ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಬಳ್ಳಾಪುರ | 4ನೇ ವಾರ್ಡ್‌ಗೆ ಅನುದಾನ; ಕ್ರಿಯಾ ಯೋಜನೆ ರದ್ದಿಗೆ ಮನವಿ

ನಗರಸಭೆ ಸದಸ್ಯರಿಂದ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಭೇಟಿ
Published : 6 ಜುಲೈ 2024, 14:30 IST
Last Updated : 6 ಜುಲೈ 2024, 14:30 IST
ಫಾಲೋ ಮಾಡಿ
Comments

ಚಿಕ್ಕಬಳ್ಳಾಪುರ: ನಗರದ ಅಭಿವೃದ್ಧಿಗೆ ಬಂದಿರುವ ಅನುದಾನವನ್ನು ಅವೈಜ್ಞಾನಿಕವಾಗಿ ಒಂದೇ ವಾರ್ಡಿಗೆ ನೀಡಿರುವ ನಗರಸಭೆ ಪೌರಾಯುಕ್ತರ ಕ್ರಮ ಖಂಡಿಸಿ ಮತ್ತು ಕ್ರಿಯಾಯೋಜನೆ ರದ್ದುಪಡಿಸಲು ಕೋರಿ ನಗರಸಭೆ ಸದಸ್ಯರ ನಿಯೋಗ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಅವರಿಗೆ ಶನಿವಾರ ಮನವಿ ಸಲ್ಲಿಸಿತು.

2024–25ನೇ ಸಾಲಿನ 15ನೇ ಹಣಕಾಸು ಯೋಜನೆಯಲ್ಲಿ ₹ 3.27 ಕೋಟಿ ಚಿಕ್ಕಬಳ್ಳಾಪುರ ನಗರಕ್ಕೆ ಬಂದಿದೆ. ಈ ಅನುದಾನದಲ್ಲಿ ₹ 1.3 ಕೋಟಿ ಒಂದೇ ವಾರ್ಡ್‌ಗೆ ನೀಡಲಾಗಿತ್ತು. ಅದರಲ್ಲೂ 4ನೇ ವಾರ್ಡಿನಲ್ಲಿರುವ ಒಂದು ಖಾಸಗಿ ಬಡಾವಣೆ ರಸ್ತೆ ಅಭಿವೃದ್ಧಿಗೆ ₹ 1.3 ಕೋಟಿ ನೀಡಲಾಗಿದೆ. ಉಳಿದ ವಾರ್ಡ್‌ಗಳಿಗೆ ಅನುದಾನವೇ ಇಲ್ಲದಂತೆ ಮಾಡಲಾಗಿದೆ.

ಕಳೆದ ಒಂದು ವರ್ಷದಿಂದ ನಗರಸಭೆಗೆ ಯಾವುದೇ ಅನುದಾನ ಬಾರದೆ ಅಭಿವೃದ್ಧಿ ಕೆಲಸಗಳೇ ನಡೆದಿಲ್ಲ. ಇದರಿಂದ ವಾರ್ಡಿನ ಜನರ ಮುಂದೆ ಹೋಗಲೂ ಸದಸ್ಯರು ಮುಜುಗರ ಅನುಭವಿಸುವಂತಾಗಿದೆ. ಬಂದ ಅನುದಾನವನ್ನು ಒಂದೇ ವಾರ್ಡಿಗೆ ನೀಡಿದರೆ, ಉಳಿದ ವಾರ್ಡುಗಳ ಸದಸ್ಯರ ಪಾಡೇನು ಎಂದು ನಿಯೋಗದಲ್ಲಿದ್ದ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

ರಸ್ತೆ, ಚರಂಡಿ, ಯುಜಿಡಿ ಸೇರಿದಂತೆ ಅನೇಕ ಸಮಸ್ಯೆಗಳು ನಗರದ ಎಲ್ಲ ವಾರ್ಡ್‌ಗಳಲ್ಲಿ ಇದೆ. ಇವುಗಳ ಪರಿಹಾರಕ್ಕಾಗಿ ಅನುದಾನದ ಅಗತ್ಯ ತೀವ್ರವಾಗಿದೆ. ಆದರೆ ಕಳೆದ ಒಂದು ವರ್ಷದಿಂದ ಅನುದಾನ ನಗರಸಭೆಗೆ ಬಂದಿಲ್ಲ. ಬಂದಿರುವ ಅನುದಾನವನ್ನು ನಗರದ ವಾರ್ಡುಗಳಲ್ಲಿ ತುರ್ತಾಗಿ ಆಗಬೇಕಾದ ಕಾಮಗಾರಿಗಳಿಗೆ ಬಳಸಲು ಅನುವು ಮಾಡಿಕೊಡಬೇಕು. ಪೌರಾಯುಕ್ತರು ಸಿದ್ಧಪಡಿಸಿರುವ ಕ್ರಿಯಾಯೋಜನೆ ರದ್ದುಪಡಿಸಬೇಕು ಎಂದು ನಗರಸಭೆ ಆಡಳಿತಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿಗೆ ಮನವಿ ಮಾಡಿದರು.

ನಗರದ ವಿವಿಧ ವಾರ್ಡ್‌ಗಳಲ್ಲಿ ಆಗಬೇಕಾದ ಕಾಮಗಾರಿಗಳ ಪಟ್ಟಿ ಸಿದ್ಧಪಡಿಸಿ, ನೀಡಿದರೆ ಪ್ರಸ್ತುತ ಕ್ರಿಯಾಯೋಜನೆ ರದ್ದುಪಡಿಸಿ, ಅಂತಹ ತುರ್ತು ಕಾಮಗಾರಿಗಳಿಗೆ ಅನುದಾನ ಬಳಸಲು ಹೊಸ ಕ್ರಿಯಾಯೋಜನೆ ಸಿದ್ಧಪಡಿಸುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದರು.

ನಗರಸಭೆ ಮಾಜಿ ಅಧ್ಯಕ್ಷ ಆನಂದರೆಡ್ಡಿ ಬಾಬು, ನಗರಸಭೆ ಸದಸ್ಯರಾದ ಎಸ್.ಎಂ. ರಫೀಕ್, ನಾಗರಾಜ್ ಜೆ. , ನರಸಿಂಹಮೂರ್ತಿ, ಸತೀಶ್, ಎ.ಬಿ. ಮಂಜುನಾಥ್, ಯತೀಶ್, ಜಾಫರ್, ಮುನಿರಾಜ್, ಶಶಿಶೇಖರ್ ನಿಯೋಗದಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT