ಶನಿವಾರ, 28 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕನಕಪುರದಿಂದ ಜೆಡಿಎಸ್ ಬಲವರ್ಧನೆಗೆ ಕಹಳೆ

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎ. ಮಂಜುನಾಥ್ ಹೇಳಿಕೆ
Published : 28 ಸೆಪ್ಟೆಂಬರ್ 2024, 7:15 IST
Last Updated : 28 ಸೆಪ್ಟೆಂಬರ್ 2024, 7:15 IST
ಫಾಲೋ ಮಾಡಿ
Comments

ರಾಮನಗರ: ‘ಪಕ್ಷ ಬಲವರ್ಧನೆಗಾಗಿ ಸೆ. 29ರಂದು ಜಿಲ್ಲಾ ಮಟ್ಟದ ಸದಸ್ಯತ್ವ ನೋಂದಣಿ ಅಭಿಯಾನವನ್ನು ಕನಕಪುರಲ್ಲಿ ಹಮ್ಮಿಕೊಳ್ಳಲಾಗಿದೆ. ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ವಿರೋಧ ಪಕ್ಷದ ನಾಯಕ ಸುರೇಶ್ ಬಾಬು ಸೇರಿದಂತೆ ಪಕ್ಷದ ಶಾಸಕರು ಹಾಗೂ ಮುಖಂಡರು ಅಭಿಯಾನದಲ್ಲಿ ಪಾಲ್ಗೊಂಡು ಬಲ ತುಂಬಲಿದ್ದಾರೆ’ ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎ. ಮಂಜುನಾಥ್ ಹೇಳಿದರು.

‘ಪ್ರತಿ ಬೂತ್‌ನಲ್ಲಿ ಕನಿಷ್ಠ 50 ಸದಸ್ಯತ್ವ ಮಾಡುವಂತೆ ಸ್ಥಳೀಯ ಪದಾಧಿಕಾರಿಗಳಿಗೆ ಗುರಿ ನೀಡಲಾಗಿದೆ. ಅದಕ್ಕಾಗಿ, ಬೂತ್ ಮಟ್ಟದ ಸಮಿತಿ ರಚಿಸಲಾಗಿದೆ. ಪಕ್ಷವು ಲೋಕಸಭಾ ಚುನಾವಣೆ ಬಳಿಕ ಕನಕಪುರದಲ್ಲಿ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಅದಕ್ಕೆ ಮತ್ತಷ್ಟು ಪುಷ್ಟಿ ನೀಡಿ ಬಲಗೊಳಿಸಲು ಪಕ್ಷದ ನಾಯಕರು ನಿರ್ಧರಿಸಿದ್ದಾರೆ’ ಎಂದು ನಗರದ ಜೆಡಿಎಸ್ ಕಚೇರಿಯಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ರಾಜ್ಯದಲ್ಲಿ ಪಕ್ಷವನ್ನು ಬಲವರ್ಧನೆಗೊಳಿಸುವ ದೃಷ್ಟಿಯಿಂದ ಈಗಾಗಲೇ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಅದರಂತೆ, ರಾಮನಗರ ಕ್ಷೇತ್ರದಲ್ಲಿ ತೆರವಾಗಿದ್ದ ಸ್ಥಾನಕ್ಕೆ ಸಬ್ಬಕೆರೆ ಶಿವಲಿಂಗಯ್ಯ ಅವರನ್ನು ನೇಮಕ ಮಾಡಿದ್ದಾರೆ. ಪಕ್ಷದ ಶಿಸ್ತಿನ ಸಿಪಾಯಿಯಾಗಿರುವ ಅವರು ಪಕ್ಷವನ್ನು ತಳಮಟ್ಟದಲ್ಲಿ ಸಂಘಟಿಸುವ ವಿಶ್ವಾಸವಿದೆ’ ಎಂದು ಹೇಳಿದರು.

ಚುನಾವಣೆ ಗಿಮಿಕ್: ‘ಉಪ ಚುನಾವಣೆ ಮೇಲೆ ಕಣ್ಣಿಟ್ಟಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಅಭಿವೃದ್ಧಿಯ ಹೆಸರಿನಲ್ಲಿ ಜನರನ್ನು ಸೆಳೆಯಲು ಗಿಮಿಕ್ ಮಾಡುತ್ತಿದ್ದಾರೆ. ಅದಕ್ಕೂ ಮುಂಚೆ ಯಾಕೆ ಚನ್ನಪಟ್ಟಣದತ್ತ ತಿರುಗಿ ನೋಡಿಲ್ಲ? ನಮ್ಮ ಕಾರ್ಯಕರ್ತರಿಗೆ ಹಣದ ಆಮಿಷ ತೋರಿಸಿ ಕಾಂಗ್ರೆಸ್‌ನತ್ತ ಸೆಳೆಯಲಾಗುತ್ತಿದೆ. ಅವರು ಏನೇ ಮಾಡಿದರೂ ಎನ್‌ಡಿಎ ಅಭ್ಯರ್ಥಿ ಗೆಲ್ಲುವು ಖಚಿತ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ರಾಮನಗರ ವಿಧಾನಸಭಾ ಕ್ಷೇತ್ರದ ನೂತನ ಅಧ್ಯಕ್ಷ ಶಿವಲಿಂಗಯ್ಯ ಮಾತನಾಡಿ, ‘ಪಕ್ಷದ ನಾಯಕರು ನಂಬಿಕೆ ಇಟ್ಟು ಅಧ್ಯಕ್ಷ ಸ್ಥಾನ ಕೊಟ್ಟಿದ್ದಾರೆ. ಜಿಲ್ಲೆ, ತಾಲ್ಲೂಕು ಮುಖಂಡರು ಹಾಗೂ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಕ್ಷೇತ್ರದಲ್ಲಿ ಪಕ್ಷವನ್ನು ಸಂಘಟಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುವೆ’ ಎಂದು ಹೇಳಿದರು.

ನಗರಸಭೆ ಸದಸ್ಯರಾದ ಮಂಜುನಾಥ್, ಗ್ಯಾಬ್ರಿಯಲ್, ರವಿ, ಮುಖಂಡರಾದ ಮಂಜುನಾಥ್, ನರಸಿಂಹಮೂರ್ತಿ, ಉಮೇಶ್, ರಮೇಶ್, ರಾಮಕೃಷ್ಣ, ಜಯಕುಮಾರ್, ಸೋಮಶೇಖರ್, ಸರಸ್ವತಿ, ಶೋಭಾ ಹಾಗೂ ಇತರರು ಇದ್ದರು.

‘ವಿಲೀನಕ್ಕೆ ಜೆಡಿಎಸ್ ಸದಸ್ಯರು ಸಹಿ ಹಾಕಿಲ್ಲ’

‘ಚನ್ನಪಟ್ಟಣ ನಗರಸಭೆಯ 13 ಜೆಡಿಎಸ್ ಸದಸ್ಯರು ಕಾಂಗ್ರೆಸ್‌ಗೆ ಹೋಗಿಲ್ಲ. ಎಲ್ಲರೂ ನಮ್ಮೊಂದಿಗೇ ಇದ್ದಾರೆ. ನಿಖಿಲ್ ಕುಮಾರಸ್ವಾಮಿ ಅವರು ಇತ್ತೀಚೆಗೆ ಸದಸ್ಯರೊಂದಿಗೆ ಮಾತನಾಡಿದ್ದಾರೆ. ಅಧಿಕಾರವಿದೆ ಎಂದು ಡಿ.ಕೆ ಸಹೋದರರು ಮೂರನೇ ಎರಡರಷ್ಟು ಸದಸ್ಯರು ನಮ್ಮ ಕಡೆಗಿದ್ದಾರೆ ಎಂದು ಜಿಲ್ಲಾಧಿಕಾರಿ ಮೇಲೆ ಒತ್ತಡ ತಂದು ಕಾಂಗ್ರೆಸ್‌ನೊಳಗೆ ವಿಲೀನ ಮಾಡಿಸಿಕೊಂಡಿದ್ದಾರೆ. ಆದರೆ ಆ ಪತ್ರಕ್ಕೆ ಜೆಡಿಎಸ್‌ನವರು ಸಹಿ ಹಾಕಿಲ್ಲ. ಈ ಕುರಿತು ಜೆಡಿಎಸ್‌ ಕಾನೂನು ಹೋರಾಟ ನಡೆಸುತ್ತಿದೆ. ನಗರಸಭೆ ಅಧ್ಯಕ್ಷ–ಉಪಾಧ್ಯಕ್ಷ ಸ್ಥಾನದ ಚುನಾವಣೆಗೆ ದಿನಾಂಕ ಘೋಷಣೆಯಾದರೆ ಅಲ್ಲಿನ ರಾಜಕೀಯ ಚಿತ್ರಣ ಬದಲಾಗಲಿದೆ’ ಎಂದು ಎ. ಮಂಜುನಾಥ್ ಮಾರ್ಮಿಕವಾಗಿ ನುಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT