ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉತ್ತರ ಕರ್ನಾಟಕದ ಜನರ ನಿರೀಕ್ಷೆ ಹುಸಿಗೊಳಿಸಿದ ಸರ್ಕಾರ: ಬೊಮ್ಮಾಯಿ ಟೀಕೆ

Published 18 ಡಿಸೆಂಬರ್ 2023, 15:30 IST
Last Updated 18 ಡಿಸೆಂಬರ್ 2023, 15:30 IST
ಅಕ್ಷರ ಗಾತ್ರ

ಬೆಂಗಳೂರು: ‘ಕಾಂಗ್ರೆಸ್‌ ನೇತೃತ್ವದ ಸರ್ಕಾರವು ಹಳೆಯ ಯೋಜನೆಗಳನ್ನೇ ವಿಧಾನಮಂಡಲದ ಬೆಳಗಾವಿ ಅಧಿವೇಶನದಲ್ಲಿ ಮತ್ತೆ ಪ್ರಕಟಿಸುವ ಮೂಲಕ ಉತ್ತರ ಕರ್ನಾಟಕದ ಜನರ ನಿರೀಕ್ಷೆ ಹುಸಿಗೊಳಿಸಿದೆ’ ಎಂದು ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ ಟೀಕಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೋಮವಾರ ಪತ್ರ ಬರೆದಿರುವ ಅವರು, ‘ಕಾಂಗ್ರೆಸ್‌ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಬೆಳಗಾವಿಯಲ್ಲಿ ಮೊದಲ ಬಾರಿಗೆ ಅಧಿವೇಶನ ನಡೆದಿದೆ. ಉತ್ತರ ಕರ್ನಾಟಕ ಭಾಗದ ಜನರು ಬಹಳ ನಿರೀಕ್ಷೆ ಇರಿಸಿಕೊಂಡಿದ್ದರು. ಸರ್ಕಾರದ ನಡೆಯಿಂದ ಎಲ್ಲವೂ ಹುಸಿಯಾಗಿದೆ’ ಎಂದಿದ್ದಾರೆ.

ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತದಲ್ಲಿ 130 ಟಿಎಂಸಿ ಅಡಿ ನೀರಿನ ಬಳಕೆಗೆ ಬಿಜೆಪಿ ನೇತೃತ್ವದ ಹಿಂದಿನ ಸರ್ಕಾರ ರೂಪಿಸಿದ್ದ ಯೋಜನೆಗೆ ಒಂದು ರೂಪಾಯಿ ಅನುದಾನವನ್ನೂ ಬಿಡುಗಡೆ ಮಾಡಿಲ್ಲ. ಇದು ಈಗಿನ ಸರ್ಕಾರವು ಉತ್ತರ ಕರ್ನಾಟಕದ ಜನರ ಕುರಿತು ಹೊಂದಿರುವ ಅಸಡ್ಡೆಗೆ ಸಾಕ್ಷಿ ಎಂದು ದೂರಿದ್ದಾರೆ.

ಮಹದಾಯಿ ಯೋಜನೆಯ ಭವಿಷ್ಯದ ಬಗ್ಗೆಯೂ ಸರ್ಕಾರ ಏನನ್ನೂ ಹೇಳಿಲ್ಲ. ಹುಬ್ಬಳ್ಳಿಯಲ್ಲಿ ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಉತ್ಪನ್ನಗಳ (ಎಫ್‌ಎಂಸಿಜಿ) ಕ್ಲಸ್ಟರ್‌ ನಿರ್ಮಾಣ, ಕಲಬುರಗಿಯಲ್ಲಿ ಜವಳಿ ಪಾರ್ಕ್‌ ನಿರ್ಮಾಣ ಸೇರಿದಂತೆ ಉದ್ಯೋಗ ಸೃಜನೆಯ ವಿಚಾರದಲ್ಲಿ ಈ ಸರ್ಕಾರವು ಖಚಿತವಾದ ನಿಲುವು ಪ್ರಕಟಿಸಿಲ್ಲ ಎಂದಿದ್ದಾರೆ.

ಜಿಲ್ಲಾ ಖನಿಜ ನಿಧಿ ಬಳಕೆಯ ಬಗ್ಗೆಯೂ ಸರ್ಕಾರ ನಿರಾಸಕ್ತಿ ತೋರಿದೆ. ಹೊಸದಾಗಿ ಅಸ್ತಿತ್ವಕ್ಕೆ ತರಲಾಗಿದ್ದ ಏಳು ವಿಶ್ವವಿದ್ಯಾಲಯಗಳನ್ನು ಅನುದಾನದ ಕೊರತೆ ನೆಪದಲ್ಲಿ ಮುಚ್ಚಲು ಮುಂದಾಗಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದ್ದಾರೆ.

ಶಿಗ್ಗಾವಿಗೆ ಬೊಮ್ಮಾಯಿ:

ಹೃದಯ ಶಸ್ತ್ರಚಿಕಿತ್ಸೆಯ ಬಳಿಕ ಇದೇ ಮೊದಲ ಬಾರಿಗೆ ಬೊಮ್ಮಾಯಿ ಸ್ವಕ್ಷೇತ್ರ ಶಿಗ್ಗಾವಿಗೆ ತೆರಳಿದ್ದಾರೆ. ಸೋಮವಾರ ವಿಮಾನದ ಮೂಲಕ ಹುಬ್ಬಳ್ಳಿಗೆ ಹೋಗಿದ್ದು, ಮಂಗಳವಾರ ಶಿಗ್ಗಾವಿಗೆ ಭೇಟಿ ನೀಡಲಿದ್ದಾರೆ. ಬೊಮ್ಮಾಯಿ ಅಕ್ಟೋಬರ್‌ನಲ್ಲಿ ಶಸ್ತ್ರಚಿಕ್ಸಿಗೆ ಒಳಗಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT