ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

'ತುಳು ಪರ್ಬ- 2024' ಸಾಂಸ್ಕೃತಿಕ ಉತ್ಸವ ಅ.25ರಂದು

ಕುವೈಟ್‌ ತುಳುಕೂಟಕ್ಕೆ ಬೆಳ್ಳಿಹಬ್ಬ ಸಡಗರ
Published : 6 ಅಕ್ಟೋಬರ್ 2024, 5:49 IST
Last Updated : 6 ಅಕ್ಟೋಬರ್ 2024, 5:49 IST
ಫಾಲೋ ಮಾಡಿ
Comments

ಮಂಗಳೂರು: ಕುವೈತ್‌ ತುಳುಕೂಟವು ಬೆಳ್ಳಿಹಬ್ಬದ ಸಡಗರದಲ್ಲಿದ್ದು, ಈ ಪ್ರಯುಕ್ತ ಇದೇ 25ರಂದು ಕುವೈತ್‌ನ ಹವಾಲಿಯ ಅಮೆರಿಕನ್ ಇಂಟರ್‌ನ್ಯಾಷನಲ್ ಸ್ಕೂಲ್ ಸಭಾಂಗಣದಲ್ಲಿ ‘ತುಳು ಪರ್ಬ-2024’ ಸಾಂಸ್ಕೃತಿಕ ಉತ್ಸವವನ್ನು ಏರ್ಪಡಿಸಿದೆ ಎಂದು ಸಂಸ್ಥೆಯ ಅಧ್ಯಕ್ಷ ಅಬ್ದುಲ್ ರಜಾಕ್ ನಿಟ್ಟೆ ತಿಳಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ತುಳುನಾಡಿನ ಸಂಸ್ಕೃತಿ ಪರಿಚಯಿಸುವ ವಿವಿಧ ಕಾರ್ಯಕ್ರಮಗಳು, ಚಾ ಪರ‍್ಕ ತಂಡದ `ನಮಸ್ಕಾರ ಮೇಸ್ಟ್ರೇ' ತುಳು ನಾಟಕ ಪ್ರದರ್ಶನಗೊಳ್ಳಲಿದೆ’ ಎಂದರು.

‘ಕುವೈತ್‌ನಲ್ಲಿ ನೆಲೆಸಿರುವ ತುಳುವರು ಸೇರಿಕೊಂಡು 2000ನೇ ಸಾಲಿನಲ್ಲಿ ಆರಂಭಿಸಿದ ನಮ್ಮ ಸಂಸ್ಥೆಯಲ್ಲೀಗ 4 ಸಾವಿರ ಸದಸ್ಯರಿದ್ದಾರೆ. ತುಳು ಸಂಸ್ಕೃತಿ ಉಳಿಸುವ ಕಾರ್ಯಕ್ರಮಗಳ ಆಯೋಜನೆ ಜೊತೆಗೆ ಸಂಸ್ಥೆಯು ತುಳುವರ ಯೋಗಕ್ಷೇಮ ಕಾಪಾಡಲು ನೆರವಾಗುತ್ತಿದೆ. ತಾಯ್ನಾಡಿನ ಶಾಲೆಗಳಿಗೆ ಪುಸ್ತಕ, ಕಂಪ್ಯೂಟರ್‌, ಪೀಠೋಪಕರಣ ವಿತರಣೆ, ಶಾಲಾ ಕಟ್ಟಡ, ಶೌಚಾಲಯ ನಿರ್ಮಾಣಕ್ಕೆ ‘ಪ್ರಾಜೆಕ್ಟ್‌ ಎಜುಕೇಷನ್‌’ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ವರ್ಷ 12 ಸರ್ಕಾರಿ ಶಾಲೆಗಳ 33 ಮಂದಿಗೆ ವಿದ್ಯಾರ್ಥಿವೇತನ ನೀಡಿದ್ದೇವೆ’ ಎಂದರು.

‘ಪ್ರಾಜೆಕ್ಟ್‌ ಆಶ್ರಯ ಅಡಿ ಬಡಕುಟುಂಬಗಳಿಗೆ 3 ಮನೆ ನಿರ್ಮಿಸಿಕೊಡಲಾಗಿದ್ದು, ಇನ್ನೊಂದು ಮನೆ ನಿರ್ಮಾಣ ಪ್ರಗತಿಯಲ್ಲಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ವಿವಿಧ ಸಂಘ ಸಂಸ್ಥೆಗಳಿಗೆ ಹಣಕಾಸು ನೆರವು ನೀಡಿದ್ದೇವೆ. ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ ಆಯೋಜಿಸಿದ್ದೇವೆ. ಉಡುಪಿ ಮತ್ತು ಮಂಗಳೂರಿನ ಒಂದು ಆಸ್ಪತ್ರೆಗಳಲ್ಲಿ ಬಡವರ ಚಿಕಿತ್ಸೆಗಾಗಿ ಡಯಾಲಿಸಿಸ್ ಯಂತ್ರ ಒದಗಿಸಿದ್ದೇವೆ’ ಎಂದರು.

‘ತುಳುಕೂಟ ಕುವೈಟ್‌ನ ಸದಸ್ಯರಿಗೆ ಆರ್ಥಿಕ ಮತ್ತು ವೈದ್ಯಕೀಯ ನೆರವು ಒದಗಿಸಿದ್ದೇವೆ. ಕೋವಿಡ್‌ ಸಂದರ್ಭದಲ್ಲಿ ಕುವೈತ್‌ನಲ್ಲಿ ಸಿಲುಕಿದ್ದ ತುಳುವರನ್ನು ತಾಯ್ನಾಡಿಗೆ ಕರೆತರಲು ಚಾರ್ಟರ್ಡ್‌ ವಿಮಾನದ ವ್ಯವಸ್ಥೆ ಮಾಡಿದ್ದೆವು. ಅಲ್ಲೇ ಉಳಿದುಕೊಂಡ ತುಳುವರಿಗೆ ಕಿಟ್‌ ಹಾಗೂ ವೈದ್ಯಕೀಯ ನೆರವು ಒದಗಿಸಿದ್ದೆವು’ ಎಂದರು. 

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಮಾಜಿ ಅಧ್ಯಕ್ಷ ಎ.ಕೆ.ರವೀಂದ್ರ, ಪ್ರಮುಖರಾದ ಚಂದ್ರಹಾಸ ಶೆಟ್ಟಿ, ಚಾಪರ‍್ಕ ತಂಡದ ದೇವದಾಸ್ ಕಾಪಿಕಾಡ್, ಕಾರ್ಯಕಾರಿ ಸಮಿತಿಯ ಅರವಿಂದ ಭಂಡಾರಿ, ಎಲಿಯಾಸ್, ಮನೋಜ್ ಶೆಟ್ಟಿ ಕಿನ್ನಿಗೋಳಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT