ಶನಿವಾರ, 28 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಪಘಾತದ ಬಳಿಕ ಸಿಯಾಲ್ದಾ ರೈಲು ನಿಲ್ದಾಣ ತಲುಪಿದ ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್‌

Published : 18 ಜೂನ್ 2024, 10:28 IST
Last Updated : 18 ಜೂನ್ 2024, 10:28 IST
ಫಾಲೋ ಮಾಡಿ
Comments

ಕೋಲ್ಕತ್ತ: ಅಪಘಾತವಾದ ನಂತರ 850 ಪ್ರಯಾಣಿಕರಿದ್ದ ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್‌ ರೈಲು ಪಶ್ಚಿಮ ಬಂಗಾಳದ ಸಿಯಾಲ್ದಾ ರೈಲು ನಿಲ್ದಾಣ ತಲುಪಿದೆ ಎಂದು ಪೂರ್ವ ರೈಲ್ವೆ ವಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಸೋಮವಾರ(ಜೂ.17) ಪಶ್ಚಿಮ ಬಂಗಾಳದ ಜಲಪಾಯ್ಗುಡಿ ನಿಲ್ದಾಣದಿಂದ 10 ಕಿ.ಮೀ ದೂರವಿರುವ ರಂಗಪಾನಿಯಲ್ಲಿ ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್‌ ರೈಲಿಗೆ ಗೂಡ್ಸ್‌ ರೈಲು ಡಿಕ್ಕಿ ಹೊಡೆದಿದ್ದು, ರೈಲಿನ ಹಿಂದಿನ ನಾಲ್ಕು ಬೋಗಿಗಳು ಸಂಪೂರ್ಣ ಹಾನಿಯಾಗೊಳಗಾಗಿದ್ದವು. ಅಪಘಾತದಲ್ಲಿ 10 ಮಂದಿ ಮೃತಪಟ್ಟಿದ್ದು, 65ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

‘ಸೋಮವಾರ ಮಧ್ಯಾಹ್ನವೇ ಅಪಘಾತದ ಸ್ಥಳದಿಂದ ಕಾಂಚನ್‌ಜುಂಗಾ ರೈಲು ಸಿಯಾಲ್ದಾ ನಿಲ್ದಾಣದ ಕಡೆಗೆ ಪ್ರಯಾಣ ಬೆಳೆಸಿತ್ತು. ರೈಲಿನಲ್ಲಿ ಸುಮಾರು 800ರಿಂದ 850 ಪ್ರಯಾಣಿಕರು ಇದ್ದರು. ಇಂದು ಮುಂಜಾನೆ 3.16ಕ್ಕೆ ರೈಲು ಸಿಯಾಲ್ದಾ ತಲುಪಿದೆ. ಪ್ರತಿ ನಿಲ್ದಾಣದಲ್ಲಿಯೂ ಪ್ರಯಾಣಿಕರಿಗೆ ವೈದ್ಯಕೀಯ ನೆರವು ಮತ್ತು ನೀರಿನ ವ್ಯವಸ್ಥೆ ಮಾಡಲಾಗಿತ್ತು’ ಎಂದು ರೈಲ್ವೆ ವಕ್ತಾರ ಕೌಶಿಕ್ ಮಿತ್ರ ತಿಳಿಸಿದ್ದಾರೆ.

‘ಕೋಲ್ಕತ್ತಾ ಮೇಯರ್ ಫಿರ್ಹಾದ್ ಹಕೀಮ್, ಪಶ್ಚಿಮ ಬಂಗಾಳದ ಸಾರಿಗೆ ಸಚಿವ ಸ್ನೇಹಸಿಸ್ ಚಕ್ರವರ್ತಿ, ಸಿಯಾಲ್ದಾ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ದೀಪಕ್ ಅವರು ನಿಲ್ದಾಣಕ್ಕೆ ಬಂದು ಪ್ರಯಾಣಿಕರ ಯೋಗ ಕ್ಷೇಮ ವಿಚಾರಿಸಿದ್ದಾರೆ. ಪ್ರಯಾಣಿಕರು ಸುರಕ್ಷಿತವಾಗಿ ಮನೆಗೆ ತಲುಪಲು ಸಾರಿಗೆ ಇಲಾಖೆ 16 ಬಸ್ಸು ಮತ್ತು 60 ಕಾರುಗಳನ್ನು ಒದಗಿಸಿದೆ’ ಎಂದರು.

ಸೋಮವಾರ ರಾತ್ರಿ 7.20ಕ್ಕೆ ಸಿಯಾಲ್ದಾಗೆ ತಲುಪಬೇಕಿದ್ದ ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್‌ ರೈಲು ಅಪಘಾತದ ಕಾರಣ ನಿಗದಿತ ಸಮಯಕ್ಕಿಂತ 8 ಗಂಟೆ ತಡವಾಗಿ ನಿಲ್ದಾಣಕ್ಕೆ ತಲುಪಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT