ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಭದ್ರಾ ಜಲಾಶಯ: ಸೋರಿಕೆ ತಡೆಗೆ ನೀರಿನಡಿ ಕಾರ್ಯಾಚರಣೆ

ಕೆಎನ್‌ಎನ್‌ಗೆ ಕೇಂದ್ರದ ತಜ್ಞರಿಂದಲೂ ತಾಂತ್ರಿಕ ನೆರವು
Published : 6 ಜುಲೈ 2024, 21:30 IST
Last Updated : 6 ಜುಲೈ 2024, 21:30 IST
ಫಾಲೋ ಮಾಡಿ
Comments

ಶಿವಮೊಗ್ಗ: ಲಕ್ಕವಳ್ಳಿಯ ಭದ್ರಾ ಜಲಾಶಯದಲ್ಲಿನ ನದಿಮಟ್ಟದ ಸ್ಲುಸ್ ಗೇಟ್‌ನಲ್ಲಿ ಆಗುತ್ತಿರುವ ನೀರಿನ ಸೋರಿಕೆ ತಡೆಯಲು ಕರ್ನಾಟಕ ನೀರಾವರಿ ನಿಗಮವು ನೀರಿನ ಆಳದಲ್ಲಿ ಕಾರ್ಯಾಚರಣೆ ಆರಂಭಿಸಿದೆ.

ಈ ಕಾರ್ಯಕ್ಕೆ ಕೇಂದ್ರದ ಜಲಸಂಪನ್ಮೂಲ ಇಲಾಖೆ ಅಧೀನದ ಡ್ಯಾಂ ಸೇಫ್ಟಿ ರಿವ್ಯೂ ಪ್ಯಾನಲ್ (ಡಿಎಸ್‌ಆರ್‌ಪಿ) ಹಾಗೂ ಡ್ಯಾಂ ಸೇಫ್ಟಿ ಆರ್ಗನೈಸೇಷನ್‌ನ (ಡಿಎಸ್‌ಒ) ತಜ್ಞರು ಕೈಜೋಡಿಸಿದ್ದಾರೆ.

3 ತಿಂಗಳ ಹಿಂದೆಯೇ ತೊಂದರೆ: ಜಲಾಶಯದಲ್ಲಿರುವ ನದಿ ಮಟ್ಟದ ಸ್ಲುಸ್‌ ಗೇಟ್ ಜಾಮ್ ಆಗಿರುವುದೇ ನೀರು ಸೋರಿಕೆಗೆ ಕಾರಣ ಎಂದು ತಿಳಿದುಬಂದಿದೆ.

ಬರಗಾಲದ ಕಾರಣ ಭದ್ರಾ ಜಲಾಶಯದ ಇತಿಹಾಸದಲ್ಲಿಯೇ ಈ ಬಾರಿ ಅತ್ಯಂತ ಕಡಿಮೆ ನೀರು ಸಂಗ್ರಹವಾಗಿತ್ತು. ದಾವಣಗೆರೆ, ಹಾವೇರಿ, ಗದಗ, ವಿಜಯನಗರ, ಕೊಪ್ಪಳ ಜಿಲ್ಲೆಗಳ ನದಿ ಪಾತ್ರದ ಜನರಿಗೆ ಕುಡಿಯುವ ನೀರು ಪೂರೈಸಲು ಸರ್ಕಾರದ ಆದೇಶದಂತೆ ಏಪ್ರಿಲ್ 5ರಂದು ಜಲಾಶಯದಿಂದ ತುಂಗಭದ್ರಾ ನದಿಗೆ 2 ಟಿಎಂಸಿ ಅಡಿ ನೀರು ಹರಿಸಲಾಗಿತ್ತು.

ಆಗ ನೀರು ಜಲಾಶಯದ ಕ್ರಸ್ಟ್‌ಗೇಟ್‌ಗಿಂತ ಕೆಳಗೆ ಇದ್ದುದ್ದರಿಂದ ನದಿ ಮಟ್ಟದಲ್ಲಿನ ಸ್ಲುಸ್‌ ಗೇಟ್ ತೆರೆಯಲಾಗಿತ್ತು. 15 ವರ್ಷಗಳ ನಂತರ ಆಪರೇಟ್ ಆಗಿದ್ದರಿಂದ ಗೇಟ್ ತೆರೆಯುವಾಗ ಹಾನಿಗೀಡಾಗಿದೆ. ಅದನ್ನು ದುರಸ್ತಿಪಡಿಸಿ ಮುಚ್ಚಲು ಮುಂದಾಗುವ ಹೊತ್ತಿಗೆ ಜಲಾಶಯದಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ನೀರಿನ ಒತ್ತಡದಿಂದ ಗೇಟ್‌ ಸ್ಲಗ್‌ಗೆ ಕೂರದೇ ಜಾಮ್ ಆಗಿ ಸೋರಿಕೆ ಶುರುವಾಗಿದೆ ಎಂದು ಮೂಲಗಳು ತಿಳಿಸಿವೆ.

ಸಮರೋಪಾದಿಯಲ್ಲಿ ಕಾರ್ಯ: ‘ಗೇಟ್ ಜಾಮ್ ಆಗಿದೆ ಅಷ್ಟೇ. ಕಿತ್ತು ಹೋಗಿದ್ದರೆ ಜಲಾಶಯ ಸಂಪೂರ್ಣ ಖಾಲಿ ಆಗಿರುತ್ತಿತ್ತು. ನೀರು ಸೋರಿಕೆ ಆಗಿ ನದಿಗೆ ಹರಿದಿರುವುದು 0.34 ಟಿಎಂಸಿ ಅಡಿ (1,000 ಕ್ಯುಸೆಕ್‌ನಷ್ಟು) ಮಾತ್ರ. ಗೇಟ್‌ ಬಹಳ ವರ್ಷ ತೆರೆಯದೇ ಇದ್ದ ಕಾರಣ ಕ್ಯಾಲ್ಸಿನೇಶನ್ ಆಗಿ ಈ ಸಮಸ್ಯೆ ತಲೆದೋರಿದೆ. ದುರಸ್ತಿ ಕಾರ್ಯವನ್ನು ಸಮರೋಪಾದಿಯಲ್ಲಿ ಕೈಗೊಂಡಿದ್ದೇವೆ’ ಎಂದು ಭದ್ರಾ ಜಲಾಶಯ ನಿರ್ವಹಣಾ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಎನ್.ರವಿಕುಮಾರ್ ಹೇಳಿದರು.

‘ಮೂರು ದಿನಗಳ ಸತತ ಪ್ರಯತ್ನದ ಫಲವಾಗಿ ನೀರಿನ ಸೋರಿಕೆ ಪ್ರಮಾಣ ಶನಿವಾರದ ಹೊತ್ತಿಗೆ ಶೇ 60ರಷ್ಟು ಕಡಿಮೆ ಆಗಿದೆ. ಭಾನುವಾರದ ವೇಳೆಗೆ ಸಂಪೂರ್ಣ ನಿಲುಗಡೆ ಆಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೆಎನ್‌ಎನ್‌ ತಕ್ಷಣ ಕಾರ್ಯಪ್ರವೃತ್ತವಾದ ಕಾರಣ ಜಲಾಶಯ ಅಪಾಯದಿಂದ ಪಾರಾಗಿದೆ. ಗೇಟ್‌ನ ಶಾಶ್ವತ ದುರಸ್ತಿ ಕಾರ್ಯ ಆಗುತ್ತಿದೆ. ಅಪಪ್ರಚಾರ ಊಹಾಪೋಹಗಳಿಗೆ ಕಿವಿಗೊಡಬೇಡಿ.
–ಎನ್‌.ರವಿಕುಮಾರ್, ಕಾರ್ಯನಿರ್ವಾಹಕ ಎಂಜಿನಿಯರ್ ಭದ್ರಾ ಜಲಾಶಯ ವಿಭಾಗ ಲಕ್ಕವಳ್ಳಿ
ಆಕ್ಸಿಜನ್ ಮಾಸ್ಕ್ ಧರಿಸಿ ದುರಸ್ತಿ ಕಾರ್ಯ
ಜಲಾಶಯದಲ್ಲಿ ಸದ್ಯ 130 ಅಡಿ ನೀರಿನ ಸಂಗ್ರಹ ಇದೆ. ಗೇಟ್‌ 45 ಅಡಿ ಎತ್ತರದಲ್ಲಿದೆ. ಹೀಗಾಗಿ 85 ಅಡಿ ಆಳದ ನೀರಿನಲ್ಲಿ ಆಕ್ಸಿಜನ್ ಮಾಸ್ಕ್‌ ಧರಿಸಿ ತಜ್ಞರು ಗೇಟ್‌ನ ದುರಸ್ತಿ ಕಾರ್ಯ ಕೈಗೊಂಡಿದ್ದಾರೆ. ಆರು ಮಂದಿ ಮುಳುಗು ತಜ್ಞರು ಸೇರಿದಂತೆ ಕೊಡಗಿನಿಂದ ಬಂದಿರುವ 20 ಮಂದಿ ತಂತ್ರಜ್ಞರು ಈ ಕಾರ್ಯದಲ್ಲಿ ತೊಡಗಿದ್ದಾರೆ. ‘ಹೈದರಾಬಾದ್‌ನಲ್ಲಿರುವ ಡಿಎಸ್‌ಆರ್‌ಪಿಯ ಗೇಟ್‌ ತಂತ್ರಜ್ಞರೊಬ್ಬರು ಆನ್‌ಲೈನ್‌ ಮೂಲಕವೇ ದುರಸ್ತಿ ಕಾರ್ಯಕ್ಕೆ ಕೆಎನ್‌ಎನ್‌ಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಡಿಎಸ್‌ಒ ಅಧಿಕಾರಿಗಳು ಬೆಂಗಳೂರಿನಿಂದ ಸಲಹೆ ಸೂಚನೆ ನೀಡುತ್ತಿದ್ದಾರೆ. ಕೆಎನ್‌ಎನ್‌ ವ್ಯವಸ್ಥಾಪಕ ನಿರ್ದೇಶಕ ರಾಜೇಶ ಅಮ್ಮಿನಬಾವಿ ಕಾರ್ಯಾಚರಣೆಯ ಸಮನ್ವಯ ನಡೆಸುತ್ತಿದ್ದಾರೆ’ ಎಂದು ಎನ್.ರವಿಕುಮಾರ್ ತಿಳಿಸಿದರು.

ಮುಕ್ಕಾಲು ಅಡಿ ಬಾಕಿ: ‘ಸ್ಲುಸ್‌ ಗೇಟ್ ಒಳಗೆ 1.5 ಅಡಿ ಮಾತ್ರ ಜಾಗ ಇದೆ. ಇಬ್ಬರು ಮಾತ್ರ ನಿಂತು ಕೆಲಸ ಮಾಡಬಹುದಾಗಿದೆ. ಹೊರ ಭಾಗದಲ್ಲೂ ಗೇಟನ್ನು ವೆಲ್ಡಿಂಗ್‌ ಮಾಡಿ ಸೀಲ್ ಮಾಡಬೇಕಿದೆ. ಗೇಟ್‌ ಒಳಗೆ ನೀರಿನ ಒತ್ತಡ ಹೊರಗೆ ನಿರಂತರ ಮಳೆ ಸುರಿಯುತ್ತಿರುವುದು ದುರಸ್ತಿ ಕಾರ್ಯಕ್ಕೆ ಸವಾಲಾಗಿದೆ. ಸ್ಲಗ್‌ನಿಂದ ಗೇಟ್ 10 ಅಡಿ ಹೊರಗೆ ಬಂದಿತ್ತು. ಕಳೆದ ಮೂರು ದಿನಗಳ ಸತತ ಪ್ರಯತ್ನದಿಂದ 9.25 ಅಡಿಯಷ್ಟು ಒಳಗೆ ಕೂರಿಸಿ ಮುಚ್ಚಲಾಗಿದೆ. ಇನ್ನು ಮುಕ್ಕಾಲು ಅಡಿ ಮಾತ್ರ ಬಾಕಿ ಉಳಿದಿದೆ’ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT