ಬೆಂಗಳೂರು: ರಾಜಾಶ್ರಯದ ಯುಗ ಮುಗಿದು ಪ್ರಜಾಸತ್ತೆಯ ಕಾಲ ಬಂದ ಬಳಿಕ ‘ಪ್ರಭುತ್ವ–ರಾಜಕೀಯ’ದಿಂದ ಅಂತರ ಕಾಯ್ದುಕೊಂಡು, ಸಾಹಿತ್ಯ–ಸಾಹಿತಿಗಳು ಜನದನಿಯಾಗಬೇಕೆಂಬ ಅಪೇಕ್ಷೆಯೊಂದಿಗೆ ನಡೆಯುತ್ತಿದ್ದ ‘ಕನ್ನಡ ನುಡಿಜಾತ್ರೆ’ಗೆ ಈ ಬಾರಿ ರಾಜಕಾರಣದ ಸುಳಿಗಾಳಿ ಆವರಿಸಿಕೊಂಡಿದೆ.

ಕನ್ನಡ ಸಾಹಿತ್ಯ ಪರಿಷತ್ತು ನಡೆಸುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರ ಉದಾರ ನೆರವು ನೀಡುತ್ತದೆ. ಹಾಗಿದ್ದರೂ, ರಾಜಕೀಯದ ನಂಟಿನ ಅಂಟು ಗೊತ್ತಾಗದಂತೆ ಕನ್ನಡ ನಾಡು–ನುಡಿಯನ್ನು ಕಾಡುತ್ತಿರುವ ಸಮಸ್ಯೆಗಳಿಗೆ ಮುಖವಾಣಿಯಾಗುವ, ಅದಕ್ಕೆ ಪರಿಹಾರ ಕಂಡುಕೊಳ್ಳುವ ಸಮಸ್ತ ಕನ್ನಡಿಗರ ವೇದಿಕೆಯಾಗಿರುವ ಪರಂಪರೆಯನ್ನು ಸಮ್ಮೇಳನ ಮುಂದುವರಿಸಿಕೊಂಡು ಬಂದಿದೆ. ಈವರೆಗೆ ಅದೊಂದು ರಾಜಕಾರಣಿಗಳ, ಕಾಲಾಳುಗಳ, ಮಠಾಧೀಶರ, ಭಕ್ತರ ಸಮಾವೇಶ ಆಗಿದ್ದಿಲ್ಲ. ಸಾಹಿತ್ಯ ಸಮ್ಮೇಳನದ ಅಧ್ಯಕ್ಷಗಾದಿಗೆ ಆಯ್ಕೆಯಾಗುವ ಅಧ್ವರ್ಯುಗಳು ಸಾಹಿತಿ–ಸಂಶೋಧಕರೇ ಆಗಿರುತ್ತಿದ್ದರಿಂದಾಗಿ ರಾಜಕೀಯ ಗಂಧ–ಗೊಂದಲಕ್ಕೆ ವ್ಯಾಪಕ ಅವಕಾಶ ಇರುತ್ತಿರಲಿಲ್ಲ.

‘ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ’ ಎಂದು ಉದ್ಗರಿಸಿದ ಕವಿ ಪಂಪನಿಂದ ಹಿಡಿದು, ಈ ವರೆಗೂ ಸಾಹಿತ್ಯ ವಲಯವೆಂಬುದು ಆಳುವವರ ಪಕ್ಕ ಕುಳಿತು ಸಂಭ್ರಮಿಸಿದ ಕ್ಷಣಗಳು ಅಪರೂಪ. ಕವಿ ಕುವೆಂಪು ಅವರಂತೂ ‘ಅಖಂಡ ಕರ್ನಾಟಕ/ಅಲ್ತೊ ನಮ್ಮ ಬೂಟಾಟದ ರಾಜಕೀಯ ನಾಟಕ/ಇಂದು ಬಂದು ನಾಳೆ ಸಂದು/ಹೋಹ ಸಚಿವ ಮಂಡಲ/ರಚಿಸುವೊಂದು ಕೃತಕವಲ್ತೊ/ಸಿರಿಗನ್ನಡ ಸರಸ್ವತಿಯ/ ವಜ್ರ ಕರ್ಣಕುಂಡಲ/ನೃಪತುಂಗನೇ ಚಕ್ರವರ್ತಿ/ಪಂಪನಲ್ಲಿ ಮುಖ್ಯಮಂತ್ರಿ’ ಎಂದು ತಮ್ಮೊಂದು ಕವನದಲ್ಲಿ ಪ್ರತಿಪಾದಿಸುತ್ತಲೇ, ಪ್ರಭುತ್ವ ಹೊರತಾದ ‘ನಿತ್ಯ ಸಚಿವ ಮಂಡಲ’ದಲ್ಲಿ ಕನ್ನಡದ ಕವಿಪುಂಗವರ ಹೆಸರನ್ನೇ ಸೇರಿಸಿಬಿಡುತ್ತಾರೆ. ಅಷ್ಟರಮಟ್ಟಿಗೆ ಕನ್ನಡ ಸಾಹಿತ್ಯವೆಂಬುದು ಪ್ರಭುತ್ವವನ್ನು ಎದುರುಗೊಳ್ಳುತ್ತಲೇ, ನಾಡ ಜನರ ಒಡಲ ಧ್ವನಿಗೆ ಬಾಯಾಗುತ್ತಲೇ ಬಂದಿದೆ.

ಈಗ ಮತ್ತೊಂದು ನುಡಿ ಜಾತ್ರೆ ಸಮೀಪಿಸುತ್ತಿದ್ದು, ಈ ಅವಧಿಯಲ್ಲಿ ಸಾಹಿತ್ಯೇತರರಿಗೆ ಸಮ್ಮೇಳನಾಧ್ಯಕ್ಷತೆ ನೀಡಬೇಕೆಂಬ ಚರ್ಚೆಯು ವಿವಾದದ ಸ್ವರೂಪ ಪಡೆದುಕೊಂಡಿದೆ.

1915ರಿಂದ ಈವರೆಗೆ 86 ಸಾಹಿತ್ಯ ಸಮ್ಮೇಳನಗಳು ನಾಡಿನ ವಿವಿಧೆಡೆ ಹಾಗೂ ಹೊರನಾಡಿನಲ್ಲಿ ನಡೆದಿವೆ. ಈ ಅವಧಿಯಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ಗಮನಾರ್ಹ ಕೊಡುಗೆ ನೀಡಿದವರು ಸಮ್ಮೇಳನಾಧ್ಯಕ್ಷರಾಗಿ, ಆಯಾ ಕಾಲದಲ್ಲಿ ನಾಡು–ನುಡಿ ಎದುರಿಸಿದ ಸಮಸ್ಯೆಗಳ ಬಗ್ಗೆ ಸಮ್ಮೇಳನಗಳಲ್ಲಿ ಪ್ರಸ್ತಾಪಿಸಿದ್ದಾರೆ. ವಿಮರ್ಶೆ, ಸಂಶೋಧನೆ ಸೇರಿ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೆಲಸ ಮಾಡಿದವರಿಗೂ ಸಮ್ಮೇಳನಾಧ್ಯಕ್ಷತೆ ಪರಿಷತ್ತಿನ ಇತಿಹಾಸದಲ್ಲಿ ಒಲಿದಿದೆ.

ಆದರೆ, ರಾಜಕಾರಣಿಗಳು, ಮಠಾಧೀಶರು ಸೇರಿ ಸಾಹಿತ್ಯದ ಜತೆಗೆ ನೇರ ಸಂಬಂಧ ಇಲ್ಲದವರು ಹಾಗೂ ಸಾಹಿತ್ಯೇತರ ಕ್ಷೇತ್ರದವರನ್ನು ಸಮ್ಮೇಳನಾಧ್ಯಕ್ಷತೆಗೆ ಆಯ್ಕೆ ಮಾಡುವ ಗೋಜಿಗೆ ಹಿಂದಿನ ಯಾವ ಅಧ್ಯಕ್ಷರೂ ಹೋಗಿದ್ದಿಲ್ಲ. ಸಾಹಿತ್ಯ ಪರಿಷತ್ತಿನ ಸಭೆಗಳಲ್ಲಿ ಅಂತಹ ಚರ್ಚೆಯೂ ನಡೆದ ನಿದರ್ಶನವಿಲ್ಲ. ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಹಾಗೂ ಜನಪದದ ಜತಗೆ ಕನ್ನಡ, ಕನ್ನಡಿಗ, ಕರ್ನಾಟಕ ಇವುಗಳ ರಕ್ಷಣೆ ಮತ್ತು ಅಭಿವೃದ್ಧಿಯ ಧ್ಯೆಯೋದ್ದೇಶದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ), ಇದೇ ಮೊದಲ ಬಾರಿ ಸಾಹಿತ್ಯೇತರರಿಗೆ ಮಣೆ ಹಾಕಲು ಮುಂದಾಗಿದೆಯೇ ಎಂಬ ಚರ್ಚೆ ಸಾಹಿತ್ಯ ವಲಯದಲ್ಲಿ ಈಗ ಬಿರುಸು ಪಡೆದಿದೆ.

30 ವರ್ಷಗಳ ನಂತರ ಮಂಡ್ಯದಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು, ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ರಾಜ್ಯ ಸರ್ಕಾರ ಅದ್ದೂರಿಯಾಗಿ ಸಮ್ಮೇಳನ ನಡೆಸಲು ನಿರ್ಧರಿಸಿವೆ. ಈ ಸಮ್ಮೇಳನಾಧ್ಯಕ್ಷತೆಗೆ ಮಠಾಧೀಶರು, ಕನ್ನಡ ಪರ ಹೋರಾಟಗಾರರು, ರಾಜಕಾರಣಿಗಳು, ವಿಜ್ಞಾನಿಗಳು, ನ್ಯಾಯಾಧೀಶರು, ಕ್ರೀಡಾಪಟುಗಳು ಸೇರಿ ವಿವಿಧ ಕ್ಷೇತ್ರಗಳ ಸಾಧಕರ ಪರವಾಗಿ ಲಾಬಿ ಹೆಚ್ಚುತ್ತಿದೆ. ಸಾಹಿತ್ಯ ಕ್ಷೇತ್ರದವರಿಗೆ ಸಮ್ಮೇಳನಾಧ್ಯಕ್ಷತೆ ಕೈತಪ್ಪುವ ಸಂಭವವೂ ಇದೆ.

‘ಸಾಹಿತ್ಯೇತರರನ್ನು ಸಮ್ಮೇಳನಾಧ್ಯಕ್ಷತೆಗೆ ಪರಿಗಣಿಸಿದರೆ, ಕನ್ನಡ ನಾಡು–ನುಡಿಗೆ ಕೊಡುಗೆ ನೀಡಿದ್ದಾರೆ ಎಂಬ ಮಾನದಂಡದ ಆಧಾರದಲ್ಲಿ ರಾಜಕಾರಣಿಗಳೂ ಸಮ್ಮೇಳನಾಧ್ಯಕ್ಷತೆ ವಹಿಸುವ ಸಾಧ್ಯತೆಯಿದೆ. ಕನ್ನಡ ಪರ ಆದೇಶ ಹೊರಡಿಸಿದ್ದಾರೆ, ಪುಸ್ತಕ ಪ್ರಕಟಿಸಿದ್ದಾರೆ ಎಂಬ ಕಾರಣ ನೀಡಿ, ಮಂತ್ರಿಗಳು, ಮಠಾಧೀಶರನ್ನೂ ಆಯ್ಕೆ ಮಾಡುವ ಅಪಾಯವಿದೆ’ ಎನ್ನುತ್ತಾರೆ ಸಾಹಿತಿ ಬಂಜಗೆರೆ ಜಯಪ್ರಕಾಶ್.

ಸಾಹಿತ್ಯ ಪರಿಷತ್ತು ಕೂಡ ಸಾಹಿತ್ಯೇತರ ಕ್ಷೇತ್ರಗಳ ಸಾಧಕರ ಆಯ್ಕೆಗೆ ಸಂಬಂಧಿಸಿದ ಮನವಿಗಳನ್ನು ಸ್ವಾಗತಿಸಿದೆ.

ಪರಿಷತ್ತಿನ ಬೈ–ಲಾದಲ್ಲಿ ಸಮ್ಮೇಳನಾಧ್ಯಕ್ಷತೆಗೆ ಸಂಬಂಧಿಸಿದಂತೆ ‘ಸಾಹಿತಿ’ಗಳನ್ನೇ ಆಯ್ಕೆ ಮಾಡಬೇಕೆಂಬ ನಿರ್ದಿಷ್ಟ ಮಾನದಂಡ ಇಲ್ಲದಿರುವುದರಿಂದ, ಶಿಫಾರಸು ಮಾಡಲ್ಪಟ್ಟ ವಿವಿಧ ಕ್ಷೇತ್ರಗಳ ಸಾಧಕರ ಹೆಸರನ್ನು ಪುರಸ್ಕರಿಸಿದೆ. ಕಾರ್ಯಕಾರಿ ಸಮಿತಿ ಸಭೆಯಲ್ಲಿ ವಿವಿಧ ಕ್ಷೇತ್ರಗಳ ಸಾಧಕರ ಹೆಸರನ್ನು ಪ್ರಸ್ತಾಪಿಸಿ, ಆಯ್ಕೆ ಮಾಡಲು ಪರಿಷತ್ತು ನಿರ್ಧರಿಸಿದೆ. ಪರಿಷತ್ತಿನ ಈ ನಡೆಗೆ ಸಾಹಿತ್ಯ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದ್ದು, ಸಾಹಿತಿಗಳನ್ನೇ ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಮೂಲಕ ಪರಂಪರೆಯನ್ನು ಮುನ್ನಡೆಸಿಕೊಂಡು ಹೋಗಬೇಕೆಂಬ ಆಗ್ರಹ ವ್ಯಕ್ತವಾಗಿದೆ.

‘ಸಾಹಿತ್ಯ ಪರಿಷತ್ತಿಗೆ ದೊಡ್ಡ ಪರಂಪರೆಯಿದೆ. ಕನ್ನಡ ನಾಡು–ನುಡಿಗೆ ಅವಿರತ ಸೇವೆ ಸಲ್ಲಿಸಿದವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಮಾಡಿದರೆ ತಪ್ಪಿಲ್ಲ. ಆದರೆ, ರಾಜಕಾರಣಿಗಳು, ಮಠಾಧೀಶರು ಸೇರಿ ಸಾಹಿತ್ಯಿಕ ಕೊಡುಗೆ ನೀಡದ ಸಾಹಿತ್ಯೇತರರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಮಾಡಿದರೆ ಅದು ಸಮ್ಮೇಳನದ ಮೂಲ ಆಶಯಕ್ಕೆ ಧಕ್ಕೆ ಬರುವ ಸಾಧ್ಯತೆಯಿದೆ. ಸಮ್ಮೇಳನವು ರಾಜಕೀಯ ಸಮಾವೇಶ, ಧಾರ್ಮಿಕ ಸಮಾವೇಶದ ಸ್ವರೂಪ ತಾಳುವ ಅಪಾಯವಿದೆ’ ಎಂದು ಸಾಹಿತಿಯೊಬ್ಬರು ಬೇಸರ ವ್ಯಕ್ತಪಡಿಸಿದರು.

ಇನ್ನೊಂದೆಡೆ ಕನ್ನಡ ಪರ ಹೋರಾಟಗಾರರು, ಮಠಾಧೀಶರು ಸೇರಿ ವಿವಿಧ ಕ್ಷೇತ್ರದವರು ‘ಕನ್ನಡ ನಾಡಿಗೆ ಸಾಹಿತ್ಯೇತರ ಕೊಡುಗೆ ನೀಡಿದವರನ್ನೂ ಸಮ್ಮೇಳನಾಧ್ಯಕ್ಷತೆಗೆ ಪರಿಗಣಿಸಬೇಕು’ ಎಂದು ಪರಿಷತ್ತಿಗೆ ಒತ್ತಾಯಿಸಿದ್ದಾರೆ. ‘ಪರಿಷತ್ತು ಸಾಹಿತಿಗಳದ್ದಷ್ಟೇ ಅಲ್ಲ, ಕನ್ನಡಿಗರ ಪರಿಷತ್ತು ಎಂಬುದನ್ನು ಗಮನದಲ್ಲಿಟ್ಟುಕೊಂಡು ಆಯ್ಕೆ ಮಾಡಬೇಕು’ ಎಂಬ ಆಗ್ರಹ ಅವರಿಂದ ವ್ಯಕ್ತವಾಗಿದೆ. ಈ ಮಧ್ಯೆ ಸಮ್ಮೇಳನಾಧ್ಯಕ್ಷತೆಗೆ ಲಾಬಿ ಹೆಚ್ಚಿದ್ದು, ಸಮ್ಮೇಳನಾಧ್ಯಕ್ಷರ ಆಯ್ಕೆ ಪರಿಷತ್ತಿಗೆ ಕಗ್ಗಂಟಾಗಿ ಪರಿಣಮಿಸಿದೆ.

‘ಸಮ್ಮೇಳನಾಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ಸಾಹಿತ್ಯ ಪರಿಷತ್ತಿಗೆ ಅನೇಕರು ಭೇಟಿ ನೀಡಿ, ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಠಾಧೀಶರು, ಕಲಾವಿದರು, ಕನ್ನಡ ಪರ ಹೋರಾಟಗಾರರು ಸೇರಿ ಬೇರೆ ಬೇರೆ ಕ್ಷೇತ್ರದವರು ಸಾಹಿತ್ಯೇತರರನ್ನು ಸಮ್ಮೇಳನಾಧ್ಯಕ್ಷತೆಗೆ ಪರಿಗಣಿಸಬೇಕೆಂದು ಮನವಿ ಮಾಡಿದ್ದಾರೆ. ಆದ್ದರಿಂದ ಸಾರ್ವಜನಿಕರ ಮುಂದೆ ಈ ವಿಚಾರವನ್ನು ಚರ್ಚೆಗೆ ಇಡಲಾಗಿದೆ. ಪ್ರಜಾಪ್ರಭುತ್ವದಲ್ಲಿ ಚರ್ಚೆ ನಡೆಯಬೇಕು. ಅಂತಿಮವಾಗಿ ಕಾರ್ಯಕಾರಿ ಸಮಿತಿಯಲ್ಲಿ ಯಾರನ್ನು ಆಯ್ಕೆ ಮಾಡಬೇಕೆಂದು ನಿರ್ಧರಿಸಲಾಗುತ್ತದೆ’ ಎನ್ನುತ್ತಾರೆ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ.

ಪ್ರಾರಂಭಿಕ ವರ್ಷಗಳಲ್ಲಿ ಸರ್ಕಾರದಲ್ಲಿ ಅತ್ಯುನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ, ನಿವೃತ್ತರಾದವರು, ಪ್ರಾಧ್ಯಾಪಕರು, ಎಂಜಿನಿಯರ್ಗಳು ಸೇರಿ ವಿವಿಧ ಪ್ರಮುಖ ವೃತ್ತಿಯಲ್ಲಿದ್ದವರು ಸಮ್ಮೇಳನಾಧ್ಯಕ್ಷರಾಗಿದ್ದರು. ಸಾಹಿತ್ಯಿಕ ಕೊಡುಗೆಗಳ ಜತೆಗೆ ನಾಡಿನ ಶ್ರೇಯೋಭಿವೃದ್ಧಿಗೆ ನೀಡಿದ ಕೊಡುಗೆಗಳೇ ಆಗ ಪ್ರಮುಖವಾಗಿತ್ತು.

3 ಸಾಹಿತ್ಯ ಸಮ್ಮೇಳನಾಧ್ಯಕ್ಷತೆ: 1915ರಿಂದ 1917ರ ಅವಧಿಯಲ್ಲಿ ನಡೆದ ಮೂರು ಸಾಹಿತ್ಯ ಸಮ್ಮೇಳನಾಧ್ಯಕ್ಷತೆಯನ್ನು ಎಚ್.ವಿ. ನಂಜುಂಡಯ್ಯ ಅವರೇ ವಹಿಸಿದ್ದರು. ಮೈಸೂರು ವಿಶ್ವವಿದ್ಯಾಲಯದ ಪ್ರಥಮ ಕುಲಪತಿಯಾಗಿಯೂ ಅವರು ಕಾರ್ಯನಿರ್ವಹಿಸಿದ್ದರು. ಮೈಸೂರು ಸರ್ಕಾರದಲ್ಲಿ ಗುಮಾಸ್ತರಾಗಿ ವೃತ್ತಿಯಾರಂಭಿಸಿದ್ದ ಅವರು, ಕಂದಾಯ ಇಲಾಖೆಯಲ್ಲಿ ಸಹಾಯಕ ಆಯುಕ್ತ ಸೇರಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ, ಮುಖ್ಯ ನ್ಯಾಯಾಧೀಶರಾಗಿ ನಿವೃತ್ತರಾಗಿದ್ದರು. ಇವರನ್ನು ಹೊರತುಪಡಿಸಿದರೆ ಬೇರಾರೂ ಒಂದಕ್ಕಿಂತ ಹೆಚ್ಚು ಬಾರಿ ಸಮ್ಮೇಳನಾಧ್ಯಕ್ಷರಾಗಿಲ್ಲ. ಪರಿಷತ್ತಿಗೆ ಸ್ವಂತ ಕಟ್ಟಡವನ್ನು ದೊರಕಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಕರ್ಪೂರ ಶ್ರೀನಿವಾಸರಾಯರು ವೃತ್ತಿಯಲ್ಲಿ ಎಂಜಿನಿಯರ್ ಆಗಿದ್ದರು. ಇವರು ಹಾಸನದಲ್ಲಿ ನಡೆದ ಐದನೇ ಸಮ್ಮೇಳನದ ಸಮ್ಮೇಳನಾಧ್ಯಕ್ಷತೆ ವಹಿಸಿದ್ದರು.

6ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷತೆ ವಹಿಸಿದ್ದ ರೊದ್ದ ಶ್ರೀನಿವಾಸರಾಯರು ಧಾರವಾಡದ ಟ್ರೈನಿಂಗ್ ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತರಾಗಿದ್ದರು. ನಂತರದ ಸಮ್ಮೇಳಾನಧ್ಯಕ್ಷತೆ ವಹಿಸಿದ್ದ ಕೆ.ಪಿ. ಪುಟ್ಟಣ್ಣ ಚೆಟ್ಟಿ ಅವರು ಮೈಸೂರು ಸರ್ಕಾರದಲ್ಲಿ ಉದ್ಯೋಗಿಯಾಗಿದ್ದರು. ಹೊಸಕೋಟೆ ಕೃಷ್ಣಶಾಸ್ತ್ರಿ ಅವರು ಕೇಂದ್ರ ಸರ್ಕಾರದ ಶಾಸನ ಇಲಾಖೆಯಲ್ಲಿ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿದ್ದರು. ಶಾಸನಕ್ಕೆ ಸಂಬಂಧಿಸಿದಂತೆ ಲೇಖನ, ಪ್ರಬಂಧಗಳನ್ನು ಅವರು ರಚಿಸಿದ್ದರು. ಶಾಸನ ಪ್ರಕಾರಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ, ಕೋಲಾರದಲ್ಲಿ ನಡೆದ 10ನೇ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿತ್ತು. ಮೊದಲ 14 ಸಾಹಿತ್ಯ ಸಮ್ಮೇಳನಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಕೊಡುಗೆ ನೀಡಿದವರಿಗೆ ಪ್ರಾತಿನಿಧ್ಯ ನೀಡಿದರೂ, ನಂತರದ ಸಮ್ಮೇಳನಗಳಲ್ಲಿ ಸಾಹಿತ್ಯಿಕ ಕೊಡುಗೆಯೇ ಪ್ರಥಮ ಆದ್ಯತೆಯಾಗಿತ್ತು.

‘ಸಾಹಿತ್ಯ ಪರಿಷತ್ತಿನ ಪರಂಪರೆಯೂ ಸಾಹಿತ್ಯೇತರರನ್ನು ಆಯ್ಕೆ ಮಾಡುವ ಕ್ರಮ ಒಪ್ಪುವುದಿಲ್ಲ. ಸಾಹಿತ್ಯೇತರರನ್ನು ಆಯ್ಕೆ ಮಾಡುವುದು ಸೂಕ್ತವೂ ಅಲ್ಲ. ನಮ್ಮ ಕಾರ್ಯಕಾರಿ ಸಮಿತಿ ಅವಧಿಯಲ್ಲಿಯೂ ಸಾಹಿತ್ಯೇತರರನ್ನು ಪರಿಗಣಿಸಬೇಕೆಂಬ ಮನವಿಗಳು ಬಂದಿದ್ದವು. ಆದರೆ, ಅದಕ್ಕೆ ಮಣೆ ಹಾಕಿರಲಿಲ್ಲ. ನಮ್ಮಲ್ಲಿ ಸಾಕಷ್ಟು ಸಾಹಿತಿಗಳಿದ್ದಾರೆ’ ಎಂದು ಕಸಾಪ ನಿಕಟಪೂರ್ವ ಅಧ್ಯಕ್ಷ ಮನು ಬಳಿಗಾರ್ ಹೇಳಿದರು.

ಸರ್ಕಾರಕ್ಕೆ ಸಡ್ಡು: ಶಿವಮೊಗ್ಗದಲ್ಲಿ ನಡೆದ 73ನೇ ಸಾಹಿತ್ಯ ಸಮ್ಮೇಳನವು ಸರ್ಕಾರ ಮತ್ತು ಪರಿಷತ್ತಿನ ನಡುವೆ ಸಂಘರ್ಷಕ್ಕೆ ಕಾರಣವಾಗಿತ್ತು. ಈ ಸಮ್ಮೇಳನದ ಸಮ್ಮೇಳನಾಧ್ಯಕ್ಷತೆಯನ್ನು ಕವಿ ಕೆ.ಎಸ್. ನಿಸಾರ್ ಅಹಮದ್ ವಹಿಸಿದ್ದರೆ, ಆಗ ಚಂದ್ರಶೇಖರ ಪಾಟೀಲ (ಚಂಪಾ) ಕಸಪಾ ಅಧ್ಯಕ್ಷರಾಗಿದ್ದರು. ಆ ವೇಳೆ ಮುಖ್ಯಮಂತ್ರಿಯಾದ್ದ ಎಚ್.ಡಿ. ಕುಮಾರಸ್ವಾಮಿ ಅವರನ್ನು ಸಾಹಿತ್ಯ ಸಮ್ಮೇಳನದ ಉದ್ಘಾಟನೆಗೆ ಆಹ್ವಾನಿಸದೆ, ತಮ್ಮ ಖಡಕ್ ನಿಲುವನ್ನು ಚಂಪಾ ಪ್ರದರ್ಶಿಸಿದ್ದರು.

‘ಸಮಾರೋಪಕ್ಕೆ ಅವರು ಬಂದು ನಮ್ಮ ಬೇಡಿಕೆಗೆ ಸ್ಪಂದಿಸಲಿ’ ಎಂಬುದು ಅವರ ನಿಲುವಾಗಿತ್ತು. ಆಗ ಉಪ ಮುಖ್ಯಮಂತ್ರಿ ಮತ್ತು ಹಣಕಾಸು ಸಚಿವರಾಗಿದ್ದವರು ಬಿ.ಎಸ್. ಯಡಿಯೂರಪ್ಪ. ಗೋಷ್ಠಿಯೊಂದಕ್ಕೆ ಎಡಪಂಥೀಯ ವಿಚಾರಧಾರೆಯ ಲೇಖಕರಾದ ಕಲ್ಕುಳಿ ವಿಠ್ಠಲ ಹೆಗಡೆ ಮತ್ತು ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಆಹ್ವಾನಿಸಿದ್ದನ್ನು ಬಲಪಂಥೀಯ ಸಂಘಟನೆಗಳು ವಿರೋಧಿಸಿದ್ದವು. ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿದ್ದ ಯಡಿಯೂರಪ್ಪ, ಆಗ ಸಚಿವರಾಗಿದ್ದ ಡಿ.ಎಚ್. ಶಂಕರಮೂರ್ತಿಯವರು, ಗೌರಿ ಮತ್ತು ಹೆಗಡೆಯವರನ್ನು ಕರೆದರೆ ತಾವು ಸಮ್ಮೇಳನದಿಂದ ದೂರ ಉಳಿಯುವುದಾಗಿ ಎಚ್ಚರಿಸಿದ್ದರು. ಆದರೆ, ಪರಿಷತ್ತಿನ ಅಧ್ಯಕ್ಷ ಚಂಪಾ ಅವರು ಅದಕ್ಕೆ ಸೊಪ್ಪು ಹಾಕದೇ, ನೀವು ಬರದೇ ಇದ್ದರೂ ಪರವಾಗಿಲ್ಲ ಎಂದು ಕುಟುಕಿದ್ದರು. ಸಾಹಿತ್ಯಕ್ಕೂ–ಪ್ರಭುತ್ವಕ್ಕೂ ಅಂತರ ಇರಬೇಕೆಂಬ ಒಲವಿದ್ದ ಚಂಪಾರವರು ಈ ವಿಷಯದಲ್ಲಿ ನಿಷ್ಠುರವಾಗಿಯೇ ನಡೆದುಕೊಂಡಿದ್ದರು.

ಸ್ವಾಯತ್ತ ಸಂಸ್ಥೆಯಾದ ಪರಿಷತ್ತಿನ ಅಧ್ಯಕ್ಷರು ಆಡಳಿತಾರೂಢ ಸರ್ಕಾರಗಳು ನಾಡು–ನುಡಿಯ ಹಿತಕ್ಕೆ ಮಾರಕವಾದ ನಿರ್ಣಯಗಳಗಳನ್ನು ಕೈಗೊಂಡಾಗಲೆಲ್ಲ ಖಂಡಿಸುತ್ತಲೇ ಬಂದಿದ್ದಾರೆ. ಅದೇ ರೀತಿ, ಸಮ್ಮೇಳನಾಧ್ಯಕ್ಷರಾದವರು ತಮ್ಮ ಭಾಷಣಗಳಲ್ಲಿ ಕನ್ನಡಿಗರಿಗೆ ಉದ್ಯೋಗ, ಕನ್ನಡ ಮಾಧ್ಯಮ ಶಿಕ್ಷಣದ ಬಗ್ಗೆ ಮಾತ್ರ ಪ್ರಸ್ತಾಪಿಸಿಲ್ಲ. ಚುನಾಯಿತ ಪ್ರತಿನಿಧಿಗಳ ಭ್ರಷ್ಟಾಚಾರ, ಗಣಿಗಾರಿಕೆ ಸೇರಿದಂತೆ ನಾಡಿಗೆ ಆತಂಕ ತಂದೊಡ್ಡಿರುವ ಸಂಗತಿಗಳ ಬಗ್ಗೆಯೂ ತಮ್ಮ ಭಾಷಣದಲ್ಲಿ ಚಾಟಿ ಬೀಸಿದ್ದೂ ಉಂಟು. ಕನ್ನಡ ನಾಡಿನ ಸೌಹಾರ್ದ ಪರಂಪರೆಯನ್ನು ಕೆಡಿಸುವ ಶಕ್ತಿಗಳ ವಿರುದ್ಧವೂ ಕಾಲಕಾಲಕ್ಕೆ ಧ್ವನಿ ಎತ್ತಿದ್ದಾರೆ. ಆಳುವ ಸರ್ಕಾರಗಳ ಕಿವಿಯನ್ನು ಹಿಂಡಲು ಅಂಜಿಕೆ ತೋರಿದ್ದಿಲ್ಲ. ಸಾಹಿತ್ಯ ಜನಮಾನಸದ ಧ್ವನಿಯಾಗಿದ್ದು, ಪ್ರಭುತ್ವದ ಕೇಡುಗಳನ್ನು ವಿಮರ್ಶಿಸಿ ಜನರಿಗೆ ಒಳಿತು ಮಾಡಬೇಕೆಂಬ ಹಂಬಲ ಸಾಹಿತ್ಯ ಸೃಷ್ಟಿಯಾಗಲಾರಂಭಿಸಿದ ದಿನದಿಂದಲೂ ಇದೆ. ಅದೇ ಪರಂಪರೆಯನ್ನು ಪರಿಷತ್ತು ಮುಂದುವರಿಸಿಕೊಂಡು ಬಂದಿದೆ. ಸಾಹಿತ್ಯೇತರ ಕ್ಷೇತ್ರದವರು ಬಂದರೆ, ಇದು ರಾಜಕಾರಣಿಗಳ, ಮಠಾಧೀಶರ ಹೊಗಳಿಕೆಗೆ ವೇದಿಕೆಯಾಗುತ್ತದೆ ವಿನಃ ಜನರ ಧ್ವನಿಯಾಗದು ಎಂಬ ಚರ್ಚೆಯೂ ಸಾಹಿತ್ಯವಲಯದಲ್ಲಿ ನಡೆದಿದೆ.

‘ವಿಜ್ಞಾನ ಕ್ಷೇತ್ರದಲ್ಲಿ ವಿಜ್ಞಾನ ಸಮ್ಮೇಳನಗಳು ನಡೆಯುತ್ತವೆ. ಎಂಜಿನಿಯರಿಂಗ್, ವೈದ್ಯಕೀಯ ಸೇರಿ ವಿವಿಧ ಕ್ಷೇತ್ರಗಳಿಗೆ ಅವರದೇ ಆದ ವೇದಿಕೆಗಳಿವೆ. ಸಾಹಿತಿಗಳಾದರೆ ಸಮ್ಮೇಳನದ ಆಶಯ ಸಾಕಾರವಾಗಲಿದೆ. ಘನತೆಯೂ ಹೆಚ್ಚಲಿದೆ. ಸಾಹಿತ್ಯದ ಪರಿಚಯ ಇಲ್ಲದವರು ಸಮ್ಮೇಳನಾಧ್ಯಕ್ಷರಾದರೆ ಗೋಷ್ಠಿಗಳೂ ಗಾಂಭೀರ್ಯತೆ ಕಳೆದುಕೊಳ್ಳಲಿದೆ’ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷ ಬಿ.ವಿ.ವಸಂತಕುಮಾರ್ ಕಳವಳ ವ್ಯಕ್ತಪಡಿಸಿದರು.

ಸಮ್ಮೇಳನದ ಹಿರಿಮೆ ಹೆಚ್ಚಳ: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ಸಾಹಿತ್ಯ ಕ್ಷೇತ್ರಕ್ಕೆ ಅಚ್ಚಳಿಯದ ಕೊಡುಗೆ ನೀಡಿದವರು ಈವರೆಗೆ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ ವಹಿಸಿದ್ದರೆ. ಪ್ರಮುಖವಾಗಿ ಬಿ.ಎಂ. ಶ್ರೀಕಂಠಯ್ಯ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಆಲೂರು ವೆಂಕಟರಾಯ, ಡಿ.ವಿ. ಗುಂಡಪ್ಪ, ಪಂಜೆ ಮಂಗೇಶರಾಯ, ದ.ರಾ. ಬೇಂದ್ರೆ, ಟಿ.ಪಿ. ಕೈಲಾಸಂ, ತಿ.ತಾ. ಶರ್ಮ, ಗೋವಿಂದ ಪೈ, ಶಿವರಾಮ ಕಾರಂತ, ಕುವೆಂಪು, ವಿ.ಕೃ. ಗೋಕಾಕ್, ಅ.ನ. ಕೃಷ್ಣರಾಯ, ಜಯದೇವಿತಾಯಿ ಲಿಗಾಡೆ, ಜಿ.ಪಿ. ರಾಜರತ್ನಂ, ಗೊರೂರು ರಾಮಸ್ವಾಮಿ ಅಯ್ಯಂಗಾರ್, ಕೆ.ಎಸ್. ನರಸಿಂಹಸ್ವಾಮಿ, ಜಿ.ಎಸ್. ಶಿವರುದ್ರಪ್ಪ, ಚೆನ್ನವೀರ ಕಣವಿ, ಎಸ್.ಎಲ್. ಭೈರಪ್ಪ, ಯು.ಆರ್. ಅನಂತಮೂರ್ತಿ, ಕಮಲಾ ಹಂಪನಾ, ನಿಸಾರ್ ಅಹಮದ್, ಗೀತಾ ನಾಗಭೂಷಣ, ಸಿದ್ದಲಿಂಗಯ್ಯ, ಬರಗೂರು ರಾಮಚಂದ್ರಪ್ಪ, ಚಂಪಾ, ಚಂದ್ರಶೇಖರ ಕಂಬಾರ, ಎಚ್.ಎಸ್. ವೆಂಕಟೇಶಮೂರ್ತಿ, ದೊಡ್ಡರಂಗೇಗೌಡ ಒಳಗೊಂಡಂತೆ ಸಾಹಿತ್ಯ ಕ್ಷೇತ್ರದ ಖ್ಯಾತ ನಾಮರು ಸಮ್ಮೇಳನಾಧ್ಯಕ್ಷರಾಗಿದ್ದರು.

ಈಗ ಸಾಹಿತ್ಯೇತರರು ಈ ಸ್ಥಾನವನ್ನು ಅಲಂಕರಿಸಿದರೆ ಪರಂಪರೆಗೆ ಧಕ್ಕೆ ಬರುವ ಜತೆಗೆ ಸಾಹಿತ್ಯ ಸಮ್ಮೇಳನ ಪ್ರಾಮುಖ್ಯತೆ ಕಳೆದುಕೊಂಡು, ರಾಜಕೀಯ, ಧಾರ್ಮಿಕ ಸೇರಿ ವಿವಿಧ ಸಮಾವೇಶಗಳ ಸ್ವರೂಪ ತಾಳುವ ಕಳವಳ ಸಾಹಿತ್ಯ ವಲಯದಲ್ಲಿದೆ. ಪರಿಷತ್ತಿನ ಕಾರ್ಯಕಾರಿ ಸಮಿತಿಯು ಸಮ್ಮೇಳನದ ಪರಂಪರೆಯನ್ನು ಮುಂದುವರೆಸುತ್ತದೆಯೋ ಅಥವಾ ಹೊಸ ಪದ್ಧತಿಗೆ ನಾಂದಿ ಹಾಡಲಿದೆಯೇ ಎನ್ನುವ ಪ್ರಶ್ನೆಗಳಿಗೆ ಸದ್ಯವೇ ನಡೆಯಲಿರುವ ಸಮ್ಮೇಳನಾಧ್ಯಕ್ಷರ ಆಯ್ಕೆಯೇ ಉತ್ತರ ಒದಗಿಸಲಿದೆ.

ಸಾಹಿತ್ಯೇತರ ಹೆಸರುಗಳೂ ಶಿಫಾರಸು

ಡಿಸೆಂಬರ್ 20, 21 ಹಾಗೂ 22ರಂದು ಮಂಡ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಸಮ್ಮೇಳನಕ್ಕೆ ಸಂಬಂಧಿಸಿದಂತೆ ಈಗಾಗಲೇ 28 ಸಮಿತಿಗಳು ರಚನೆಯಾಗಿವೆ. ಸಮ್ಮೇಳನದ ಭಾಗವಾಗಿ ಕನ್ನಡ ಜ್ಯೋತಿ ರಥ ಸಂಚಾರಕ್ಕೆ ಸೆಪ್ಟೆಂಬರ್ ತಿಂಗಳಲ್ಲಿಯೇ ಚಾಲನೆ ನೀಡಲಾಗಿದ್ದು, ಈ ರಥವು ಸತತವಾಗಿ 87 ದಿನಗಳ ಕಾಲ ರಾಜ್ಯದ 31 ಜಿಲ್ಲೆಗಳಲ್ಲೂ ಸಂಚರಿಸಲಿದೆ. ಈ ಬಾರಿ ಸಮ್ಮೇಳನಾಧ್ಯಕ್ಷತೆಗೆ ಸಾಹಿತ್ಯೇತರರಿಂದಲೂ ಲಾಬಿ ಹೆಚ್ಚಿದೆ.

ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಸೇರಿ ವಿವಿಧ ರಾಜಕಾರಣಿಗಳು, ನಿರ್ಮಲಾನಂದನಾಥ ಸ್ವಾಮೀಜಿ, ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಸೇರಿ ವಿವಿಧ ಮಠಾಧೀಶರು, ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ, ಮಾಜಿ ಕ್ರಿಕೆಟಿಗ ಜಿ.ಆರ್. ವಿಶ್ವನಾಥ್, ಕ್ರೀಡಾಪಟು ಮಾಲತಿ ಹೊಳ್ಳ ಸೇರಿ ಹಲವು ಸಾಹಿತ್ಯೇತರರ ಹೆಸರು ಸಮ್ಮೇಳನಾಧ್ಯಕ್ಷ ತೆಗೆ ಶಿಫಾರಸುಗೊಂಡಿವೆ.

‘ಪ್ರಜಾಪ್ರಭುತ್ವದಲ್ಲಿ ಚರ್ಚೆ ಸ್ವಾಗತಾರ್ಹ’

ದೇ.ಜವರೇಗೌಡ, ಆರ್.ಸಿ. ಹಿರೇಮಠ ಸೇರಿ ಮೊದಲಾದವರ ಆಯ್ಕೆಗೆ ಸಂಬಂಧಿಸಿದಂತೆಯೂ ಹಿಂದೆ ವಿವಾದಗಳಾಗಿದ್ದವು. ಸಮ್ಮೇಳನಾಧ್ಯಕ್ಷತೆಯ ವಿವಾದ ಹೊಸದಲ್ಲ. ಬೇರೆ ಬೇರೆ ಕ್ಷೇತ್ರದವರು ತಮ್ಮ ಕ್ಷೇತ್ರವನ್ನೂ ಸಮ್ಮೇಳನಾಧ್ಯಕ್ಷತೆಗೆ ಪರಿಗಣಿಸಿ ಎಂದು ಮನವಿ ಮಾಡಿದ್ದಾರೆ. ಲಿಖಿತವಾಗಿಯೂ ಕೆಲವರ ಹೆಸರನ್ನು ಶಿಫಾರಸು ಮಾಡಿದ್ದಾರೆ. ಸಾಹಿತ್ಯ ಪರಿಷತ್ತು ಪ್ರಜಾಪ್ರಭುತ್ವದಡಿ ಕಾರ್ಯನಿರ್ವಹಿಸುತ್ತಿದೆ. ಆದ್ದರಿಂದ ಚರ್ಚೆಗೆ ಅವಕಾಶ ನೀಡಲಾಗಿದೆ. ಸಾರ್ವಜನಿಕ ಅಭಿಪ್ರಾಯ ಆಧರಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ. ‘ಕನ್ನಡಕ್ಕಾಗಿ ಪೊಲೀಸರಿಂದ ಒದೆ ತಿಂದಿದ್ದು, ನಮ್ಮದು ಕನ್ನಡ ಸೇವೆಯಲ್ಲವೇ’ ಎಂದು ಕನ್ನಡ ಪರ ಹೋರಾಟಗಾರರು ಪ್ರಶ್ನಿಸಿದ್ದಾರೆ. ಸಮ್ಮೇಳನಾಧ್ಯಕ್ಷತೆಯ ಬಗ್ಗೆ ಕಾರ್ಯಕಾರಿ ಸಮಿತಿಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ. ಸ್ವಾಯತ್ತತೆ ಉಳಿಸಿಕೊಂಡು ಮುನ್ನಡೆಯುತ್ತೇವೆ.

–ಮಹೇಶ ಜೋಶಿ, ಕಸಾಪ ಅಧ್ಯಕ್ಷ

‘ಪರಂಪರೆ ಮುಂದುವರಿಸಲಿ’

ಸಾಹಿತ್ಯ ಕ್ಷೇತ್ರದಲ್ಲಿ ಕೆಲಸ ಮಾಡಿದ ಹಿರಿಯರು, ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡುವುದು ಈವರೆಗೆ ನಡೆದುಕೊಂಡು ಬಂದ ಪರಂಪರೆ. ಇದು ಸಾಹಿತ್ಯ ಪರಿಷತ್ತಿನ ಸ್ವಭಾವಕ್ಕೂ ಸೂಕ್ತ. ವಿಶ್ವ ಕನ್ನಡ ಸಮ್ಮೇಳನದಲ್ಲಿ ಒಟ್ಟಾರೆ ಕನ್ನಡಕ್ಕೆ ಕೊಡುಗೆ ನೀಡಿದವರನ್ನು ಆಯ್ಕೆ ಮಾಡಬಹುದು. ಸ್ವಾಯತ್ತ ಸಂಸ್ಥೆಯಾದ ಪರಿಷತ್ತು ರಾಜಕೀಯ ಹಸ್ತಕ್ಷೇಪದಿಂದ ದೂರ ಇರಬೇಕು. ಸಾಹಿತ್ಯ ಕ್ಷೇತ್ರದಲ್ಲಿಯೇ ಹಲವಾರು ಸಾಧಕರಿದ್ದಾರೆ. ಅಂತಹವರ ಹೆಸರು ಸಾಹಿತ್ಯ ಪರಿಷತ್ತಿನ ಬಳಿ ಇರದಿದ್ದರೆ ನಾವು ಕೊಡಲು ಸಿದ್ಧರಿದ್ದೇವೆ. ಕನ್ನಡ ನಾಡು–ನುಡಿಗೆ ಸಾಹಿತ್ಯೇತರರು ನೀಡಿದ ಕೊಡುಗೆಯ ಬಗ್ಗೆ ಅಭಿಮಾನವಿದ್ದಲ್ಲಿ ಸಾಹಿತ್ಯ ಸಮ್ಮೇಳನಕ್ಕೆ ಆಹ್ವಾನಿಸಿ, ಗೌರವಿಸಲಿ. ಅವರಿಗೆ ಸರ್ವಾಧ್ಯಕ್ಷತೆ ನೀಡುವುದು ಸೂಕ್ತವಲ್ಲ.

–ಬಂಜಗೆರೆ ಜಯಪ್ರಕಾಶ್, ಸಾಹಿತಿ

‘ಸಾಹಿತಿಗಳಿಗೆ ಮೀಸಲು ಉತ್ತಮ’

ಸಾಹಿತ್ಯ ಪರಿಷತ್ತಿನ ಆಶಯಕ್ಕೆ ಅನುಗುಣವಾಗಿ ಸಮ್ಮೇಳನಾಧ್ಯಕ್ಷರನ್ನು ಆಯ್ಕೆ ಮಾಡಬೇಕು. ನಾಡಿನಲ್ಲಿ ಹಲವಾರು ಸಾಹಿತಿಗಳಿದ್ದು, ಅವರನ್ನೇ ಸಮ್ಮೇಳನಾಧ್ಯಕ್ಷರನ್ನಾಗಿ ಮಾಡಬೇಕು. ಸಾಹಿತಿಗಳು ನಾಡಿನ ಸಾಕ್ಷಿ ಪ್ರಜ್ಞೆ. ಅವರೆ ಸಮ್ಮೇಳನಾಧ್ಯಕ್ಷತೆ ವಹಿಸುವುದು ಉತ್ತಮ. ವಿವಿಧ ಕ್ಷೇತ್ರಗಳ ಸಾಧಕರಿಗೆ ಬೇರೆ ವೇದಿಕೆಗಳಲ್ಲಿ ಅವಕಾಶಗಳಿವೆ. ಸಾಹಿತ್ಯೇತರರನ್ನು ಆಯ್ಕೆ ಮಾಡಿದರೆ ಹಣ ಉಳ್ಳವರು, ಅಧಿಕಾರದ ಬಲ ಹೊಂದಿರುವವರು ಈ ಸ್ಥಾನ ಏರುವ ಅಪಾಯವಿದೆ.

–ಬಿ.ವಿ.ವಸಂತಕುಮಾರ್, ಕರ್ನಾಟಕ ಸಾಹಿತ್ಯ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷ

‘ಸಾಕಷ್ಟು ಅರ್ಹ ಸಾಹಿತಿಗಳಿದ್ದಾರೆ’

ಸಾಹಿತ್ಯ ಸಮ್ಮೇಳನಾಧ್ಯಕ್ಷತೆಯನ್ನು ಸಾಹಿತಿಗಳಿಗೆ ಮೀಸಲಿಡಬೇಕು. ಸಾಹಿತಿಗಳು ಸಿಗದಿದ್ದಾಗ ಸಾಹಿತ್ಯೇತರರನ್ನು ಪರಿಗಣಿಸಬಹುದು. ಸಮ್ಮೇಳನಾಧ್ಯಕ್ಷತೆ ವಹಿಸಿಕೊಳ್ಳಲು ನಮ್ಮಲ್ಲಿ ಸಾಕಷ್ಟು ಅರ್ಹ ಸಾಹಿತಿಗಳು ಇದ್ದಾರೆ. ಸಾಹಿತ್ಯೇತರರನ್ನು ಆಯ್ಕೆಗೆ ಪರಿಗಣಿಸುವುದು ಸರಿಯಲ್ಲ. ಸಾಹಿತ್ಯ ಕೃತಿಗಳನ್ನು ರಚಿಸಿ, ಬೇರೆ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರನ್ನು ಆಯ್ಕೆ ಮಾಡಿದರೆ ಅಭ್ಯಂತರವಿಲ್ಲ. ವಿಜ್ಞಾನಿಗಳು, ರಾಜಕಾರಣಿಗಳು, ಕ್ರೀಡಾಪಟುಗಳು, ರೈತರು ಸೇರಿ ವಿವಿಧ ವೃತ್ತಿಯಲ್ಲಿರುವವರನ್ನು ಗುರುತಿಸಿ, ಗೌರವಿಸಲು ಹಲವು ವೇದಿಕೆಗಳಿವೆ.

–ಮನು ಬಳಿಗಾರ್, ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ

‘ಹೊಸ ಪರಂಪರೆಗೆ ನಾಂದಿ ಹಾಡಲಿ’

ಕನ್ನಡ ಸಾಹಿತ್ಯ ಸಮ್ಮೇಳನವಾದ್ದರಿಂದ ನಾಡು–ನುಡಿಗೆ ಕೊಡುಗೆ ನೀಡಿದ ವಿವಿಧ ಕ್ಷೇತ್ರದವರು ಸಮ್ಮೇಳನಾಧ್ಯಕ್ಷರಾಗುವುದರಲ್ಲಿ ತಪ್ಪಿಲ್ಲ. ಪ್ರಾರಂಭಿಕ ವರ್ಷಗಳಲ್ಲಿ ಬೇರೆ ಬೇರೆ ಕ್ಷೇತ್ರದವರು ಆಯ್ಕೆಯಾಗಿದ್ದರು. ಆದ್ದರಿಂದ ಎಲ್ಲ ಕ್ಷೇತ್ರದವರನ್ನು ಒಳಗೊಂಡು, ಸಾಹಿತ್ಯೇತರ ಕ್ಷೇತ್ರದವರನ್ನೂ ಸಮ್ಮೇಳನಾಧ್ಯಕ್ಷತೆಗೆ ಪರಿಗಣಿಸಲಿ. ಹೊಸ ಪರಂಪರೆಗೆ ನಾಂದಿ ಹಾಡಲಿ. ಕುಬ್ಜವಾಗಿ ನೋಡುವ ದಿನಗಳು ಹೊರಟು ಹೋಗಿವೆ. ನಾವು ವಿಶಾಲವಾಗಿ ನೋಡಬೇಕು. ನಾಡು–ನುಡಿಗೆ ಶ್ರಮಿಸಿದವರನ್ನು ಆಯ್ಕೆ ಮಾಡುವುದಕ್ಕೆ ಆಕ್ಷೇಪವಿಲ್ಲ. ವಿಜ್ಞಾನ ಸೇರಿ ವಿವಿಧ ಕ್ಷೇತ್ರಗಳಲ್ಲಿ ಕೊಡುಗೆ ನೀಡಿದ ಕನ್ನಡಿಗರನ್ನು ಪರಿಗಣಿಸಲಿ. ಸಾಹಿತಿಯೇ ಸಮ್ಮೇಳನಾಧ್ಯಕ್ಷತೆ ವಹಿಸಬೇಕೆಂಬ ವರ್ಗೀಕರಣ ತಪ್ಪು.

–ದೊಡ್ಡರಂಗೇಗೌಡ, ಸಾಹಿತಿ

‘ಕಲ್ಮಶಗಳು ಬಂದು ಸೇರುವ ಸಾಧ್ಯತೆ’

ಕನ್ನಡ ಜಗತ್ತಿಗೆ ಅಸಾಧಾರಣ ಸೇವೆ ಸಲ್ಲಿಸಿದವರು ಸಮ್ಮೇಳನಾಧ್ಯಕ್ಷತೆ ವಹಿಸುವುದಕ್ಕೆ ಆಕ್ಷೇಪವಿಲ್ಲ. ಆದರೆ, ರಾಜಕಾರಣಿಗಳು, ಮಠಾಧೀಶರು ಯಾವುದೇ ಕಾರಣಕ್ಕೂ ಸಮ್ಮೇಳನಾಧ್ಯಕ್ಷರಾಗಬಾರದು. ಇಷ್ಟು ವರ್ಷಗಳಲ್ಲಿ ಕೇವಲ ನಾಲ್ವರು ಮಹಿಳೆಯರು ಸಮ್ಮೇಳನಾಧ್ಯಕ್ಷರಾಗಿದ್ದಾರೆ. ತೋರಿಕೆಯ ಸಾಮಾಜಿಕ ನ್ಯಾಯದ, ಒಳ ಹುನ್ನಾರದ ಆಯ್ಕೆಗಳಾಗುತ್ತಿವೆ. ಸಾಹಿತ್ಯ ಸಮ್ಮೇಳನಾಧ್ಯಕ್ಷತೆ ತೆರೆದ ಬಾಗಿಲಾದರೆ ಕಲ್ಮಶಗಳು ಬಂದು ಸೇರುವ ಸಾಧ್ಯತೆಗಳಿವೆ. ಈಗಿನ ಪರಿಸ್ಥಿತಿಯಲ್ಲಿ ಸಾಹಿತ್ಯೇತರರು ಎಂದರೇ ಆತಂಕ ಪಡುವ ಸ್ಥಿತಿ ನಿರ್ಮಾಣವಾಗಿದೆ. ಸಾಹಿತಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದು, ಹಿಂದಿನ ಬೆಂಚಿನಲ್ಲಿ ಕುಳಿತಿದ್ದಾರೆ. ಶುದ್ಧ ಸಾಹಿತ್ಯ ಸಮ್ಮೇಳನಕ್ಕೆ ರಾಜಕಾರಣಿಗಳ ಅಗತ್ಯವಿಲ್ಲ.

–ಎಂ.ಎಸ್. ಆಶಾದೇವಿ, ಲೇಖಕಿ

‘ವೈರುಧ್ಯ ಎದುರಿಸಬೇಕಾಗುತ್ತದೆ’

ಸಾಹಿತ್ಯ ಕ್ಷೇತ್ರದಲ್ಲಿ ಕೆಲಸ ಮಾಡಿದವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಮಾಡಬೇಕು. ಕರ್ನಾಟಕ ಸಮಾವೇಶ, ಕರ್ನಾಟಕ ಸಮ್ಮೇಳನ ನಡೆಸಿದರೆ ಕರ್ನಾಟಕದ ಅಭಿವೃದ್ಧಿ ಸೇರಿ ವಿವಿಧ ಕ್ಷೇತ್ರಗಳಿಗೆ ಕೊಡುಗೆ ನೀಡಿದವರನ್ನು ಗುರುತಿಸಿ, ಗೌರವಿಸಬಹುದು. ಕರ್ನಾಟಕ ಸಮಾವೇಶವು ಕನ್ನಡ ಸಾಹಿತ್ಯ ಸಮ್ಮೇಳನಕ್ಕಿಂತ ಹೆಚ್ಚು ಉಪಯೋಗಕಾರಿ. ಸಾಹಿತ್ಯ ಸಮ್ಮೇಳನ ಎಂದು ಹೆಸರಿಟ್ಟುಕೊಂಡು ಕ್ರೀಡಾಪಟು ಸೇರಿ ವಿವಿಧ ಸಾಧಕರನ್ನು ಆಯ್ಕೆ ಮಾಡಿದರೆ ವೈರುಧ್ಯಗಳನ್ನು ಎದುರಿಸಿಕೊಳ್ಳಬೇಕಾಗುತ್ತದೆ. ಸಾಹಿತ್ಯ ಪರಿಷತ್ತು ಹುಟ್ಟಿಕೊಂಡಿದ್ದು ಕನ್ನಡ ಸಾಹಿತ್ಯ ಮತ್ತು ಭಾಷೆಯ ಅಭಿವೃದ್ಧಿಗೆ. ಆದ್ದರಿಂದ ಸಾಹಿತಿಗಳೇ ಸಮ್ಮೇಳನಾಧ್ಯಕ್ಷರಾಗುತ್ತಿದ್ದಾರೆ. ಅದೇ ಪರಂಪರೆ ಮುಂದುವರಿಸಬೆಕು.

–ಪುರುಷೋತ್ತಮ ಬಿಳಿಮಲೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ

‘ಸಾಹಿತ್ಯ, ಸಾಹಿತಿಯೇ ಕೇಂದ್ರ’

ಸಾಹಿತ್ಯ ಸಮ್ಮೇಳನವನ್ನು ಆಯೋಜಿಸುತ್ತಿರುವುದು ಕನ್ನಡ ಸಾಹಿತ್ಯ ಪರಿಷತ್ತೇ ಹೊರತು, ಕನ್ನಡ ಸಂಘವಲ್ಲ. ಕನ್ನಡ ಸಂಘವಾದರೆ ಎಲ್ಲ ಸಾಂಸ್ಕೃತಿಕ ಚಟುವಟಿಕೆ ಒಳಗೊಂಡು ಸಮ್ಮೇಳನ ನಡೆಸಬಹುದಾಗಿತ್ತು. ಕನ್ನಡ ಸಾಹಿತ್ಯ ಪರಿಷತ್ತು ಸಮ್ಮೇಳನ ನಡೆಸುತ್ತಿರುವುದರಿಂದ ಕನ್ನಡದಷ್ಟೇ ಸಾಹಿತ್ಯವೂ ಮುಖ್ಯ. ಆದ್ದರಿಂದ ಸಾಹಿತ್ಯೇತರ ಎಂಬ ಪ್ರಸಂಗವೇ ಬರುವುದಿಲ್ಲ. ನಾಡಿಗೆ ಕನಸು ನೀಡುವವರು, ಸಮಾಜದ ಸ್ವಾಸ್ಥ್ಯ ಸರಿಪಡಿಸುವವರು ಸಾಹಿತಿಗಳು. ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯ, ಸಾಹಿತಿಯೇ ಕೇಂದ್ರಬಿಂದು. ಸಾಹಿತಿಗಳನ್ನೇ ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕು. ಸಾಹಿತ್ಯೇತರರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಆಲೋಚನೆಯೇ ತಪ್ಪು.

–ಹೇಮಾ ಪಟ್ಟಣಶೆಟ್ಟಿ, ಲೇಖಕಿ

‘ಸಾಹಿತ್ಯಿಕ ಕೊಡುಗೆ ಮುಖ್ಯ’

ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದರೂ ಅದರ ಆದ್ಯತೆ ಸಾಹಿತ್ಯ. ಬೇರೆ ಕ್ಷೇತ್ರಗಳ ಮೂಲಕ ನಾಡಿಗೆ ಕೊಡುಗೆ ನೀಡಿದರೂ, ಸ್ವಲ್ಪವಾದರೂ ಸಾಹಿತ್ಯಿಕ ಕೆಲಸ ಮಾಡಿದವರನ್ನೇ ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕು. ಪಾಟೀಲ ಪುಟ್ಟಪ್ಪ ಮೊದಲಾದವರು ಸಾಹಿತಿಯಲ್ಲದಿದ್ದರೂ ಪತ್ರಕರ್ತರಾಗಿ, ಬರಹಗಾರರಾಗಿ ಸಾಹಿತ್ಯಿಕ ಕೊಡುಗೆ ನೀಡಿದ್ದರು. ಸಾಹಿತ್ಯೇತರರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಮಾಡುವುದು ಸರಿಯಲ್ಲ. ಸಾಹಿತ್ಯ, ಸಂಸ್ಕೃತಿ ಮತ್ತು ಕನ್ನಡದ ಜಾಗೃತಿಗೆ ಕೆಲಸ ಮಾಡಿದವರು ಸಮ್ಮೇಳನಾಧ್ಯಕ್ಷರಾಗುವುದು ಸೂಕ್ತ.

-ರಾ.ನಂ. ಚಂದ್ರಶೇಖರ, ಕನ್ನಡ ಪರ ಹೋರಾಟಗಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.