ಸೋಮವಾರ, 30 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿತ್ರದುರ್ಗ: ಅವೈಜ್ಞಾನಿಕ ವೃತ್ತಗಳಲ್ಲಿ ಟ್ರಾಫಿಕ್‌ ಕಿರಿಕಿರಿ

Published : 30 ಸೆಪ್ಟೆಂಬರ್ 2024, 7:14 IST
Last Updated : 30 ಸೆಪ್ಟೆಂಬರ್ 2024, 7:14 IST
ಫಾಲೋ ಮಾಡಿ
Comments

ಚಿತ್ರದುರ್ಗ: ನಗರದ ಬಹುತೇಕ ವೃತ್ತಗಳನ್ನು ಅವೈಜ್ಞಾನಿಕವಾಗಿ ನಿರ್ಮಿಸಿರುವುದರಿಂದ, ದಿನೇದಿನೇ ಟ್ರಾಫಿಕ್‌ ಕಿರಿಕಿರಿ ಹೆಚ್ಚುತ್ತಿದ್ದು ಇಲ್ಲಿ ಒಡಾಡುವ ಜನರು ಹೈರಾಣಾಗುತ್ತಿದ್ದಾರೆ.

ನಗರದ ಹೃದಯ ಭಾಗವಾಗಿರುವ ಗಾಂಧಿವೃತ್ತ ತೀರಾ ಅವೈಜ್ಞಾನಿಕವಾಗಿದ್ದು ಜನರಿಗೆ ಇಲ್ಲಿ ಓಡಾಡುವುದು ತೀವ್ರ ಕಷ್ಟವಾಗಿದೆ. ಹೊಳಲ್ಕೆರೆ ರಸ್ತೆ, ಸಾರಿಗೆ ಸಂಸ್ಥೆ ಬಸ್‌ ನಿಲ್ದಾಣ ರಸ್ತೆ, ಲಕ್ಷ್ಮಿ ಬಜಾರ್‌, ಸಂತೆ ಹೊಂಡ, ಬಿ.ಡಿ.ರಸ್ತೆ ಸೇರುವ ಗಾಂಧಿ ವೃತ್ತ ತೀರಾ ಕಿರಿದಾಗಿದ್ದು ಜನ ಹಾಗೂ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿದೆ.

5 ರಸ್ತೆಗಳು ಸೇರುವ ಈ ಜಾಗದಲ್ಲಿ ಪೊಲೀಸರು ಟ್ರಾಫಿಕ್‌ ನಿರ್ವಹಣೆ ಮಾಡುವುದಕ್ಕೂ ಜಾಗ ಇಲ್ಲವಾಗಿದೆ. ವೃತ್ತದ ಮೂಲೆಯಲ್ಲಿ ನಿಂತು ಪೊಲೀಸರು ಮೈಕ್‌ನಲ್ಲಿ ಘೋಷಣೆ ಮೂಲಕ ಟ್ರಾಫಿಕ್‌ ನಿಯಂತ್ರಣ ಮಾಡುತ್ತಾರೆ. ಜನರು ಕೂಡ ಟ್ರಾಫಿಕ್‌ ನಿಯಮಗಳನ್ನು ಮೀರಿ ಬೇಕಾಬಿಟ್ಟಿಯಾಗಿ ವಾಹನ ಚಾಲನೆ ಮಾಡುವ ಕಾರಣ ಇಲ್ಲಿ ವಾಹನ ಸಂಚಾರ ಸವಾಲಾಗಿ ಪರಿಣಮಿಸಿದೆ.

ಖಾಸಗಿ ಬಸ್‌ ನಿಲ್ದಾಣ ಸಮೀಪದಲ್ಲೇ ಇರುವ ಕಾರಣ ಖಾಸಗಿ ಬಸ್‌ಗಳ ಓಡಾಟವೂ ಸಮೀಪದಲ್ಲೇ ಇದೆ. ಇಲ್ಲಿ ಆಟೊ ನಿಲ್ದಾಣವೂ ಇದ್ದು ಜಾಗ ಕಿಷ್ಕಿಂದೆಯಂತಾಗಿದೆ. ಬಿ.ಡಿ ರಸ್ತೆಯಲ್ಲಿ ನಿತ್ಯವೂ ಹೆಚ್ಚಿನ ವಾಹನಗಳು ಓಡಾಡುವ ಕಾರಣ ಯಾವಾಗಲೂ ಟ್ರಾಫಿಕ್‌ ಜಾಮ್‌ ಉಂಟಾಗಿರುತ್ತದೆ. ಮೆದೇಹಳ್ಳಿ ಕಡೆಗೆ ಇದೇ ರಸ್ತೆಯಲ್ಲಿ ತೆರಳಬೇಕಾದ ಕಾರಣ ವಾಹನ ಸಂದಣಿ ಹೆಚ್ಚಾಗಿರುತ್ತದೆ. ಟ್ರಾಫಿಕ್‌ ನಿರ್ವಹಣೆಯೇ ಪೊಲೀಸರಿಗೆ ತಲೆನೋವಾಗಿ ಕಾಡುತ್ತಿದೆ. 

ಗಾಂಧಿ ವೃತ್ತವನ್ನು ವಿಸ್ತರಣೆ ಮಾಡಿ ವೈಜ್ಞಾನಿಕವಾಗಿ ನಿರ್ಮಾಣ ಮಾಡುವ ಪ್ರಯತ್ನ ನಗರಸಭೆ ವತಿಯಿಂದ ನಡೆದಿವೆ. ಆದರೆ ಇಲ್ಲಿಯವರೆಗೂ ಅದು ಕೈಗೂಡಿಲ್ಲ. ಜೊತೆಗೆ ಗಾಂಧಿ ವೃತ್ತದ ಸಮೀಪದಲ್ಲೇ ಸೂಪರ್‌ ಮಾರುಕಟ್ಟೆ ನಿರ್ಮಾಣ ಸಂಬಂಧ ಕಟ್ಟಡವೊಂದರ ಕಾಮಗಾರಿ ಅರ್ಧಕ್ಕೆ ನಿಂತಿದೆ. ಅಲ್ಲಿ ಸೂಪರ್‌ ಮಾರುಕಟ್ಟೆ ನಿರ್ಮಾಣ ಕೈಬಿಟ್ಟು ವೃತ್ತವನ್ನು ವಿಸ್ತರಣೆ ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸುತ್ತಾರೆ.

ಒನಕೆ ಓಬವ್ವ ವೃತ್ತದಲ್ಲೂ ಕಿರಿಕಿರಿ: ಜಿಲ್ಲಾಧಿಕಾರಿ ಕಚೇರಿಯ ಸಮೀಪದಲ್ಲೇ ಇರುವ ಒನಕೆ ಓಬವ್ವ ವೃತ್ತ ನಗರದ ಪ್ರತಿಷ್ಠಿತ ವೃತ್ತವೂ ಆಗಿದೆ. ಈ ಜಾಗದಲ್ಲೂ ಐದು ರಸ್ತೆಗಳು ಕೂಡುತ್ತವೆ. ಜಿಲ್ಲಾಧಿಕಾರಿ ಕಚೇರಿಗೆ ಕಡೆಗೆ, ಬಿ.ಡಿ.ರಸ್ತೆ ಕಡೆಗೆ, ಪ್ರವಾಸಿ ಮಂದಿರ, ಅಂಬೇಡ್ಕರ್‌ ವೃತ್ತಗಳ ಕಡೆಗೆ ಸಂಪರ್ಕ ಕಲ್ಪಿಸುತ್ತದೆ.

ಇಲ್ಲಿ ನಿತ್ಯ ಒಂದಲ್ಲಾ ಒಂದು ಪ್ರತಿಭಟನೆಗಳು ನಡೆಯುವ ಕಾರಣ ಜನರು ಓಡಾಟಕ್ಕೆ ಅಡ್ಡಿಯುಂಟಾಗುತ್ತದೆ. ಪ್ರತಿಭಟನೆಗಳು ನಡೆಯುವ ಸಂದರ್ಭದಲ್ಲಿ ಐದೂ ಸಂಪರ್ಕ ರಸ್ತೆಗಳು ಸಂಪೂರ್ಣವಾಗಿ ಬಂದ್‌ ಆಗುತ್ತವೆ. ಸಮೀಪದಲ್ಲೇ ಇರುವ ಕೋರ್ಟ್‌, ಕಚೇರಿಗಳಿಗೆ ತೆರಳುವ ಜನರು ಕಿರಿಕಿರಿ ಅನುಭವಿಸುತ್ತಾರೆ. ಇಲ್ಲಿ ಟ್ರಾಫಿಕ್‌ ನಿರ್ವಹಣೆಯೂ ಇಲ್ಲದ ಕಾರಣ ವಾಹನಗಳು ಬೇಕಾಬಿಟ್ಟಿಯಾಗಿ ಓಡಾಡಿ ಜಾಮ್‌ ಉಂಟು ಮಾಡುತ್ತವೆ.

ಒನಕೆ ಓಬವ್ವ ವೃತ್ತ ವಿಶಾಲವಾಗಿದ್ದು ಒನಕೆ ಓಬ್ಬವ್ವಳ ಇತಿಹಾಸ ಸಾರುವ ಕಲಾಕೃತಿಗಳನ್ನು ನಿರ್ಮಾಣ ಮಾಡಲಾಗಿದೆ. ಜೊತೆಗೆ ಕಾರಂಜಿಯನ್ನೂ ನಿರ್ಮಿಸಲಾಗಿದೆ. ಆದರೆ ಕಳಪೆ ಕಾಮಗಾರಿ ಮಾಡಲಾಗಿದ್ದು ದೀಪಗಳು ಮುರಿದು ಬಿದ್ದಿವೆ, ಸುತ್ತಲೂ ಹಾಕಲಾಗಿರುವ ಸ್ಟೀಲ್‌ ಬ್ಯಾರಿಕೇಡ್‌ಗಳು ಕಿತ್ತು ಹೋಗಿವೆ.

ಸ್ಥಳವನ್ನು ಸರಿಯಾಗಿ ನಿರ್ವಹಣೆ ಮಾಡದ ಕಾರಣ ಕಲಾಕೃತಿ ಸುತ್ತಲೂ ಗಿಡಗಂಟಿಗಳು ಬೆಳೆದು ನಿಂತಿವೆ. ಸ್ವಚ್ಛತೆಯ ಕೊರತೆ ಎದ್ದು ಕಾಣುತ್ತಿದೆ. ಕಾರಂಜಿ ಕೂಡ ಆಗಾಗ ಹಾಳಾಗುತ್ತಿದ್ದು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ ಎಂಬ ಆರೋಪವಿದೆ.

ಮೊಳಕಾಲ್ಮುರು ಪಟ್ಟಣದಲ್ಲಿ ವೃತ್ತವೇ ಇಲ್ಲ 
ಮೊಳಕಾಲ್ಮುರು ಪಟ್ಟಣದಲ್ಲಿ ವೃತ್ತವೇ ಇಲ್ಲ 

ಇದೇ ಸರ್ಕಲ್‌ ಬದಿಯಲ್ಲಿರುವ ಭಗತ್‌ಸಿಂಗ್‌ ಉದ್ಯಾನದಲ್ಲೂ ಸ್ವಚ್ಛತೆ ಇಲ್ಲವಾಗಿದೆ. ಸರ್ಕಾರದ ಯೋಜನೆಗಳ ಪ್ರಚಾರಕ್ಕಾಗಿ ಪಾರ್ಕ್‌ನಲ್ಲಿ ಬೃಹತ್‌ ಎಲ್‌ಇಡಿ ಪರದೆ ಅಳವಡಿಸಲಾಗಿದೆ. ಅದಕ್ಕಾಗಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಲಾಗಿದೆ. ಆದರೆ ಅದನ್ನು ಒಂದು ದಿನವೂ ಸ್ವಿಚ್‌ ಆನ್‌ ಮಾಡದ ಕಾರಣ ಎಲ್‌ಇಡಿ ಪರದೆ ಇದ್ದೂ ಇಲ್ಲದಂತಾಗಿದೆ. ಇಡೀ ಉದ್ಯಾನದಲ್ಲಿ ಸ್ವಚ್ಛತೆ ಮಾಯವಾಗಿದ್ದು ಬೀದಿನಾಯಿಗಳ ಆಶ್ರಯ ತಾಣವಾಗಿದೆ.

ಹೊಸದುರ್ಗದಲ್ಲಿ ಕಿರಿದಾಗಿರುವ ಮದಕರಿ ವೃತ್ತ
ಹೊಸದುರ್ಗದಲ್ಲಿ ಕಿರಿದಾಗಿರುವ ಮದಕರಿ ವೃತ್ತ

ರಾಷ್ಟ್ರೀಯ ಹೆದ್ದಾರಿಯೊಂದಿಗೆ ನಗರವನ್ನು ಸಂಪರ್ಕ ಕಲ್ಪಿಸುವ ಚಳ್ಳಕೆರೆ ಗೇಟ್‌ ಕೂಡ ನಗರದ ಪ್ರಮುಖ ಸರ್ಕಲ್‌ ಆಗಿದೆ. ಇಡೀ ವೃತ್ತ ಅವೈಜ್ಞಾನಿಕವಾಗಿದ್ದು ಸಣ್ಣಪುಟ್ಟ ಅಪಘಾತಗಳು ಇಲ್ಲಿ ಸಾಮಾವ್ಯವಾಗಿವೆ. ಸುತ್ತಲೂ ಶಾಲೆಗಳಿದ್ದು ಶಾಲಾ ವಾಹನಗಳು ಹೆಚ್ಚು ಓಡಾಡುತ್ತವೆ. ಖಾಸಗಿ ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಿರುವ ಕಾರಣ ಶಾಲಾ ಮಕ್ಕಳ ಪ್ರಾಣಕ್ಕೆ ಅಪಾಯವಿದೆ.

ಡಾನ್‌ ಬಾಸ್ಕೊ, ಇಂಡಿಯನ್‌ ಇಂಟರ್‌ನ್ಯಾಷನಲ್‌ ಶಾಲೆಗಳಿದ್ದು ಬೆಳಿಗ್ಗೆ ಮತ್ತು ಸಂಜೆ ಹೆಚ್ಚಿನ ಸಂಖ್ಯೆಯ ಮಕ್ಕಳೂ ಇಲ್ಲಿ ಓಡಾಡುತ್ತವೆ. ವೃತ್ತದಲ್ಲಿ ಟ್ರಾಫಿಕ್‌ ಸಿಗ್ನಲ್‌ಗಳೇ ಇಲ್ಲದ ಕಾರಣ ವಾಹನ ಓಡಾಟಕ್ಕೆ ನಿಯಂತ್ರಣ ಇಲ್ಲವಾಗಿದೆ. ಇಲ್ಲಿ ಆದಷ್ಟು ಬೇಗ ಟ್ರಾಫಿಕ್‌ ಸಿಗ್ನಲ್‌ಗಳನ್ನು ಅಳವಡಿಸಬೇಕು ಎಂದು ಸ್ಥಳೀಯರು ಒತ್ತಾಯಿಸುತ್ತಾರೆ.

ಮುಂದಿನ ದಿನಗಳಲ್ಲಿ ನಗರ ಪಟ್ಟಣಗಳ ಸೌಂದರ್ಯಕ್ಕೆ ಪ್ರಮುಖ ಆದ್ಯತೆ ನೀಡಲಾಗುವುದು. ಅದಕ್ಕಾಗಿ ಹೊಸ ಯೋಜನೆಗಳನ್ನು ರೂಪಿಸಲಾಗುವುದು
ಟಿ.ವೆಂಕಟೇಶ್‌ ಜಿಲ್ಲಾಧಿಕಾರಿ

ನನೆಗುದಿಗೆ ಬಿದ್ದ ವೃತ್ತಗಳ ನಿರ್ಮಾಣ

- ಕೊಂಡ್ಲಹಳ್ಳಿ ಜಯಪ್ರಕಾಶ

ಮೊಳಕಾಲ್ಮುರು: ಪಟ್ಟಣದಲ್ಲಿ ಹಾದು ಹೋಗಿರುವ ರಾಯದುರ್ಗ- ಹಾನಗಲ್‌ ಮುಖ್ಯರಸ್ತೆ ವಿಸ್ತರಣೆ ಕಾರ್ಯ ಬಹುತೇಕ ಮುಗಿದಿದ್ದು ಅಲ್ಲಲ್ಲಿ ವೃತ್ತಗಳನ್ನು ನಿರ್ಮಿಸುವ ಪ್ರಸ್ತಾವನೆ ಮಾತ್ರ ನನೆಗುದಿಗೆ ಬಿದ್ದಿದೆ.

4 ವರ್ಷದ ಹಿಂದೆ ಆರಂಭವಾಗಿದ್ದ ರಸ್ತೆ ವಿಸ್ತರಣೆ ಕಾರ್ಯ ಕೆಲ ತಿಂಗಳ ಹಿಂದೆ ಪೂರ್ಣವಾಗಿದೆ. ಕಾಮಗಾರಿ ನಡೆಯುವ ಸಮಯದಲ್ಲೇ ರೈತಸಂಘ ದಸಂಸ ಸೇರಿದಂತೆ ಹಲವು ಸಂಘಟನೆಗಳು ಅಲ್ಲಲ್ಲಿ ವೃತ್ತಗಳನ್ನು ನಿರ್ಮಿಸಿ ಗಣ್ಯರ ಹೆಸರು ನಾಮಕರಣ ಮಾಡಬೇಕು ಎಂದು ಮನವಿ ಸಲ್ಲಿಸಿದ್ದವು. ಇದಕ್ಕೆ ಪೂರಕವಾಗಿ ತಾಲ್ಲೂಕು ಆಡಳಿತ ಹೆದ್ದಾರಿ ಪ್ರಾಧಿಕಾರದ ಸಭೆ ಕರೆದು ಈ ಬಗ್ಗೆ ಚರ್ಚಿಸಿತ್ತು.

ವಿಸ್ತರಣೆ ಕ್ರಿಯಾಯೋಜನೆಯಲ್ಲಿ ಇದಕ್ಕೆ ಅವಕಾಶ ನೀಡಿಲ್ಲ. ಪ್ರಸ್ತಾವನೆ ಸಲ್ಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದರು. ಮನವಿಯನ್ನು ಜಿಲ್ಲಾಧಿಕಾರಿಗೆ ಕಳಿಸಿಕೊಡಲಾಗಿದೆ ಎಂದು ಅಧಿಕಾರಿಗಳು ಹೇಳಿದರು.

ಡಾ. ಬಿ.ಆರ್.‌ ಅಂಬೇಡ್ಕರ್‌ ವೃತ್ತ ಬಸವಣ್ಣ ವೃತ್ತ ಅನ್ನದಾನಿ ವೀರಭದ್ರಪ್ಪ ಎನ್.ವೈ. ಹನುಮಂತಪ್ಪ ವೃತ್ತ ಪ್ರೊ. ಎಂ.ಡಿ. ನಂಜುಡಸ್ವಾಮಿ ವೃತ್ತ ಎಂದು ನಾಮಕರಣಕ್ಕೆ ಮನವಿ ಮಾಡಲಾಗಿತ್ತು. ಇದುವರೆಗೂ ಯಾವ ಪ್ರತಿಕ್ರಿಯೆ ಬಂದಿಲ್ಲ ಎಂದುರೈತಸಂಘದ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಮರ್ಲಹಳ್ಳಿ ರವಿಕುಮಾರ್‌ ದೂರಿದರು. ‘ವೃತ್ತಗಳನ್ನು ನಿರ್ಮಿಸಲು ಹಾಗೂ ಹೆಸರಿಡಲು ಸರ್ಕಾರ ನಿಯಮಮಾವಳಿ ರೂಪಿಸಲಾಗಿದೆ. ಮುಂದಿನ ಕ್ರಮಕ್ಕೆ ಮುಂದಾಗುತ್ತೇನೆ’ ಎಂದು ಮುಖ್ಯಾಧಿಕಾರಿ ಪಾಲಯ್ಯ ಹೇಳಿದರು.

4 ಸ್ಥಳಗಳಲ್ಲಿ ಸಂಚಾರ ಅವ್ಯವಸ್ಥೆ

- ಸುವರ್ಣಾ ಬಸವರಾಜ್‌

ಹಿರಿಯೂರು: ನಗರದ ಪ್ರಧಾನ ರಸ್ತೆಯಲ್ಲಿನ ನಾಲ್ಕು ಸ್ಥಳಗಳಲ್ಲಿ ಹಲವು ದಶಕಗಳಿಂದ ಉಂಟಾಗುತ್ತಿರುವ ಸಂಚಾರ ಅವ್ಯವಸ್ಥೆಗೆ ನಾಗರಿಕರು ಹೈರಾಣಾಗಿ ಹೋಗಿದ್ದಾರೆ. ನಗರದ ಗಾಂಧಿವೃತ್ತ ನೆಹರೂ ಮಾರುಕಟ್ಟೆ ಮುಂಭಾಗ ತಾಲ್ಲೂಕು ಕಚೇರಿ ಮುಂದೆ ಹಾಗೂ ಪ್ರವಾಸಿ ಮಂದಿರ ಸಮೀಪದ ವೃತ್ತಗಳು ವಾಹನಗಳ ದಟ್ಟಣೆಯಿಂದ ನಾಗರಿಕರನ್ನು ಬೆಂಬಿಡದೆ ಕಾಡುತ್ತಿವೆ.

ಚಿತ್ರದುರ್ಗ ಬಳ್ಳಾರಿ ಕಡೆಯಿಂದ ನಗರಕ್ಕೆ ಪ್ರವೇಶಿಸುವ ವಾಹನಗಳು ಗಾಂಧಿ ವೃತ್ತದಲ್ಲಿ ಬೆಂಗಳೂರು ಮತ್ತು ಮೈಸೂರು ಕಡೆಗೆ ಮಾರ್ಗ ಬದಲಾಯಿಸುವ ಸಮಯದಲ್ಲಿ ನೆಹರು ಮಾರುಕಟ್ಟೆ ಮುಂಭಾಗ ಹೂವು ಹಣ್ಣು ತರಕಾರಿ–ಸೊಪ್ಪಿನ ವ್ಯಾಪಾರ ನಡೆಯುವಾಗ ತಾಲ್ಲೂಕು ಕಚೇರಿ ಮುಂದೆ ಕಚೇರಿ ವೇಳೆಯಲ್ಲಿ ಬಸ್‌ನವರು ಪ್ರಯಾಣಿಕರನ್ನು ಇಳಿಸಿ–ಹತ್ತಿಸಿಕೊಳ್ಳಲು ನಿಲುಗಡೆ ಮಾಡಿದಾಗ ನಿತ್ಯ ನೂರಾರು ಬಾರಿ ಸಂಚಾರ ಅಸ್ತವ್ಯಸ್ತವಾಗುತ್ತದೆ.

ಪ್ರವಾಸಿ ಮಂದಿರ ವೃತ್ತದ ಸಮೀಪದಲ್ಲಿ ಬೆಂಗಳೂರಿನಿಂದ ಸರ್ವೀಸ್ ರಸ್ತೆಯ ಮೂಲಕ ಬಳ್ಳಾರಿ ಕಡೆ ಸಾಗುವ ವಾಹನಗಳು ಹಿರಿಯೂರು ನಗರದಿಂದ ಚಿತ್ರದುರ್ಗದ ಕಡೆ ಹೋಗುವ ವಾಹನಗಳು ಚಿತ್ರದುರ್ಗ–ಬಳ್ಳಾರಿ ಕಡೆಯಿಂದ ಬೆಂಗಳೂರು–ಹಿರಿಯೂರು ನಗರದ ಕಡೆ ಸಾಗಬೇಕಾದ ವಾಹನಗಳು ಒಮ್ಮೊಮ್ಮೆ ಒಟ್ಟಿಗೆ ಪ್ರವೇಶಿಸಿ 15–20 ನಿಮಿಷ ಸಂಚಾರ ಬಂದ್ ಆಗಿರುವ ನಿದರ್ಶನಗಳಿವೆ. ಹಲವು ಬಾರಿ ವಾಹನ ಚಾಲಕರು ಬೈಗುಳ ವಿನಿಮಯ ಮಾಡಿಕೊಂಡು ಕೈಕೈ ಮಿಲಾಯಿಸುವ ಮಟ್ಟಕ್ಕೂ ಹೋಗಿರುವುದುಂಟು. ಇದಕ್ಕೆ ರಾಷ್ಟ್ರೀಯ ಹೆದ್ದಾರಿ 48ಕ್ಕೆ ನಿರ್ಮಿಸಿರುವ ಅವೈಜ್ಞಾನಿಕ ಅಂಡರ್ ಪಾಸ್ ಕಾರಣ ಎಂಬ ಆರೋಪವಿದೆ.

ವೃತ್ತಗಳಲ್ಲಿ ಮೂಲಸೌಕರ್ಯ ಬೇಕು

- ಶ್ವೇತಾ ಜಿ.

ಹೊಸದುರ್ಗ: ಪಟ್ಟಣದಲ್ಲಿ ಅಂಬೇಡ್ಕರ್ ವೃತ್ತ ಗಾಂಧಿ ವೃತ್ತ ಬಸವೇಶ್ವರ ಮದಕರಿನಾಯಕ ವೃತ್ತ ಸೇರಿದಂತೆ ಹಲವು ವೃತ್ತಗಳು ಮುಖ್ಯರಸ್ತೆಯಲ್ಲಿವೆ. ನಿತ್ಯ ನೂರಾರು ವಾಹನಗಳ ಸಂಚಾರ ಇರುವ ಕಾರಣ ಈ ವೃತ್ತಗಳ ಮೂಲ ಹಾದುಹೋಗಿರುವ ರಸ್ತೆಯನ್ನು ವಿಸ್ತರಿಸುವ ಜತೆಗೆ ವೃತ್ತಗಳಲ್ಲಿನ ಪ್ರತಿಮೆಗಳಿಗೆ ಅಭಿವೃದ್ಧಿ ಸ್ಪರ್ಶ ನೀಡಬೇಕು ಎಂಬುದು ಪಟ್ಟಣದ ಜನರ ಒತ್ತಾಸೆ.

ಲೇಪಾಕ್ಷಿ ವೃತ್ತ ಅಂಬೇಡ್ಕರ್ ವೃತ್ತ ಹಾಗೂ ಮದಕರಿ ವೃತ್ತ ಸೇರಿದಂತೆ ಹಲವೆಡೆ ವಿದ್ಯುತ್ ದೀಪಗಳೇ ಇಲ್ಲ. ಸಾಧಕರ ಭಾವಚಿತ್ರ ಅಳವಡಿಸಿ ವೃತ್ತಗಳಿಗೆ ನಾಮಕರಣ ಮಾಡಲಾಗಿದೆ. ಪ್ರಮೆ ಅನಾವರಣ ಮಾತ್ರ ಯಾವ ವೃತ್ತದಲ್ಲಿಯೂ ಆಗಿಲ್ಲ. ಸುಸಜ್ಜಿತ ಕಾಂಪೌಂಡ್ ನಿರ್ಮಾಣದ ಜೊತೆಗೆ ನಿತ್ಯ ಸ್ವಚ್ಛತೆಗೆ ಆದ್ಯತೆ ನೀಡಬೇಕು. ವಿಶೇಷ ದಿನಗಳಂದು ವೃತ್ತಗಳನ್ನು ಅಲಂಕರಿಸಬೇಕು. ಸಮರ್ಪಕ ನಿರ್ವಹಣೆ ಮಾಡಿದರೆ ಪಟ್ಟಣದ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಬಹುದು ಎನ್ನುತ್ತಾರೆ ಸ್ಥಳೀಯರು. 

ವೃತ್ತಗಳ ಬಳಿ ರಸ್ತೆಗಳು ಕಿರಿದಾಗಿದ್ದು ವಾಹನಗಳ ದಟ್ಟಣೆ ಹೆಚ್ಚಾಗಿರುತ್ತದೆ. ಸಂಚಾರಿ ನಿಯಮಗಳನ್ನು ಪಾಲಿಸುವವರು ವಿರಳಾತಿವಿರಳ. ಹಾಗಾಗಿ ರಸ್ತೆ ಅಗಲೀಕರಣ ಆಗಬೇಕು. ಸಂಚಾರಿ ನಿಯಮ ಉಲ್ಲಂಘಿಸಿದವರಿಗೆ ಶಿಕ್ಷೆಯಾಗಬೇಕು. ವೃತ್ತಗಳ ಬಳಿ ನಾಮಫಲಕಗಳನ್ನು ಅಳವಡಿಸಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT