ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿರಿಗೆರೆ: ಕೆರೆಯೊಡಲು ಕೆಡಿಸುತ್ತಿರುವ ಹಸಿ ಅಡಿಕೆ ತ್ಯಾಜ್ಯ

ಭರಮಸಾಗರದ ಐತಿಹಾಸಿಕ ಕೆರೆ ನೀರು ಕಲುಷಿತಗೊಳ್ಳುವ ಅಪಾಯ, ಸ್ವಚ್ಛಗೊಳಿಸಲು ಒತ್ತಾಯ
ರಾಜ ಸಿರಿಗೆರೆ
Published : 5 ಅಕ್ಟೋಬರ್ 2024, 7:09 IST
Last Updated : 5 ಅಕ್ಟೋಬರ್ 2024, 7:09 IST
ಫಾಲೋ ಮಾಡಿ
Comments

ಸಿರಿಗೆರೆ: ತುಂಗಾಭದ್ರಾ ನೀರಿನಿಂದ ತುಂಬಿ ತುಳುಕುತ್ತಿರುವ ಭರಮಸಾಗರದ ಐತಿಹಾಸಿಕ ಭರಮಣ್ಣ ನಾಯಕನ ಕೆರೆ ಈಗ ಹಸಿ ಅಡಿಕೆ ಸಿಪ್ಪೆಯ ತ್ಯಾಜ್ಯದಿಂದ ಗಬ್ಬೆದ್ದು ನಾರುತ್ತಿದೆ. ಅಡಿಕೆ ಬೆಳೆಗಾರರು, ವ್ಯಾಪಾರಿಗಳು ಲೋಡ್‌ಗಟ್ಟಲೆ ಹಸಿ ಅಡಿಕೆ ಸಿಪ್ಪೆಯನ್ನು ಕೆರೆಯ ಒಡಲಿಗೆ ಹಾಕುತ್ತಿರುವುದರಿಂದ ಕೆರೆಯ ಸೌಂದರ್ಯವೇ ಹಾಳಾಗಿದೆ.

ಕೃಷಿಕರ ಬದುಕು ಹಸನು ಮಾಡುವ ಸಲುವಾಗಿ 56 ಕಿ.ಮೀ ದೂರದಿಂದ ನೀರು ತಂದು ಭರಮಸಾಗರ ಮತ್ತು ಸುತ್ತಲಿನ 43 ಕೆರೆಗಳನ್ನು ತುಂಬಿಸಲಾಗಿದೆ. ಯೋಜನೆ ಜಾರಿಯಲ್ಲಿ ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅಪಾರ ಶ್ರಮ ಇದೆ. ಕಳೆದ ವರ್ಷವೇ ಕೆರೆ ತುಂಬಿತ್ತಾದರೂ, ಏರಿಯಲ್ಲಿ ಪದೇಪದೇ ಬಿರುಕು ಕಾಣಿಸಿಕೊಂಡ ಕಾರಣ ಕೋಡಿ ಒಡೆದು ನೀರು ಹೊರಕ್ಕೆ ಹರಿಸಲಾಗಿತ್ತು. 1,000 ಎಕರೆ ವಿಸ್ತೀರ್ಣದ ಕೆರೆ ಈ ವರ್ಷವೂ ಮೈದುಂಬಿಕೊಂಡಿದ್ದು ನೋಡುಗರ ಕಣ್ಮನ ಸೆಳೆಯುತ್ತಿದೆ.

ಆದರೆ, ಕೆರೆಯ ಒಂದು ಅಂಚಿನಲ್ಲಿ ಅಡಿಕೆ ಕೃಷಿಕರು, ವ್ಯಾಪಾರಸ್ಥರು ಅಡಿಕೆ ಸುಲಿದು ಬೇಯಿಸುವ ಕೆಲಸ ಮಾಡುತ್ತಿದ್ದಾರೆ. ಅವರು ಸುಲಿಯುವ ಅಡಿಕೆಯ ಹಸಿ ತ್ಯಾಜ್ಯವನ್ನು ಕೆರೆಗೆ ಸುರಿಯುತ್ತಿದ್ದಾರೆ. ಜೊತೆಗೆ ಭರಮಸಾಗರದ ಹಲವು ಭಾಗಗಳಿಂದ ಅಡಿಕೆ ತ್ಯಾಜ್ಯವನ್ನು ತಂದು ಕೆರೆಗೆ ಹಾಕಲಾಗುತ್ತಿದೆ. ಇದರಿಂದ ಭರಮಸಾಗರ ಕೆರೆಯ ಸೌಂದರ್ಯವೇ ಕೆಡುತ್ತಿದೆಯಲ್ಲದೆ, ಅಲ್ಲಿ ಸಂಗ್ರಹವಾಗಿರುವ ನೀರು ಕಲುಷಿತಗೊಳ್ಳುತ್ತಿದೆ.

ಕೆರೆಯ ತೀರದಲ್ಲಿ ಹತ್ತಾರು ಲೋಡು ಹಸಿ ಅಡಿಕೆ ಸಿಪ್ಪೆ ಕೊಳೆತು ನಾರುತ್ತಿದೆ. ಇದರ ಕಡೆ ಗಮನ ಹರಿಸುವವರೇ ಇಲ್ಲವೇನೋ ಎಂಬ ಭಾವನೆ ಜನರಲ್ಲಿ ಮೂಡಿದೆ. ಸ್ಥಳೀಯ ಗ್ರಾಮ ಪಂಚಾಯಿತಿ, ನಾಡಕಚೇರಿ ಹಾಗೂ ಸ್ಥಳೀಯ ಜನಪ್ರತಿನಿಧಿಗಳೂ ಕೆರೆ ಸ್ವಚ್ಛತೆ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಇದು ಹೀಗೇ ಮುಂದುವರಿದರೆ ಕೆಲವೇ ದಿನಗಳಲ್ಲಿ ಕೆರೆ ಸಂಪೂರ್ಣ ಕಲುಷಿತಗೊಳ್ಳಲಿದೆ ಎಂದು ಸ್ಥಳೀಯರು ಭಯ ವ್ಯಕ್ತಪಡಿಸುತ್ತಾರೆ.

‘ಸ್ಥಳೀಯ ಆಡಳಿತ ಇದನ್ನು ತಡೆಗಟ್ಟಲು ವಿಫಲವಾಗಿರುವುದರಿಂದ ತಾಲ್ಲೂಕು ಮತ್ತು ಜಿಲ್ಲಾಡಳಿತವೇ ಗಮನಹರಿಸಿ, ಕೆರೆಗೆ ತ್ಯಾಜ್ಯ ಸುರಿಯುತ್ತಿರುವವರ ವಿರುದ್ಧ ಕ್ರಮ ಜರುಗಿಸಬೇಕು. ಕೆರೆಯ ಸುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಹಲವು ಬಾರಿ ಮನವಿ ಮಾಡಲಾಗಿದೆ. ತರಳಬಾಳು ಶ್ರೀಗಳು ಕೆರೆಗೆ ಭೇಟಿ ನೀಡಿದಾಗಲೆಲ್ಲ, ಕೆರೆಯ ಸ್ವಚ್ಛತೆ ಬಗ್ಗೆ ತಿಳಿವಳಿಕೆ ನೀಡಿದ್ದಾರೆ. ಹೀಗಿದ್ದರೂ ಜನರು ಕೆರೆಗೆ ಬೃಹತ್‌ ಪ್ರಮಾಣದಲ್ಲಿ ತ್ಯಾಜ್ಯ ಸರಿಯುವುದು ಸರಿಯಲ್ಲ’ ಎಂದು ಚೌಲಿಹಳ್ಳಿಯ ಕೆರೆ ಸಮಿತಿ ಅಧ್ಯಕ್ಷ ಶಶಿ ಪಾಟೀಲ ಹೇಳುತ್ತಾರೆ.

‘ಅಡಿಕೆ ಸಿಪ್ಪೆಯನ್ನು ಕೆರೆಗೆ ಸುರಿಯುವ ಬದಲು ರೈತರು ಅದನ್ನು ಸಂರಕ್ಷಿಸಿ ಅದರಿಂದ ಕಾಂಪೋಸ್ಟ್‌ ಗೊಬ್ಬರ ತಯಾರಿಸಲು ಮುಂದಾಗಬೇಕು. ನೀರು ಮಲಿನವಾದರೆ ಕೆರೆಯಲ್ಲಿನ ಜೀವರಾಶಿಗಳು ಅಪಾಯಕ್ಕೆ ಸಿಲುಕುತ್ತವೆ’ ಎಂದು ಸಿರಿಗೆರೆಯ ಸಿ.ಆರ್‌.ನಾಗರಾಜ್‌ ಹೇಳಿದರು.

‘25 ಜನರು ಅಡಿಕೆ ಸುಲಿಯಲು ಯಂತ್ರಗಳನ್ನು ಹೊಂದಿದ್ದು  ಸುಲಿದ ತ್ಯಾಜ್ಯವನ್ನು ಕೆರೆಯ ಸುತ್ತಲೂ ಹಾಕುತ್ತಿದ್ದಾರೆ. ಅವರಿಗೆ ಈಗಾಗಲೇ ನೋಟಿಸ್‌ ಕೊಡಲಾಗಿದೆ. ಭರಮಸಾಗರದ ಕಸ ವಿಲೇವಾರಿಗೆ ಬೇವಿನಹಳ್ಳಿ ಬಳಿ 2 ಎಕರೆ ಜಾಗವನ್ನು ಗುರುತಿಸಲಾಗಿದೆ. ಅದು ಪಟ್ಟಣದಿಂದ 7 ಕಿ.ಮೀ. ದೂರವಿರುವ ಕಾರಣ ಅಡಿಕೆ ವ್ಯಾಪಾರಸ್ಥರು ಕೆರೆ ನೀರಿನ ಸುತ್ತ ಈ ಕೆಲಸ ಮಾಡುತ್ತಿದ್ದಾರೆ. ಸ್ಥಳೀಯ ಪೊಲೀಸರ ನೆರವು ಪಡೆದು ಈ ಹಾವಳಿ ತಪ್ಪಿಸಲಾಗುವುದು’ ಎಂದು ಭರಮಸಾಗರ ಗ್ರಾ.ಪಂ ಪಿಡಿಒ ಪಾತಣ್ಣ ಹೇಳಿದರು.

ನೀರಿನಲ್ಲಿ ಬೆರೆಯುತ್ತಿರುವ ತ್ಯಾಜ್ಯ
ನೀರಿನಲ್ಲಿ ಬೆರೆಯುತ್ತಿರುವ ತ್ಯಾಜ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT