ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹರಪನಹಳ್ಳಿ: ವರ್ಷವಿಡೀ ನೀರುಣಿಸುವ ರೈತರ ಕಾರಂಜಿ ‘ಹಾಲವರ್ತಿ’

Published : 7 ಜುಲೈ 2024, 6:29 IST
Last Updated : 7 ಜುಲೈ 2024, 6:29 IST
ಫಾಲೋ ಮಾಡಿ
Comments

ಹರಪನಹಳ್ಳಿ: ವರ್ಷವಿಡೀ ಗಂಗೆ ಹರಿಸುವ ಹಾಲವರ್ತಿ (ನೀರಿನ ಹೊಂಡವಿರುವ ಸ್ಥಳ) ಈಗ ಮಠವಾಗಿ ಪರಿವರ್ತಿಸಲು ವಿವಿಧ ಮಠಾಧೀಶರು ಮತ್ತು ಚನ್ನವೀರೇಶ್ವರ ಭಕ್ತ ಮಂಡಳಿ ಕಾರ್ಯೋನ್ಮುಖವಾಗಿದೆ. ಈ ಮೂಲಕ ಇದೊಂದು ಯಾತ್ರಾ ತಾಣವಾಗುವ ಲಕ್ಷಣ ಕಾಣಿಸಿದೆ.

ಗೋಸಾಮಿ ಗುಡ್ಡದ ಹಿಂಬದಿಯಲ್ಲಿ ಸದಾ ಚಿಲುಮೆಯಾಗಿರುವ ಹಾಲವರ್ತಿ ಈ ಭಾಗದ ರೈತರ ನೀರಿನ ಅಕ್ಷಯ ಪಾತ್ರೆಯಾಗಿದೆ. ಇಲ್ಲಿಯ ನೀರು ಹಾಲಿನಂತೆ ಕುಡಿಯಲು ಶುದ್ದ, ಸಿಹಿಯಾಗಿರುವ ಕಾರಣ ಇದಕ್ಕೆ ಹಾಲವರ್ತಿ ಎಂದು ಪುರಾತನ ಕಾಲದಿಂದಲೂ ಕರೆಯಲಾಗುತ್ತಿದೆ.

ಹಾಲವರ್ತಿ ಕೆರೆ ಒಂದು ರೈತ ಕುಟುಂಬಕ್ಕೆ ಸೇರಿದ ಜಮೀನಿನಲ್ಲಿದ್ದು, ಪಕ್ಕದಲ್ಲಿಯೇ ಚಿಕ್ಕದಾದ ಮಠದ ಪುರಾತನ ಕಟ್ಟಡವಿದೆ. ಸುತ್ತಲೂ ಗುಡ್ಡ, ಕಲ್ಲುಬಂಡೆಗಳ ನಡುವಿರುವ ಹಾಲವರ್ತಿ ಸುತ್ತ ಪೌರಾಣಿಕ ಕಥೆಗಳಿದ್ದು, ಮಠ ಪರಂಪರೆಯಿಂದ ಗುರುತಿಸಿಕೊಂಡಿದೆ.

ಹಾಲವರ್ತಿ ಮಠ ಪರಂಪರೆಯ ಲಿಂಗೈಕ್ಯ ಚನ್ನವೀರೇಶ ಸ್ವಾಮೀಜಿ ಅವರ ಮೂಲ ಸ್ಥಾನ ಎನ್ನುವ ಹೆಗ್ಗಳಿಕೆ ಈ ಹೊಂಡಕ್ಕಿದೆ. 17ನೇ ಶತಮಾನ ಅಂತ್ಯದ ವೇಳೆ ಚನ್ನವೀರೇಶ ಸ್ವಾಮೀಜಿ ಅವರು ಹಾಲವರ್ತಿಯಲ್ಲಿ ನೆಲೆಸಿದ್ದ ಬಗ್ಗೆ ಕುರುಹುಗಳಿವೆ.

ವಿಜಯನಗರ ಸಾಮ್ರಾಜ್ಯದ ಅರಸ ಪ್ರೌಢದೇವರಾಯರನ ಆಳ್ವಿಕೆ ಸಮಯದಲ್ಲಿ ಅನೇಕ ಮಠಾಧೀಶರು ಮಧ್ಯ ಕರ್ನಾಟಕ ಭಾಗಕ್ಕೆ ಹಿಮಾಲಯದಿಂದ ವಲಸೆ ಬಂದಿದ್ದರು. ವಲಸೆ ಬಂದಿದ್ದವರ ಪೈಕಿ ಹಾಲವರ್ತಿ ಲಿಂಗೈಕ್ಯ ಚನ್ನವೀರೇಶ ಶರಣರು ಒಬ್ಬರಾಗಿದ್ದರು. ಅವರು ದ್ಯಾನಕ್ಕಾಗಿ ಈ ಪ್ರದೇಶ ಆಯ್ಕೆಮಾಡಿಕೊಂಡು ತಮ್ಮ ತಪಸ್ಸು ಶಕ್ತಿಯಿಂದ ಹಾಲವರ್ತಿಯನ್ನು ನಿರ್ಮಿಸಿದ್ದರು. ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಈ ಭಾಗದ ಸಾಮಂತ ಅರಸರಾಗಿದ್ದ ಬಸವಂತಪ್ಪ ನಾಯಕ ವರ್ಷವಿಡೀ ನೀರು ಒದಗಿಸುತ್ತಿದ್ದ ಹಾಲವರ್ತಿಗೆ ಸುತ್ತಲೂ ಕಲ್ಲಿನ ಕಟ್ಟಡ ಕಟ್ಟಿಸಿಕೊಟ್ಟು ತ್ರಿಕಾಲ ಜ್ಞಾನಿ ಚನ್ನವೀರೇಶ್ವರರಿಗೆ ಪ್ರೋತ್ಸಾಹ ನೀಡಿದ್ದರು ಎಂದು ನೀಲಗುಂದ ಗುಡ್ಡದ ವಿರಕ್ತಮಠದ ಚನ್ನಬಸವ ಶಿವಯೋಗಿ ಸ್ವಾಮೀಜಿ ಇತಿಹಾಸವನ್ನು ಸ್ಮರಿಸಿದರು.

10 ಅಡಿಯಷ್ಟು ಆಳವಿರುವ ಹೊಂಡ ಈ ಭಾಗದ ರೈತರಿಗೆ ವರದಾನವಾಗಿದೆ. ಈ ನೀರು ಪವಿತ್ರವಾದದ್ದು ಎನ್ನುವ ನಂಬಿಕೆ ಈ ಭಾಗದ ರೈತರಲ್ಲಿದೆ. ಚನ್ನವೀರೇಶ ಸ್ವಾಮೀಜಿ ಅವರ ಅನುಷ್ಠಾನ ಕಾರ್ಯಕ್ರಮ ಜುಲೈ 6ಕ್ಕೆ ಆರಂಭವಾಗಿ ಆಗಸ್ಟ್ 3ರ ವರೆಗೆ ಜರುಗಲಿದೆ.

ಮಾರ್ಗ: ಹರಪನಹಳ್ಳಿ ತಲುಪಿ, ಅಲ್ಲಿಂದ ಸರ್ಕಾರಿ ಆಸ್ಪತ್ರೆ ಎದುರಿನ ರಸ್ತೆಯಲ್ಲಿ ಒಂದು ಕಿ.ಮೀ. ಕ್ರಮಿಸಿದರೆ ಕಲ್ಲುಬಂಡೆಯ ನಡುವೆ ಹಾಲವರ್ತಿ ಕಾಣಿಸುತ್ತದೆ.

ಹರಪನಹಳ್ಳಿ ಪಟ್ಟಣದ ಗೋಸಾಮಿ ಗುಡ್ಡದ ಹಿಂಭಾಗದಲ್ಲಿ ಹಾಲವರ್ತಿ ಬಳಿಯಿರುವ ಹಾಲವರ್ತಿ ಮಠ.
ಹರಪನಹಳ್ಳಿ ಪಟ್ಟಣದ ಗೋಸಾಮಿ ಗುಡ್ಡದ ಹಿಂಭಾಗದಲ್ಲಿ ಹಾಲವರ್ತಿ ಬಳಿಯಿರುವ ಹಾಲವರ್ತಿ ಮಠ.
ತಪೋ ಪವಾಡ ಭೂಮಿ
ಹಾಲವರ್ತಿ ವಿಶಿಷ್ಟ ಜಾಗೃತ ಸ್ಥಳವಾಗಿದ್ದು ಮಹಾಶಿವಯೋಗಿಗಳ ತಪೋಭೂಮಿಯಾಗಿದೆ. ಲಿಂಗೈಕ್ಯ ಚನ್ನವೀರೇಶ್ವರ ಶರಣರು ಹರಪನಹಳ್ಲಿ ಕಲ್ಲಹಳ್ಳಿ ಅರಸನಾಳು ಹೆಸರಿನಲ್ಲಿ ದೇವಸ್ಥಾನವಿದ್ದು ಹ್ಯಾರಡ ಹರವಿ ಬಲ್ಲಾಹುಣಸಿ ಮೈಲಾರ ಹಿರೇಹಡಗಲಿಗಳಿಗೆ ಸಂಚಾರ ಮಾಡಿ ಕೊನೆಗೆ ಈಗಿನ ಲಿಂಗನಾಯಕನಹಳ್ಳಿಯಲ್ಲಿ ನೆಲೆಸಿರುವುದು ತಿಳಿದುಬರುತ್ತದೆ. ಹಾಲವರ್ತಿ ಸುತ್ತಲೂ ಗುಡ್ಡವಿದ್ದು ಅಹ್ಲಾದಕರ ವಾತಾವರಣ ಹೊಂದಿದೆ ಎಂದು ರಾಜಶೇಖರ ಬಣಕಾರ್ ತಿಳಿಸಿದರು. ಕಲ್ಲಹಳ್ಳಿಯ ಬಿಲ್ವವೃಕ್ಷದಲ್ಲಿ ನಡೆದ ಪವಾಡ ಹರವಿಯಲ್ಲಿ ಶಿವಯೋಗಿಗೆ ಆಕಳು ಹಾಲುಣಿಸಿದ್ದು ಲಿಂಗನಾಯಕನಹಳ್ಳಿಯಲ್ಲಿ ವಟುವಿನ ಮೇಲೆ ಎರಗಿದ್ದ ಹುಲಿಯನ್ನು ತಮ್ಮ ತಪಸ್ಸು ಶಕ್ತಿಯಿಂದ ತಡೆದಿರುವ ಕಥೆಗಳು ಜನರ ಬಾಯಲ್ಲಿ ಹರಿದಾಡುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT