ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಮ್ಮ ಸಂಸ್ಕೃತಿಯಲ್ಲಿ ನಿಸರ್ಗ ಪ್ರೇಮ ಇಲ್ಲ: ಡಾ.ಕೆ.ಉಲ್ಲಾಸ ಕಾರಂತ

ಶಿವರಾಮ ಕಾರಂತರ 122ನೇ ಜನ್ಮ ದಿನಾಚರಣೆ ಕಾರ್ಯಕ್ರಮ
Published : 11 ಅಕ್ಟೋಬರ್ 2024, 5:11 IST
Last Updated : 11 ಅಕ್ಟೋಬರ್ 2024, 5:11 IST
ಫಾಲೋ ಮಾಡಿ
Comments

ಉಡುಪಿ: ಭಾರತೀಯ ಸಂಸ್ಕೃತಿಯಲ್ಲಿ ನಾಟ್ಯ, ಸಂಗೀತ, ಶಿಲ್ಪಕಲೆ ಎಲ್ಲಾ ಇದೆ, ಆದರೆ ನಿಸರ್ಗ ಪ್ರೇಮ ಇಲ್ಲ ಎಂದು ಸಾಹಿತಿ ಶಿವರಾಮ ಕಾರಂತರ ಪುತ್ರ ಹಾಗೂ ವನ್ಯಜೀವಿ ತಜ್ಞ ಡಾ.ಕೆ.ಉಲ್ಲಾಸ ಕಾರಂತ ಹೇಳಿದರು.

ಮಣಿಪಾಲ ಅಕಾಡೆಮಿ ಆಫ್ ಹೈಯರ್‌ ಎಜುಕೇಷನ್‌ ವತಿಯಿಂದ ನಗರದ ಐವೈಸಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಡಾ.ಕೆ.ಶಿವರಾಮ ಕಾರಂತರ 122ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಾರತದಲ್ಲಿ 1,200 ಪಕ್ಷಿ ಪ್ರಬೇಧಗಳಿವೆ. ಆದರೆ, ಹೆಚ್ಚಿನವರಿಗೆ ಅವುಗಳ ಹೆಸರು ಗೊತ್ತಿಲ್ಲ. ನಾವು ಮೋಕ್ಷದ ಬಗ್ಗೆ ಚಿಂತನೆ ನಡೆಸುತ್ತೇವೆ, ಆದರೆ ಸುತ್ತಮುತ್ತಲಿನ ಪರಿಸರವನ್ನು ವೀಕ್ಷಿಸುವ ರೂಢಿ ಇಟ್ಟುಕೊಂಡಿಲ್ಲ ಎಂದರು.

ಶಿವರಾಮ ಕಾರಂತರಿಗೆ ಪ್ರಾಣಿ, ಪಕ್ಷಿಗಳ ಬಗ್ಗೆ ಅಪಾರ ಆಸಕ್ತಿ ಇತ್ತು. ಅದುವೆ ನನಗೆ ಬಳುವಳಿಯಾಗಿ ಬಂದಿದೆ. ಅವರಿಂದಾಗಿಯೇ ನನಗೆ ಅದರಲ್ಲಿ ಆಸಕ್ತಿ ಮೂಡಿದೆ ಎಂದು ಹೇಳಿದರು.

ಮಕ್ಕಳಲ್ಲಿ ಪ್ರಾಣಿಗಳ ಬಗ್ಗೆ ಆಸಕ್ತಿ ಮೂಡಲಿ ಎಂಬ ಉದ್ದೇಶದಿಂದ ತಂದೆಯವರು ಪುತ್ತೂರಿನ ಬಾಲವನದಲ್ಲಿ ಸಣ್ಣ ಮೃಗಾಲಯ ಸ್ಥಾಪಿಸಿದ್ದರು. ಇದು ಅವರ ಪ್ರಾಣಿಗಳ ಬಗೆಗಿನ ಪ್ರೀತಿಗೆ ಸಾಕ್ಷಿ. 1930ರ ಕಾಲಘಟ್ಟದಲ್ಲಿ ಕೊಡಚಾದ್ರಿಗೆ ಹೋಗಿ ವಾಪಸ್‌ ಬರುವಾಗ ಹುಲಿಯನ್ನು ನೋಡಿರುವ ಕಥೆಯನ್ನು ಅವರು ಹೇಳುತ್ತಿದ್ದರು ಎಂದರು.

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಸ್ಥಾಪಕ ಅಧ್ಯಕ್ಷ ಎ.ಎಸ್‌.ಎನ್‌.ಹೆಬ್ಬಾರ್‌ ಮಾತನಾಡಿ, ಶಿವರಾಮ ಕಾರಂತರ ಕೆಚ್ಚೆದೆಯ ಹೋರಾಟ ಶಾಲಾ ದಿನಗಳಲ್ಲೇ ಆರಂಭವಾಗಿತ್ತು. ಹುಲಿಗಳಿದ್ದ ಊರಿನವರಾದ ಅವರು, ಹುಲಿಯಂತೆ ಬದುಕಿದ್ದರು ಎಂದು ಸ್ಮರಿಸಿದರು.

ಅನ್ಯಾಯದ ವಿರುದ್ಧ ಸದಾ ಹೋರಾಟ ಮಾಡುತ್ತಿದ್ದ ಕಾರಂತರು, ಎಂದಿಗೂ ಜೀವನೋತ್ಸಾಹ ಕಳೆದುಕೊಂಡವರಲ್ಲ. ಸಾಹಿತ್ಯದ ಜೊತೆಗೆ ಸಾಮಾಜಿಕ ಕ್ಷೇತ್ರಕ್ಕೂ ಅವರ ಕೊಡುಗೆ ಅನನ್ಯ ಎಂದರು.

ಕಾರಂತರು ಜನರಿಂದ ಸಾರ್ವತ್ರಿಕ ಗೌರವ ಪಡೆದ ವ್ಯಕ್ತಿ. ಅವರದ್ದು ಅಳತೆಗೆ ನಿಲುಕದ ವ್ಯಕ್ತಿತ್ವ. ಅವರ ಪತ್ರಕ್ಕೆ ಸರ್ಕಾರ ಹಾಗೂ ಅಧಿಕಾರಿಗಳ ಮಟ್ಟದಲ್ಲಿ ವಿಶೇಷ ಮಾನ್ಯತೆ ಇತ್ತು ಎಂದು ಪ್ರತಿಪಾದಿಸಿದರು.

ಮಾಹೆಯ ಸಹ ಕುಲಾಧಿಪತಿ ಎಚ್‌.ಎಸ್.ಬಲ್ಲಾಳ್‌ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಉಲ್ಲಾಸ ಕಾರಂತ ಅವರನ್ನು ಗೌರವಿಸಲಾಯಿತು.

ಯಕ್ಷಗಾನ ಕೇಂದ್ರದ ಸಲಹಾ ಸಮಿತಿ ಅಧ್ಯಕ್ಷ ಪಳ್ಳಿ ಕಿಶನ್​ ಹೆಗ್ಡೆ ಸ್ವಾಗತಿಸಿದರು. ಆಡಳಿತಾಧಿಕಾರಿ ಬಿ.ಜಗದೀಶ್​ ಶೆಟ್ಟಿ ವಂದಿಸಿದರು. ಉಪನ್ಯಾಸಕ ರಾಘವೇಂದ್ರ ತುಂಗ ನಿರೂಪಿಸಿದರು. ಬಳಿಕ ಅಂಬಾ ಶಪಥ ಯಕ್ಷಗಾನ ಪ್ರದರ್ಶನ ನಡೆಯಿತು.

ಎಲ್ಲಾ ಕ್ಷೇತ್ರಗಳಿಗೂ ಕೊಡುಗೆ ನೀಡಿರುವ ಶಿವರಾಮ ಕಾರಂತರ ಅನುಭವದ ಆಳ ಪ್ರಕೃತಿಯ ಮೇಲಿನ ಪ್ರೇಮ ಅವರ ಕೃತಿಗಳಲ್ಲಿ ಪ್ರತಿಫಲಿಸಿವೆ
ಎಂ.ಡಿ.ವೆಂಕಟೇಶ್‌ ಮಾಹೆಯ ಕುಲಪತಿ ಲೆಫ್ಟಿನೆಂಟ್‌ ಜನರಲ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT