ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಾಯಕನಹಟ್ಟಿ | ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗಿ: ಮಂಜುಳಾ ಶ್ರೀಕಾಂತ್

ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕುಂದುಕೊರತೆ ಸಭೆಯಲ್ಲಿ ಮಂಜುಳಾ ತಾಕೀತು
Published : 4 ಅಕ್ಟೋಬರ್ 2024, 14:24 IST
Last Updated : 4 ಅಕ್ಟೋಬರ್ 2024, 14:24 IST
ಫಾಲೋ ಮಾಡಿ
Comments

ನಾಯಕನಹಟ್ಟಿ: ‘ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಆಸ್ಪತ್ರೆ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಹಾಜರಾಗಬೇಕು’ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಶ್ರೀಕಾಂತ್ ಹೇಳಿದರು.

ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶುಕ್ರವಾರ ಪಟ್ಟಣ ಪಂಚಾಯಿತಿ ಆಡಳಿತದಿಂದ ನಡೆದ ಆಸ್ಪತ್ರೆ ಕುಂದು–ಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಪಟ್ಟಣದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರವು ಅಂದಾಜು 48 ಹಳ್ಳಿಗಳಿಗೆ ಕೇಂದ್ರಸ್ಥಾನವಾಗಿದೆ. ಹೋಬಳಿಯ ನೆಲಗೇತನಹಟ್ಟಿ, ಮುಷ್ಠಲಗುಮ್ಮಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ನೇರಲಗುಂಟೆ, ಜೋಗಿಹಟ್ಟಿಯಲ್ಲಿ ಆರೋಗ್ಯ ಉಪಕೇಂದ್ರಗಳಿವೆ. ಈ ಎಲ್ಲ ಕೇಂದ್ರಗಳಿಗೂ ನಾಯಕನಹಟ್ಟಿ ಪ್ರಮುಖವಾಗಿದೆ. 30 ಹಾಸಿಗೆಗಳ ಸಾಮರ್ಥ್ಯವಿರುವ ಸುಸಜ್ಜಿತ ಸಮುದಾಯ ಆರೋಗ್ಯ ಕೇಂದ್ರದ ಪಕ್ಕದಲ್ಲೇ ನೂತನವಾಗಿ ನಿರ್ಮಿಸಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಇದೆ. ಇಷ್ಟೆಲ್ಲ ಮೂಲ ಸೌಕರ್ಯಗಳಿದ್ದರೂ ಆಸ್ಪತ್ರೆಯಲ್ಲಿ ಹಲವು ಕುಂದುಕೊರತೆಗಳು ಕೇಳಿ ಬರುತ್ತಿವೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಆಸ್ಪತ್ರೆ ಸಿಬ್ಬಂದಿ ಸಕಾಲಕ್ಕೆ ಕರ್ತವ್ಯಕ್ಕೆ ಹಾಜರಾಗುವುದಿಲ್ಲ. ರಾತ್ರಿಪಾಳಿಯಲ್ಲಿ ವೈದ್ಯರ ಬದಲಿಗೆ ಶುಷ್ರೂಷಕರೇ ಚಿಕಿತ್ಸೆ ನೀಡುತ್ತಾರೆ. ಆಸ್ಪತ್ರೆಯಲ್ಲಿ ಜನರೇಟರ್, ಸಿ.ಸಿ.ಟಿ.ವಿ ಕ್ಯಾಮೆರಾ ಇಲ್ಲ. ಸಿಬ್ಬಂದಿ ಹಾಜರಾತಿಗೆ ಬಯೋಮೆಟ್ರಿಕ್ ವ್ಯವಸ್ಥೆಯಿಲ್ಲ. ರಾತ್ರಿ ವೇಳೆ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಭದ್ರತೆಗೆ ಅಗತ್ಯ ಕ್ರಮವಾಗಬೇಕು. ಈ ಎಲ್ಲ ಸಮಸ್ಯೆಗಳನ್ನು ಆದಷ್ಟು ಬೇಗ ಬಗೆಹರಿಸಬೇಕು’ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಎನ್.ಕಾಶಿ ಅವರಿಗೆ ತಾಕೀತು ಮಾಡಿದರು.

‘ಆಸ್ಪತ್ರೆ ಸಿಬ್ಬಂದಿ ರೋಗಿಗಳು ಮತ್ತು ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಹಗಲು– ರಾತ್ರಿ ವೈದ್ಯರು ಆಸ್ಪತ್ರೆಯಲ್ಲಿ ಲಭ್ಯವಿದ್ದು ಚಿಕಿತ್ಸೆ ನೀಡಬೇಕು. ದಿನಕ್ಕೆ ಮೂರು ಬಾರಿ ಆಸ್ಪತ್ರೆಯನ್ನು ಸ್ವಚ್ಛಗೊಳಿಸಬೇಕು. ಹೆರಿಗೆ ಆಸ್ಪತ್ರೆಗೆ ಖಾಯಂ ಪ್ರಸೂತಿ ವೈದ್ಯರನ್ನು ನೇಮಿಸಬೇಕು’ ಎಂದು ಉಪಾಧ್ಯಕ್ಷೆ ಸರ್ವಮಂಗಳಾ ಹೇಳಿದರು.

ತಾಲ್ಲೂಕು ವೈದ್ಯಾಧಿಕಾರಿ ಡಾ.ಎನ್.ಕಾಶಿ, ಡಾ.ಬಿ.ವಿಕಾಸ್, ಡಾ.ಸಣ್ಣೋಬಣ್ಣ, ಹಿರಿಯ ಆರೋಗ್ಯ ನಿರೀಕ್ಷಕ ಎಂ.ಶೇಷಾದ್ರಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಬಿ.ತಿಪ್ಪೇಸ್ವಾಮಿ, ಅಧೀಕ್ಷಕ ಮಲ್ಲಿಕಾರ್ಜುನಸ್ವಾಮಿ, ಫಾರ್ಮಾಸಿಸ್ಟ್ ಅಫ್ರೂಜ್‌ಬಾಷಾ  ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT