ಭಾನುವಾರ, 22 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತಿಕೋಟಾ: ಖಾಸಗಿ ಶಾಲೆ ಮೀರಿಸುವ ಸರ್ಕಾರಿ ಶಾಲೆ

ಶಿಕ್ಷಕರ ಪರಿಶ್ರಮಕ್ಕೆ ಒಲಿದು ಬಂದಿವೆ ಹಲವು ಪ್ರಶಸ್ತಿ: ನೂರರಷ್ಟು ಹಾಜರಾತಿ
Published : 14 ಆಗಸ್ಟ್ 2024, 5:45 IST
Last Updated : 14 ಆಗಸ್ಟ್ 2024, 5:45 IST
ಫಾಲೋ ಮಾಡಿ
Comments

ತಿಕೋಟಾ: ಸರ್ಕಾರಿ ಶಾಲೆ ಎಂದು ಮೂಗು ಮುರಿಯುವ ಈ ಕಾಲದಲ್ಲಿ ಖಾಸಗಿ ಶಾಲೆಗಿಂತ ಕಮ್ಮಿ ಇಲ್ಲ ಎನ್ನುವ ಸರ್ಕಾರಿ ಶಾಲೆಯೊಂದು ನೂರರಷ್ಟು ಹಾಜರಾತಿಯೊಂದಿಗೆ ಮಕ್ಕಳ ಶೈಕ್ಷಣಿಕ ಗುಣಮಟ್ಟ ಹೆಚ್ಚಳ ಮಾಡಲು ಶ್ರಮಿಸುವ ಶಿಕ್ಷಕರನ್ನು ಹೊಂದಿದ್ದು, ಗ್ರಾಮಸ್ಥರ ಪ್ರೀತಿಗೆ ಪಾತ್ರವಾಗಿದೆ.

ತಾಲ್ಲೂಕಿನ ಬಾಬಾನಗರ ಗ್ರಾಮದ ತೋಟದ ವಸ್ತಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಆದಪ್ಪ ಸಿದ್ದಪ್ಪ ಹಿರೇಕುರುಬರ ದಾನ ನೀಡಿದ ಐದು ಗುಂಟೆ ಸ್ಥಳದಲ್ಲಿ 2005ರಲ್ಲಿ ಸುಸಜ್ಜಿತ ಶಾಲೆ ನಿರ್ಮಾಣವಾಗಿದೆ. ಕೇವಲ 20 ಮಕ್ಕಳ ದಾಖಲಾತಿಯಿಂದ ಆರಂಭವಾದ ಶಾಲೆಯಲ್ಲಿ ಇಂದು 133 ಮಕ್ಕಳು ಓದುತ್ತಿದ್ದಾರೆ.

ಆರೇಳು ಕಿ.ಮೀ. ಸುತ್ತಲೂ ತೋಟದ ವಸ್ತಿ ಶಾಲಾ ಮಕ್ಕಳ ದಾಖಲಾತಿ ಅಲ್ಲದೇ ಗುಣಮಟ್ಟದ ಶಿಕ್ಷಣ ದೊರಕುವುದನ್ನು ಮನಗಂಡು ಗ್ರಾಮದಿಂದಲೂ 35 ಮಕ್ಕಳು ಈ ಶಾಲೆಗೆ ಬರುತ್ತಿದ್ದಾರೆ.

ವಸತಿ ಶಾಲೆಗೆ ಆಯ್ಕೆ:

ಶಿಕ್ಷಕರ ಸತತ ಪರಿಶ್ರಮದ ಫಲವಾಗಿ ಪ್ರತಿ ವರ್ಷ ಐದಾರು ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ವಿವಿಧ ವಸತಿ ಶಾಲೆಗೆ ಆಯ್ಕೆಯಾಗುತ್ತಾರೆ. ಹಲವು ವಿದ್ಯಾರ್ಥಿಗಳು ಎಂಬಿಬಿಎಸ್, ಆರೋಗ್ಯ, ಪೋಲಿಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಸುಸಜ್ಜಿತ ಕಾಂಪೌಂಡ್, ಗೇಟ್, ಶೌಚಾಲಯ, ನೀರಿನ ಟ್ಯಾಂಕ್, ಶುದ್ಧ ಕುಡಿಯುವ ನೀರು, ವಿದ್ಯುತ್, ಸೋಲಾರ್, ಇನ್ವರ್ಟರ್, ಪ್ರಿಂಟರ್, ಡಿಜಿಟಲ್ ವರ್ಗಕೋಣೆ, ಗ್ರಂಥಾಲಯ ಹೊಂದಿದ್ದು, ವಿವಿಧ ಗಿಡಮರ, ಹೂ–ಹಣ್ಣುಗಳ ಸಸಿ ನೆಟ್ಟಿದ್ದಾರೆ. ದಾನಿಗಳು ಕಲಿಕೋಪಕರಣ, ಪೀಠೋಪಕರಣ ಸೌಲಭ್ಯ ನೀಡಿದ್ದಾರೆ.

ಹಸಿರು ಪರಿಸರ ಹೊಂದಿರುವ ಶಾಲೆಯ ಗೋಡೆಯ ಮೇಲೆ ರಾಷ್ಟ್ರ ನಾಯಕರ, ಸಮಾಜ ಸುಧಾರಕರ, ಪರಿಸರ ಪ್ರೇಮಿ, ಹುತಾತ್ಮ ಯೋಧರು, ಸಿದ್ಧೇಶ್ವರ ಶ್ರೀ ಸೇರಿದಂತೆ ಜಿಲ್ಲೆಯ ಪ್ರಸಿದ್ಧ ವ್ಯಕ್ತಿಗಳ, ಸರಸ್ವತಿ ದೇವಿ ಚಿತ್ರಗಳು ಕಣ್ಮನ ಸೆಳೆಯುತ್ತವೆ.

ಹಳದಿ ಶಾಲೆ ಪ್ರಶಸ್ತಿ, ಪರಿಸರ ಮಿತ್ರ ಹಸಿರು ಶಾಲೆ ಪ್ರಶಸ್ತಿ, ಉತ್ತಮ ಎಸ್‌ಡಿಎಂಸಿ ಪ್ರಶಸ್ತಿ, ನೈರ್ಮಲ್ಯ ಪ್ರಶಸ್ತಿಗಳು ಶಾಲೆಗೆ ದೊರಕಿವೆ.

ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಕನಸು ಕಂಡ ಮುಖ್ಯೋಪಾಧ್ಯಾಯ ಶಿವಶರಣಪ್ಪ ತಡಲಗಿಯವರಿಗೆ ಜಿಲ್ಲಾ ಆದರ್ಶ ಶಿಕ್ಷಕ ಪ್ರಶಸ್ತಿ, ಎಕ್ಸಲಂಟ್ ಸಮೂಹ ಸಂಸ್ಥೆಯ ಆದರ್ಶ ಶಿಕ್ಷಕ ಪ್ರಶಸ್ತಿ, ಬೆಂಗಳೂರ ಜನಶ್ರೀ ಫೌಂಡೇಷನ್‌ನ ರಾಜ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, ತಾಲ್ಲೂಕು ಆದರ್ಶ ಶಿಕ್ಷಕ ಪ್ರಶಸ್ತಿ, ಸಾಹಿತ್ಯ ಪರಿಷತ್ ನೀಡುವ ಉತ್ತಮ ಶಿಕ್ಷಕ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಲಭಿಸಿವೆ. ಎಚ್.ಎಂ. ಕಾಲೇಬಾಗ್, ಎಸ್.ಎಂ. ಕಠಾರೆ, ಎಸ್.ವೈ. ಬಾಗೆನವರ ಶಿಕ್ಷಕರ, ಎಸ್‌ಡಿಎಂಸಿ ಸದಸ್ಯರ ಶ್ರಮದಿಂದ ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆಯುತ್ತಿದ್ದಾರೆ.

ಬದ್ದತೆಯಿಂ‌ದ ಶಿಕ್ಷಕರು ಕರ್ತವ್ಯ ನಿರ್ವಹಿಸಿದ್ದರಿಂದ ಗುಣಮಟ್ಟದ ಶಿಕ್ಷಣ ಕೊಡಲು ಯಶಸ್ವಿಯಾಗಿದ್ದಾರೆ. ಹೆಚ್ಚಿನ ಅಭಿವೃದ್ಧಿಗೆ ಸಮುದಾಯದ ಸಹಕಾರ ಅಗತ್ಯವಾಗಿದೆ
-ಪ್ರಮೋದಿನಿ ಬಳೋಲಮಟ್ಟಿ, ಬಿಇಒ, ವಿಜಯಪುರ ಗ್ರಾಮೀಣ
ಐದನೇ ತರಗತಿಗೆ ಈ ಶಾಲೆಯ ಮಕ್ಕಳು ಬೇರೆಡೆ ದಾಖಲಾಗಿಲ್ಲ. ನಾಲ್ವರರು ಶಿಕ್ಷಕರಿದ್ದು, ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಿದ್ದಾರೆ. ಪ್ರತಿವರ್ಷ ನಾಲ್ಕೈದು ಮಕ್ಕಳು ವಸತಿ ಶಾಲೆಗಳಿಗೆ ಆಯ್ಕೆಯಾಗುತ್ತಾರೆ
-ಕರೆಪ್ಪ ಕಡಪಟ್ಟಿ, ಎಸ್‌ಡಿಎಂಸಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT