ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಏಷ್ಯನ್ ಯೂತ್ ಆರ್ಚರಿ ಚಾಂಪಿಯನ್‌ಷಿಪ್‌: ಭಾರತದ ವನಿತೆಯರಿಗೆ ಬೆಳ್ಳಿ

Published : 5 ಅಕ್ಟೋಬರ್ 2024, 13:55 IST
Last Updated : 5 ಅಕ್ಟೋಬರ್ 2024, 13:55 IST
ಫಾಲೋ ಮಾಡಿ
Comments

ನವದೆಹಲಿ: ಭರವಸೆಯ ಬಿಲ್ಗಾರ್ತಿ ವೈಷ್ಣವಿ ಪವಾರ್ ಅವರ ನಿಖರ ಗುರಿಯ ನೆರವಿನಿಂದ ಭಾರತ ತಂಡವು ಚೀನಾ ತೈಪೆಯಲ್ಲಿ ನಡೆಯುತ್ತಿರುವ ಏಷ್ಯನ್ ಯೂತ್ (18 ವರ್ಷದೊಳಗಿನವರ) ಆರ್ಚರಿ ಚಾಂಪಿಯನ್‌ಷಿಪ್‌ನ ರಿಕರ್ವ್ ಮಹಿಳೆಯರ ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿತು.

ವೈಷ್ಣವಿ, ಪ್ರಾಂಜಲ್ ಥೋಲಿಯಾ ಮತ್ತು ಜನ್ನತ್ ಅವರ ಸಂಯೋಜನೆಯ ಭಾರತ ತಂಡವು ಸೆಮಿಫೈನಲ್‌ನಲ್ಲಿ ದಕ್ಷಿಣ ಕೊರಿಯಾ ತಂಡವನ್ನು ಮಣಿಸಿ ಫೈನಲ್‌ ತಲುಪಿತ್ತು. ಪ್ರತಿ ಸುತ್ತಿನಲ್ಲೂ ಮೊದಲ ಬಾಣವನ್ನು ವೈಷ್ಣವಿ ಪ್ರಯೋಗಿಸುವ ಮೂಲಕ ಒತ್ತಡವನ್ನು ನಿಭಾಯಿಸಿ, ಗೆಲುವಿನ ರೂವಾರಿಯಾದರು.

ಚಿನ್ನದ ಪದಕ ಸುತ್ತಿನಲ್ಲಿ ಭಾರತದ ಬಿಲ್ಗಾರ್ತಿಯರು ಆತಿಥೇಯ ಚೀನಾ ತೈಪೆಗೆ ತೀವ್ರ ಪೈಪೋಟಿ ನೀಡಿದರು. 2–4 ಅಂಕಗಳ ಹಿನ್ನಡೆಯಿಂದ ಚೇತರಿಸಿಕೊಂಡ ಭಾರತ ತಂಡವು ಪಂದ್ಯವನ್ನು ಶೂಟ್‌ ಆಫ್‌ಗೆ ಕೊಂಡೊಯ್ಯವಲ್ಲಿ ಯಶಸ್ವಿಯಾಯಿತು. ಆದರೆ, ಅಂತಿಮವಾಗಿ ಆತಿಥೇಯ ತಂಡ ಚಿನ್ನಕ್ಕೆ ಕೊರಳೊಡ್ಡಿತು.

‘ಸೆಮಿಫೈನಲ್‌ನಲ್ಲಿ ಬಲಿಷ್ಠ ದಕ್ಷಿಣ ಕೊರಿಯಾ ತಂಡವನ್ನು ಸೋಲಿಸಿದ್ದು ನಿಜಕ್ಕೂ ನಂಬಲಾಗುತ್ತಿಲ್ಲ. ಸಹ ಆಟಗಾರ್ತಿಯರೊಂದಿಗೆ ಭಾರತವನ್ನು ಪ್ರತಿನಿಧಿಸಿ ಬೆಳ್ಳಿ ಗೆದ್ದಿರುವುದು ಖುಷಿ ತಂದಿದೆ. ನಮ್ಮ ಕಠಿಣ ಪರಿಶ್ರಮ ಮತ್ತು ಸಮರ್ಪಣೆಗೆ ಪ್ರತಿಫಲ ಸಿಕ್ಕಿದೆ. ಭವಿಷ್ಯದಲ್ಲಿ ದೊಡ್ಡ ಗುರಿಯನ್ನು ಸಾಧಿಸಲು ಇದು ನನಗೆ ಸ್ಫೂರ್ತಿಯಾಗಿದೆ’ ಎಂದು ವೈಷ್ಣವಿ ಪ್ರತಿಕ್ರಿಯಿಸಿದರು.

ಕೂಟದಲ್ಲಿ ಭಾರತವು ಒಟ್ಟು 19 ಪದಕಗಳನ್ನು (7 ಚಿನ್ನ, 9 ಬೆಳ್ಳಿ ಮತ್ತು 3 ಕಂಚು) ಜಯಿಸಿದೆ. ಈ ಪೈಕಿ 13 ಪದಕಗಳು ಕಾಪೌಂಡ್‌ ವಿಭಾಗದಲ್ಲಿ ಮತ್ತು 6 ಪದಕಗಳು ರಿಕರ್ವ್‌ ವಿಭಾಗದಲ್ಲಿ ತನ್ನದಾಗಿಸಿಕೊಂಡಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT