ಬುಧವಾರ, 2 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿದ್ದರಾಮಯ್ಯ ವಿರುದ್ಧ ED ಪ್ರಕರಣ ದಾಖಲಿಸಿರುವ ಹಿಂದೆ HDK ಕೈವಾಡ: ಲಕ್ಷ್ಮಣ ಆರೋಪ

Published : 2 ಅಕ್ಟೋಬರ್ 2024, 8:16 IST
Last Updated : 2 ಅಕ್ಟೋಬರ್ 2024, 8:16 IST
ಫಾಲೋ ಮಾಡಿ
Comments

ಮೈಸೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಜಾರಿ ನಿರ್ದೇಶನಾಲಯವು (ಇ.ಡಿ) ‘ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆ’ಯಡಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿರುವ ಹಿಂದೆ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಕೈವಾಡವಿದೆ’ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಆರೋ‍ಪಿಸಿದರು.

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ಮುಡಾ ಪ್ರಕರಣವನ್ನು ಕೇಂದ್ರದ ತನಿಖಾ ಸಂಸ್ಥೆಯಿಂದ ನಡೆಸುವಂತೆ ಕುಮಾರಸ್ವಾಮಿ ಕೇಂದ್ರದ ಗೃಹ ಸಚಿವ ಅಮಿತ್‌ ಶಾ ಅವರಿಗೆ ಪತ್ರ ಬರೆದಿದ್ದರು. ಅದನ್ನು ಆಧರಿಸಿ ಇ.ಡಿ.ಯವರು ‘ಜಾರಿ ನಿರ್ದೇಶನಾಲಯದ ಪ್ರಕರಣದ ಮಾಹಿತಿ ವರದಿ’ (ಇಸಿಐಆರ್‌) ದಾಖಲಿಸಿದ್ದಾರೆ. ಕುಮಾರಸ್ವಾಮಿ ಬರೆದಿದ್ದ ಪತ್ರದ ಮಾದರಿಯಲ್ಲೇ ದೂರುದಾರ ಸ್ನೇಹಮಯಿ ಕೃಷ್ಣ ಕೂಡ ಇ.ಡಿ.ಗೆ ದೂರು ಸಲ್ಲಿಸಿದ್ದಾರೆ’ ಎಂದು ಆರೋಪಿಸಿದರು.

‘ಸಿದ್ದರಾಮಯ್ಯ ಅವರನ್ನು ಹೇಗಾದರೂ ಮಾಡಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಬೇಕು ಎಂಬುದು ಬಿಜೆಪಿ– ಜೆಡಿಎಸ್‌ನವರ ಹುನ್ನಾರವಾಗಿದೆ. ಆ ಪಕ್ಷಗಳ ಕುಮಾರಸ್ವಾಮಿ, ಪ್ರಲ್ಹಾದ ಜೋಶಿ, ಬಿ.ವೈ.ವಿಜಯೇಂದ್ರ, ಆರ್. ಅಶೋಕ ಮೊದಲಾದವರೇ ನಿರ್ದೇಶಕರು ಹಾಗೂ ನಿರ್ಮಾಪಕರು. ಸ್ನೇಹಮಯಿ ಕೃಷ್ಣ ಪಾತ್ರಧಾರಿಯಷ್ಟೆ’ ಎಂದು ಹೇಳಿದರು.

‘ಹಣದ ವ್ಯವಹಾರವೇ ನಡೆದಿಲ್ಲವಾದರೂ ಹಾಗೂ ಏನೂ ಪಾತ್ರವಿಲ್ಲದಿದ್ದರೂ ಸಿದ್ದರಾಮಯ್ಯ ವಿರುದ್ಧ ‘ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆ’ಯಡಿ ಪ್ರಕರಣ ದಾಖಲಿಸಲಾಗಿದೆ. ನ್ಯಾಯಾಲಯದ ಆದೇಶದ ಪ್ರಕಾರ, ಲೋಕಾಯುಕ್ತ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ನಡುವೆಯೇ ಇ.ಡಿ. ಪ್ರವೇಶಿಸಿರುವ ಆತುರವನ್ನು ಜನರು ಅರ್ಥ ಮಾಡಿಕೊಳ್ಳಬೇಕು’ ಎಂದರು.

‘ಬಿಜೆಪಿ– ಜೆಡಿಎಸ್‌ನವರು ಸಿದ್ದರಾಮಯ್ಯ ಹಾಗೂ ಅವರ ಕುಟುಂಬದವರ ಹಿಂದೆ ಬಿದ್ದಿದ್ದಾರೆ. ಇದರಿಂದ ನೊಂದ, ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ಸ್ವಂತ ಜಮೀನು ಸ್ವಾಧೀನಪಡಿಸಿಕೊಂಡಿದ್ದಕ್ಕೆ ಮುಡಾದಿಂದ ಪರಿಹಾರವಾಗಿ ದೊರೆತಿದ್ದ 14 ನಿವೇಶನಗಳನ್ನು ವಾಪಸ್ ಮಾಡಿದ್ದಾರೆ. ಜಮೀನು ಕಳೆದುಕೊಂಡಿದ್ದಕ್ಕೆ ಪರಿಹಾರ ಕೋರಿ ನ್ಯಾಯಾಲಯದಲ್ಲಿ ಹೋರಾಟ ಮಾಡಲಿದ್ದಾರೆ. ಈಗ, ಶೇ 50:50 ಅನುಪಾತದಲ್ಲಿ ನಿವೇಶನ ಪಡೆದಿರುವ ಎಲ್ಲರಿಂದಲೂ ನಿವೇಶನ ವಾಪಸ್ ಕೊಡಿಸುವ ಕೆಲಸವನ್ನು ಬಿಜೆಪಿ–ಜೆಡಿಎಸ್‌ನವರು ಮಾಡಬೇಕು. ಆಪಾದನೆಯಲ್ಲಿ ತೊಡಗಿದ್ದ ಕೃಷ್ಣರಾಜ ಶಾಸಕ ಟಿ.ಎಸ್. ಶ್ರೀವತ್ಸ, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಧ್ಯಕ್ಷ ಕೌಟಿಲ್ಯ ರಘು‌ ಎಲ್ಲ ನಿವೇಶನಗಳನ್ನು ವಾಪಸ್ ಕೊಡುವಂತೆ ವಾರದೊಳಗೆ ಹೋರಾಟ ಮಾಡಲಿ. ಇಲ್ಲದಿದ್ದರೆ ಅವರ ಮನೆ ಮುಂದೆ ಧರಣಿ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

‘ಅಮಿತ್‌ ಶಾ, ಪ್ರಲ್ಹಾದ ಜೋಶಿ, ಶೋಭಾ ಕರಂದ್ಲಾಜೆ, ಎಚ್‌.ಡಿ. ಕುಮಾರಸ್ವಾಮಿ ಸೇರಿದಂತೆ ಕೇಂದ್ರದ 27 ಸಚಿವರ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಅವರೇಕೆ ರಾಜೀನಾಮೆ ಕೊಡುತ್ತಿಲ್ಲ?’ ಎಂದು ಕೇಳಿದರು.

‘ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ. ಇಡೀ ಕಾಂಗ್ರೆಸ್ ‌ಪಕ್ಷ ಹಿಂದೆಂದೂ ಕಾಣದಷ್ಟು ಒಗ್ಗಟ್ಟಾಗಿದೆ. ಅವರೊಂದಿಗೆ ನಾವೆಲ್ಲರೂ ಇದ್ದೇವೆ’ ಎಂದರು.

ಕೆಪಿಸಿಸಿ ಸದಸ್ಯ ಭಾಸ್ಕರ್‌, ಪಕ್ಷದ ನಗರ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಎಂ. ಶಿವಣ್ಣ, ಗಿರೀಶ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಎಂ. ರಾಮು, ವಕ್ತಾರ ಮಹೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT