ಭಾನುವಾರ, 7 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜಿ ಸಂಧಾನದಲ್ಲಿ ಪ್ರಕರಣ ಇತ್ಯರ್ಥದಿಂದ ನೆಮ್ಮದಿ: ನ್ಯಾಯಾಧೀಶ ಪ್ರವೀಣ್‍ಕುಮಾರ್

2ನೇ ಜಿಲ್ಲಾ ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶ ಪ್ರವೀಣ್‍ಕುಮಾರ್
Published 4 ಜುಲೈ 2024, 14:38 IST
Last Updated 4 ಜುಲೈ 2024, 14:38 IST
ಅಕ್ಷರ ಗಾತ್ರ

ಹೊನ್ನಾಳಿ: ಲೋಕ ಅದಾಲತ್‌ನಲ್ಲಿ ವಿವಿಧ ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥವಾಗುವುದರಿಂದ ನೆಮ್ಮದಿ ಸಿಗಲಿದೆ ಎಂದು ದಾವಣಗೆರೆ 2ನೇ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶರಾದ ಪ್ರವೀಣ್‍ಕುಮಾರ್ ತಿಳಿಸಿದರು.

ಜುಲೈ 13ರಂದು ಹೊನ್ನಾಳಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಲೋಕ ಅದಾಲತ್ ಪ್ರಯುಕ್ತ ನ್ಯಾಯಾಲಯದ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಕಕ್ಷಿದಾರರ ಕ್ಷೇಮಕ್ಕಾಗಿ ಲೋಕ ಅದಾಲತ್ ಹಮ್ಮಿಕೊಂಡಿದ್ದು ಹಳೆಯ ಹಾಗೂ ಹೊಸ ಪ್ರಕರಣಗಳ ಎಲ್ಲಾ ಕಕ್ಷಿದಾರರು ಭಾಗವಹಿಸಿ ತಮ್ಮ ಪ್ರಕರಣಗಳ ಕುರಿತು ಚರ್ಚಿಸಿ, ಸಂಧಾನ ಮಾಡಿಕೊಂಡು ಸಂತೋಷದಿಂದ ಜೀವನ ಸಾಗಿಸಬೇಕು ಎಂದು ಹೇಳಿದರು.

ಮನುಷ್ಯನ ಬದುಕಿನಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳಿಂದ ವ್ಯಾಜ್ಯಗಳು ಸಂಭವಿಸುವುದು ಸಹಜ. ಸಣ್ಣ ಅವಘಡಗಳನ್ನು ದೊಡ್ಡದು ಮಾಡದೆ ಲೋಕ ಅದಾಲತ್‍ನಲ್ಲಿ ಇತ್ಯರ್ಥ ಮಾಡಿಕೊಂಡು ಸುಖ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.

ಪ್ರತಿಯೊಬ್ಬ ವ್ಯಕ್ತಿಗೆ ಬದುಕು ಸಾಗಿಸಲು ಶಾಂತಿ, ನೆಮ್ಮದಿ ಅವಶ್ಯಕ. ಯಾವುದೇ ವಿಧವಾದ ವ್ಯಾಜ್ಯಗಳು, ಜಗಳಗಳು ಇರಬಾರದು. ಇದ್ದರೂ ಎಲ್ಲಾ ಸಮಸ್ಯೆಗಳನ್ನು ಇತ್ಯರ್ಥ ಮಾಡಿಕೊಂಡು ಬದುಕನ್ನು ಕಟ್ಟಿಕೊಳ್ಳಬೇಕು. ಕೋರ್ಟ್‍ಗೆ ಹೋದರೂ ಕೆಲ ಜಟಿಲ ವ್ಯಾಜ್ಯಗಳು ಇತ್ಯರ್ಥವಾಗದೇ ಇದ್ದಾಗ ಲೋಕ ಅದಾಲತ್‍ನಲ್ಲಿ ಬಗೆಹರಿಸಿಕೊಳ್ಳುವುದು ಸೂಕ್ತ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಎಂ. ಕರೆಣ್ಣವರ ತಿಳಿಸಿದರು.

ಈ ಹಿಂದೆ ಗ್ರಾಮಗಳ ಪಂಚಮರು ಯಾವುದೇ ಪ್ರಕರಣ ಬಂದರೂ ಪಂಚಾಯಿತಿ ಕಟ್ಟೆಯಲ್ಲಿ ಇತ್ಯರ್ಥಗೊಳಿಸುತ್ತಿದ್ದರು. ಈಗ ಪರಿಸ್ಥಿತಿ ಬದಲಾಗಿದ್ದು ಪಟ್ಟಣ, ನಗರ ಪ್ರದೇಶಗಳಂತೆ ಗ್ರಾಮಾಂತರ ಜನರೂ ನ್ಯಾಯಾಲಯದ ಮೊರೆ ಹೋಗುತ್ತಿದ್ದಾರೆ. ಸೌಹಾರ್ದಯುತವಾಗಿ ಲೋಕ ಅದಾಲತ್ ಮೂಲಕ ಪ್ರಕರಣ ಇತ್ಯರ್ಥ ಮಾಡಿಕೊಳ್ಳಲು ಅವಕಾಶ ಇದೆ ಎಂದರು.

ವಕೀಲರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಪಿ.ಜಯಪ್ಪ ಅಧ್ಯಕ್ಷತೆ ವಹಿಸಿದ್ದರು. ಹೊನ್ನಾಳಿ ಮತ್ತು ಹರಿಹರ ತಾಲ್ಲೂಕಿನ ಹಿರಿಯ ಶ್ರೇಣಿಯ ನ್ಯಾಯಾಧೀಶರಾದ ಪದ್ಮಶ್ರೀ ಮನೋಳಿ, ಹೊನ್ನಾಳಿ ಸಿವಿಲ್ ನ್ಯಾಯಾಧೀಶರಾದ ಎಚ್. ದೇವದಾಸ, ಹೆಚ್ಚುವರಿ ನ್ಯಾಯಾಧೀಶರಾದ ಪುಣ್ಯಕೋಟಿ, ಎಪಿಪಿ ಭರತ್‍ ಭೀಮಯ್ಯ, ಸಂಘದ ಕಾರ್ಯದರ್ಶಿ ಪುರುಷೋತ್ತಮ್, ಸಿಪಿಐ ಸುನೀಲ್‍ಕುಮಾರ್, ನ್ಯಾಮತಿ ಸಿಪಿಐ ರವಿ ಮತ್ತು ವಕೀಲರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT