ನು ನೇಮಿಸುವಂತೆ ಆದೇಶಿಸಿತು.

ಚಿಕ್ಕಬಳ್ಳಾಪುರ ನಗರಸಭೆ ಇತಿಹಾಸದಲ್ಲಿ ನ್ಯಾಯಾಲಯದ ಮೊರೆ ಹೋಗಿ ‘ಅರ್ಹತೆ’ಯ ಕಾರಣದಿಂದ ‍ಪೌರಾಯುಕ್ತರನ್ನು ಬದಲಾಯಿಸಿದ್ದು ಇದೇ ಮೊದಲು. ಈ ಹಿಂದಿನ ಪೌರಾಯುಕ್ತರಲ್ಲಿ ಬಹಳಷ್ಟು ಮಂದಿ ‘ಅರ್ಹತೆ’ ಇಲ್ಲದಿದ್ದರೂ ಈ ಬಗ್ಗೆ ಯಾರೂ ಪ್ರಶ್ನಿಸಿರಲಿಲ್ಲ. ಜಿಲ್ಲೆಯ ಇತರೆ ನಗರ ಸ್ಥಳೀಯ ಸಂಸ್ಥೆಗಳಲ್ಲಿಯೂ ‘ಅರ್ಹತೆ’ ಹೊಂದಿರುವವರು ಪೌರಾಯುಕ್ತರಾಗಿ ಕೆಲಸ ನಿರ್ವಹಿಸುತ್ತಿಲ್ಲ. ಹೀಗಿದ್ದರೂ ಚಿಕ್ಕಬಳ್ಳಾಪುರ ಪೌರಾಯುಕ್ತರ ಅರ್ಹತೆಯನ್ನು ಮಾತ್ರ ಪ್ರಶ್ನಿಸಲಾಯಿತು. 

ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಮಂಜುನಾಥ್ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿದೆ. ಈ ಪ್ರಕರಣ ಚಿಕ್ಕಬಳ್ಳಾಪುರ ನಗರಸಭೆಯಷ್ಟೇ ಅಲ್ಲ ಜಿಲ್ಲೆಯ ನಗರ ಸ್ಥಳೀಯ ಸ್ಥಳೀಯ ಸಂಸ್ಥೆಗಳಲ್ಲಿಯೂ ದೊಡ್ಡ ಚರ್ಚೆಗೆ ಕಾರಣವಾಗಿದೆ.

ಅರ್ಹರು ಬರುವವರೆಗೂ ನಡೆಯದು ಹರಾಜು! ಈ ನಡುವೆ ಮಳಿಗೆಗಳ ಹರಾಜು ಪ್ರಕ್ರಿಯೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ತಾತ್ಕಾಲಿಕವಾಗಿ ತಡೆ ಕೊಡಿಸಿದರು.  ಅರ್ಹ ಪೌರಾಯುಕ್ತರನ್ನು ನೇಮಿಸುವಂತೆ ನ್ಯಾಯಾಲಯವು ಆದೇಶಿಸಿದೆ. ಹರಾಜು ನಡೆಸಿದರೆ ಯಾರಾದರೂ ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು. ಆದ್ದರಿಂದ ಬೇರೊಬ್ಬ ಪೌರಾಯುಕ್ತರು ಬಂದ ನಂತರ ಹರಾಜು ಪ್ರಕ್ರಿಯೆ ನಡೆಸಲಾಗುವುದು ಎಂದಿದ್ದರು.  ಪರಿಸರ ಎಂಜಿನಿಯರ್ ಉಮಾಶಂಕರ್ ಅವರಿಗೆ ‘ಪ್ರಭಾರ’ ಜವಾಬ್ದಾರಿ ನೀಡಲಾಗಿದೆ. ಈ ಎಲ್ಲ ರಾಜಕೀಯ ಆಟಗಳನ್ನು ಗಮನಿಸಿದರೆ ‘ಅರ್ಹ’ ಪೌರಾಯುಕ್ತರ ನೇಮಕ ಯಾವಾಗ ಆಗುತ್ತದೆ ಎನ್ನುವ ಪ್ರಶ್ನೆ ಮೂಡಿದೆ. ಪೌರಾಯುಕ್ತರ ವರ್ಗಾವಣೆ ಮಾಡಿಸುವಷ್ಟು ಪಟ್ಟಭದ್ರರು ಶಕ್ತರಾಗಿದ್ದಾರೆ. ಅಂದ ಮೇಲೆ ‘ಅರ್ಹ’ರ ನೇಮಕದ ಮೇಲೂ ಪ್ರಭಾವ ಬೀರುತ್ತಾರೆಯೇ ಎನ್ನುವ ಅನುಮಾನ ನಾಗರಿಕ ವಲಯದಲ್ಲಿ ಇದೆ.

ದಲಿತರಿಗೂ ಅನ್ಯಾಯ; ಸಂಘಟನೆಗಳು ಮೌನ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ವಾಣಿಜ್ಯ ಮಳಿಗೆಗಳ ವಿಲೇವಾರಿ ವೇಳೆ ಶೇ 24ರಷ್ಟು ಮಳಿಗೆಯನ್ನು ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಿಡಬೇಕು. ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳ ಪಾರದರ್ಶಕತೆ ಅಧಿನಿಯಮದ ಪ್ರಕಾರ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ವಿತರಿಸಬೇಕು. ಈ ನಿಯಮಗಳೂ ಸಹ ಇಲ್ಲಿ ಜಾರಿಯಾಗಿಲ್ಲ. ಈ ಬಗ್ಗೆ ನಗರಸಭೆ ಆಡಳಿತಾಧಿಕಾರಿಯೂ ಆದ ಜಿಲ್ಲಾಧಿಕಾರಿ ಅವರಿಗೆ ಪರಿಶಿಷ್ಟ ಜಾತಿ ಮತ್ತು ಪಂಗಡ ನಗರಸಭೆ ಸದಸ್ಯರು ಮನವಿ ಸಹ ಸಲ್ಲಿಸಿದ್ದಾರೆ. ಆದರೂ ಪ್ರಯೋಜನವಾಗಿಲ್ಲ. ಪರಿಶಿಷ್ಟ ಜಾತಿ ಮತ್ತು ಪಂಗಡದ ವಿಚಾರವಾಗಿ ನಗರಸಭೆಯಿಂದ ಅನ್ಯಾಯವಾಗುತ್ತಿದ್ದರೂ ಸಮುದಾಯದ ಪರವಾದ ಸಂಘಟನೆಗಳು ಮೌನವಾಗಿವೆ.  ನಗರಸಭೆ ಆದಾಯ ಖೋತಾ ಆಗುತ್ತಿದ್ದರೂ ನಾಗರಿಕ ಸಂಘಟನೆಗಳು ಸಹ ಮೌನಕ್ಕೆ ಜಾರಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT