ಬುಧವಾರ, 2 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Gandhi Jayanti: ಚಿಕ್ಕಬಳ್ಳಾಪುರ ಜಿಲ್ಲೆಗೆ ಎರಡು ಬಾರಿ ಬಂದಿದ್ದ ಗಾಂಧೀಜಿ

ನಂದಿಗಿರಿಧಾಮದೊಂದಿಗೆ ಅಚ್ಚಳಿಯದ ಹೆಜ್ಜೆ ಗುರುತು; ಹರಿಜನ ನಿಧಿ ಸಂಗ್ರಹಕ್ಕೆ ನಾಗರಿಕರ ಸ್ಪಂದನೆ
Published : 2 ಅಕ್ಟೋಬರ್ 2024, 4:03 IST
Last Updated : 2 ಅಕ್ಟೋಬರ್ 2024, 4:03 IST
ಫಾಲೋ ಮಾಡಿ
Comments

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಚಿಂತಾಮಣಿ ಮತ್ತು ಗೌರಿಬಿದನೂರು ತಾಲ್ಲೂಕಿನಲ್ಲಿ ಮಹಾತ್ಮ ಗಾಂಧೀಜಿ ಅವರ ಭೇಟಿಯ ಹೆಜ್ಜೆ ಗುರುತುಗಳು ಅಚ್ಚಳಿಯದೆ ಉಳಿದಿವೆ.

ಅಂದಿನ ಅವಿಭಜಿತ ಕೋಲಾರ ಜಿಲ್ಲೆಗೆ ಸೇರಿದ್ದ ಈ ತಾಲ್ಲೂಕುಗಳಲ್ಲಿ ಮಹಾತ್ಮ ಗಾಂಧೀಜಿ ಅವರು ಪ್ರವಾಸ ನಡೆಸಿ ಹರಿಜನ ನಿಧಿ ಸಹ ಸಂಗ್ರಹಿಸಿದ್ದಾರೆ. ಈ ವೇಳೆ ಎಲ್ಲ ಕಡೆಗಳಲ್ಲಿಯೂ ನಾಗರಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಇದಿಷ್ಟೇ ಗೌರಿಬಿದನೂರು ತಾಲ್ಲೂಕಿನ ಐತಿಹಾಸಿಕ ವಿದುರಾಶ್ವತ್ಥದಲ್ಲಿ ಹತ್ಯಾಕಾಂಡ ನಡೆದಾಗ ಗಾಂಧೀಜಿ ಹರಿಜನ ಪತ್ರಿಕೆಯಲ್ಲಿ ಇದನ್ನು ಖಂಡಿಸಿದ್ದರು. 

ಚಿಕ್ಕಬಳ್ಳಾಪುರ ಜಿಲ್ಲೆಗೆ ಗಾಂಧೀಜಿ ಅವರ ನಂಟು ಮತ್ತು ಗೆಜ್ಜೆ ಗುರುತುಗಳು ಮುಖ್ಯವಾಗಿ ಪ್ರಸ್ತಾಪ ಆಗುವುದು ಐತಿಹಾಸಿ ಮತ್ತು ಪ್ರಾಕೃತಿಕ ಸೌಂದರ್ಯದ ಖನಿ ನಂದಿಗಿರಿಧಾಮದ ಭೇಟಿಯ ಜೊತೆಗೆ. ಈ ಗಿರಿಧಾಮಕ್ಕೆ ಎರಡು ಬಾರಿ ಗಾಂಧೀಜಿ ಬಂದಿದ್ದಾರೆ ದೀರ್ಘ ಕಾಲ ತಂಗಿದ್ದಾರೆ. ಇಲ್ಲಿದ್ದ ಸಂದರ್ಭದಲ್ಲಿಯೇ  ಶಿಡ್ಲಘಟ್ಟ, ಚಿಂತಾಮಣಿಯಲ್ಲಿ ಪ್ರವಾಸ ನಡೆಸಿದ್ದಾರೆ. 

ಎರಡು ಭೇಟಿಯ ಸಂದರ್ಭದಲ್ಲೂ ಗಾಂಧೀಜಿ ಅವರು ಗಿರಿಧಾಮದಲ್ಲಿ ಸುದೀರ್ಘವಾಗಿ ತಂಗಿದ್ದಾರೆ. ಕರ್ನಾಟಕದಲ್ಲಿ ಗಾಂಧೀಜಿ ಅವರ ಹೆಜ್ಜೆಗುರುತಿನ ಚರಿತ್ರೆ ಹುಡುಕುವವರಿಗೆ ನಂದಿಬೆಟ್ಟದೊಂದಿಗಿನ ಮಹಾತ್ಮರ ನಂಟಿನ ಅಂಶಗಳು ಗಮನ ಸೆಳೆಯುತ್ತವೆ.

ಮಹಾತ್ಮ ಗಾಂಧಿ ಅವರು 1927ರಲ್ಲಿ ಮೊದಲ ಬಾರಿಗೆ ನಂದಿಬೆಟ್ಟಕ್ಕೆ ಭೇಟಿ ನೀಡಿದ್ದರು. 45 ದಿನ ಗಿರಿಧಾಮದಲ್ಲಿ ವಾಸ್ತವ್ಯ ಹೂಡಿದ್ದರು. ಮತ್ತೆ 1936ರಲ್ಲಿ ರಾಜ್ಯಕ್ಕೆ ಬಂದ ಅವರು 20 ದಿನ ಗಿರಿಧಾಮದಲ್ಲಿ ನೆಲೆಸಿದ್ದರು. ಹೀಗೆ ಒಟ್ಟು 65 ದಿನ ನಂದಿಬೆಟ್ಟದಲ್ಲಿ ಆರೋಗ್ಯ ಸುಧಾರಿಸಿಕೊಳ್ಳಲು ತಂಗಿದ್ದರು ಎನ್ನುವ ಮಾಹಿತಿ ಇತಿಹಾಸಕಾರ ವೇಮಗಲ್‌ ಸೋಮಶೇಖರ್‌ ಅವರ ‘ನಂದಿಗಿರಿಧಾಮದಲ್ಲಿ ಮಹಾತ್ಮ ಗಾಂಧಿ’ ಕೃತಿಯಿಂದ ತಿಳಿದು ಬರುತ್ತದೆ.

‘ನಂದಿಗಿರಿಧಾಮದಲ್ಲಿ ಮಹಾತ್ಮ ಗಾಂಧಿ’ ಕೃತಿಯು ‌ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಗಾಂಧಿ ಅವರು ಅಂದು ನಡೆಸಿದ ಪ್ರವಾಸದ ವಿವರಗಳನ್ನು ಸಮಗ್ರವಾಗಿ ದಾಖಲಿಸಿದೆ. 

1927ರ ಏಪ್ರಿಲ್ ತಿಂಗಳು. ಖಾದಿ ಪ್ರಚಾರಕ್ಕಾಗಿ ಮಹಾತ್ಮರು ದಕ್ಷಿಣ ಭಾರತ ಪ್ರವಾಸದಲ್ಲಿ ಇರುವರು. ಅಂಬೋಲಿಯಲ್ಲಿ ಹವಾಗುಣ ಸರಿ ಹೊಂದಿದ್ದಾಗ ಸಬರಮತಿ ಆಶ್ರಮಕ್ಕೆ ಹೊರಡಲು ಮುಂದಾದರು. ಈ ವೇಳೆ ಅವರ ಜತೆಯಲ್ಲಿದ್ದವರು ಈಗ ಅಲ್ಲಿ ಬಿಸಿಲು ಹೆಚ್ಚಿದೆ. ಹೋಗುವುದು ಬೇಡ ಎಂದು ಸಲಹೆ ನೀಡುತ್ತಾರೆ.

ಈ ವೇಳೆ ಸಿ.ರಾಜಗೋಪಾಲಾಚಾರಿ ಅವರು ಮುಂದಿನ ಪ್ರವಾಸ ಮೈಸೂರು ಸಂಸ್ಥಾನದಲ್ಲಿದೆ. ಅಲ್ಲಿನ ಕೋಲಾರ ಜಿಲ್ಲೆಯಲ್ಲಿರುವ ನಂದಿ ಗಿರಿಧಾಮವೇ ಮಹಾತ್ಮರ ವಿಶ್ರಾಂತಿಗೆ ಪ್ರಶಸ್ತವಾದ ಸ್ಥಳ ಎಂದು ನಿರ್ಧರಿಸುವರು. ಗಾಂಧೀಜಿ ಅವರು ಅದಕ್ಕೆ ಒಪ್ಪಿಗೆ ಸೂಚಿಸುವರು. ಈ ಸುದ್ದಿ ತಿಳಿಯುತ್ತಿದ್ದಂತೆ  ಚಿಕ್ಕಬಳ್ಳಾಪುರದಲ್ಲಿ ಮಹಾತ್ಮರ ಸ್ವಾಗತಕ್ಕೆ ಸಮಿತಿಗಳು ರಚನೆ ಆಗುತ್ತವೆ.

ಪೂರ್ವ ಸಿದ್ಧತೆಗಾಗಿ ಮಹದೇವ ದೇಸಾಯಿ, ರಾಜಗೋಪಾಲಾಚಾರಿ, ಗಂಗಾಧರ ದೇಶಪಾಂಡೆ ಅವರು ಏಪ್ರಿಲ್ ಎರಡನೇ ವಾರದಲ್ಲಿ ಬೆಂಗಳೂರಿಗೆ ಬಂದು, ಮೈಸೂರು ಸಂಸ್ಥಾನದ ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್ ಅವರ ಮೂಲಕ ನಾಲ್ವಡಿ ಕೃಷ್ಣರಾಜ ಒಡೆಯರಿಗೆ ಸುದ್ದಿ ತಿಳಿಸುತ್ತಾರೆ. ಬಳಿಕ ಮಹಾರಾಜರು ನಂದಿ ಗಿರಿಧಾಮ ಕನ್ನಿಂಗ್ ಹ್ಯಾಮ್ ಭವನದಲ್ಲಿ ಗಾಂಧೀಜಿ ಅವರ ವಾಸ್ತವ್ಯಕ್ಕೆ ಸಿದ್ಧತೆಗಳನ್ನು ಮಾಡಿಸುತ್ತಾರೆ.

ಅಂಬೋಲಿಯಿಂದ ಗಾಂಧೀಜಿ ಅವರು ರೈಲಿನ ಮೂಲಕ ಬೆಳಗಾವಿ ಮಾರ್ಗವಾಗಿ ಏಪ್ರಿಲ್ 20ರಂದು ಯಶವಂತಪುರ ರೈಲು ನಿಲ್ದಾಣಕ್ಕೆ ಬಂದಿಳಿಯುತ್ತಾರೆ. ಅಲ್ಲಿಂದ ನೇರವಾಗಿ ಮೂರು ಕಾರುಗಳಲ್ಲಿ  ಪರಿವಾರದವರೊಂದಿಗೆ ನಂದಿ ಬೆಟ್ಟದ ತಪ್ಪಲಿನ ಸುಲ್ತಾನ್‌ ಪೇಟೆಗೆ ಬರುವರು. ಅಲ್ಲಿ ಚಿಕ್ಕಬಳ್ಳಾಪುರದ ಸ್ವಾಗತ ಸಮಿತಿ ಪದಾಧಿಕಾರಿಗಳು ಅವರನ್ನು ಸಡಗರದಿಂದ ಬರ ಮಾಡಿಕೊಳ್ಳುವರು.

ಗಾಂಧೀಜಿ, ಕಸ್ತೂರ ಬಾ ಮತ್ತು ಹಂಜಾ ಹುಸೇನ್ ಅವರನ್ನು ಡೋಲಿಗಳಲ್ಲಿ ಕೂರಿಸಿ ಗಿರಿಧಾಮಕ್ಕೆ ಕರೆದೊಯ್ಯಲಾಗುತ್ತದೆ. ಎರಡೂವರೆ ಮೈಲಿ ದೂರದ 1775 ಮೆಟ್ಟಿಲುಗಳನ್ನು ಖಾದಿ ಬಟ್ಟೆ ಧರಿಸಿದ್ದ ಸ್ವಯಂ ಸೇವಕರು ಮತ್ತು ಸುಲ್ತಾನ್ ಪೇಟೆ ಯುವಕರು ‘ಮಹಾತ್ಮ ಗಾಂಧೀಜಿ ಕೀ ಜೈ’ ಎಂದು ಜಯಘೋಷ ಮೊಳಗಿಸುತ್ತ ಬೆಟ್ಟ ಏರಿದ್ದರು. ಬೆಳಿಗ್ಗೆ 10ರ ಸುಮಾರಿಗೆ ಗಾಂಧೀಜಿ ಅವರು ಬೆಟ್ಟದ ಮೇಲಿದ್ದರು. ಈ ಭೇಟಿಯಲ್ಲಿ ಅವರ ಜತೆ ಕಿರಿಯ ಪುತ್ರ ದೇವದಾಸ್ ಸಹ ಇದ್ದರು.

ಮೇ 26 ರಂದು ದಿವಾನರಾದ ಮಿರ್ಜಾ ಇಸ್ಮಾಯಿಲ್, ಸರ್.ಎಂ.ವಿಶ್ವೇಶ್ವರಯ್ಯ, ಮೀರ್ ಹಂಜಾ ಹುಸೇನ್ ಅವರು ಗಾಂಧಿ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದರು. ಗಾಂಧೀಜಿ ಅವರು ಜೂನ್ 5 ರಂದು ಬೆಟ್ಟದಿಂದ ನಿರ್ಗಮಿಸಿದ್ದರು.

ಎರಡನೇ ಭೇಟಿ: ಗಾಂಧೀಜಿ ಅವರ ಎರಡನೇ ಭೇಟಿಯ ವೇಳೆಗಾಗಲೇ ಬೆಟ್ಟಕ್ಕೆ ವಿದ್ಯುತ್ ಸಂಪರ್ಕ ಮತ್ತು ನೀರಿನ ವ್ಯವಸ್ಥೆ ಕಲ್ಪಿಸಲಾಗಿತ್ತು. ಹಿಂದಿನಂತೆಯೇ ಮಹಾತ್ಮರಿಗೆ ಕನ್ನಿಂಗ್ ಹ್ಯಾಂ ಭವನದಲ್ಲಿಯೇ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿಸಲಾಗಿತ್ತು. ದಿವಾನರು ಹಾಲಿಗಾಗಿ ಐದು ಮೇಕೆಗಳನ್ನು ವ್ಯವಸ್ಥೆ ಮಾಡಿದ್ದರು. ಬೆಟ್ಟದ ಮೇಲೆ ವಿಶ್ರಾಂತಿಯಲ್ಲಿರುವಾಗಲೇ ಗಾಂಧೀಜಿ ಅವರಿಗೆ ತಮ್ಮ ಹಿರಿಮಗ ಹರಿಲಾಲ ಮುಂಬಯಿಯ ಜುಮ್ಮಾ ಮಸೀದಿಯಲ್ಲಿ ಇಸ್ಲಾಂ ಧರ್ಮ ಸ್ವೀಕರಿಸಿದರು ಎಂಬ ವಾರ್ತೆ ತಲುಪಿತ್ತು.

ಇದೇ ಸಮಯದಲ್ಲಿ ವಿಜ್ಞಾನಿ ಸರ್ ಸಿ.ವಿ.ರಾಮನ್ ಸೇರಿದಂತೆ ಅನೇಕ ಗಣ್ಯರು ಗಾಂಧೀಜಿ ಅವರನ್ನು ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದ್ದರು. ಮೇ 31ರಂದು ನಂದಿ ಬೆಟ್ಟದಿಂದ ಹೊರಟ ಗಾಂಧೀಜಿ ಅವರು ಚಿಕ್ಕಬಳ್ಳಾಪುರ, ಚಿಂತಾಮಣಿ, ಕೋಲಾರ, ಬೌರಿಂಗ್‌ಪೇಟೆ ಮಾರ್ಗವಾಗಿ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದರು.

ಗಾಂಧೀಜಿ ಅವರ ಹತ್ಯೆ ನಡೆದ ಸಂದರ್ಭದಲ್ಲಿ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಅವರು ಈ ಭೇಟಿಯ ನೆನಪಿಗಾಗಿ ಗಾಂಧೀಜಿ ಅವರ ಚಿತಾಭಸ್ಮದ ಕಳಸವನ್ನು ಕೋಲಾರಕ್ಕೆ ತರಿಸಿ, ಅಂತರಗಂಗೆ ಮತ್ತು ನಂದಿಬೆಟ್ಟದ ಅಮೃತ ಸರೋವರದಲ್ಲಿ ವಿಸರ್ಜನೆ ಮಾಡಿಸಿದ್ದರು. ಆ ಸಮಯದಲ್ಲಿ ಕನ್ನಿಂಗ್ ಹ್ಯಾಂ ಭವನದಲ್ಲಿ ಭಜನೆ, ಶ್ರದ್ಧಾಂಜಲಿ ಸಭೆ ಏರ್ಪಡಿಸಲಾಗಿತ್ತು.

ಗಾಂಧೀಜಿ ಅವರ ಭೇಟಿಯ ಸ್ಮರಣಾರ್ಥ ನಂದಿಬೆಟ್ಟದಲ್ಲಿ ಪ್ರತಿಷ್ಠಾಪಿಸಿರುವ ಗಾಂಧಿ ಪ್ರತಿಮೆ.
ಗಾಂಧೀಜಿ ಅವರ ಭೇಟಿಯ ಸ್ಮರಣಾರ್ಥ ನಂದಿಬೆಟ್ಟದಲ್ಲಿ ಪ್ರತಿಷ್ಠಾಪಿಸಿರುವ ಗಾಂಧಿ ಪ್ರತಿಮೆ.

ಕನ್ನಿಂಗ್ ಹ್ಯಾಂ ಭವನವಾಯಿತು 

ಗಾಂಧಿ ಭವನ ಸ್ವಾತಂತ್ರ್ಯದ ನಂತರ ಗಾಂಧೀಜಿ ಅವರ ಭೇಟಿ ಸ್ಮರಣಾರ್ಥ ನಂದಿಗಿರಿಧಾಮದ ಕನ್ನಿಂಗ್ ಹ್ಯಾಂ ಭವನಕ್ಕೆ ‘ಗಾಂಧಿ ನಿಲಯ’ ಎಂದು ಮರು ನಾಮಕರಣ ಮಾಡಲಾಯಿತು. ಭವನದ ಬಳಿಯೇ ಗಾಂಧೀಜಿ ಅವರ ಪ್ರತಿಮೆ ಸಹ ಸ್ಥಾಪಿಸಲಾಗಿದೆ. ಸದ್ಯ ಆ ಭವನವನ್ನು ಶಿಷ್ಟಾಚಾರ ವಿಭಾಗವು ಅತಿ ಗಣ್ಯರ ವಸತಿಗಾಗಿ ಕಾಯ್ದಿರಿಸಿದೆ.

ಚಿಕ್ಕಬಳ್ಳಾಪುರ ಪ್ರೌಢಶಾಲೆ ಮೈದಾನದಲ್ಲಿ ಸಭೆ ಜೂನ್ 5 ರಂದು ಗಾಂಧೀಜಿ ಅವರು ಚಿಕ್ಕಬಳ್ಳಾಪುರಕ್ಕೆ ಭೇಟಿ ನೀಡಿದಾಗ ಅವರನ್ನು ನೋಡಲು ಮುಖ್ಯರಸ್ತೆಯ ಇಕ್ಕೆಲ್ಲಗಳಲ್ಲಿ ಜನ ಕಿಕ್ಕಿರಿದು ಸೇರಿದ್ದರು. ಮಹಾತ್ಮರಿಗೆ ಜನರು ಭಿನ್ನವತ್ತಳೆ ಮತ್ತು ನಿಧಿ ಅರ್ಪಿಸಿದ್ದರು. ಚಿಕ್ಕಬಳ್ಳಾಪುರದ ಪ್ರೌಢಶಾಲೆಯ ಮೈದಾನದಲ್ಲಿ ನಡೆದ ಸಭೆಯಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದರು. 

ಗಾಂಧಿ ಭವನ ಲೋಕಾರ್ಪಣೆ

ಚಿಕ್ಕಬಳ್ಳಾಪುರ ಕೆೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ನಿರ್ಮಾಣವಾಗಿರುವ ಗಾಂಧಿ ಭವನವು ಅ.2ರ ಗಾಂಧಿ ಜಯಂತಿ ದಿನ ಲೋಕಾರ್ಪಣೆಗೊಳ್ಳಲಿದೆ.  ₹ 3 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಗಾಂಧಿ ಭವನವು ನಗರಕ್ಕೆ ಮೆರುಗು ತರಲಿದೆ. ಗಾಂಧಿ ಅವರಿಗೆ ಸಂಬಂಧಿಸಿದಂತೆ ವಿಚಾರ ಸಂಕಿರಣಗಳು ಕಾರ್ಯಾಗಾರಗಳು ಶಿಬಿರಗಳನ್ನು ನಡೆಸಲು ಮತ್ತು ಅವರ ಬದುಕಿನ ಕುರಿತು ಮಕ್ಕಳಿಗೆ ಪಾಠ ಹೇಳಲು ಈ ಭವನ ನಿರ್ಮಿಸಿದಂತೆ ಇದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT