ಬುಧವಾರ, 2 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಫಲಾನುಭವಿಗಳ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿ ವಂಚನೆ:ಅಧಿಕಾರಿಗಳು ಸೇರಿ ಐವರ ಬಂಧನ

Published : 2 ಅಕ್ಟೋಬರ್ 2024, 0:26 IST
Last Updated : 2 ಅಕ್ಟೋಬರ್ 2024, 0:26 IST
ಫಾಲೋ ಮಾಡಿ
Comments

ಕೋಲಾರ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಸೇರಿದ ದೇವರಾಜ ಅರಸು ಅಭಿವೃದ್ಧಿ ನಿಗಮ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸಂಬಂಧಿಸಿದ ಯೋಜನೆಗಳಲ್ಲಿ ನಕಲಿ ದಾಖಲೆ ಸೃಷ್ಟಿಸಿ ಫಲಾನುಭವಿಗಳ ಹೆಸರಲ್ಲಿ ಸರ್ಕಾರಕ್ಕೆ ಆರ್ಥಿಕ ವಂಚನೆ ಮಾಡುತ್ತಿದ್ದ ಅಧಿಕಾರಿಗಳು ಸೇರಿದಂತೆ ಐವರು ಆರೋಪಿಗಳನ್ನು ಕೋಲಾರ ಸೈಬರ್‌ ಅಪರಾಧ ಹಾಗೂ ಮಾದಕ ವಸ್ತುಗಳ ನಿಯಂತ್ರಣ ಠಾಣೆ (ಸೆನ್‌) ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಕೆಜಿಎಫ್‌ ತಾಲ್ಲೂಕಿನ ಮೋತಕಪಲ್ಲಿ ಗ್ರಾಮದ ಕುಮಾರ್ ನಾಯ್ಡು, ದೇವರಾಜ ಅರಸು ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರಾಗಿದ್ದ ಗಣೇಶ್‌, ಸಿಬ್ಬಂದಿ ಶಿವಾನಂದ ರೆಡ್ಡಿ, ಜ್ಯೋತಿ ಲಕ್ಷ್ಮಿ ಹಾಗೂ ವೇಮಗಲ್ ಸಿಂಡಿಕೇಟ್‌ ಬ್ಯಾಂಕ್‌ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದ ಕುಚ್ಚಪ್ಪ ಬಂಧಿತರು.

ಕುಮಾರ್‌ ನಾಯ್ಡು
ಕುಮಾರ್‌ ನಾಯ್ಡು

ತಾಲ್ಲೂಕಿನ ನರಸಾಪುರ ಹೋಬಳಿಯ ಬೆಳಮಾರನಹಳ್ಳಿ ಗ್ರಾಮದ ನಿವಾಸಿ ಶ್ರೀದೇವಿ ಎಂಬುವರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಕುರುಬ ಸಮುದಾಯದವರೆಂದು ದೇವರಾಜ ಅರಸು ಅಭಿವೃದ್ಧಿ ನಿಗಮದ ‘ಚೈತನ್ಯ ಮಾರ್ಜಿನ್‌ ಮನಿ’ ಯೋಜನೆಯಡಿ ಕುರಿ ಸಾಕಣೆಗೆ ₹ 5 ಲಕ್ಷ ಹಣ ಪಡೆಯಲಾಗಿತ್ತು. ನಂತರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಯೋಜನೆಯಡಿ ಬರುವ ‘ಉದ್ಯೋಗಿನಿ’ಯಲ್ಲಿ ₹ 3 ಲಕ್ಷ ಪಡೆಯಲು ಹೊನ್ನೇನಹಳ್ಳಿ ತರಬೇತಿ ಕೇಂದ್ರದಲ್ಲಿ ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಜೊತೆಗೆ ನಕಲಿ ವ್ಯಕ್ತಿಗೆ ತರಬೇತಿ ಕೂಡ ನೀಡಲಾಗಿತ್ತು. ತಮ್ಮ ಹೆಸರಿನಲ್ಲಿ ನಡೆದಿರುವ ಈ ದಂಧೆ ಗೊತ್ತಾಗಿ ಶ್ರೀದೇವಿ ದೂರು ನೀಡಿದ್ದರು. ಈ ಸಂಬಂಧ ಸೈಬರ್‌ ಠಾಣೆಯವರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.

2018ರಿಂದ 2020ರ ಅವಧಿಯಲ್ಲಿ ‘ಚೈತನ್ಯ ಮಾರ್ಜಿನ್‌ ಮನಿ’ ಯೋಜನೆ ಹಾಗೂ ‘ಉದ್ಯೋಗಿನಿ’ ಯೋಜನೆಯಡಿ ಹಲವಾರು ನೈಜ ಫಲಾನುಭವಿಗಳಿಗೆ ಸೇರಬೇಕಾದ ಹಣ ದುರುಪಯೋಗ ಆಗಿರುವುದು ತನಿಖೆಯಲ್ಲಿ ಪೊಲೀಸರಿಗೆ ಗೊತ್ತಾಗಿದೆ.

ಈ ದಂಧೆಯಲ್ಲಿ ಹಿಂದುಳಿದ ವರ್ಗಗಳ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಬ್ಯಾಂಕ್‌ ಅಧಿಕಾರಿಗಳೇ ಭಾಗಿಯಾಗಿದ್ದಾರೆ. ಮಧ್ಯವರ್ತಿಗಳ ಜೊತೆ ಸೇರಿ ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಜ್ಯೋತಿಲಕ್ಷ್ಮಿ
ಜ್ಯೋತಿಲಕ್ಷ್ಮಿ

ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಖಿಲ್‌ ಬಿ., ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿಗಳಾದ ಸಿ.ಆರ್‌.ರವಿಶಂಕರ್‌, ಎಚ್‌.ಸಿ.ಜಗದೀಶ್‌ ಮಾರ್ಗದರ್ಶನದಲ್ಲಿ ಸಿಇಎನ್‌ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ಎಸ್‌.ಆರ್‌.ಜಗದೀಶ್‌ ನೇತೃತ್ವದಲ್ಲಿ ಪಿಎಸ್‌ಐ ಮಂಜುಳಾ, ಸಿಬ್ಬಂದಿ ಶಿವಾನಂದ್, ಆನಂದ್‌ ಕುಮಾರ್‌, ಅರುಣ್ ಕುಮಾರ್‌, ಆಲೀಫಾ, ಅಂಬರೀಷ್, ಶಂಕರ್‌, ಸಂತೋಷ್‌, ಪ್ರಸನ್ನ ಕುಮಾರ್‌, ವಿನಯ್‌, ಮಂಜುಳಾ ಹಾಗೂ ನಫೀಜ್‌ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಇವರ ಕಾರ್ಯವನ್ನು ಎಸ್‌ಪಿ ಶ್ಲಾಘಿಸಿದ್ದಾರೆ.

ಶಿವಾನಂದ ರೆಡ್ಡಿ
ಶಿವಾನಂದ ರೆಡ್ಡಿ
ಕುಚ್ಚಪ್ಪ
ಕುಚ್ಚಪ್ಪ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT