ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಇಂಡಿಯನ್ ಸೂಪರ್ ಲೀಗ್: ಬಿಎಫ್‌ಸಿ, ಈಸ್ಟ್‌ ಬೆಂಗಾಲ್ ಹಣಾಹಣಿ ಇಂದು

ಇಂಡಿಯನ್ ಸೂಪರ್ ಲೀಗ್: ಸುನಿಲ್ ಚೆಟ್ರಿ, ರಾಹುಲ್ ಭೆಕೆ ಮೇಲೆ ಕಣ್ಣು
Published : 13 ಸೆಪ್ಟೆಂಬರ್ 2024, 16:23 IST
Last Updated : 13 ಸೆಪ್ಟೆಂಬರ್ 2024, 16:23 IST
ಫಾಲೋ ಮಾಡಿ
Comments

ಬೆಂಗಳೂರು: ಉದ್ಯಾನನಗರಿಯ ಫುಟ್‌ಬಾಲ್ ಪ್ರಿಯರಿಗೆ ಶನಿವಾರ ಭರಪೂರ ಸಂತಸ ನೀಡಲು ಬೆಂಗಳೂರು ಫುಟ್‌ಬಾಲ್ ಕ್ಲಬ್ ಸಿದ್ಧವಾಗಿದೆ. 

ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ಇಂಡಿಯನ್ ಸೂಪರ್ ಲೀಗ್  (ಐಎಸ್‌ಎಲ್) ಟೂರ್ನಿಯ ಪಂದ್ಯದಲ್ಲಿ ಬೆಂಗಳೂರು ತಂಡವು ಈಸ್ಟ್ ಬೆಂಗಾಲ್ ಬಳಗವನ್ನು ಎದುರಿಸಲಿದೆ. ಫುಟ್‌ಬಾಲ್ ಪ್ರೇಮಿಗಳ ಕಣ್ಮಣಿ ಸುನಿಲ್ ಚೆಟ್ರಿ, ಭಾರತ ಫುಟ್‌ಬಾಲ್ ತಂಡದ ಭವಿಷ್ಯದ ನಾಯಕನೆಂಬ ಭರವಸೆ ಮೂಡಿಸಿರುವ ರಾಹುಲ್ ಭೆಕೆ, ಗೋಲ್‌ ಕೀಪರ್ ಗುರುಪ್ರೀತ್ ಸಿಂಗ್ ಸಂಧು ಅವರ ಆಟ ನೋಡುವ ಅವಕಾಶ ಬೆಂಗಳೂರಿಗರಿಗೆ ಲಭಿಸಲಿದೆ.

ಈ  ಋತುವಿನಲ್ಲಿ ಬಿಎಫ್‌ಸಿಯು ಕೆಲವು ಉತ್ತಮ ಆಟಗಾರರನ್ನು ಸೇರ್ಪಡೆ ಮಾಡಿಕೊಂಡಿದೆ. ಅಲ್ಬರ್ಟೊ ನೊಗುವೆರಾ, ಜಾರ್ಜ್ ಪರೆಯೆರಾ ದಿಯಾಜ್ ಮತ್ತು ಎಡ್ಗರ್ ಮೆಂಡಿಸ್  ಅವರು ಪ್ರಮುಖರಾಗಿದ್ದಾರೆ.  ಈಸ್ಟ್ ಬೆಂಗಾಲ್ ತಂಡವೂ ದಿಮಿಟ್ರೊಸ್ ದಿಯಾಮಾಂಟೆಕೊಸ್, ಮಿಡ್‌ಫೀಲ್ಡರ್‌ ಮ್ಯಾಡಿತ್ ತಲಾಲ್, ಜಿಕ್ಸನ್ ಸಿಂಗ್ ಮತ್ತು ಅನ್ವರ್ ಅಲಿ ಅವರನ್ನು ಸೆಳೆದುಕೊಂಡಿದೆ. 

‘ಟೂರ್ನಿಯಲ್ಲಿ ಉತ್ತಮ ಆರಂಭ ಮಾಡಿ ಪಾಯಿಂಟ್‌ಗಳನ್ನು ಸಂಗ್ರಹಿಸಿಕೊಳ್ಳುವುದು ಮುಖ್ಯವಾಗಿದೆ. ನಮ್ಮ ತಂಡಕ್ಕೆ ತಕ್ಕಂತಹ ಆಟಗಾರರನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಈಗ ಅವರನ್ನು ಕುಟುಂಬವಾಗಿ ಮತ್ತು ತಂಡವಾಗಿ ರೂಪಿಸುವುದು ನಮ್ಮ ಹೊಣೆ’ ಎಂದು ಬಿಎಫ್‌ಸಿ ಮುಖ್ಯ ಕೋಚ್ ಮ್ಯುಲೆಟ್ ಝರ್ಗೋಜಾ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. 

’ಈ ಬಾರಿ ಭೆಕೆ ತಂಡಕ್ಕೆ ಬಂದಿರುವುದರಿಂದ ಹೆಚ್ಚು ವೈವಿಧ್ಯತೆ ಇದೆ. ಇಬ್ಬರು ಸ್ಟ್ರೈಕರ್‌ಗಳನ್ನು ಆಡಿಸುವ ಅವಕಾಶ ಲಭಿಸಿದೆ. ಡುರಾಂಡ್ ಕಪ್ ಟೂರ್ನಿಯಲ್ಲಿ ನಾವು ಮೂವರು ಡಿಫೆಂಡರ್ಸ್‌ಗಳೊಂದಿಗೆ ಕಣಕ್ಕಿಳಿದಿದ್ದೆವು. ನಾವು ಯಾವ ತಂಡದ ಎದುರು ಆಡುತ್ತೇವೆ ಎನ್ನುವುದರ ಮೇಲೆ ಕಣಕ್ಕಿಳಿಯುವ ಬಳಗದ ಸಂಯೋಜನೆ ನಿರ್ಧಾರವಾಗಲಿದೆ’ ಎಂದು ಝರ್ಗೋಜಾ ಹೇಳಿದರು. 

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಪೋರ್ಟ್ಸ್ 18. ಜಿಯೊ ಸಿನಿಮಾ ಆ್ಯಪ್

ಮುಂಬೈ–ಬಾಗನ್ ಪಂದ್ಯ ಡ್ರಾ

ಕೋಲ್ಕತ್ತ: ಥಾಯಿರ ಕ್ರೌಮಾ ಅವರು ಕೊನೆಯ ಕ್ಷಣದಲ್ಲಿ ದಾಖಲಿಸಿದ ಗೋಲಿನ ಸಹಾಯದಿಂದ ಮುಂಬೈ ಸಿಟಿ ಎಫ್‌ಸಿ ತಂಡವು ಶುಕ್ರವಾರ ಇಲ್ಲಿ ಆರಂಭವಾದ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್‌ಬಾಲ್ ಟೂರ್ನಿಯ ಮೊದಲ ಪಂದ್ಯದಲ್ಲಿ ಮೋಹನ್ ಬಾಗನ್ ಎದುರು ಸಮಬಲ ಸಾಧಿಸಿತು.

ಸಾಲ್ಟ್‌ ಲೇಕ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಉಭಯ ತಂಡಗಳು 2–2ರಿಂದ ಡ್ರಾ ಮಾಡಿಕೊಂಡವು.

ಮುಂಬೈ ತಂಡದ ಜೋಸ್ ಲೂಯಿಸ್ ಎಸ್ಪಿನೊಸಾ ಅರೊಯಾ ಅವರು 9ನೇ ನಿಮಿಷದಲ್ಲಿ ಬಾಗನ್ ತಂಡಕ್ಕೆ ಉಡುಗೊರೆ ಗೋಲು ನೀಡಿದರು. ಬಾಗನ್ ತಂಡದ ಅಲ್ಬರ್ಟೊ ರಾಡ್ರಿಗಸ್ (28ನೇ ನಿ) ಗೋಲು ಹೊಡೆದು ತಂಡಕ್ಕೆ 2–0 ಮುನ್ನಡೆ ಒದಗಿಸಿದರು.

‌ಆದರೆ, ವಿರಾಮದ ನಂತರ ಜೋಸ್ ಲೂಯಿಸ್ ಎಸ್ಪಿನೊಸಾ ಅವರು ಮುಂಬೈ ತಂಡಕ್ಕೆ 70ನೇ ನಿಮಿಷದಲ್ಲಿ ಗೋಲು ಹೊಡೆದರು.  90ನೇ ನಿಮಿಷದಲ್ಲಿ ಕ್ರೌಮಾ ಗೋಲು ಗಳಿಸಿ ಸಮಬಲ ಸಾಧಿಸಲು ಕಾರಣರಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT