ಭಾನುವಾರ, 22 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿಂಗಾರ ಸಿರಿ... ಚೆಂದದ ಹೋರಿ...

ಗೋವರ್ಧನ ಎಸ್‌.ಎನ್‌.
Published : 22 ಸೆಪ್ಟೆಂಬರ್ 2024, 5:06 IST
Last Updated : 22 ಸೆಪ್ಟೆಂಬರ್ 2024, 5:06 IST
ಫಾಲೋ ಮಾಡಿ
Comments

ಹುಬ್ಬಳ್ಳಿ: ಮೈತುಂಬಾ ಚೆಂದದ ವಸ್ತ್ರ... ಮುಖದ ಮೇಲೆ ಚಿತ್ತಾರ...ಕೋಡಿನ ಮೇಲೆ ಉದ್ದದ ಕಿರೀಟ... ಸರ್ವಾಲಂಕಾರಭೂಷಿತರಾದ ಈ ‘ಸುಂದರ’ರನ್ನು ನೀವು ನೋಡಲು ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಕೃಷಿಮೇಳಕ್ಕೆ ಬರಬೇಕು.

ನೂರಾರು ಸ್ಪರ್ಧೆಗಳಲ್ಲಿ ಭಾಗವಹಿಸಿ, ಬಹುಮಾನ ಗೆದ್ದ ಹೋರಿಗಳು, ಅವುಗಳಿಗೆ ಮಾಡಿದ ಸಿಂಗಾರ ಈ ಬಾರಿಯ ಮೇಳದ ವಿಶೇಷತೆಗಳಲ್ಲೊಂದು. ರೈತರು, ಸಾರ್ವಜನಿಕರು ಆಸಕ್ತಿಯಿಂದ ಇವುಗಳನ್ನೇ ನೋಡಲು ಮುಗಿಬಿದ್ದಾಗ, ಒಮ್ಮೆ ದುರುಗುಟ್ಟಿ ನೋಡಿ, ಇನ್ನೊಮ್ಮೆ ನಾಚಿ ಹಿಂದೆ ಸರಿಯುವ ಹೋರಿಗಳ ಸೊಬಗು ಕಣ್ಣಿಗೆ ಹಬ್ಬದಂತಿದೆ.

‘ರಾಣೆಬೆನ್ನೂರ ಕ ರಾಜ’, ‘ತಡಸನಳ್ಳಿ ಶ್ರೀರಾಮ ಗೆಳೆಯರ ಬಳಗದ ಕೊಲೆಗಾರ’, ‘ಶಿರಾಳಕೊಪ್ಪದ ಎ–1 ಡಾನ್’ ಹೋರಿಗಳು ಹೆಸರಿನಷ್ಟೇ ವಿಶೇಷವಾಗಿವೆ.

‘ಹಾವೇರಿ, ಶಿವಮೊಗ್ಗ ಭಾಗದಲ್ಲಿ ನಡೆದ 100ಕ್ಕೂ ಹೆಚ್ಚು ಸ್ಪರ್ಧೆಗಳಲ್ಲಿ ‘ತಡಸನಹಳ್ಳಿ ಕೊಲೆಗಾರ’ ಸ್ಪರ್ಧಿಸಿದ್ದು, 25ಕ್ಕೂ ಹೆಚ್ಚು ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಗಳಿಸಿದೆ. ಹಲವು ಸ್ಪರ್ಧೆಗಳಲ್ಲಿ ಬಂಗಾರ, ಬೆಳ್ಳಿ ಗೆದ್ದಿದೆ. ಹಾನಗಲ್‌ನಲ್ಲಿ ನಡೆದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಬುಲೆಟ್‌ ಬೈಕ್‌ ಗೆದ್ದಿದೆ’ ಎಂದು ಹೋರಿಯ ಮಾಲೀಕರಾದ ಅಜಿತ್‌ ಹಾಗೂ ಮಹೇಶ ‘ಪ್ರಜಾವಾಣಿ’ಗೆ ತಿಳಿಸಿದರು.

‘ತಮಿಳುನಾಡಿನ ಅಮೃತಮಹಲ್ ತಳಿಯ ಹೋರಿಯನ್ನು 7 ವರ್ಷದಿಂದ ಸಾಕುತ್ತಿದ್ದೇವೆ. ಹೊಟ್ಟು, ಒಣಮೇವು, ಶೇಂಗಾ ಹಿಂಡಿ, ಹತ್ತಿಕಾಳನ್ನು ದಿನಕ್ಕೆ ಮೂರು ಬಾರಿ ನೀಡುತ್ತೇವೆ. ನಿತ್ಯ ಈಜು, ಒಂದಷ್ಟು ದೂರ ಓಡಿಸಿ, ಸ್ಪರ್ಧೆಗೆ ಅಣಿಗೊಳಿಸುತ್ತೇವೆ’ ಎಂದು ವಿವರಿಸಿದರು.

‘ಮನೆಯಲ್ಲಿ ಅಭಿಮನ್ಯು, ಪ್ರಳಯ ಎಂಬ ಇನ್ನೆರಡು ಹೋರಿಗಳಿವೆ. ಅವು ಸಹ 10ಕ್ಕೂ ಹೆಚ್ಚು ಸ್ಪರ್ಧೆಗಳಲ್ಲಿ ಪಾಲ್ಗೊಂಡಿವೆ. ಬಹುಮಾನಕ್ಕಿಂತ ಹೋರಿಗಳಿಗೆ ಜನರ ಅಭಿಮಾನ ಸಿಕ್ಕಿದೆ. ಜನಪದ ಕ್ರೀಡೆ ಉಳಿಸಿ–ಬೆಳೆಸುವುದು ನಮ್ಮ ಉದ್ದೇಶವಾಗಿದೆ’ ಎಂದರು.

‘ಇದೇ ಮೊದಲ ಬಾರಿಗೆ ಕೃಷಿಮೇಳದಲ್ಲಿ ಹೋರಿಗಳೊಂದಿಗೆ ಪಾಲ್ಗೊಂಡಿದ್ದೇವೆ. ಹೋರಿಗಳನ್ನು ನೋಡಿ ಜನರು ಖುಷಿ ಪಡುತ್ತಿದ್ದಾರೆ. ಒಂದು ಬಾರಿ ಅಲಂಕಾರ ಮಾಡಲು ₹4,000ಕ್ಕಿಂತ ಹೆಚ್ಚು ಖರ್ಚಾಗುತ್ತದೆ. ಹೋರಿ ಸಾಕುವುದು, ಅಲಂಕರಿಸುವುದು ನಮಗೊಂದು ರೀತಿ ಕ್ರೇಜ್’ ಎನ್ನುತ್ತಾರೆ ಅವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT