ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ವಾಧಾರ ಕೇಂದ್ರ ಸ್ಥಗಿತ| ಬೀದಿಗೆ ಬಿದ್ದ ಸಾವಿರಾರು ಮಹಿಳೆಯರು, ಮಕ್ಕಳು

ಸ್ವಾಧಾರ, ಉಜ್ವಲಾ ಕೇಂದ್ರಗಳು ಬಂದ್‌; 3 ತಿಂಗಳಿಂದ ಇಲ್ಲ ಪರ್ಯಾಯ ವ್ಯವಸ್ಥೆ
Published : 6 ಜುಲೈ 2024, 7:38 IST
Last Updated : 6 ಜುಲೈ 2024, 7:38 IST
ಫಾಲೋ ಮಾಡಿ
Comments

ಚಿತ್ರದುರ್ಗ: ಪರಿತ್ಯಕ್ತ, ದೌರ್ಜನ್ಯಕ್ಕೆ ಒಳಗಾದ, ನೊಂದ ಮಹಿಳೆಯರಿಗಾಗಿ ರಾಜ್ಯದಾದ್ಯಂತ ಇದ್ದ ಸ್ವಾಧಾರ ಹಾಗೂ  ಉಜ್ವಲಾ ಕೇಂದ್ರಗಳು ಸ್ಥಗಿತಗೊಂಡು 3 ತಿಂಗಳಾಗಿದ್ದು, ಅಲ್ಲಿ ಆಶ್ರಯ ಪಡೆದಿದ್ದ ಸಾವಿರಾರು ಸಂತ್ರಸ್ತೆಯರು ಹಾಗೂ ಅವರ ಮಕ್ಕಳಿಗೆ ದಿಕ್ಕೇ ತೋಚದಂತಾಗಿದೆ.

ಸ್ವಾಧಾರ, ಉಜ್ವಲಾ ಕೇಂದ್ರಗಳನ್ನು ವಿಲೀನಗೊಳಿಸಿ ‘ಮಿಷನ್‌ ಶಕ್ತಿ’ ಯೋಜನೆ ಮಾರ್ಗಸೂಚಿ ಅನ್ವಯ ಜಿಲ್ಲೆಗೊಂದು ‘ಶಕ್ತಿ ಸದನ’ ಆರಂಭಿಸಬೇಕು, ಖಾಸಗಿ ಸ್ವಯಂ ಸೇವಾ ಸಂಸ್ಥೆಗಳ ಬದಲಾಗಿ ಸರ್ಕಾರವೇ ಅವುಗಳನ್ನು ನಿರ್ವಹಣೆ ಮಾಡಬೇಕು ಎಂದು ಕೇಂದ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ 2022ರಲ್ಲೇ ಆದೇಶ ನೀಡಿತ್ತು.

ಕೇಂದ್ರಗಳನ್ನು ಮಾರ್ಚ್‌ 31ರವರೆಗೆ ಮುಂದುವರಿಸಿ ಏಪ್ರಿಲ್‌ 1ರಿಂದ ‘ಶಕ್ತಿ ಸದನ’ ಆರಂಭಿಸಬೇಕು ಎಂದು ರಾಜ್ಯ ಸರ್ಕಾರ ಸೂಚಿಸಿತ್ತು. ಅದರಂತೆ ಮಾರ್ಚ್‌ 31ಕ್ಕೆ 51 ಸ್ವಾಧಾರ, 14 ಉಜ್ವಲಾ ಕೇಂದ್ರಗಳು ಸ್ಥಗಿತಗೊಂಡಿವೆ. ಆದರೆ, ಇಲ್ಲಿಯವರೆಗೂ ಶಕ್ತಿ ಸದನಗಳು ಆರಂಭವಾಗದ ಕಾರಣ ಕೇಂದ್ರಗಳಲ್ಲಿ ಆಶ್ರಯ ‍ಪಡೆದಿದ್ದ ಮಹಿಳೆಯರಿಗೆ ಆಶ್ರಯ, ರಕ್ಷಣೆ ಇಲ್ಲದಂತಾಗಿದೆ.

ಕೌಟುಂಬಿಕ, ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರು, ಪೋಕ್ಸೊ ಸಂತ್ರಸ್ತೆಯರು, ಬಾಲಗರ್ಭಿಣಿಯರು ಸ್ವಾಧಾರ ಕೇಂದ್ರಗಳಲ್ಲಿ, ವೇಶ್ಯಾವಾಟಿಕೆ, ಕಳ್ಳಸಾಗಾಣಿಕೆಯಲ್ಲಿ ಸಂರಕ್ಷಿಸಲ್ಪಟ್ಟ ಮಹಿಳೆಯರು ಉಜ್ವಲಾ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದರು. ಅವರಿಗೆ ಪುನರ್ವಸತಿ ಕಲ್ಪಿಸುವುದು ಈ ಕೇಂದ್ರಗಳ ಉದ್ದೇಶವಾಗಿತ್ತು. ಪರ್ಯಾಯ ವ್ಯವಸ್ಥೆ ಕೈಗೊಳ್ಳದೇ ಕೇಂದ್ರಗಳನ್ನು ಬಂದ್‌ ಮಾಡಿರುವ ಕಾರಣ ಮಹಿಳೆಯರ ಪ್ರಾಣ ಅಪಾಯಕ್ಕೆ ಸಿಲುಕಿದೆ.

ಕೇಂದ್ರಗಳು ಸ್ಥಗಿತಗೊಂಡಿದ್ದರೂ ಮಹಿಳೆಯರು ಕೇಂದ್ರ ಬಿಡಲು ನಿರಾಕರಿಸುತ್ತಿದ್ದು, ಸ್ವಯಂಸೇವಾ ಸಂಸ್ಥೆಗಳ ಮುಖ್ಯಸ್ಥರು ಗೊಂದಲಕ್ಕೀಡಾಗಿದ್ದಾರೆ. ಪ್ರಿಯತಮನಿಂದ ಮೋಸಹೋಗಿ ಗರ್ಭಿಣಿಯಾಗಿದ್ದ ಮಹಿಳೆಯೊಬ್ಬರು ನಗರದ ರಾಜಲಕ್ಷ್ಮಿ ಅಸೋಸಿಯೇಷನ್‌ ನಡೆಸುತ್ತಿದ್ದ ಸ್ವಾಧಾರ ಕೇಂದ್ರದಲ್ಲಿ ಆಶ್ರಯ ಪಡೆದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಕೇಂದ್ರ ಬಂದ್‌ ಆಗಿರುವ ಕಾರಣ ಈಗ ಅವರು ಅತಂತ್ರರಾಗಿದ್ದಾರೆ.

‘ಹೆತ್ತವರಿಂದಲೇ ನನ್ನ ಜೀವಕ್ಕೆ ಅಪಾಯವಿದೆ. ನನ್ನನ್ನು ಕತ್ತರಿಸಿ ಹಾಕಿದರೂ ನಾನು ಈ ಕೇಂದ್ರ ಬಿಟ್ಟು ಹೋಗುವುದಿಲ್ಲ’ ಎಂದು ಅವರು ಹೇಳುತ್ತಾರೆ.

‘ಮಹಿಳೆಯರನ್ನು ಮನೆಗೆ ಕಳುಹಿಸಬೇಕು, ಅವರು ಒಪ್ಪದಿದ್ದರೆ ‘ರಾಜ್ಯ ಮಹಿಳಾ ನಿಲಯ’ಕ್ಕೆ ಕಳುಹಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಮೌಖಿಕವಾಗಿ ತಿಳಿಸಿದ್ದಾರೆ. ಆದರೆ, ರಾಜ್ಯದಲ್ಲಿ ಕೇವಲ 8 ಮಹಿಳಾ ನಿಲಯಗಳಿದ್ದು ಎಲ್ಲರಿಗೂ ವಸತಿ ಕಲ್ಪಿಸಲು ಸಾಧ್ಯವೇ’ ಎಂದು ರಾಜಲಕ್ಷ್ಮಿ ಅಸೋಸಿಯೇಷನ್‌ ಮುಖ್ಯಸ್ಥ ರಾಜಶೇಖರ್‌ ಪ್ರಶ್ನಿಸಿದರು.

ಗರ್ಭಿಣಿಯಾಗಿ ಮಂಡ್ಯದ ಅಕ್ಷಯ ನಿಕೇತನ ಟ್ರಸ್ಟ್‌ ಸ್ವಾಧಾರ ಕೇಂದ್ರ ಸೇರಿದ್ದ ಬಾಲಕಿಯೊಬ್ಬಳು ಮನೆಗೆ ತೆರಳಲು ನಿರಾಕರಿಸಿದ್ದಾರೆ. ‘ಮನೆಯಲ್ಲಿ ತಂಗಿ ಇದ್ದು ಆಕೆ ಮದುವೆಯಾಗುವವರೆಗೆ ಮನೆಗೆ ಕಾಲಿಡುವುದಿಲ್ಲ’ ಎಂದು ಅವರು ಹೇಳುತ್ತಾರೆ. ಈಗ ಆಕೆ ಹಾಗೂ ಆಕೆಯ 1 ವರ್ಷದ ಹೆಣ್ಣು ಮಗು ಸಂಕಷ್ಟಕ್ಕೆ ಸಿಲುಕಿದಂತಾಗಿದೆ.

‘ಶಕ್ತಿ ಸದನಗಳನ್ನು ಸರ್ಕಾರ ನೇರವಾಗಿ ನಿರ್ವಹಣೆ ಮಾಡಬೇಕೇ ಅಥವಾ ಸ್ವಯಂ ಸೇವಾ ಸಂಸ್ಥೆಗಳ ಮೂಲಕವೇ ನಿರ್ವಹಣೆ ಮಾಡಬೇಕೇ ಎಂಬ ಬಗ್ಗೆ ಅಧಿಕಾರಿಗಳಲ್ಲೇ ಗೊಂದಲವಿದೆ. ಅಧಿಕಾರಿಗಳೇ ಮಹಿಳೆಯರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ’ ಎಂದು ಅಕ್ಷಯ ನಿಕೇತನ ಟ್ರಸ್ಟ್‌ ಮುಖ್ಯಸ್ಥ ಸೂನಗಹಳ್ಳಿ ಪುಟ್ಟಸ್ವಾಮಿ ಆರೋಪಿಸಿದರು.

ಶಕ್ತಿ ಸದನದ ರಚನೆ ಸಂಬಂಧ ಸರ್ಕಾರಕ್ಕೆ ಕಡತ ಕಳುಹಿಸಲಾಗಿದೆ. ಅಲ್ಲಿಯವರೆಗೂ ನಿರಾಶ್ರಿತರು ರಾಜ್ಯ ಮಹಿಳಾ ನಿಲಯದಲ್ಲಿ ಆಶ್ರಯ ಪಡೆಯಬಹುದು

-ಸಿದ್ದೇಶ್ವರ ನಿರ್ದೇಶಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

ಮಾನವೀಯತೆ ಅಕ್ರಮವೇ? ಮಾರ್ಚ್‌ 31ರ ನಂತರವೂ ಕೆಲವು ಸ್ವಯಂ ಸೇವಾ ಸಂಸ್ಥೆಗಳು ಸಂತ್ರಸ್ತ ಮಹಿಳೆಯರಿಗೆ ಆಶ್ರಯ ನೀಡಿವೆ. ಇದನ್ನು ಅಕ್ರಮ ಎಂದು ಪರಿಗಣಿಸಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಅಂತಹ ಸಂಸ್ಥೆಗಳ ವಿರುದ್ಧ ಪ್ರಕರಣ ದಾಖಲು ಮಾಡಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ‘ಶಕ್ತಿ ಸದನಗಳು ಆರಂಭವಾಗುವವರೆಗೂ ನಾವು ಮಾನವೀಯತೆ ದೃಷ್ಟಿಯಿಂದ ಆಶ್ರಯ ನೀಡಿದ್ದೇವೆ. ಮಾನವೀಯತೆ ಅಕ್ರಮವೇ?’ ಎಂದು ಸ್ವಯಂ ಸೇವಾ ಸಂಸ್ಥೆಯೊಂದರ ಮುಖ್ಯಸ್ಥರು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT