ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದಸರಾ ಕವಿಗೋಷ್ಠಿ: ‘ಪ್ರಶ್ನಿಸದವ, ಪ್ರತಿಭಟಿಸದವ ಕವಿಯಾಗಲಾರ’

‘ಪಂಚಕಾವ್ಯೋತ್ಸವ’ ಉದ್ಘಾಟಿಸಿದ ನಾಗತಿಹಳ್ಳಿ ಚಂದ್ರಶೇಖರ
Published : 5 ಅಕ್ಟೋಬರ್ 2024, 14:23 IST
Last Updated : 5 ಅಕ್ಟೋಬರ್ 2024, 14:23 IST
ಫಾಲೋ ಮಾಡಿ
Comments

ಮೈಸೂರು: ‘ಪ್ರಶ್ನಿಸದ, ಪ್ರತಿಭಟಿಸದವ ಕವಿಯಾಗಲಾರ. ಸಂತೃಪ್ತನಾದವನ ಎದೆಯಲ್ಲಿ ಕಾಲಾತೀತ ಕಾವ್ಯವೂ ಸೃಷ್ಟಿಯಾಗದು’ ಎಂದು ಕವಿ, ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ ಅಭಿಪ್ರಾಯಪಟ್ಟರು.

ಇಲ್ಲಿನ ಜಗನ್ಮೋಹನ ಅರಮನೆಯಲ್ಲಿ ನಾಡಹಬ್ಬ ದಸರಾ ಮಹೋತ್ಸವದ ಕವಿಗೋಷ್ಠಿ ‘ಪಂಚಕಾವ್ಯೋತ್ಸವ’ವನ್ನು ಶನಿವಾರ ಉದ್ಘಾಟಿಸಿ, ‘ಸೃಷ್ಟಿಯ ಮಹಾದೀಪ್ತಿಯಲ್ಲಿ ಪ್ರತಿಯೊಂದನ್ನು ಪರೀಕ್ಷಿಸುವ ಹಾಗೂ ಪ್ರಶ್ನಿಸುವ ಗುಣ ಕಾವ್ಯಕ್ಕಿದೆ. ಸ್ವಾಭಿಮಾನಿಗಳನ್ನು ಸೃಷ್ಟಿಸುವುದಷ್ಟೇ ಕಾವ್ಯವಲ್ಲ. ಸ್ವಾತಂತ್ರ್ಯವನ್ನೂ ರಕ್ಷಿಸಬೇಕು’ ಎಂದರು.

‘ಪ್ರಜ್ಞೆ, ಪ್ರಶ್ನೆ, ಪ್ರತಿಭಟನೆ, ಪ್ರಯೋಗ ಹಾಗೂ ಪ್ರಮಾಣ ಸೂತ್ರಗಳಲ್ಲಿಯೇ ಕಾವ್ಯದ ಆಕಾರ ನಿರ್ಮಿತಿಯಿದೆ. ಪ್ರಶ್ನೆಗಾಗಿ ಪ್ರಶ್ನೆ, ಪ್ರತಿಭಟನೆಗಾಗಿ ಪ್ರತಿಭಟನೆ ಮಾಡುವುದೇ ಕಾವ್ಯವಲ್ಲ. ಜನರ ಮುಂದಿನ ಸಹಜ, ಸಾಮಾನ್ಯ ವಿವರಗಳ ಮೂಲಕವೇ ಕಣ್ಣಿಗೆ ಕಾಣದಂತ ಚಿಂತನಾತ್ಮಕ ಲೋಕಕ್ಕೆ ಕರೆದೊಯ್ಯಬೇಕು. ನಿಜದ ಕವಿ ಪ್ರವಾದಿಯಂತೆ. ಅವನ ಕಾವ್ಯಕ್ಕೆ ದೂರದರ್ಶಿತ್ವವಿರುತ್ತದೆ’ ಎಂದು ಹೇಳಿದರು.

‘ವರ್ತಮಾನದ ಘಟನೆಗೆ ಕವಿ ಪ್ರತಿಕ್ರಿಯಿಸಿದ್ದರೂ ಅದು ಕಾಲಾತೀತ. ಕಾಲದ ನಿರಂತರತೆ ಮೀರುವವನಾಗಿದ್ದಾನೆ. ಹೀಗಾಗಿ ಕಾವ್ಯ ರಚನೆ ಗಂಭೀರವಾದ ಕಲೆಯಾಗಿದ್ದು, ಅದರ ಮೇಲಿನ ಆಸಕ್ತಿ ಹಾಗೂ ಆಸ್ವಾದಕ್ಕೆ ಬೇರೆಯಾದ ಮನಸ್ಥಿತಿ ಬೇಕಾಗುತ್ತದೆ. ಪ್ರಯೋಗಶೀಲ ಗುಣವೂ ಇರಬೇಕಾಗುತ್ತದೆ’ ಎಂದರು.

‘ಕನ್ನಡ ಕಾವ್ಯ ಇತಿಹಾಸದಲ್ಲಿ ಪಂ‍ಪನ ಶಬ್ದ ವ್ಯಾಪಾರದ ಸೊಗಸು, ರನ್ನನ ಬಾಣ ಬಿರುಸಿನ ಕಾವ್ಯದ ಬೆರಗು, ಸುಲಲಿತ ಉಚ್ಚಾರಕ್ಕೆ ಹಂಬಲಿಸುವ ನಾಗಚಂದ್ರನ ಕಾವ್ಯ, ಕನ್ನಡ– ಸಂಸ್ಕೃತ ಬೆರಸಬಾರದೆಂಬ ನಯಸೇನನ ವಿನಮ್ರ ನಂಬಿಕೆ, ಸಂಸ್ಕೃತ ಬೇಡವೆಂದು ಆಡುಮಾತಿನಲ್ಲಿ ಕಾವ್ಯ ಕಟ್ಟಿದ ವಚನ ಚಳವಳಿ, ನವೋದಯ, ನವ್ಯ, ದಲಿತ– ಬಂಡಾಯ ಸೇರಿದಂತೆ ಎಲ್ಲವೂ ಹೆಮ್ಮೆಯನ್ನು ತಂದು ಕೊಡುವ ಪ್ರಯೋಗಶೀಲತೆಯಾಗಿದೆ’ ಎಂದು ಉದಾಹರಿಸಿದರು.

‘ಕವಿಯಾದವನಿಗೆ ಪ್ರಜ್ಞೆ ಹಾಗೂ ಪ್ರತಿಭೆ ಎರಡೂ ಮುಖ್ಯ. ಹೊಸ ಕಾಲದಲ್ಲಿ ಕಾವ್ಯ ಪ್ರತಿಭೆಗಳ ಪ್ರವಾಹವೇ ಹರಿದು ಬರುತ್ತಿದ್ದು, ಅದು ಸಾಮಾಜಿಕ ಜಾಲತಾಣಗಳಿಗೂ ಇಣುಕಿದೆ. ನವೋದಯ, ನವ್ಯ, ಪ್ರಗತಿಪರ, ದಲಿತ, ಬಂಡಾಯ ಸಾಹಿತ್ಯ ಘಟ್ಟವನ್ನೂ ದಾಟಿ ಹೊಸ ಕಾವ್ಯ ರಚನೆಯಾಗುತ್ತಿದೆ. ಅದನ್ನು ಯಾವ ಪಟ್ಟಿಗೆ ಸೇರಿಸಬೇಕೆಂಬುದನ್ನು ಕಾಲವೇ ನಿರ್ಧರಿಸಲಿದೆ’ ಎಂದರು.

ದಸರಾ ಉದ್ಘಾಟಕರಾದ ಪ್ರೊ.ಹಂ.ಪ. ನಾಗರಾಜಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕಿ ಪ್ರೊ.ಎನ್‌.ಕೆ.ಲೋಲಾಕ್ಷಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸಿ.ಕೃಷ್ಣ, ದಸರಾ ಕವಿಗೋಷ್ಠಿ ಉಪಸಮಿತಿ ಅಧ್ಯಕ್ಷೆ ಹೇಮಲತಾ, ಉಪಾಧ್ಯಕ್ಷರಾದ ಕಮಲಾ ಅನಂತರಾಮ್, ಡಾ.ಎಂ.ನಾಗರಾಜು, ಅಹಲ್ಯಾ, ಈರನಾಯಕ, ನಿತ್ಯಾ ಪಾಲ್ಗೊಂಡಿದ್ದರು.

‘ಕಾಲಮಾನದ ಬಿಕ್ಕಟ್ಟಿಗೆ ಸ್ಪಂದಿಸಲಿ’

ಚಿಂತಕ ಪ್ರೊ.ಬಂಜಗೆರೆ ಜಯಪ್ರಕಾಶ ಮಾತನಾಡಿ ‘ಸ್ವಪ್ರಶಂಸೆ ಹೊಗಳಿಕೆ ಬಯಸದೇ ಕವಿಯು ಕಾಲಮಾನದ ಬಿಕ್ಕಟ್ಟುಗಳಿಗೆ ಸ್ಪಂದಿಸಬೇಕಿದೆ’ ಎಂದರು.

‘‌‌ಜನತೆಯ ನೋವು ದುಮ್ಮಾನಗಳಿಗೆ ಸ್ಪಂದಿಸಿದವರು ಜನಕವಿಯಾಗುತ್ತಾರೆ. ಪಾಬ್ಲೊ ನೆರೂಡ ಚಿಲಿ ದೇಶದ ಸಂಪತ್ತಾದರೆ ಕುವೆಂಪು ಕನ್ನಡ ಅಸ್ಮಿತೆಯ ಮೇರು ಶಿಖರವಾಗಿದ್ದಾರೆ. ಅವರು ತಾವು ಬದುಕಿದ ಕಾಲಘಟ್ಟದ ಧೋರಣೆ ವಿದ್ಯಮಾನಗಳಿಗೆ ದನಿಯಾಗಿದ್ದರು’ ಎಂದು ಉದಾಹರಿಸಿದರು.

‘ಕವಿಯಲ್ಲವೆಂದು ಹೀಯಾಳಿಸಿದರೂ ಹಿಂಜರಿಯಲಾರೆ. ಯುಗ ಪರಿವರ್ತನೆಗಾಗಿ ಬರೆಯುತ್ತಿದ್ದೇನೆಂದು ಕುವೆಂಪು ಹೇಳಿದ್ದರು. ನಾಲ್ಕು ಗೋಡೆಗಳ ಮಧ್ಯೆಗಿಂತ ನಾಲ್ಕು ಜನರ ಜೊತೆ ಬೆರತು ಬರೆದ ಕಾವ್ಯ ಎಂದಿಗೂ ನಿಲ್ಲುತ್ತದೆ’ ಎಂದರು.

‘ಹಿರಿಯರೇ ನಮ್ಮತ್ತಲೂ ನೋಡಿ’

‘ಮಕ್ಕಳನ್ನು ಹಿರಿಯರು ಅಲಕ್ಷ್ಯಿಸುತ್ತಿದ್ದು ಗಂಭೀರವಾಗಿ ಪರಿಗಣಿಸುತ್ತಿಲ್ಲ. ನಾವು ಮುಗ್ಧರು ಹಾಗೂ ಅಸಹಾಯಕರೂ ಆಗಿರುವುದರಿಂದ ನಮ್ಮ ಮಕ್ಕಳ ಸಾಹಿತ್ಯವೂ ಅಲಕ್ಷ್ಯವಾಗಿದೆ’ ಎಂದು ಹೇಳಿದ ‘ಚಿಗುರು’ ಕವಯತ್ರಿ ಪ್ರಣತಿ ಆರ್.ಗಡಾದ ಎಲ್ಲರ ಗಮನ ಸೆಳೆದರು.

‘ನಮ್ಮ ಮನಸ್ಸಿನ ಆಳಕ್ಕಿಳಿದು ಸಂತಸ ಪಡಿಸುವ ಮಕ್ಕಳ ಸಾಹಿತ್ಯ ಇಂದು ಸತ್ತೇ ಹೋಗಿದೆ. ಮಕ್ಕಳ ಸಾಹಿತ್ಯವನ್ನು ಬರೆಯುವವರು ದೊಡ್ಡವರೇ ಆಗಿದ್ದಾರೆ. ಮಕ್ಕಳನ್ನು ಸುಲಭವಾಗಿ ಅಂದಾಜಿಸಬೇಡಿ. ಮುಖ್ಯ ಸಾಹಿತಿಗಳೇ ದಯವಿಟ್ಟು ಕಡೆಗಣಿಸಬೇಡಿ. ಎಲ್ಲಿಯವರೆಗೆ ನಮ್ಮತ್ತ ನೀವು ನೋಡುವುದಿಲ್ಲವೋ ನಿಮ್ಮ ಚಿಂತನೆಗಳೂ ಅಪೂರ್ಣ. ನಿಮ್ಮ ನಿರ್ಧಾರಗಳನ್ನು ಹೇರಬೇಡಿ. ಆಲೋಚನೆಗಳು ನಿಮ್ಮದಾದರೂ ವಿಚಾರಗಳು ನಿಮ್ಮದಾಗಿರುವುದಿಲ್ಲ ಅಲ್ಲವೇ’ ಎಂದು ಪ್ರಶ್ನಿಸಿದರು.

‘ಮಕ್ಕಳಿಗಾಗಿ ಮಕ್ಕಳೇ ಸಾಹಿತ್ಯವನ್ನು ಬರೆದಾಗ ಪ್ರೋತ್ಸಾಹಿಸಿ ಒತ್ತಾಸೆಯಾಗಿ ನಿಲ್ಲಿ’ ಎಂದು ಕೋರಿದರು.

ಸಮರಸ ಕವಿಗೋಷ್ಠಿ: ಪ್ರೀತಿ ವಾತ್ಸಲ್ಯವೇ ಪ್ರಧಾನ

‘ಸಮರಸ ಕವಿಗೋಷ್ಠಿ’ಯಲ್ಲಿ ಪ್ರೀತಿ ತಂದೆ– ತಾಯಿಯ ವಾತ್ಸಲ್ಯ ನಾಡು– ನುಡಿ ಮಹಿಳಾ ಸಮಾನತೆ ಸೇರಿದಂತೆ ಎಲ್ಲ ವಿಷಯಗಳ ಮೇಲೆ ರಚಿಸಿದ ಕವಿತೆಗಳು ನಲಿದವು. ಭಾವುಕ ವಾತಾವರಣವನ್ನೂ ನಿರ್ಮಿಸಿದವು. ಪುಟಾಣಿಗಳಿಂದ ಹಿಡಿದು ಹಿರಿಯ ವಯಸ್ಸಿನ ಕವಿಗಳು ವಾಚಿಸಿದರು.

ಪುಟಾಣಿ ಅನಿಲ್ ಅವರ ‘ನಾವು–ನೀವು’ ಎಂಬ ಪುಟ್ಟ ಕವಿತೆಯು ಪ್ರಕೃತಿ ರಕ್ಷಣೆ ಮಾಡಬೇಕೆಂದು ಧ್ವನಿಸಿತು. ಸರ್ಕಾರಿ ಶಾಲೆಗಳನ್ನು ಉಳಿಸಬೇಕೆಂಬ ಒತ್ತಾಯವೂ ಇತ್ತು. ಚಾಮರಾಜನಗರದ ಅನಿಲ್ ಕುಮಾರ್ ಹೊಸೂರು ಅವರ ‘ಶಕುಂತಲೆ ನೀನೊಂದು ಆತ್ಮಕಥೆ ಬರೆಯಬೇಕಿತ್ತು’ ಕವಿತೆಯು ಪುರುಷ ಪ್ರಧಾನ ಸಮಾಜದ ಕಠೋರತನವನ್ನು ತೋರಿತು.

ಕೊಡಗಿನ ಉಳುವಂಗಡ ಕಾವೇರಿ ಉದಯ ಅವರು ‘ಧರೆಗಿಳಿದ ಮಾತೆ’ ವಾಚಿಸಿದರೆ ಕೆ.ಆರ್‌.ನಗರದ ಕೃಷ್ಣ ತಿಪ್ಪೂರು ಅವರು ಅಪ್ಪನ ಶ್ರಮ ಬದುಕನ್ನು ಹೇಳಿ ಭಾವುಕಗೊಳಿಸಿದರು. ಹಾಸನ ಚಾಮರಾಜನಗರ ಕೊಡಗು ಮಂಡ್ಯ ಮೈಸೂರು ಜಿಲ್ಲೆಗಳ 33 ಕವಿಗಳು ಪಾಲ್ಗೊಂಡಿದ್ದರು. ಮುಖ್ಯ ಅತಿಥಿಯಾಗಿ ಚಿತ್ರ ಸಾಹಿತಿ ವಿ.ನಾಗೇಂದ್ರ ಪ್ರಸಾದ್ ಅಧ್ಯಕ್ಷರಾಗಿ ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷ ಮಾನಸ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT