ಶನಿವಾರ, 28 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೊದಲು ಮೋದಿ, ಕುಮಾರಸ್ವಾಮಿ, ಸೀತಾರಾಮನ್‌ ರಾಜೀನಾಮೆ ಕೇಳಿ: ಲಕ್ಷ್ಮಿ ಹೆಬ್ಬಾಳಕರ

Published : 28 ಸೆಪ್ಟೆಂಬರ್ 2024, 6:08 IST
Last Updated : 28 ಸೆಪ್ಟೆಂಬರ್ 2024, 6:08 IST
ಫಾಲೋ ಮಾಡಿ
Comments

ಬೆಳಗಾವಿ: ‘ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುವಂತೆ ಒತ್ತಾಯಿಸುತ್ತಿರುವ ಬಿಜೆಪಿಯವರಿಗೆ ನಾಚಿಕೆಯಾಗಬೇಕು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.

ಇಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಚುನಾವಣಾ ಬಾಂಡ್‌ನ ₹6 ಸಾವಿರ ಕೋಟಿ ಹಗರಣದಲ್ಲಿ ಸುಪ್ರೀಂ ಕೋರ್ಟ್‌ ಛೀಮಾರಿ ಹಾಕಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಆದೇಶಿಸಿದೆ. ಬಿಜೆಪಿ ಸರ್ಕಾರದವರು ಮೊದಲು ಸುಪ್ರೀಂಕೋರ್ಟ್‌ ಆದೇಶ ಪಾಲಿಸಿ ಹಣಕಾಸು ಸಚಿವರ ರಾಜೀನಾಮೆ ಪಡೆಯಲಿ. ವಿವಿಧ ಪ್ರಕರಣಗಳಲ್ಲಿ ಭಾಗಿಯಾದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ರಾಜೀನಾಮೆಗೆ ಒತ್ತಾಯಿಸಲಿ. ನಂತರ ಸಿದ್ದರಾಮಯ್ಯ ರಾಜೀನಾಮೆ ಕೇಳಲಿ’ ಎಂದರು.

‘ಸಿದ್ದರಾಮಯ್ಯ ಸಿ.ಎಂ ಸ್ಥಾನದಲ್ಲಿ ಮುಂದುವರಿದರೆ, ಮುಡಾ ಪ್ರಕರಣದ ತನಿಖೆ ಪಾರದರ್ಶಕವಾಗಿ ನಡೆಯುವುದಿಲ್ಲ’ ಎಂಬ ಬಿಜೆಪಿಯವರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ‘ನಿರ್ಮಲಾ ಸೀತಾರಾಮನ್‌ ವಿರುದ್ಧ ಎಫ್‌ಐಆರ್‌ ಆಗಿಲ್ಲ ಎಂಬುದು ಅಷ್ಟೇ ಸತ್ಯ. ಮಾಧ್ಯಮಗಳೂ ಈ ಸಂಗತಿಯನ್ನು ಮರೆಯಬಾರದು’ ಎಂದು ಮನವಿ ಮಾಡಿದರು.

‘ಇಡೀ ದೇಶದಲ್ಲಿ ಬಿಜೆಪಿಯೇತರ ಸರ್ಕಾರಗಳನ್ನು ಅಸ್ಥಿರಗೊಳಿಸಲು ಬಿಜೆಪಿಯವರು ಒಂದಿಲ್ಲೊಂದು ಅಸ್ತ್ರ ಪ್ರಯೋಗಿಸುತ್ತಿದ್ದಾರೆ. ರಾಜಭವನ ಕೂಡ ಇದಕ್ಕೆ ಹೊರತಾಗಿಲ್ಲ. ರಾಜಕೀಯ ದುರುದ್ದೇಶದಿಂದ ಈ ರೀತಿ  ಮಾಡುತ್ತಿರುವ ಅವರಿಗೆ ಕಾನೂನು ರೀತಿಯೇ ಉತ್ತರ ಕೊಡುತ್ತೇವೆ. ನಾವೂ ರಾಜಕೀಯ ಪಕ್ಷದವರೇ. ಬಿಜೆಪಿಯವರು ರಾಜಕಾರಣ ಮಾಡಿದರೆ, ನಾವೂ ಮಾಡುತ್ತೇವೆ’ ಎಂದರು.

ಸಿ.ಎಂ ಸಿದ್ದರಾಮಯ್ಯ ವಿರುದ್ಧ ಎಫ್‌ಐಆರ್ ದಾಖಲಾದ ಕುರಿತು ಪ್ರತಿಕ್ರಿಯಿಸಿದ ಹೆಬ್ಬಾಳಕರ, ‘ಇದು ಕಾನೂನು ಪ್ರಕ್ರಿಯೆ. ನಾವು ತನಿಖೆ ಎದುರಿಸುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಯಾವ ಕಾರಣಕ್ಕೂ ಹಿಂಜರಿಯುವುದಿಲ್ಲ, ಬಗ್ಗುವುದಿಲ್ಲ, ಜಗ್ಗುವುದಿಲ್ಲ’ ಎಂದು ತಿಳಿಸಿದರು.

‘ಮುಡಾ ಪ್ರಕರಣದಲ್ಲಿ ಕಾಂಗ್ರೆಸ್‌ ನಾಯಕರೇ ಭಾಗಿಯಾಗಿದ್ದಾರೆ’ ಎಂಬ ಶಾಸಕ ರಮೇಶ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿದ ಹೆಬ್ಬಾಳಕರ, ‘ಅವರು ದೊಡ್ಡವರು. ಅವರ ಬಗ್ಗೆ ನಾನು ಮಾತನಾಡುವುದಿಲ್ಲ. ಬಿಜೆಪಿಯವರು ಮೊದಲು ಗ್ಯಾರಂಟಿ ಬಗ್ಗೆ ಕೀಳಾಗಿ ಮಾತನಾಡಿದರು. ಗ್ಯಾರಂಟಿಗಳು ಚುನಾವಣೆ ಗಿಮಿಕ್‌ ಎಂದರು. ಗ್ಯಾರಂಟಿಗಳಿಗೆ ಯಶಸ್ಸು ಸಿಗುತ್ತಿದ್ದಂತೆ, ಸರ್ಕಾರದ ಖಜಾನೆ ಖಾಲಿಯಾಗಿ, ಅಭಿವೃದ್ಧಿಗೆ ಹಿನ್ನಡೆ ಯಾಗುತ್ತಿದೆ ಎಂದು ದೂರುತ್ತಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಅಸ್ಥಿರಗೊಳಿಸಲು ಹೊಸ ನಾಟಕ ಶುರು ಮಾಡಿದ್ದಾರೆ. ಇದರಿಂದ ಸರ್ಕಾರಕ್ಕೆ ಆಪತ್ತಿಲ್ಲ. ಎಲ್ಲ ಶಾಸಕರು ಸಿದ್ದರಾಮಯ್ಯ ಜತೆಗಿದ್ದೇವೆ’ ಎಂದರು.

‘ರಾಜ್ಯಪಾಲರನ್ನು ಕಾಂಗ್ರೆಸ್‌ ಹೀನಾಯವಾಗಿ ನಡೆಸಿಕೊಂಡಿತು’ ಎಂಬ ಬಿಜೆಪಿಯವರ ಆರೋಪಕ್ಕೆ ಉತ್ತರಿಸಿದ ಹೆಬ್ಬಾಳಕರ, ‘ರಾಜ್ಯಪಾಲರ ಹುದ್ದೆ ಸಂವಿಧಾನಿಕವಾದದ್ದು. ನಾವು ಯಾರನ್ನೂ ಹೀನಾಯವಾಗಿ ನಡೆಸಿಕೊಂಡಿಲ್ಲ. ಸರ್ಕಾರದಿಂದ ಎಲ್ಲ ಗೌರವ ಕೊಟ್ಟಿದ್ದೇವೆ. ಆದರೆ, ರಾಜ್ಯಪಾಲರು ಒತ್ತಡದಲ್ಲಿದ್ದಾರೆ. ಕೇಂದ್ರ ಸರ್ಕಾರದ ಕೈಗೊಂಬೆ ಆಗಿದ್ದಾರೆ’ ಎಂದು ಆರೋಪಿಸಿದರು.

‘ಗೃಹಲಕ್ಷ್ಮಿ ಯೋಜನೆಯಡಿ ಫಲಾನುಭವಿಗಳಿಗೆ ಜೂನ್‌ವರೆಗಿನ ಹಣ ಹಾಕಿದ್ದೇವೆ. ಜುಲೈ, ಆಗಸ್ಟ್‌ ತಿಂಗಳ ಕಂತು ಹಾಕಲು ಸಿದ್ಧತೆ ಮಾಡಿಕೊಂಡಿದ್ದೆವೆ. ಗ್ಯಾರಂಟಿ ಬಗೆಗಿನ ಟೀಕೆಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತಿದ್ದ ಬಿಜೆಪಿಯವರೇ ಈಗ, ಜಮ್ಮು, ಹರಿಯಾಣ ಮತ್ತು ಮಹಾರಾಷ್ಟ್ರದಲ್ಲಿ ಗ್ಯಾರಂಟಿಗಳನ್ನು ಘೋಷಿಸಿದ್ದಾರೆ. ಕಾಂಗ್ರೆಸ್‌ ಮತ್ತು ಕರ್ನಾಟಕದ ಮಾದರಿಯನ್ನು ಮೂರು ರಾಜ್ಯಗಳಲ್ಲಿ ನಕಲು ಮಾಡಿದ್ದಾರೆ’ ಎಂದರು. 

ಪ್ರಧಾನಿ‌ ನರೇಂದ್ರ ಮೋದಿಯವರು ಹರಿಯಾಣದಲ್ಲಿ ಮುಡಾ ಹಗರಣ ಪ್ರಸ್ತಾಪಿಸಿದ ಕುರಿತು ಮಾತನಾಡಿದ ಅವರು, ‘ಗೆಲ್ಲುವ ತಂತ್ರಕ್ಕಾಗಿ ಬಿಜೆಪಿಗರು ಈ ರೀತಿ ಮಾಡುತ್ತಿದ್ದಾರೆ. ಕರ್ನಾಟಕದ ಬಗ್ಗೆ ಕಿಂಚಿತ್ತು ಕಾಳಜಿಯೂ ಕೇಂದ್ರದ ಬಿಜೆಪಿ ನಾಯಕರಿಗೆ ಇಲ್ಲ’ ಎಂದರು.

‘ಬಸನಗೌಡ ಪಾಟೀಲ ಯತ್ನಾಳ ಅಣ್ಣನವರ ಅಜೆಂಡಾ ಏನಿದೆ? ನಾವು ಬಸವಣ್ಣನ ತತ್ವ ಒಪ್ಪುತ್ತೇವೆ. ಬಹುಶಃ ಅವರೂ ಬಸವಣ್ಣನ ತತ್ವ ಒಪ್ಪುತ್ತಾರೆ. ಜಾತಿಯ ವಿರುದ್ಧವಾಗಿ ಅವರು ಹೋರಾಡಿದವರು. ಆದರೆ, ಬಸವಣ್ಣ ಬಸವಣ್ಣ ಎನ್ನುವ ಯತ್ನಾಳ ಒಂದು ಕೋಮಿನವರ ವಿರುದ್ಧ ಹೀಗೆ ವಿಷ ಕಾರುತ್ತಿರುವುದು ಏಕೆ? ಗೃಹಲಕ್ಷ್ಮಿ ಯೋಜನೆ ಹಣ ಒಂದು ಕೋಮಿನವರಿಗೆ ಮಾತ್ರ ಹೋಗಲ್ಲ. 1.22 ಕೋಟಿ ಬಡವರ ಕುಟುಂಬಕ್ಕೆ ಹೋಗುತ್ತಿದೆ ಯತ್ನಾಳ ತಮ್ಮ ನಡೆ ಬದಲಿಸಿಕೊಳ್ಳದಿದ್ದರೆ, ಅವರಿಗೆ ರಾಜಕೀಯ ಭವಿಷ್ಯವಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT