ಮಂಗಳೂರು: ‘ನಮ್ಮ ಜಮೀನಿನಲ್ಲಿ 400 ಅಡಿಕೆ ಮರ ಬೆಳೆಸಿದ್ದೇನೆ. ಮದ್ದು ಸಿಂಪಡಿಸಲು, ಕೊಯ್ಲು ಮಾಡಲು ಮರ ಹತ್ತಲೇ ಬೇಕಿತ್ತು. ನಾನು ಮರ ಹತ್ತಿ ಕೆಲಸ ಮಾಡುವಾಗ ಜೀವಭಯ ಕಾಡುತ್ತಿತ್ತು. ಈಗ ದೋಟಿ ಗ್ಯಾಂಗ್ ಬಂದ ಮೇಲೆ ಆ ತಾಪತ್ರಯ ಇಲ್ಲ. ಕೆಲಸವೂ ಸಲೀಸಾಗಿದೆ. ಮೇಲಾಗಿ ಕಾರ್ಮಿಕರಲ್ಲಿ ಸುರಕ್ಷಿತ ಭಾವವೂ ಮೂಡಿದೆ’ ಎಂದು ಮಾತಿಗಿಳಿದರು ಪದ್ಮನಾಭ.

ಪುತ್ತೂರು ಬಳಿಯ ಕುರಿಯ ಗ್ರಾಮದ ಕೆ.ವಿಶ್ವನಾಥ ಭಟ್ಟ ಅವರ ಅಡಿಕೆ ತೋಟಕ್ಕೆ ಬೆಳಿಗ್ಗೆ 9.15ರ ವೇಳೆಗೇ ‘ಪಿಂಗಾರ ಅಡಿಕೆ ಕೌಶಲ್ಯ ಪಡೆ’ಯ ವಾಹನ ಬಂದಿತ್ತು. ಅದರಲ್ಲಿದ್ದ ಕಾರ್ಮಿಕರು ದೋಟಿ ಮತ್ತಿತರ ಉಪಕರಣ ಜೋಡಿಸಿಕೊಂಡು ಕೆಲಸಕ್ಕೆ ಅಣಿಯಾದರು. ಅಡಿಕೆಗೆ ಮದ್ದು (ಕೀಟನಾಶಕ) ಸಿಂಪಡಿಸುವ ಪೈಪ್ನ್ನು ದೋಟಿಗೆ ಕಟ್ಟಿ ಸುಮಾರು 70–80 ಎತ್ತರದ ಅಡಿಕೆ ಮರಗಳ ಅಡಿಕೆ ಗೊನೆಗಳಿಗೆ ಮದ್ದು ಸಿಂಪಡಿಸಲಾರಂಭಿಸಿದರು. ಒಬ್ಬ ದೋಟಿ ಹಿಡಿದುಕೊಂಡರೆ, ಇನ್ನೊಬ್ಬ ಕಾರ್ಮಿಕ ಆ ಸ್ಪ್ರೇಯರ್ನ ಕಂಟ್ರೋಲ್ ವಾಲ್ವ್ ನಿರ್ವಹಿಸುತ್ತಿದ್ದರು. ಮರಗಳನ್ನು ಲೆಕ್ಕಹಾಕಿದ ಈ ತಂಡ (ದೋಟಿ ಗ್ಯಾಂಗ್)ದ ವ್ಯವಸ್ಥಾಪಕ ಪದ್ಮನಾಭ, ಬಿಲ್ಲು ಬರೆದು ಕೊಟ್ಟರು. ಅದರಲ್ಲಿದ್ದ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿದ ಕೆ.ವಿಶ್ವನಾಥ ಭಟ್ಟರು, ಯುಪಿಐ ಮೂಲಕ ಹಣ ಪಾವತಿಸಿದರು. ಎಲ್ಲ ಕಾರ್ಮಿಕರನ್ನು ತಮ್ಮ ಪಿಂಗಾರ ವಾಹನದಲ್ಲಿ ಕೂಡ್ರಿಸಿಕೊಂಡು ಪದ್ಮನಾಭ, ‘ನಮಗೆ ಬಿಡುವಿಲ್ಲದ ಕೆಲಸ ಮರ್ರೆ...‘ ಎನ್ನುತ್ತ ಮತ್ತೊಂದು ತೋಟಕ್ಕೆ ಹೊರಟುಹೋದರು.

ದಕ್ಷಿಣ ಕನ್ನಡ ಜಿಲ್ಲೆ ವಿಟ್ಲ ಬಳಿಯ ಕೊಡಂಗಾಯಿ ಗ್ರಾಮದ ಪದ್ಮನಾಭ ಅವರು ಅಡಿಕೆ ಕೃಷಿಕ. ವಿಟ್ಲದ ಪಿಂಗಾರ ತೋಟಗಾರಿಕೆ ಬೆಳೆಗಾರರ ಉತ್ಪಾದಕ ಕಂಪನಿಯಲ್ಲಿ ಕೆಲಸ ಮಾಡುತ್ತಾರೆ. ಪಿಂಗಾರ ಸಂಸ್ಥೆಯು 2022ರ ಫೆಬ್ರುವರಿಯಿಂದ ಅಡಿಕೆ–ತೆಂಗು ಬೆಳೆಗಾರರಿಗೆ ‘ಕಾರ್ಮಿಕರ ಸೇವೆ’ ಒದಗಿಸುತ್ತಿದೆ. ಅದಕ್ಕೆ ‘ಅಡಿಕೆ/ತೆಂಗು ಕೌಶಲ್ಯ ಪಡೆ’ ಎಂದು ಹೆಸರಿಟ್ಟಿದೆ. ಇವರಲ್ಲಿ ಅಡಿಕೆಯ ಆರು ದೋಟಿ ಗ್ಯಾಂಗ್ಗಳಿದ್ದು, ಪದ್ಮನಾಭ ಅವರು ಒಂದು ಗ್ಯಾಂಗ್ನ ವಾಹನ ಚಾಲಕ ಕಂ ವ್ಯವಸ್ಥಾಪಕರಾಗಿದ್ದಾರೆ. ತೆಂಗು ಕೊಯ್ಲಿಗೆ ಒಂದು ತಂಡ ಇದೆ.

ಕರಾವಳಿ ಭಾಗದ ಮುಖ್ಯ ಕೃಷಿ ಅಡಿಕೆ ಮತ್ತು ತೆಂಗು. ಮರಹತ್ತಿ ಕೊಯ್ಲು ಮಾಡುವುದು, ಮರಹತ್ತಿಯೇ ಕೀಟನಾಶಕ ಸಿಂಪಡಣೆ ಮಾಡುವುದು ಸಾಂಪ್ರದಾಯಿಕ ವಿಧಾನ.

ಇದಕ್ಕೆ ಕುಶಲ ಕಾರ್ಮಿಕರು ಬೇಕು. ಆದರೆ, ಈ ಶ್ರಮದಾಯಿಕ ಕೆಲಸಕ್ಕೆ ಇತ್ತೀಚಿನ ವರ್ಷಗಳಲ್ಲಿ ಕಾರ್ಮಿಕರೇ ಸಿಗುತ್ತಿಲ್ಲ ಎಂದು ರೈತರು ಗೋಳಾಡುತ್ತಿದ್ದರು. ಇದಕ್ಕೆ ಪರಿಹಾರ ಎಂಬಂತೆ ಯಾಂತ್ರೀಕರಣದ ಬಳಕೆ ಶುರುವಾಯಿತು.

ಉತ್ತರ ಕನ್ನಡ ಜಿಲ್ಲೆ ನಾನಿಕಟ್ಟಾ ಗ್ರಾಮದ ತ್ಯಾಗಳ್ಳಿ ಸೇವಾ ಸಹಕಾರಿ ಸಂಘ, 2020ರಲ್ಲಿ ಕಾರ್ಮಿಕರಿಗೆ ತರಬೇತಿ ನೀಡಿ ‘ದೋಟಿ‘ ಉಪಕರಣ ಬಳಸಿ ಕೆಲಸ ಮಾಡುವ ವಿಧಾನ ಪರಿಚಯಿಸಿತು. ದೋಟಿ ಎಂದರೆ ಕಾರ್ಬನ್ ಫೈಬರ್ನಿಂದ ಮಾಡಿರುವ ಸಿಂಪಡಣೆ ಮತ್ತು ಕೊಯ್ಲು ಸಾಧನ. 60 ಅಡಿಯಿಂದ 80 ಅಡಿ ವರೆಗೆ ಉದ್ದದ ದೋಟಿ ಲಭ್ಯ. ಇವು ಹಗುರವಾಗಿದ್ದು, ಸರಾಸರಿ 6 ಕೆ.ಜಿ. ಭಾರ ಹೊಂದಿರುತ್ತವೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಕೆಲ ಕೃಷಿಕರ ಸಂಘಗಳು ಯಾಂತ್ರೀಕರಣದ ಸೇವೆಯನ್ನು (ದೋಟಿ) ರೈತರಿಗೆ ನೀಡುತ್ತಿವೆ. ಇವರಿಂದ ಪ್ರೇರಣೆ ಪಡೆದ ಪಿಂಗಾರ ತನ್ನ ವ್ಯಾಪ್ತಿಯಲ್ಲೂ ಈ ಸೇವೆ ಆರಂಭಿಸಿದೆ.

‘2023–24ರ ಆರ್ಥಿಕ ವರ್ಷದಲ್ಲಿ ಪಿಂಗಾರ ತಂಡಗಳು 350 ಅಡಿಕೆ ತೋಟಗಳಲ್ಲಿ ಅಡಿಕೆ ಕೊಯ್ಲು, ಮದ್ದು ಸಿಂಪಡಣೆ ಕೆಲಸ ಮಾಡಿವೆ. ಇದರಿಂದ ಒಟ್ಟಾರೆ ₹1.60 ಕೋಟಿ ವಹಿವಾಟು ನಡೆದಿದೆ’ ಎನ್ನುತ್ತಾರೆ ಇದರ ಸಿಇಒ ಪ್ರದೀಪ್ ಕೆ.

ಬಂಟ್ವಾಳ ತಾಲ್ಲೂಕು ಕುಳಾಲು ಕುಂಟ್ರಕಲ ಗ್ರಾಮದ ಆನಂದ ನಾಯ್ಕ್ ಅವರದ್ದು ಸಣ್ಣ ಕೃಷಿಕ ಕುಟುಂಬ. ಹೆಚ್ಚು ಓದಲಾಗಲಿಲ್ಲ. ಬಾಲ್ಯದಲ್ಲೇ ಅಡಿಕೆ ಕೃಷಿ ಕೆಲಸ ಸೆಳೆಯಿತು. ಅದು ಅವರಿಗೆ ಅನಿವಾರ್ಯವೂ ಆಗಿತ್ತು. ಸಣ್ಣವರಿದ್ದಾಗಲೇ ಮರ ಹತ್ತಿ ಕೆಲಸ ಮಾಡುವುದು ಕಾರ್ಯಗತವಾಯಿತು.

ಎಲ್ಲವೂ ಸರಿಯಾಗಿ ನಡೆದಿದೆ ಎನ್ನುವಾಗಲೇ ಸುಮಾರು ಐದು ವರ್ಷಗಳ ಹಿಂದೆ ಅವರು ಮರದಿಂದ ಜಾರಿ ಬಿದ್ದರು. ಕೈಗೆ ಪೆಟ್ಟಾಯಿತು. ಅಡಿಕೆ– ತೆಂಗು ಮರ ಹತ್ತಿ ಕೆಲಸ ಮಾಡುವುದು ಕಷ್ಟಕರವಾಯಿತು. ಬೇರೆ ಕೂಲಿ ಮಾಡಲಾರಂಭಿಸಿದರು. ದೋಟಿ ಬಂದ ಮೇಲೆ ಅವರು ಪಿಂಗಾರ ತಂಡದ ಸದಸ್ಯರಾಗಿ, ಮತ್ತೆ ತಮ್ಮ ಅಚ್ಚುಮೆಚ್ಚಿನ ಈ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.

‘ಮರ ಹತ್ತಿ ಕೆಲಸ ಮಾಡುವ ಸಾಂಪ್ರದಾಯಿಕ ವಿಧಾನ ಬಹಳ ಶ್ರಮದಾಯಕ– ಅಪಾಯಕಾರಿ ಕೆಲಸ. ನಮ್ಮೂರಲ್ಲಿ ಈಗ ಸಾಂಪ್ರದಾಯಿಕವಾಗಿ ಮರ ಹತ್ತಿ ಕೆಲಸ ಮಾಡುವವರು ಮೂವರು ಮಾತ್ರ ಇದ್ದಾರೆ. ಹೊಸಬರು ಮರಹತ್ತುವ ಕೆಲಸಕ್ಕೆ ಬರುವುದಿಲ್ಲ. ನಮ್ಮೂರಲ್ಲಿ ಒಬ್ಬರು ಮರದಲ್ಲಿ ಕೆಲಸ ಮಾಡುವಾಗ ಬಿದ್ದು ಸೊಂಟ ಮುರಿದುಕೊಂಡು ಈಗ ಮಲಗಿದ ಸ್ಥಿತಿಯಲ್ಲೇ ಇದ್ದಾರೆ. ದೋಟಿ ಬಳಸಿ ಮಾಡುವ ಕೆಲಸದಲ್ಲಿ ಅಪಾಯ ಇಲ್ಲ. ತೋಟದಲ್ಲಿ ನೆರಳಿನಲ್ಲಿ ಮಾಡುವ ಕೆಲಸ ಇದು. ಬಿಸಿಲಿನ ಬೇಗೆ ಇರಲ್ಲ. ವಾರದ ರಜೆ ಸೇರಿ ರಜೆ ಸೌಲಭ್ಯವೂ ಉಂಟು. ವೇತನ–ಇನ್ಸೆಂಟಿವ್ ಸೇರಿ ತಿಂಗಳಿಗೆ ಕನಿಷ್ಠವೆಂದರೂ ₹25 ಸಾವಿರ ವೇತನ ಬರುತ್ತದೆ’ ಎಂದು ಆನಂದ ಖುಷಿಯಿಂದಲೇ ಹೇಳಿದರು.

‘ದೋಟಿಯಿಂದ ಕೆಲಸ ಮಾಡುವುದು ಕಾರ್ಮಿಕರ ಪಾಲಿಗೆ ಸುರಕ್ಷಿತ. ಸಿಂಪಡಣೆ, ಕೊಯ್ಲಿಗೆ ಮರವನ್ನು ಹತ್ತಲೇ ಬೇಕಾಗಿತ್ತು. ಮಣೆ ಮೇಲೆ ಕುಳಿತು ಸಿಂಪಡಣೆ ಮಾಡಬೇಕಿತ್ತು. ಒಂದು ಮರ ಹತ್ತಿ, ಹತ್ತಾರು ಮರಗಳಿಗೆ ಸಿಂಪಡಣೆ ಸಾಧ್ಯವಿದ್ದರೂ ಅರ್ಧ ಗಂಟೆ ಅಲ್ಲಿ ಕುಳಿತುಕೊಳ್ಳಲು ಕಷ್ಟವಾಗುತ್ತಿತ್ತು. ಮಳೆ ಬಂದರೆ ಮರ ಪಾಚಿಕಟ್ಟಿಕೊಂಡು ಜಾರುತ್ತಿತ್ತು. ಮೇಲೆ ಹತ್ತಲು ಆಗುತ್ತಿರಲಿಲ್ಲ. ಆದರೆ, ದೋಟಿ ಬಳಕೆಯಲ್ಲಿ ಮರ ಹತ್ತುವ ಪ್ರಮೇಯವೇ ಇಲ್ಲ. ಮಳೆ ಬಂದು ಹೋದ ನಂತರ ಸ್ವಲ್ಪ ಹೊತ್ತಿನಲ್ಲಿ ಗೊನೆ ಒಣಗಿದರೆ ಸಾಕು. ದೋಟಿ ಬಳಸಿ ಸಿಂಪಡಣೆ ಮಾಡಬಹುದು. ಕೊಯ್ಲು ಮಾಡುವಾಗ ಕತ್ತಿಯನ್ನು ಈ ದೋಟಿಗೆ ಫಿಕ್ಸ್ ಮಾಡಿರುತ್ತೇವೆ. ಇನ್ನೊಬ್ಬರು ರಿಂಗ್ ನೆಟ್ನಲ್ಲಿ (ನಾಲ್ಕರಿಂದ ಐದು ಅಡಿಯ ಹ್ಯಾಂಡಲ್ ಹಾಗೂ ಒಂದರಿಂದ ಒಂದೂವರೆ ಮೀಟರ್ ವ್ಯಾಸದ ರಿಂಗ್ಗೆ ನೆಟ್ ಹಾಕಲಾಗಿರುತ್ತದೆ) ಗೊನೆಯನ್ನು ಹಿಡಿಯುತ್ತೇವೆ. ನೆಲಕ್ಕೆ ಬಿದ್ದು ಹರಡಿಕೊಳ್ಳುವ ತಾಪತ್ರೆಯ ಇಲ್ಲ’ ಎನ್ನುತ್ತಾರೆ ಕಾರ್ಮಿಕ ಆನಂದ.

‘ನೆಲದ ಮೇಲೆ ನಿಂತುಕೊಂಡೇ ಈ ಕಾರ್ಮಿಕರು ಕೆಲಸ ಮಾಡುತ್ತಾರೆ. ಸಿಂಪಡಣೆಗೆ ಒಬ್ಬರು ದೋಟಿ ಹಿಡಿದುಕೊಂಡರೆ, ಇನ್ನೊಬ್ಬರು ಆಪರೇಟರ್ ಅಗತ್ಯಕ್ಕೆ ತಕ್ಕಷ್ಟು ಮದ್ದು ಮಾತ್ರ ಬಿಡುತ್ತಾರೆ. ಹೀಗಾಗಿ ಮದ್ದು ಹಾಳಾಗುವುದಿಲ್ಲ. ಒಂದೇ ಪಂಪ್ಸೆಟ್ ಬಳಸಿ ನಾಲ್ಕೈದು ದೋಟಿಯಿಂದ ಸಿಂಪಡಣೆ ಮಾಡಬಹುದು. ಮದ್ದಿನ ಬ್ಯಾರೆಲ್ಗಳನ್ನು ಆಚೀಚೆ ಒಯ್ಯುವ ತೊಂದರೆಯೂ ಇಲ್ಲ. ಜೆಟ್ ಸ್ಪ್ರೇಯಲ್ಲಿ ಒಂದು ಎಕರೆ ಅಡಿಕೆಗೆ ಸಿಂಪಡಣೆಗೆ 3 ಬ್ಯಾರೇಲ್ನಷ್ಟು ಮದ್ದಿನ ಮಿಶ್ರಣ ಬೇಕಾದರೆ, ದೋಟಿ ಬಳಸಿ ಸಿಂಪಡಣೆಗೆ ಒಂದು ಬ್ಯಾರೆಲ್ ಮದ್ದು ಸಾಕು’ ಎನ್ನುತ್ತಾರೆ ಪ್ರಗತಿಪರ ರೈತರಾದ ಸುರೇಶ್ ಬಲ್ನಾಡು.

‘ದೋಟಿಗೆ ಕತ್ತಿಯನ್ನು ಕಟ್ಟಿ ಅದರ ಸಹಾಯದಿಂದ ಒಬ್ಬ ಕಾರ್ಮಿಕ ಅಡಿಕೆ ಮರಗಳಿಂದ ಹಣ್ಣಾಗಿದ್ದ ಅಡಿಕೆ ಗೊನೆಗಳನ್ನು ಕೀಳುತ್ತಾರೆ. ಇನ್ನೊಬ್ಬರು ದೊಡ್ಡ ಜಾಳಿಗೆಯಲ್ಲಿ ಆ ಗೊನೆಗಳನ್ನು ಹಿಡಿದುಕೊಳ್ಳುತ್ತಾರೆ. ಐದು ಗೊನೆಗಳು ಜಾಳಿಗೆ ಸೇರುತ್ತಿದ್ದಂತೆ ಅವುಗಳನ್ನು ನೆಲಕ್ಕೆ ಹಾಕುತ್ತ ಮುಂದೆ ಸಾಗುತ್ತೇವೆ. ಎಂಟು ಜನರ ದೋಟಿ ತಂಡ ದಿನಕ್ಕೆ 2 ಸಾವಿರ ಅಡಿಕೆ ಮರಗಳಿಗೆ ಔಷಧಿ ಸಿಂಪಡಣೆ ಮಾಡುಬಹುದು. 1500ರಿಂದ 1600 ಅಡಿಕೆ ಗೊನೆಗಳನ್ನು ಕೊಯ್ಲು ಮಾಡುತ್ತೇವೆ. ಬೆಳಿಗ್ಗೆ 9ರಿಂದ ಸಂಜೆ 5ರ ವರೆಗೆ ಕೆಲಸ. ಸಣ್ಣ ತೋಟ ಇದ್ದರೆ ಅಲ್ಲಿಯ ಕೆಲಸ ಮುಗಿಸಿ ಇನ್ನೊಂದು ತೋಟಕ್ಕೆ ತೆರಳುತ್ತೇವೆ’ ಎಂದು ಪದ್ಮನಾಭ ಹೇಳುತ್ತಾರೆ.

ಈ ತಂಡದಲ್ಲಿ ಜಾರ್ಖಂಡ್ನ ಕಾರ್ಮಿಕರೇ ಹೆಚ್ಚಾಗಿದ್ದಾರೆ. ಜಾರ್ಖಂಡ್ ಲಾತೆಹಾರ್ನ ಸುನೇಶ್ವರ್ ಕಿಸಾನ್, ಅಮೃತ ಭಗತ್ ಹಾಗೂ ಸುಧೀರ್ ಕಿಸಾನ್, ‘ನಮ್ಮೂರಲ್ಲಿ ಧಾನ್ಯ, ತರಕಾರಿ ಕೃಷಿಯಲ್ಲಿ ಕೂಲಿ ಮಾಡುತ್ತಿದ್ದೆವು. ಅಡಿಕೆ ಕೃಷಿ ಕೆಲಸ ನಮಗೆ ಹೊಸತು. ಇಲ್ಲಿ ಬಂದು ಕೆಲವೇ ದಿನಗಳಲ್ಲಿ ಈ ಕೆಲಸ ಕಲಿತು ಮಾಡುತ್ತಿದ್ದೇವೆ. ಇದೇನು ನಮಗೆ ಭಾರ ಅನಿಸುತ್ತಿಲ್ಲ’ ಎನ್ನುತ್ತ ಕೆಲಸದಲ್ಲಿ ಮಗ್ನರಾದರು. ‘ಮರ ಹತ್ತುವ ತಾಪತ್ರಯ ಇಲ್ಲ; ಹೀಗಾಗಿ ಈ ಕೆಲಸ ಸಲೀಸಾಗಿದೆ’ ಎಂದು ದನಿಗೂಡಿಸಿದರು ಸ್ಥಳೀಯ ಯುವ ಕಾರ್ಮಿಕ ಗೋಪಾಲಕೃಷ್ಣ.

ತೆಂಗು ಕೃಷಿಗೂ ಅತಿಥಿ ಕಾರ್ಮಿಕರ ಸೇವೆ: ತೆಂಗಿನ ಮರಗಳನ್ನು ಹತ್ತಿ ತೆಂಗು ಕೀಳುವ ಕೆಲಸವೂ ಬಹಳ ಸವಾಲಿನದ್ದು. ಮರ ಹತ್ತಲು ಉಪಕರಣ ಬಂದಿದ್ದರೂ, ಕೆಲಸಗಾರರದ್ದೇ ಸಮಸ್ಯೆ. ಇದಕ್ಕೆ ಪರಿಹಾರ ಎಂಬಂತೆ ತೆಂಗು ತೋಟಗಳ ನಿರ್ವಹಣೆ ಮತ್ತು ಕೊಯ್ಲಿಗೆ ಕಾರ್ಮಿಕರನ್ನು ಪೂರೈಸುವ ಕೆಲಸಕ್ಕೆ ಕೇರಳದಲ್ಲಿ ಸಾಂಸ್ಥಿಕ ರೂಪ ನೀಡಿದ್ದು ‘ಹಲೋ ನಾರಿಯಲ್’ ಸಂಸ್ಥೆ. ನಿವೃತ್ತ ಸೈನಿಕ ಪಿ. ಮೋಹನದಾಸ್ ಅವರು ಸ್ಥಾಪಿಸಿರುವ, ತಿರುವನಂತಪುರಂನಲ್ಲಿ ಕೇಂದ್ರ ಕಚೇರಿ ಹೊಂದಿರುವ ಈ ಸಂಸ್ಥೆ, ಕರ್ನಾಟಕಕ್ಕೂ ಸೇವೆ ವಿಸ್ತರಿಸಿದೆ.

ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ಬಳಿಯ ಮುರ ಗ್ರಾಮದ ಧರಿತ್ರಿ ಸೌಹಾರ್ದ ಸಹಕಾರಿ ನಿಯಮಿತ ಮಧ್ಯವರ್ತಿಯಾಗಿ ‘ಹಲೋ ನಾರಿಯಲ್‘ ಸಂಸ್ಥೆಯ ಸೇವೆ ತಮ್ಮ ಭಾಗದ ರೈತರಿಗೂ ಸಿಗುವಂತೆ ಮಾಡಿದೆ. ‘ಧರಿತ್ರಿ’ಯ ಅಧ್ಯಕ್ಷ ವಸಂತ ಗೌಡ ಅವರ ಆಸಕ್ತಿಯ ಫಲವಾಗಿ, ಮುರ ಸುತ್ತಲಿನ ತೆಂಗುಬೆಳೆಗಾರರಿಗೆ ಈ ‘ಅತಿಥಿ ಕಾರ್ಮಿಕರ‘ ಸೇವೆ ಲಭಿಸುತ್ತಿದೆ. ‘ನಮ್ಮ ಸಂಘಕ್ಕೆ ಜೋಡಣೆಯಾಗಿರುವ ತೆಂಗು ಕೊಯ್ಲು ಮಾಡುವ ನಾಲ್ವರು ಕಾರ್ಮಿಕರು ಇದ್ದಾರೆ. ತೆಂಗು ಕೊಯ್ಲಿಗೆ ಒಂದು ತಿಂಗಳ ಮುಂಗಡ ಬುಕ್ಕಿಂಗ್ ಇದ್ದು, ಬೇಡಿಕೆ ಸಾಕಷ್ಟಿದೆ. ಅಡಿಕೆ ದೋಟಿಯ ಎಂಟು ಜನ ಕಾರ್ಮಿಕರ ತಂಡವನ್ನು ನಮ್ಮ ಸಂಘದಿಂದಲೇ ಕಟ್ಟಿದ್ದೇವೆ. ಇನ್ನೊಂದು ತಂಡವನ್ನು ತಯಾರು ಮಾಡುತ್ತಿದ್ದೇವೆ’ ಎಂದು ಧರಿತ್ರಿ ಸಂಘದ ಸಿಬ್ಬಂದಿ ವಸಂತ ಗೌಡ ಹೇಳಿದರು.

‘ಆರು ತಿಂಗಳಿನಿಂದ ನಾವು ಈ ಸೇವೆ ನೀಡುತ್ತಿದ್ದು, ಈ ವರೆಗೆ 260 ರೈತರ 15,266 ತೆಂಗಿನ ಮರಗಳಲ್ಲಿ ಕೊಯ್ಲು ಮಾಡಿದ್ದೇವೆ. ಅದರಿಂದ ₹3.38 ಲಕ್ಷ ವಹಿವಾಟು ನಡೆದಿದೆ. 120 ರೈತರ ತೋಟಗಳ 55,513 ಅಡಿಕೆ ಮರಗಳಿಗೆ ಮದ್ದು ಸಿಂಪಡಣೆ/ಗೊನೆ ಕೊಯ್ಲು ಮಾಡಿದ್ದು, ಅದರಿಂದ ₹4.57 ಲಕ್ಷ ವಹಿವಾಟು ಆಗಿದೆ’ ಎಂಬುದು ಅವರ ವಿವರಣೆ.

ಹಲೋ ನಾರಿಯಲ್ ಸಂಸ್ಥೆಯ ಕಾರ್ಮಿಕರು ಮಾಡುವ ಕೆಲಸಕ್ಕೆ ‘ಧರಿತ್ರಿ’ ಸಂಸ್ಥೆಗೆ ಮರಗಳ ಲೆಕ್ಕದಲ್ಲಿ ಕಮಿಷನ್ (ಒಂದು ಮರಕ್ಕೆ ₹5) ದೊರೆಯುತ್ತದೆ. ಧರಿತ್ರಿಯ ಮೂಲ ಕೆಲಸ ಹಣಕಾಸು ವ್ಯವಹಾರ. ಅದರೊಟ್ಟಿಗೆ ಕಾರ್ಮಿಕರನ್ನು ಪೂರೈಸುವ ಸೇವಾ ವಲಯಕ್ಕೂ ಈ ಸಂಘ ಕಾಲಿಟ್ಟಿದೆ.

‘ಒಂದು ತೆಂಗಿನ ಮರದಿಂದ ತೆಂಗು ಕೊಯ್ಲಿಗೆ ₹50 ದರ ನಿಗದಿ ಮಾಡಿದ್ದು, ಒಬ್ಬ ಕಾರ್ಮಿಕ ಕನಿಷ್ಠ ಎಂದರೂ ನಿತ್ಯ 50 ಮರದಿಂದ ಕೊಯ್ಲು ಮಾಡುತ್ತಾರೆ‘ ಎನ್ನುತ್ತಾರೆ ಈ ಸಂಘದವರು.

ತೆಂಗು ಕೊಯ್ಲು ಮತ್ತು ತೆಂಗಿನ ಗಿಡಗಳ ನಿರ್ವಹಣೆಗೆ ವೃತ್ತಿಪರ ಕಾರ್ಮಿಕರ ಗುಂಪನ್ನು ಹೊಂದಿರುವುದು ಹಲೋ ನಾರಿಯಲ್ ಸಂಸ್ಥೆಯ ಹೆಗ್ಗಳಿಕೆ. ರೈತರಿಗೆ ಅನುಕೂಲ ಕಲ್ಪಿಸುವುದು ಒಂದೆಡೆಯಾದರೆ, ಕಾರ್ಮಿಕರ ಕೆಲಸ ಸರಳಗೊಳಿಸಿ, ಅವರ ಸ್ವಾವಲಂಬನೆಗೆ ನೆರವಾಗುವುದು ಇನ್ನೊಂದು ಉದ್ದೇಶ ಎನ್ನುತ್ತಾರೆ ಈ ಸಂಸ್ಥೆಯವರು. ಇದರಲ್ಲಿರುವ ಬಹುಪಾಲು ಕಾರ್ಮಿಕರು ಉತ್ತರ ಭಾರತದವರು.

ಕಾಸರಗೋಡಿನಲ್ಲಿ ಚೆಂಗಾಡಿ ಕೂಟಂ (ಸ್ನೇಹಿತರ ಕೂಟ) ಹೊಸ ಮಾದರಿಯನ್ನು ಪರಿಚಯಿಸಿದೆ. ಇದಕ್ಕೆ ಯಾವುದೇ ಕೇಂದ್ರೀಕೃತ ನಿರ್ವಹಣಾ ವ್ಯವಸ್ಥೆ, ಕಚೇರಿ ಅಥವಾ ಸಿಬ್ಬಂದಿ ಇಲ್ಲ. ಈ ಕೂಟದ ಸದಸ್ಯರು ವಾಟ್ಸ್ಆ್ಯಪ್ ಗ್ರೂಪ್ಗಳನ್ನು ಮಾಡಿಕೊಂಡಿದ್ದಾರೆ. ರೈತರಿಂದ ಬರುವ ಬೇಡಿಕೆಗೆ ತಕ್ಕಂತೆ ಕಾರ್ಮಿಕರು ತಾವೇ ಕೆಲಸ ಹಂಚಿಕೊಂಡು ಅಲ್ಲಿಗೆ ಹೋಗುತ್ತಾರೆ.

ಮಹಿಳಾ ಕಾರ್ಮಿಕರೂ ಸೇರಿ ಸುಮಾರು 300 ಜನ ಕಾರ್ಮಿಕರು ಈ ಕೂಟದಲ್ಲಿ ಇದ್ದಾರೆ. ಇವರೆಲ್ಲರೂ ಕೆಲಸದ ಸಮಯದಲ್ಲಿ ಸಮವಸ್ತ್ರ ಧರಿಸುತ್ತಾರೆ. ಅಗತ್ಯ ಉಪಕರಣ, ತೆಂಗಿನ ಮರ ಹತ್ತಲು ‘ಕ್ಲೈಂಬರ್ ಗೇರ್ ’ ಸಹಿತ ಬರುತ್ತಾರೆ. ನಿತ್ಯವೂ 8 ಸಾವಿರದಿಂದ 10 ಸಾವಿರ ತೆಂಗಿನ ಮರಗಳಿಂದ ಕಾಯಿಕೀಳುವ ಸಾಮರ್ಥ್ಯವನ್ನು ಈ ತಂಡ ಹೊಂದಿದೆ. ‘ವರ್ಷಕ್ಕೆ ಸರಾಸರಿ 2.40 ಲಕ್ಷ ತೆಂಗಿನ ಮರಗಳಿಂದ ಕೊಯ್ಲು ಮಾಡುತ್ತೇವೆ. ಅಷ್ಟು ದೊಡ್ಡ ಸಂಪರ್ಕ ಜಾಲ ನಮ್ಮದು. ನಮ್ಮವರು ನಿತ್ಯ ತಲಾ ₹1500ರಿಂದ ₹2 ಸಾವಿರವರೆಗೆ ಆದಾಯ ಗಳಿಸುತ್ತಿದ್ದಾರೆ’ ಎನ್ನುತ್ತಾರೆ ಈ ಕೂಟದವರು.

ಮಣಿ ಕುಟ್ಟಿಕೋಲ್ ಈ ಕೂಟದ ಸ್ಥಾಪಕ. ಸ್ನೇಹಿತರಾದ ವಿಜಯನ್, ರಾಜೇಶ್ ಮತ್ತು ಸುಕುಮಾರಂ ಅವರೊಂದಿಗೆ ತೆಂಗಿನಕಾಯಿ ಕೊಯ್ಲುಗಾರರನ್ನು ಸಂಘಟಿಸಿ, ಗುಂಪು ರಚಿಸಿಕೊಂಡಿದ್ದಾರೆ. ಸುಮಾರು ನಾಲ್ಕು ವರ್ಷದಿಂದ ಈ ಕೂಟ ಸೇವೆ ಸಲ್ಲಿಸುತ್ತಿದೆ. ಸೊಸೈಟಿಗಳ ನೋಂದಣಿ ಕಾಯ್ದೆ ಅಡಿಯಲ್ಲಿ ‘ಚೆಂಗಾಡಿ ಕೂಟಂ’ ಅನ್ನು ನೋಂದಾಯಿಸಿದ್ದಾರೆ. ಸಂಘವು ಈಗ 10 ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಮಿತಿಗಳನ್ನು ಹೊಂದಿದೆ. ಪ್ರತಿ ಸಮಿತಿ ಪ್ರತ್ಯೇಕ ವಾಟ್ಸ್ಆ್ಯಪ್ ಗ್ರೂಪ್ ಹೊಂದಿವೆ.

ಬೆಳಿಗ್ಗೆ 7 ಗಂಟೆಯ ಹೊತ್ತಿಗೆ ಅವರು ತೆಂಗಿನ ತೋಟಗಳಲ್ಲಿರುತ್ತಾರೆ ಮತ್ತು ಸಾಮಾನ್ಯವಾಗಿ ಸುಮಾರು 11 ಗಂಟೆಯೊಳಗೆ ಕೆಲಸ ಮುಗಿಸುತ್ತಾರೆ. ಒಬ್ಬ ಅನುಭವಿ ಕೊಯ್ಲುಗಾರನು ಒಂದು ಗಂಟೆಯಲ್ಲಿ 10 ಮರಗಳಿಂದ ತೆಂಗಿನಕಾಯಿ ಕೊಯ್ಲು ಮಾಡಬಹುದು. ಗ್ರಾಹಕರು ಕರೆ ಮಾಡಿದಾಗ, ಕಟಾವು ಮಾಡುವವರು ದೂರ, ಮರಗಳ ಸಂಖ್ಯೆ, ಕೆಲಸ ಯಾವಾಗ ಮುಗಿಯಬೇಕು ಇತ್ಯಾದಿ ವಿವರಗಳನ್ನು ಕೇಳುತ್ತಾರೆ. ಕರೆ ಸ್ವೀಕರಿಸುವವರು ಸ್ವಂತವಾಗಿ ಕೆಲಸ ನಿರ್ವಹಿಸಬಹುದಾದರೆ, ಅವರು ದಿನಾಂಕಗಳನ್ನು ನೀಡುತ್ತಾರೆ. ಹೆಚ್ಚಿನ ಸಿಬ್ಬಂದಿ ಅಗತ್ಯವಿದ್ದರೆ, ಅದನ್ನು ವ್ಯವಸ್ಥೆಗೊಳಿಸುತ್ತಾರೆ.

ಹಲೋ ನಾರಿಯಲ್ ಎಂಬುದು ಒಂದು ಸಂಸ್ಥೆ. ಚೆಂಗಾಡಿ ಕೂಟಂ ಇದು ಸ್ಥಳೀಯ ಕಾರ್ಮಿಕರೇ ಕಟ್ಟಿಕೊಂಡ ಸಂಘಟನೆ. ಎರಡೂ ಮಾದರಿ ಅಲ್ಲಿ ಯಶಸ್ವಿಯಾಗಿವೆ.

ವಿಟ್ಲದ ಪಿಂಗಾರ ಸಂಸ್ಥೆಯವರು ಕಾರ್ಮಿಕರಿಗೆ ತಿಂಗಳಿಗೆ ಇಂತಿಷ್ಟು ಎಂದು ಸಂಬಳ ನಿಗದಿ ಮಾಡಿದ್ದಾರೆ. ಆ ಕಾರ್ಮಿಕರು ಮಾಡುವ ಕೆಲಸದ ಆಧಾರದ ಮೇಲೆ ಪ್ರೋತ್ಸಾಹಧನ ನೀಡುತ್ತಾರೆ. ಮದ್ದು ಸಿಂಪಡಿಸಲು ಪ್ರತಿ ಅಡಿಕೆ ಮರಕ್ಕೆ ₹10, ಅಡಿಕೆ ಗೊನೆ ಕೊಯ್ಲಿಗೆ ಪ್ರತಿ ಗೊನೆಗೆ ₹13 ದರ ನಿಗದಿ ಮಾಡಲಾಗಿದೆ. ಅಡಿಕೆ ಮರಕ್ಕೆ ಕರಿಮೆಣಸು ಬಳ್ಳಿ ಬೆಳೆಸಿದ್ದರೂ ಸಹ ಹೆಚ್ಚುವರಿ ದರ ವಿಧಿಸುವುದಿಲ್ಲ. ತೆಂಗು ಕೊಯ್ಲಿಗೆ ಪ್ರತಿ ಮರಕ್ಕೆ ₹50 ದರ ಪಡೆಯಲಾಗುತ್ತದೆ.

‘ಕ್ಲೈಂಬರ್ ಉಪಕರಣದ ಸಹಾಯದಿಂದ ತೆಂಗಿನ ಮರವೇರಿ ಕೆಲಸ ಮಾಡಲಾಗುತ್ತದೆ. ತೆಂಗಿನ ಮರಕ್ಕೆ ಕರಿಮೆಣಸು ಬಳ್ಳಿ ಬೆಳೆಸಿದ್ದರೆ ಆಗ ಕ್ಲೈಂಬರ್ ಬಳಕೆ ಸಾಧ್ಯವಾಗದು. ಏಣಿ ಇಟ್ಟು ಮರ
ಹತ್ತಬೇಕಾಗುತ್ತದೆ. ಅದಕ್ಕೆ ಪ್ರತಿ ಮರಕ್ಕೆ ₹80 ದರ ನಿಗದಿ ಮಾಡಲಾಗಿದೆ’ ಎಂದು ಪಿಂಗಾರ ಸಂಸ್ಥೆಯ ತೆಂಗು ಕೊಯ್ಲು ತಂಡದ ವ್ಯವಸ್ಥಾಪಕ, ಇರ್ದೆ ಗ್ರಾಮದ ಪ್ರಶಾಂತ್ ಕುಮಾರ್ ಹೇಳಿದರು.

ಕಲ್ಲಡ್ಕ ಬಳಿಯ ಬೋಳುವಾರು ಗ್ರಾಮದ ಮಹಾಬಳ ರೈ ಅವರ ತೆಂಗಿನ ತೋಟದಲ್ಲಿ ತೆಂಗು ಕೊಯ್ಲು ಮಾಡುತ್ತಿದ್ದ ಈ ತಂಡದ ಜಾರ್ಖಂಡ್ನ ಕಾರ್ಮಿಕರಾದ ನಮಿತ್, ಬಿನೇಶ್ವರ್, ಜಿತೇಂದರ್, ಅನೂಜ್ ಹಾಗೂ ಸುರೇಶ್ ಅವರನ್ನು ಮಾತಿಗೆಳೆದಾಗ ಅವರದ್ದೂ ಅದೇ ಮಾತು... ‘ನಮಗೆ ಮೊದಲು ಈ ಕೆಲಸ ಗೊತ್ತೇ ಇರಲಿಲ್ಲ. ನಮಗೆಲ್ಲರಿಗೂ ಇದು ಹೊಸ ಅನುಭವ ಹಾಗೂ ಖುಷಿಯ ಕೆಲಸ’.

ಸಹಕಾರ ತತ್ವ ಹಾಗೂ ಯಾಂತ್ರೀಕರಣದಿಂದ ಕರಾವಳಿಯಲ್ಲಿ ಅಡಿಕೆ ಮತ್ತು ತೆಂಗು ಕೃಷಿ ಸರಳವಾಗುತ್ತಿದೆ. ಇದು ಎಲ್ಲಾ ಕಡೆಗೂ ಹರಡಬೇಕಾಗಿದೆ.

ಶೇ 80ರಷ್ಟು ಸಮಸ್ಯೆ ನೀಗಿದೆ

45 ವರ್ಷಗಳಿಂದ ನಾನು ಅಡಿಕೆ–ತೆಂಗು ಕೃಷಿ ಮಾಡುತ್ತಿದ್ದು, ನಾನು ಎದುರಿಸುತ್ತಿದ್ದ ಶೇ 80ರಷ್ಟು ಕಾರ್ಮಿಕ ಸಮಸ್ಯೆಯು ದೋಟಿ ಗ್ಯಾಂಗ್ ಸೇವೆಯಿಂದಾಗಿ ನೀಗಿದೆ. ಸಾಂಪ್ರದಾಯಿಕ ಪದ್ಧತಿಗಿಂತ ಈ ವ್ಯವಸ್ಥೆ ಆರ್ಥಿಕವಾಗಿ ಮಿತವ್ಯಯ. ಕೆಲಸದಲ್ಲಿ ಪರಿಪೂರ್ಣತೆ ಇದೆ. ಅಡಿಕೆಗೆ ಕೊಳೆ ರೋಗ, ಎಲೆ ಚುಕ್ಕೆ ರೋಗಕ್ಕೆ ವರ್ಷಕ್ಕೆ ನಾಲ್ಕು ಬಾರಿ ಕೀಟನಾಶಕ ಸಿಂಪಡಿಸಬೇಕು. ಸಿಂಪಡಣೆಯ ವೇಳೆ ಮದ್ದು ನೆಲಕ್ಕೆ ಬಿದ್ದು ಹಾನಿಯಾಗುವುದು ತಪ್ಪಿದ್ದು, ಮದ್ದಿನಲ್ಲಿ ಶೇ 50ರಿಂದ 60ರಷ್ಟು ಉಳಿತಾಯವಾಗುತ್ತಿದೆ. ಎಲ್ಲ ಗೊನೆಗಳಿಗೂ ಸಿಂಪಡಣೆ ಮಾಡುತ್ತಿರುವುದರಿಂದ ನನ್ನ ತೋಟದಲ್ಲಿ ಕೊಳೆರೋಗ ಮರಳಿ ಬಂದಿಲ್ಲ. ಇಂತಹ ಹೊಸ ಆವಿಷ್ಕಾರಕ್ಕೆ ರೈತರು ತೆರೆದುಕೊಂಡರೆ ಕೃಷಿ ಮತ್ತಷ್ಟು ಸಲೀಸಾಗಲು, ಯುವಕರನ್ನು ಕೃಷಿಯತ್ತ ಸೆಳೆಯಲು ಸಾಧ್ಯ.

– ಸುರೇಶ ಬಲ್ನಾಡು, ಕೃಷಿಕ, ಪುತ್ತೂರು

ನಿಖರ ಸೇವೆ; ವೈಜ್ಞಾನಿಕ ದರ ನಿಗದಿ

ಒಂದು ದೋಟಿಗೆ ಅಂದಾಜು ₹80 ಸಾವಿರ ಬೆಲೆ ಇದೆ. ಇಷ್ಟೊಂದು ಹಣ ತೆತ್ತು ಖರೀದಿಸುವುದು ಸಣ್ಣ ರೈತರಿಗೆ ಕಷ್ಟ. ಮೇಲಾಗಿ ಅದಕ್ಕೆ ಪಳಗಿದ ಕಾರ್ಮಿಕರೂ ಬೇಕು. ಸಣ್ಣ ಮತ್ತು ಮಧ್ಯಮ ರೈತರನ್ನು ಗಮನದಲ್ಲಿ ಇಟ್ಟುಕೊಂಡು ನಾವು ಇದನ್ನು ಆರಂಭಿಸಿದೆವು. ಇಂತಹ ತಂಡ ಕಟ್ಟಲು ತರಬೇತಿ ಆಯೋಜಿಸಿ ಇದರಲ್ಲಿ ಪಾಲ್ಗೊಳ್ಳುವಂತೆ ಕಾರ್ಮಿಕರನ್ನು ಆಹ್ವಾನಿಸಿದೆವು. ನಮ್ಮ ತೋಟದಲ್ಲಿಯೇ ಒಂದು ದಿನದ ತರಬೇತಿ ನಡೆಯಿತು. 25 ಕಾರ್ಮಿಕರು ಪಾಲ್ಗೊಂಡರು. ನಮ್ಮ ಕಂಪನಿಯ ಮೂವರು ಕೆಲಸಗಾರರೂ ಇದರಲ್ಲಿ ಇದ್ದರು. ನಮ್ಮ ಪಿಂಗಾರ ಸಂಘದಿಂದ 3 ದೋಟಿ ಖರೀದಿಸಿ, ಕೆಲಸ ಆರಂಭಿಸಿದೆವು. ಈಗ 30 ದೋಟಿಗಳು, ಆರು ತಂಡಗಳು ಕಾರ್ಯನಿರ್ವಹಿಸುತ್ತಿವೆ. ಈ ವರ್ಷ ಮಳೆಗಾಲ ಮುಗಿಯುವಷ್ಟರಲ್ಲಿ 50 ದೋಟಿ ತಲುಪುವ ಗುರಿಯಿದೆ.
ಒಂದೆರಡು ತಿಂಗಳು ಹೊರತುಪಡಿಸಿ ಇಡೀ ವರ್ಷ ಕೆಲಸ ಇರುತ್ತದೆ. ಹಣ್ಣಾದ ಗೊನೆಗಳನ್ನು ಮಾತ್ರ ಕೊಯ್ಲು ಮಾಡುವುದರಿಂದ ವರ್ಷಕ್ಕೆ ನಾಲ್ಕು ಬಾರಿ ಅಡಿಕೆಯ ಕೊಯ್ಲು ಕೆಲಸ ಇರುತ್ತದೆ. ಬೇಡಿಕೆ ಹೆಚ್ಚುತ್ತಲೇ ಇದ್ದು, ವಿಟ್ಲದಿಂದ 30 ಕಿ.ಮೀ. ಸುತ್ತಳತೆಯಲ್ಲಿ ರೈತರಿಗೆ ಸೇವೆ ಒದಗಿಸುತ್ತಿದ್ದೇವೆ. ರೈತರು ಮತ್ತು ಕೆಲಸಗಾರರು ಇಬ್ಬರಿಗೂ ಮೋಸ ಆಗಬಾರದು ಎಂಬ ಕಾರಣಕ್ಕೆ ನಾವು ವೈಜ್ಞಾನಿಕವಾಗಿ ದರ ನಿಗದಿ ಮಾಡಿದ್ದೇವೆ. ಹೊಸ ವಿಧಾನದ ಮೂಲಕ ಸಿಂಪಡಣೆ ಮಾಡಿದ ಅಡಿಕೆಗೆ ಕೊಳೆ ರೋಗ ಬಂದಿಲ್ಲ. ಸಿಂಪಡಣೆ ಪರಿಣಾಮಕಾರಿಯಾಗಿದೆ ಎಂದು ರೈತರು ಹೇಳುತ್ತಿರುವುದು ನಮ್ಮ ಉಮೇದು ಹೆಚ್ಚಿಸಿದೆ.

– ರಾಮಕಿಶೋರ್ ಮಂಚಿ, ಅಧ್ಯಕ್ಷ, ಪಿಂಗಾರ ತೋಟಗಾರಿಕೆ ರೈತರ ಉತ್ಪಾದಕ ಕಂಪನಿ ವಿಟ್ಲ

ಸಾಂಸ್ಥಿಕ ರೂಪದ ಸೇವೆ ರೈತರಿಗೆ ವರದಾನ

ಸಾಂಪ್ರದಾಯಿಕ ವಿಧಾನದಲ್ಲಿ ಕಾರ್ಮಿಕರು ಅಡಿಕೆ ಮರ ಹತ್ತುವುದು–ಇಳಿಯುವುದು ಅನಿವಾರ್ಯವಾಗಿತ್ತು. ಅವರ ಬಹಳಷ್ಟು ಶ್ರಮ ಇದಕ್ಕೇ ವ್ಯಯವಾಗುತ್ತಿತ್ತು. ದೋಟಿ ಬಳಕೆಯಿಂದಾಗಿ ಈ ತಾಪತ್ರಯ ತಪ್ಪಿದ್ದು, ಕಾರ್ಮಿಕರ ಪ್ರೊಡಕ್ಟಿವಿಟಿ ಹೆಚ್ಚಿದೆ. ಸಾಂಸ್ಥಿಕ ರೂಪದ ಇಂತಹ ‘ಕಾರ್ಮಿಕರ ಪೂರೈಕೆ’ಯ ಸೇವೆ ಅಡಿಕೆ–ತೆಂಗು ಬೆಳೆಯುವ ಸಣ್ಣ–ಮಧ್ಯಮ ರೈತರಿಗೆ ವರದಾನ. ರೈತ ಉತ್ಪಾದಕ ಕಂಪನಿಗಳು (FPO) ರೈತರಿಗೆ ಇಂತಹ ಸೇವೆ ಒದಗಿಸಲು ಮುಂದಾಗಬೇಕು.

ಸಾಂಪ್ರದಾಯಿಕ ವಿಧಾನದಲ್ಲಿ ಅಡಿಕೆ ಕೊಯ್ಲು ಮಾಡಿದರೆ ಎಲ್ಲ ಅಡಿಕೆಯನ್ನು ನೆಲಕ್ಕೆ ಎಸೆಯಲಾಗುತ್ತದೆ. ಅದನ್ನು ಹೆಕ್ಕಲು ಬಹಳಷ್ಟು ಖರ್ಚು ಮಾಡಬೇಕಾಗುತ್ತದೆ. ಒಬ್ಬ ಕಾರ್ಮಿಕ ದೋಟಿ ಬಳಸಿ ಕೊಯ್ಲು ಮಾಡಿದರೆ, ಇನ್ನೊಬ್ಬ ಕಾರ್ಮಿಕ ಜಾಳಿಗೆಯ ಉಪಕರಣದಲ್ಲಿ ಅದನ್ನು ಸಂಗ್ರಹಿಸುತ್ತಾನೆ. ಹೀಗಾಗಿ ಅಡಿಕೆ ಹೆಕ್ಕುವ ಶ್ರಮ ಉಳಿಯುತ್ತದೆ. ಒಂದೇ ದಿನದಲ್ಲಿ ಕೆಲಸ ಮುಗಿಯುತ್ತದೆ. ಹೀಗಾಗಿ ಸಿಂಪಡಣೆ ಮತ್ತು ಕೊಯ್ಲು ಖರ್ಚಿನ ಲೆಕ್ಕ ಹಾಕಿದರೆ ಸಾಂಪ್ರದಾಯಿಕವಿಧಾನಕ್ಕಿಂತ ಈ ವಿಧಾನದಲ್ಲಿ ರೈತರಿಗೆ ಕನಿಷ್ಠ ಶೇ 50ರಷ್ಟು ಉಳಿತಾಯವಾಗುತ್ತದೆ.

– ಶ್ರೀಪಡ್ರೆ, ಅಡಿಕೆ ಕೃಷಿ ತಜ್ಞ

ಕಾರ್ಮಿಕರಿಗಾಗಿ ಕಾಯುವ ತಾಪತ್ರಯ ತಪ್ಪಿದೆ

ಪಿಂಗಾರ ಸಂಸ್ಥೆಯ ದೋಟಿ ಗ್ಯಾಂಗ್ ಸೇವೆಯಿಂದ ನಾವು ಎದುರಿಸುತ್ತಿದ್ದ ಕಾರ್ಮಿಕರ ಸಮಸ್ಯೆ ನೀಗಿದೆ. ಕಾರ್ಮಿಕರಿಗಾಗಿ ಕಾಯುತ್ತ ಕೂರಬೇಕಿಲ್ಲ. ಅವರಿಗೆ ಕರೆ ಮಾಡಿ ಹೇಳಿದರೆ ಸಾಕು. ನಾಳೆ ನಿಮ್ಮ ತೋಟಕ್ಕೆ ಬರುತ್ತೇವೆ ಎಂದು ಹಿಂದಿನ ದಿನ ಮಾಹಿತಿ ನೀಡುತ್ತಾರೆ. ಹೇಳಿದ ದಿನ ಎಲ್ಲ ಉಪಕರಣಗಳೊಂದಿಗೆ ಬಂದು ಕೆಲಸ ಮಾಡುತ್ತಾರೆ. ರೈತರು ಮದ್ದು ತಯಾರಿಸಿಕೊಡಬೇಕು ಮತ್ತು ಕಾರ್ಮಿಕರಿಗೆ ಊಟದ ವ್ಯವಸ್ಥೆ ಮಾಡಬೇಕು ಅಷ್ಟೇ.

– ಕೆ.ವಿಶ್ವನಾಥ ಭಟ್ಟ, ಕೃಷಿಕರು, ಕುರಿಯ, ತಾ.ಪುತ್ತೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.