ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಂಗಾರಪೇಟೆ | ನಿರ್ವಹಣೆ ಕಾಣದ ಚರಂಡಿ: ರೋಗ ಭೀತಿ

ಬಂಗಾರಪೇಟೆ ಪಟ್ಟಣದಲ್ಲಿ ಎಲ್ಲೆಂದರಲ್ಲಿ ಕಸದ ರಾಶಿ
ಮಂಜುನಾಥ ಎಸ್.
Published : 6 ಜುಲೈ 2024, 7:54 IST
Last Updated : 6 ಜುಲೈ 2024, 7:54 IST
ಫಾಲೋ ಮಾಡಿ
Comments

ಬಂಗಾರಪೇಟೆ: ಪಟ್ಟಣದ ಬಹುತೇಕ ಬಡಾವಣೆಗಳಲ್ಲಿ ಎಲ್ಲೆಂದರಲ್ಲಿ ಕಸದ ರಾಶಿ, ನಿರ್ವಹಣೆ ಕಾಣದ ಚರಂಡಿಗಳೇ ಕಾಣುತ್ತವೆ. ಈ ತಾಣಗಳು ಸೊಳ್ಳೆ ಉತ್ಪತ್ತಿಗೆ ಹೇಳಿ ಮಾಡಿಸಿದಂತಾಗಿದೆ. ಡೆಂಗೆ ಸೇರಿದಂತೆ ಸಾಂಕ್ರಾಮಿಕ ರೋಗಗಳ ಭೀತಿ ಜನರನ್ನು ಆವರಿಸಿದೆ.

ಪಟ್ಟಣದ ಶೇಠ್ ಕಾಂಪೌಂಡ್, ರಹೀಮ್ ಕಾಂಪೌಂಡ್, ಖಾದರ್ ಬಡಾವಣೆ, ಮುನಿಯಮ್ಮ ಬಡಾವಣೆ, ಶಾಂತಿನಗರ, ಗಾಂಧಿನಗರ, ಕಾರಹಳ್ಳಿ ರಸ್ತೆ, ಬಸ್‌ನಿಲ್ದಾಣದ, ಸಿದ್ಧಾರ್ಥನಗರ, ಬಡಾವಣೆಗಳಲ್ಲಿ ಚರಂಡಿಗಳು ಕೊಳಕಿನಿಂದ ತುಂಬಿವೆ. ಇವು ಸೊಳ್ಳೆಗಳ ಉತ್ಪಾದನೆಯ ತಾಣಗಳಾಗಿವೆ ರೂಪುಗೊಂಡಿವೆ.

ಸೊಳ್ಳೆ ಕಾಟ ಹೆಚ್ಚಳ: ವಾತಾವರಣದ ಏರುಪೇರಿನಿಂದಾಗಿ ಸೊಳ್ಳೆಗಳು ಹೆಚ್ಚಾಗುತ್ತಿವೆ. ಅವುಗಳಿಗೆ ಪೂರಕವೆಂಬಂತೆ ಚರಂಡಿಗಳಲ್ಲಿ ನಿಂತ ನೀರು, ಇತ್ತೀಚೆಗೆ ಆಗಾಗ್ಗೆ ಸುರಿಯುತ್ತಿರುವ ಮಳೆಯಿಂದಾಗಿ ಹಳ್ಳಕೊಳ್ಳಗಳಲ್ಲಿ ಶೇಖರಣೆಗೊಂಡಿರುವ ಅಲ್ಪಸ್ವಲ್ಪ ನೀರಿನಿಂದಾಗಿ ಸೊಳ್ಳೆಗಳ ಉಗಮ ಸ್ಥಾನ ಸೃಷ್ಟಿಯಾಗಿದೆ. ಸಂಜೆಯಾಗುತ್ತಿದ್ದಂತೆ ಕಿಟಕಿ ಬಾಗಿಲುಗಳ ಮುಚ್ಚಿ, ಸೊಳ್ಳೆ ನಿವಾರಕಗಳ ಬಳಸಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ಸ್ಥಳೀಯರು ದೂರುತ್ತಾರೆ.

ಪಟ್ಟಣದ ಶೇಠ್ ಕಾಂಪೌಂಡ್, ರಹೀಮ್ ಕಾಂಪೌಂಡ್‌ಗಳಲ್ಲಿ ಸಮರ್ಪಕವಾಗಿ ಕಸವನ್ನು ಸಂಗ್ರಹಿಸದ ಕಾರಣ ಕಸದ ರಾಶಿಯನ್ನು ಹಾಕಲಾಗಿದೆ ದುರ್ವಾಸನೆಯಿಂದ ಮೂಗು ಮುಚ್ಚಿಕೊಂಡು ಹೋರಾಡುವ ಸ್ಥಿತಿ ಇದೆ.

ಮುನಿಯಮ್ಮ ಮತ್ತು ಅಮರಾವತಿ ಬಡಾವಣೆಯಲ್ಲಿ ಚರಂಡಿ ಮತ್ತು ರಾಜಕಾಲುವೆಗಳಲ್ಲಿ ಹುಲ್ಲು ಮತ್ತು ಗಿಡಗಳು ಬೆಳೆದಿವೆ. ಮಳೆ ನೀರು ಸರಾಗವಾಗಿ ಹರಿಯಲು ಸಾಧ್ಯವಾಗುತ್ತಿಲ್ಲ.

ಬಡಾವಣೆಯ ಜನರು ಅನೇಕ ಬಾರಿ ಪುರಸಭೆಯ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ. ಆದರೂ ಸಂಬಂಧ ಪಟ್ಟ ಅಧಿಕಾರಿಗಳು ಗಮನ ಹರಿಸದೇ, ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಹುಡುಕದೇ ಸಾಬೂಬು ನೀಡುತ್ತಾ ತಾತ್ಕಾಲಿಕ ಪರಿಹಾರಕ್ಕೆ ಒತ್ತು ನೀಡುತ್ತಿದ್ದಾರೆ ಎಂಬುದು ಸ್ಥಳೀಯರ ಆರೋಪ.

ದೇಶಿಹಳ್ಳಿಯಿಂದ ಪಟ್ಟಣದ ಎಸ್.ಎನ್‌. ರೆಸಾರ್ಟ್ಸ್‌ವರೆಗೆ ಡಬಲ್ ರಸ್ತೆಯ ಎರಡೂ ಬದಿಯ ಪಾದಚಾರಿ ಪಥದಲ್ಲಿ ಒಳಚರಂಡಿ ಇದೆ. ಇಲ್ಲಿ ಹಾಕಿರುವ ಸಿಮೆಂಟ್‌ ಕಲ್ಲುಗಳು ಮುರಿದುಬಿದ್ದಿದ್ದು, ಹಿರಿಯ ನಾಗರಿಕರು ಹಾಗೂ ಮಕ್ಕಳು ಬಿದ್ದರೆ ಅನಾಹುತ ತಪ್ಪಿದ್ದಲ್ಲ ಎಂದು ದಲಿತ ಸಮಾಜಸೇನೆಯ ಅಧ್ಯಕ್ಷ ಸೂಲಿಕುಂಟೆ ಆನಂದ ದೂರಿದರು.

ಬಂಗಾರಪೇಟೆಯ ಶೇಠ್  ಕಾಂಪೌಂಡ್ ಬಡಾವಣೆಯಲ್ಲಿ ಕಸದ ರಾಶಿ
ಬಂಗಾರಪೇಟೆಯ ಶೇಠ್  ಕಾಂಪೌಂಡ್ ಬಡಾವಣೆಯಲ್ಲಿ ಕಸದ ರಾಶಿ
ಬಂಗಾರಪೇಟೆಯ ಬಡಾವಣೆಯೊಂದರಲ್ಲಿ ನಿಂತಿರುವ ಚರಂಡಿ ನೀರು
ಬಂಗಾರಪೇಟೆಯ ಬಡಾವಣೆಯೊಂದರಲ್ಲಿ ನಿಂತಿರುವ ಚರಂಡಿ ನೀರು
ಶಂಕರ್ ಎಂ.
ಶಂಕರ್ ಎಂ.
ಸೂಲಿಕುಂಟೆ ಆನಂದ
ಸೂಲಿಕುಂಟೆ ಆನಂದ
ಹನುಮಂತಯ್ಯ ಎಚ್.ಎಂ.
ಹನುಮಂತಯ್ಯ ಎಚ್.ಎಂ.
ಹುಣಸನಹಳ್ಳಿ ವೆಂಕಟೇಶ್
ಹುಣಸನಹಳ್ಳಿ ವೆಂಕಟೇಶ್

ರಸ್ತೆ ಚರಂಡಿ ಹಾಗೂ ಕಸದ ರಾಶಿ ಸ್ವಚ್ಛಗೊಳಿಸಲು ಪುರಸಭೆ ಸ್ವಚ್ಛತಾ ಸಿಬ್ಬಂದಿ ಮತ್ತು ಮೇಲ್ವಿಚಾರಕರನ್ನು ನಿಯೋಜಿಸಬೇಕಿದೆ. ದೈನಂದಿನ ನಿರ್ವಹಣೆ ಕಡ್ಡಾಯಗೊಳಿಸಬೇಕು

– ಹುಣಸನಹಳ್ಳಿ ವೆಂಕಟೇಶ್ ನಿವಾಸಿ ಬಂಗಾರಪೇಟೆ

ಒತ್ತುವರಿಯಾಗಿರುವ ರಾಜಕಾಲುವೆ ಮತ್ತು ಚರಂಡಿಗಳ ಹೂಳು ತೆಗೆದಿಲ್ಲ. ಹಾಗಾಗಿ ಮಳೆ ನೀರು ಸರಾಗವಾಗಿ ಹರಿಯಲು ಸಾಧ್ಯವಿಲ್ಲದೇ ಮನೆಗಳಿಗೆ ನೀರು ನುಗ್ಗುತ್ತಿದೆ.

– ಶಂಕರ್ ಎಂ. ನಿವಾಸಿ ಅಮರಾವತಿ ನಗರ

ಮನೆಯ ಸುತ್ತ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನೀರು ನಿಂತು ಸೊಳ್ಳೆಗಳ ಸಂತಾನೋತ್ಪತ್ತಿ ಹೆಚ್ಚಾಗಿದೆ. ಡೆಂಗಿ ಚಿಕುನ್ ಗುನ್ಯಾ ಇತರೆ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ

–ಹನುಮಂತಯ್ಯ ಎಚ್.ಎಂ. ನಿವಾಸಿ ಮುನಿಯಮ್ಮ ಬಡಾವಣೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT