ಮಂಗಳವಾರ, 12 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಒಳನೋಟ | ಲಾಭದ ಕನವರಿಕೆ: ಆಹಾರ ಕಲಬೆರಕೆ

ತಿರುಪತಿ ತಿಮ್ಮಪ್ಪನ ಲಾಡುವನ್ನೂ ಬಿಡದ ಬೆರಕೆ ಭೂತ!
Published : 5 ಅಕ್ಟೋಬರ್ 2024, 23:30 IST
Last Updated : 5 ಅಕ್ಟೋಬರ್ 2024, 23:30 IST
ಫಾಲೋ ಮಾಡಿ
Comments
ರಾಜ್ಯದಲ್ಲೂ ಆಹಾರ ಪದಾರ್ಥಗಳ ಗುಣಮಟ್ಟ ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ.ಗುಣ ಮಟ್ಟದ ಪದಾರ್ಥಗಳ ಖರೀದಿಗೆ ಜನಜಾಗೃತಿ ಮೂಡಿಸಲಾಗುತ್ತಿದೆ.
ಕೆ.ಎಚ್. ಮುನಿಯಪ್ಪ, ಆಹಾರ ಸಚಿವ
‘ಶುದ್ಧ’ ಹೆಸರಿನಲ್ಲಿ ಅಶುದ್ಧ ನೀರು!
ಅನೇಕ ಕಡೆ ನದಿ ನೀರನ್ನು ಶುದ್ಧೀಕರಿಸಿ ಪೂರೈಕೆಯಾತ್ತಿದ್ದರೂ ಜನರು ಶುದ್ಧ ಕುಡಿಯುವ ನೀರಿಗಾಗಿ ಇನ್ನೂ ಖಾಸಗಿ ನೀರಿನ ಘಟಕಗಳನ್ನು ಆಶ್ರಯಿಸುವುದು ತಪ್ಪಿಲ್ಲ. ಆದರೆ, ಅಂಥ ಬಹುಪಾಲು ಶುದ್ಧ ನೀರಿನ ಘಟಕಗಳಲ್ಲಿನ ನೀರು ಹೆಸರಿಗಷ್ಟೇ ಶುದ್ಧವಾಗಿರುತ್ತದೆ ಎನ್ನುವ ಆರೋಪವಿದೆ. ನಿಗದಿತ ಮಾನದಂಡಗಳನ್ನು ಪಾಲಿಸದ ಖಾಸಗಿ ಘಟಕಗಳು ಪೂರೈಸುವ ಬಾಟಲಿ ನೀರನ್ನೇ ಸಭೆ–ಸಮಾರಂಭಗಳಿಗೆ ಜನ ಬಳಕೆ ಮಾಡುತ್ತಿದ್ದಾರೆ. ಮೊದಲು ಅನುಮತಿ ಪಡೆಯದೇ ಕೆಲವೇ ಲಕ್ಷ ಖರ್ಚು ಮಾಡಿ ನಿರ್ಮಾಣವಾದ ಅನಧಿಕೃತ ನೀರಿನ ಘಟಕಗಳ ಮೇಲೆ ದಾಳಿ ನಡೆಯುತ್ತಿತ್ತು. ಆದರೆ, ಇತ್ತೀಚೆಗೆ ಜಿಲ್ಲಾಧಿಕಾರಿ ನೇತೃತ್ವದ ಸಲಹಾ ಸಮಿತಿ ಸಭೆ ನಡೆಯದಿದ್ದರಿಂದ ಅಂತಹ ದಾಳಿಗಳು ನಿಂತು ಹೋಗಿವೆ. ಆಹಾರ ಸುರಕ್ಷತಾ ಮಾನದಂಡಗಳನ್ನು ಅನುಸರಿಸಿದರೆ ಒಂದು ಘಟಕ ನಿರ್ಮಾಣಕ್ಕೆ ₹ 40 ಲಕ್ಷ ವೆಚ್ಚವಾಗುತ್ತದೆ. ಆದರೆ, ಮಾನದಂಡ ಅನುಸರಿಸದೇ ರಾಜ್ಯದಾದ್ಯಂತ ಶುದ್ಧ ನೀರಿನ ಘಟಕಗಳು ನಾಯಿಕೊಡೆಗಳಂತೆ ತಲೆ ಎತ್ತುತ್ತಿದ್ದು, ಕೇವಲ ₹ 1.5 ಲಕ್ಷದಿಂದ ₹ 2 ಲಕ್ಷ ವೆಚ್ಚದ ಬಂಡವಾಳದಲ್ಲಿ ಆರಂಭವಾಗುತ್ತಿವೆ.
ಬೆಲ್ಲಕ್ಕೆ ರಾಸಾಯನಿಕ ಮಿಶ್ರಣ
ಕಪ್ಪು ಬಣ್ಣದಲ್ಲಿರುವ ಸಾವಯವ ಬೆಲ್ಲ ಮಾತ್ರ ಬಳಕೆಗೆ ಯೋಗ್ಯ. ಬಿಳಿ ಮತ್ತು ಕೆಂಪು ಬಣ್ಣದ ಬೆಲ್ಲ ನಿಶ್ಚಿತವಾಗಿ ಕಲಬೆರಕೆಯೇ ಆಗಿರುತ್ತದೆ. ಮಾರುಕಟ್ಟೆಯಲ್ಲಿ ಕಪ್ಪು ಬೆಲ್ಲಕ್ಕಿಂತ ಬಿಳಿ ಬಣ್ಣಕ್ಕೆ ಹೆಚ್ಚು ಬೇಡಿಕೆ ಇರುವುದರಿಂದ ಆಲೆಮನೆಗಳಲ್ಲಿಯೇ ರಾಸಾಯನಿಕ ಬೆರಸಿದ ಬೆಲ್ಲ ತಯಾರಿಕೆಯಾಗುತ್ತಿದೆ. ‘ಬೆಲ್ಲಕ್ಕೆ ಸಾಮಾನ್ಯವಾಗಿ ಹೈಡ್ರೋಸಲ್ಫೇಟ್‌ ರಾಸಾಯನಿಕ ಪದಾರ್ಥ ಬಳಸಲಾಗುತ್ತಿದೆ. ಸಕ್ಕರೆ ಕಾರ್ಖಾನೆಗಳಲ್ಲಿ ಸಿಗುವ ಕಳಪೆ ಗುಣಮಟ್ಟದ ಹಾಗೂ ಬಳಕೆಗೆ ಯೋಗ್ಯವಲ್ಲದ ಸಕ್ಕರೆಯನ್ನು ಬೆಲ್ಲಕ್ಕೆ ಮಿಶ್ರಣ ಮಾಡಲಾಗುತ್ತದೆ. ಆಗ ಬೆಲ್ಲ ಆಕರ್ಷಕ ಬಣ್ಣ ಪಡೆದುಕೊಳ್ಳುತ್ತದೆ. ಕೆಲವು ಆಲೆಮನೆಗಳಲ್ಲಿ ವಿಷಕಾರಕ ಅಂಶಗಳನ್ನು ಬಳಸಿ ಬೆಲ್ಲ ತಯಾರಿಸಿ ಮಾರುಕಟ್ಟೆಗೆ ಬಿಡಲಾಗುತ್ತಿದೆ. ಕಲಬೆರಕೆಗೆ ಸಂಬಂಧಿಸಿದಂತೆ ದೂರು ದಾಖಲಾದರೂ ಅಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳುತ್ತಿಲ್ಲ. ವಿಷಕಾರಿ ಬೆಲ್ಲಕ್ಕೆ ಸೃಷ್ಟಿಯಾಗಿರುವ ಮಾರುಕಟ್ಟೆಗೆ ಕಡಿವಾಣ ಹಾಕುವ ಮೂಲಕ ರೈತರಿಗೆ ಆಗುವ ನಷ್ಟ ತಪ್ಪಿಸಬೇಕು’ ಎನ್ನುತ್ತಾರೆ ಮಂಡ್ಯ ಬೆಲ್ಲ ರೈತ ಉತ್ಪಾದಕರ ಕಂಪನಿಯ ಅಧ್ಯಕ್ಷ ಕಾರಸವಾಡಿ ಮಹದೇವ.
‘ಕಪ್ಪು ಬಂಗಾರ’ಕ್ಕೂ ಕಲಬೆರಕೆಯ ಬಾಧೆ
ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ‘ಕಪ್ಪು ಬಂಗಾರ’ ಎಂದೇ ಪ್ರಸಿದ್ಧವಾಗಿರುವ ಕಾಳುಮೆಣಸು ಕೂಡ ಕಲಬೆರಕೆ ಆಗುತ್ತಿದೆ. ಉತ್ತಮ ಧಾರಣೆ ಇದ್ದ ಸಂದರ್ಭದಲ್ಲಿ ವಿಯೆಟ್ನಾಂ, ಬ್ರೆಝಿಲ್‌ನಿಂದ ಆಮದು ಮಾಡಿಕೊಂಡ ಕಳಪೆ ಗುಣಮಟ್ಟದ ಕಾಳುಮೆಣಸನ್ನು ಇಲ್ಲಿನ ಕಾಳುಮೆಣಸಿನೊಂದಿಗೆ ಸೇರಿಸಿ ಮಾರಾಟ ಮಾಡಲಾಗುತ್ತದೆ. ಅಲ್ಲದೆ, ಹತ್ತಿ ಬೀಜ, ಪರಂಗಿ ಬೀಜವನ್ನು ಸೇರಿಸಿ ಪ್ರಮಾಣವನ್ನು ಜಾಸ್ತಿ ಮಾಡಿ ಮಾರಾಟ ಮಾಡುವ ಜಾಲವೂ ಇದೆ. ಸಾಂಬಾರ ಪದಾರ್ಥಗಳಲ್ಲಿ ಒಂದಾದ ಕಾಳುಮೆಣಸಿನ ಪುಡಿಗೂ ಬೇಡಿಕೆ ಹೆಚ್ಚಾಗಿದೆ. ಕಾಳುಮೆಣಸನ್ನು ಬೇರ್ಪಡಿಸಿದ ಬಳಿಕ ಉಳಿಯುವ ಗೊಂಚಲ ಕಡ್ಡಿಗೂ ಬೇಡಿಕೆ ಇದ್ದು, ದಂಧೆಯಲ್ಲಿ ತೊಡಗಿರುವವರು ಕಾಳು ಮೆಣಸಿನ ಜತೆಗೆ ಕಡ್ಡಿಯನ್ನೂ ಖರೀದಿಸುತ್ತಾರೆ. ಕಾಳುಮೆಣಸನ್ನು ಪುಡಿ ಮಾಡಿ ಮಾರಾಟ ಮಾಡುವವರು ಈ ಗೊಂಚಲ ಕಡ್ಡಿಯನ್ನೂ ಪುಡಿ ಮಾಡಿ ಅದಕ್ಕೆ ಸ್ವಲ್ಪ ಪ್ರಮಾಣದಲ್ಲಿ ಕಾಳುಮೆಣಸನ್ನು ಸೇರಿಸುತ್ತಾರೆ. ಇಂಥ ಪುಡಿಗಳು ಖಾರ ಇಲ್ಲದೆ ಇದ್ದರೂ ಅವುಗಳಲ್ಲಿ ಕಾಳುಮೆಣಸಿನಂತೆ ಘಮ ಇರುತ್ತದೆ. ಮೇಲ್ನೋಟಕ್ಕೆ ಗೊತ್ತಾಗದೆ ಇದ್ದರೂ ರುಚಿಯಲ್ಲಿ ಪತ್ತೆ ಮಾಡಬಹುದು.
ಚಹ, ಕಾಫಿ ಪುಡಿಗೆ ಮರದ ಹೊಟ್ಟು
ಬಳಕೆ ಮಾಡಿದ ಚಹದ ಪುಡಿಗೆ ಹೊಸ ರೂಪವನ್ನು ನೀಡಿ ಮತ್ತೆ ಮಾರಾಟ ಮಾಡುವ ಜಾಲ ಸಕ್ರಿಯವಾಗಿದೆ. ಹೋಟೆಲ್‌ಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಬಳಕೆ ಮಾಡಿದ ಚಹದ ಪುಡಿಯನ್ನು ಒಣಗಿಸಲಾಗುತ್ತದೆ. ಇದಕ್ಕೆ ಮರದ ಹೊಟ್ಟು, ಹುಣಸೆ ಹಣ್ಣಿನ ಬೀಜ ಹಾಗೂ ಬಣ್ಣದ ಎಲೆಗಳ ಪುಡಿಗಳನ್ನು ಸೇರಿಸಿ ಕೃತಕ ಬಣ್ಣ ಮಿಶ್ರಣ ಮಾಡಲಾಗುತ್ತದೆ. ಇದನ್ನು ಪ್ಯಾಕೇಟ್‌ ರೂಪದಲ್ಲಿ ಮರಳಿ ಮಾರುಕಟ್ಟೆಗೆ ತರಲಾಗುತ್ತದೆ. ಸಾಮಾನ್ಯವಾಗಿ ಇದನ್ನು ಹಳ್ಳಿಗಳಲ್ಲಿ ಸಂಚಾರಿ ವಾಹನಗಳಲ್ಲಿ ಮಾರಾಟ ಮಾಡಲಾಗುತ್ತದೆ. ಕಾಫಿ ಪುಡಿಗೂ ಮರದ ಹೊಟ್ಟು, ಮಣ್ಣನ್ನು ಕಲಬೆರಕೆ ಮಾಡಿ ಮಾರಾಟ ಮಾಡಲಾಗುತ್ತಿದೆ.
ರಾಗಿಗೆ ರೆಡ್‌ ಆಕ್ಸೈಡ್‌ ಬೆರಕೆ
ರಾಜ್ಯದ ಹಲವಡೆ ಬೆಳೆಯುವ ರಾಗಿಯು ಆಕರ್ಷಕವಾಗಿ ಕಾಣಲು ಕೃತಕ ಬಣ್ಣ ಲೇಪನ ಮಾಡಲಾಗುತ್ತಿದೆ. ಮಳೆಯ ಏರಿಳಿತ, ಸರಿಯಾದ ಸಂದರ್ಭಕ್ಕೆ ಕಟಾವು ಮಾಡದಿದ್ದಾಗ ಕೆಂಪುರಾಗಿ ಬಣ್ಣ ಕಡುಕೆಂಪಾಗಿ ಇರುವುದಿಲ್ಲ. ದಾಸ್ತಾನು ಇಟ್ಟ ಸಂದರ್ಭದಲ್ಲಿ ಫಂಗಸ್‌ ಅಂಟಿದಾಗಲೂ ರಾಗಿಯನ್ನು ಖರೀದಿಸಲು ಗ್ರಾಹಕರು ಹಿಂದೇಟು ಹಾಕುತ್ತಾರೆ. ಇಂತಹ ಸಂದರ್ಭದಲ್ಲಿ ರಾಗಿಗೆ ಕೃತಕ ಬಣ್ಣವಾಗಿ ‘ರೆಡ್‌ ಆಕ್ಸೈಡ್‌’ ಬಳಸಲಾಗುತ್ತದೆ. ರಾಗಿ ಹೊಳೆಯುವಂತೆ ಮಾಡಲು ಮೇಣವನ್ನು ಉಪಯೋಗಿಸಲಾಗುತ್ತಿದೆ ಎನ್ನುವ ಆರೋಪ ಇದೆ. ಮೆಣಸಿನಕಾಯಿ ಕೆಂಪಾಗಿ ಕಾಣುವಂತೆ ಮಾಡಲು ಸಹ ‘ರೆಡ್‌ ಆಕ್ಸೈಡ್‌’ ಬಳಸಲಾಗುತ್ತದೆ. ಕಾರದಪುಡಿಯಲ್ಲಿ ಇಟ್ಟಿಗೆ ಪುಡಿ, ರಾಸಾಯನಿಕಗಳನ್ನು ಬೆರಸಲಾಗುತ್ತದೆ. ತೊಗರಿ ಬೇಳೆಯನ್ನು ಆಕಾರ್ಷಕವಾಗಿ ಕಾಣುವಂತೆ ಮಾಡಲು ‘ಮೆಟಾನಿಯನ್‌ ಎಲ್ಲೊ’ ರಾಸಾಯನಿಕ ಉಪಯೋಗಿಸಲಾಗುತ್ತದೆ.
ಮೀನು ಕೆಡದಂತೆ ಫಾರ್ಮಲಿನ್‌ ಬಳಕೆ?
ಮೀನು ಬೇಗ ಕೊಳೆಯುವ ಪದಾರ್ಥ. ಮಂಜುಗಡ್ಡೆಯಲ್ಲಿ ಹಾಕಿದರೂ ಒಂದೆರಡು ದಿನಗಳಲ್ಲಿ ಅದು ಕೊಳೆಯಲಾರಂಭಿಸುತ್ತದೆ. ಇದನ್ನು ತಪ್ಪಿಸಲು ಕೆಲವರು ಮೀನನ್ನು ಫಾರ್ಮಲಿನ್ ದ್ರಾವಣದಲ್ಲಿ ಅದ್ದಿ ಮಾರಾಟ ಮಾಡುವುದು ಪತ್ತೆಯಾಗಿದೆ. ಈ ಬಗ್ಗೆ ವ್ಯಾಪಕ ದೂರುಗಳು ಬರುತ್ತಿದ್ದಂತೆಯೇ ಕೊಚ್ಚಿಯಲ್ಲಿರುವ ಕೇಂದ್ರೀಯ ಮೀನುಗಾರಿಕಾ ತಂತ್ರಜ್ಞಾನ ಸಂಸ್ಥೆ (ಸಿಐಎಫ್‌ಟಿ) ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದ್ದ ಮೀನುಗಳನ್ನು ಬೇರೆ ಬೇರೆ ಕಡೆಗಳಲ್ಲಿ ಸಂಗ್ರಹಿಸಿ ಪರಿಶೀಲನೆಗೆ ಒಳಪಡಿಸಿತ್ತು. ಆಗ ಅವುಗಳಲ್ಲಿ ಫಾರ್ಮಲಿನ್‌ ಅಂಶ ಇರುವುದು ಪತ್ತೆಯಾಗಿದೆ. ಒಂದು ರಾಜ್ಯದಿಂದ ಬೇರೆ ರಾಜ್ಯಕ್ಕೆ ಸಾಗಿಸಿ ಮಾರಾಟ ಮಾಡುವ ಮೀನುಗಳಲ್ಲಿ ಈ ರಾಸಾಯನಿಕ ಹೆಚ್ಚಾಗಿ ಪತ್ತೆಯಾಗಿದೆ. ಮೀನು ಕೆಡದಂತೆ ಫಾರ್ಮಲಿನ್ ಬಳಸಿದರೂ ಅದು ಕ್ರಮೇಣ ಶಕ್ತಿಗುಂದುತ್ತದೆ. ಆದರೂ ಅದರ ಅಂಶವನ್ನು ಸಂಪೂರ್ಣ ತೆಗೆಯಲು ಸಾಧ್ಯವಿಲ್ಲ. ಇದು ಮೂತ್ರಕೋಶಕ್ಕೆ ಹಾನಿ ಉಂಟುಮಾಡುತ್ತದೆ. ಎಫ್‌ಎಸ್‌ಎಸ್‌ಎಐ ಗುಣಮಟ್ಟದ ಪ್ರಕಾರ ಆಹಾರ ಪದಾರ್ಥಗಳಲ್ಲಿ ಫಾರ್ಮಲಿನ್ ಬಳಕೆಗೆ ಅನುಮತಿಯೇ ಇಲ್ಲ.
ನಿಲ್ಲದ ಕೃತಕ ಬಣ್ಣದ ಬಳಕೆ
ಗೋಬಿ ಮಂಚೂರಿ, ಕಾಟನ್‌ ಕ್ಯಾಂಡಿ ಹಾಗೂ ಕಬಾಬ್‌ ತಯಾರಿಕೆಯಲ್ಲಿ ಕೃತಕ ಬಣ್ಣ ಬಳಕೆಯನ್ನು ನಿಷೇಧಿಸಿದರೂ ಸಂಪೂರ್ಣವಾಗಿ ತಡೆಯಲು ಸಾಧ್ಯವಾಗುತ್ತಿಲ್ಲ. ಆಹಾರ ಸುರಕ್ಷತಾ ಅಧಿಕಾರಿಗಳ ದಾಳಿ, ದಂಡ ಪ್ರಯೋಗಕ್ಕೂ ತಿನಿಸು ವ್ಯಾಪಾರಿಗಳು ಬಗ್ಗಿಲ್ಲ. ಆಹಾರದ ರುಚಿಯನ್ನು ಹೆಚ್ಚಿಸುವ ಈ ರಾಸಾಯನಿಕವನ್ನು ಬಣ್ಣ ರಹಿತವಾಗಿ ಬಳಸಲಾಗುತ್ತಿದೆ. ಈ ತಿನಿಸುಗಳಲ್ಲಿ ಸನ್‌ಸೆಟ್‌ ಯೆಲ್ಲೋ, ಕಾರ್ಮೋಸಿನ್‌, ಟೆಟ್ರಾಜಿನ್‌ ಹಾಗೂ ರೋಡಮೈನ್‌ ಬಿ ಎಂಬ ರಾಸಾಯನಿಕಗಳನ್ನು ಬಳಕೆ ಮಾಡಲಾಗುತ್ತಿತ್ತು. ಇದೇ ರಾಸಾಯನಿಕಗಳು ಬಿಳಿ ಬಣ್ಣದಲ್ಲಿ ಬಳಕೆಯಾಗುತ್ತಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ. ಹೋಟೆಲ್‌, ರೆಸ್ಟೋರೆಂಟ್‌ ಸೇರಿ ಹಲವೆಡೆ ವಾಸನೆರಹಿತ ರುಚಿವರ್ಧಕ ‘ಚೈನಾಸಾಲ್ಟ್‌’ (ಮಾನೋ ಸೋಡೋ ಗ್ಲುಟಮೇಟ್‌) ಹೆಚ್ಚಾಗಿ ಬಳಕೆಯಾಗುತ್ತಿದೆ. ಬೇಳೆ ಕಾಳು, ಮಾಂಸದಲ್ಲಿ ಇದನ್ನು ಬೆರೆಸಿದಾಗ ರುಚಿಯನ್ನು ಹೆಚ್ಚಿಸುತ್ತದೆ ಮತ್ತು ಈ ರುಚಿಗೆ ಮತ್ತೆ ಮತ್ತೆ ತಿನ್ನುವಂತೆ ಪ್ರೇರೇಪಿಸುತ್ತದೆ.
ಅಡಿಕೆಗೂ ಕಲಬೆರಕೆಯ ಸೋಂಕು
ಮಲೆನಾಡು ಮಾತ್ರವಲ್ಲದೇ ಬಯಲು ಸೀಮೆಯ ಆರ್ಥಿಕ ಜೀವನಾಡಿಯಾಗಿ ಬದಲಾಗಿರುವ ಅಡಿಕೆಗೂ ಕಲಬೆರಕೆಯ ಕಳಂಕ ಹತ್ತಿದೆ. ಈ ಮೊದಲು ಆಡಿಕೆಯನ್ನು ಹೆಚ್ಚಾಗಿ ಬೆಳೆಗಾರರೇ ಸಂಸ್ಕರಿಸಿ ಮಾರಾಟಕ್ಕೆ ತರುತ್ತಿದ್ದರು. ಈಚೆಗೆ ಮಧ್ಯವರ್ತಿಗಳಿಗೆ ಕೇಣಿ ಕೊಡುವ ಪರಿಪಾಠ ಹೆಚ್ಚಾಗಿದೆ. ಕೆಲವು ಕೇಣಿದಾರರು ಕಳಪೆ ಅಡಿಕೆಗೆ ರಾಸಾಯನಿಕ ಬಣ್ಣ, ಪಾಲಿಶ್ ಹಾಕಿ ಒಳ್ಳೆ ಅಡಿಕೆಯೊಂದಿಗೆ ಮಿಶ್ರಣ ಮಾಡುತ್ತಿದ್ದಾರೆ. ಇದು ಸಮಸ್ಯೆಯ ಮೂಲ. ‘ಪೈಪೋಟಿ ಹಾಗೂ ಆಸೆಗೆ ಬಿದ್ದು ಕೇಣಿದಾರರು ಕ್ವಿಂಟಲ್ ಹಸಿ ಅಡಿಕೆಗೆ 13ರಿಂದ 13.5 ಕೆ.ಜಿ ಒಣ ಅಡಿಕೆ ಕೊಡುವುದಾಗಿ ಬೆಳೆಗಾರರೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಅಷ್ಟೊಂದು ಕೊಡಲು ಸಾಧ್ಯವಿಲ್ಲ. ವೈಜ್ಞಾನಿಕವಾಗಿ 11 ಕೆ.ಜಿ. ಅಡಿಕೆ ಮಾತ್ರ ಕೊಡಬಹುದು. ಆ ನಷ್ಟ ತಪ್ಪಿಸಿಕೊಳ್ಳಲು ಕೆಲವರು ಕಳಪೆ ಅಡಿಕೆ (ಸೆಕೆಂಡ್ಸ್) ಮಿಶ್ರಣ ಮಾಡಿ ಬೆಳೆಗಾರರಿಗೆ ಕೊಡುತ್ತಿದ್ದಾರೆ. ಹೀಗೆ ಮಿಶ್ರಣ ಆದ ಅಡಿಕೆ ಸಹಕಾರ ಸಂಸ್ಥೆಗಳು ಹಾಗೂ ವರ್ತಕರಿಗೆ ಮಾರಾಟ ಮಾಡಲಾಗುತ್ತಿದೆ. ಆ ಅಡಿಕೆ ಕಳುಹಿಸಿದರೆ ಪಾನ್‌ ಮಸಾಲ ಕಂಪೆನಿಗಳು ತಿರಸ್ಕರಿಸುತ್ತಿವೆ’ ಎಂದು ಮ್ಯಾಮ್ಕೋಸ್ ವ್ಯವಸ್ಥಾಪಕ ನಿರ್ದೇಶಕ ಶ್ರೀಕಾಂತ್ ಬರುವೆ ಹೇಳುತ್ತಾರೆ.
ಅಡುಗೆ ಎಣ್ಣೆಯಲ್ಲಿ ಅಧಿಕ ಕಲಬೆರಕೆ:
ಕಾರ್ಖಾನೆ, ಮಿಲ್‌, ಸಣ್ಣಪುಟ್ಟ ಘಟಕಗಳಲ್ಲಿ ಪ್ಯಾಕ್‌ ಆಗಿ ಮಾರುಕಟ್ಟೆಗೆ ಬರುವ ಹಾಗೂ ಮಾರುಕಟ್ಟೆಯಲ್ಲಿ ಚಿಲ್ಲರೆಯಾಗಿ ಸಿಗುವ ಅಡುಗೆ ಎಣ್ಣೆಯು ಶೇ 50ರಿಂದ 80ರಷ್ಟು ಕಲಬೆರಕೆಯಿಂದ ಕೂಡಿರುವ ಬಗ್ಗೆ ವಿಜ್ಞಾನಿಗಳು, ಆಹಾರ ತಜ್ಞರು ಹಾಗೂ ವೈದ್ಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಪೆಟ್ರೋಲಿಯಂ ಉಪ ಉತ್ಪನ್ನ ‘ಮಿನರಲ್‌ ಆಯಿಲ್‌’ (ವೈಟ್‌ ಆಯಿಲ್‌ ಅಥವಾ ಪ್ಯಾರಾಪಿನ್‌ ಆಯಿಲ್‌) ಅನ್ನು ಅಡುಗೆ ಎಣ್ಣೆಗೆ ಬೆರೆಸಲಾಗುತ್ತದೆ. ಜಾನುವಾರುಗಳ ಕೊಬ್ಬಿನಿಂದ ತೆಗೆದ ಎಣ್ಣೆಯನ್ನು ಸೇರಿಸಿ ಮಾರಾಟ ಮಾಡುತ್ತಿರುವ ದಂಧೆಯೂ ನಡೆಯುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT