ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಯೋಧ್ಯೆ ತೀರ್ಪಿಗೆ ದಿನಗಣನೆ: ದೇಶದಾದ್ಯಂತ ಕಟ್ಟೆಚ್ಚರ

Last Updated 7 ನವೆಂಬರ್ 2019, 9:25 IST
ಅಕ್ಷರ ಗಾತ್ರ

ಅಯೋಧ್ಯೆ ಭೂ ವಿವಾದದ ತೀರ್ಪಿಗೆ ದಿನಗಣನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಅಯೋಧ್ಯೆ ಜಿಲ್ಲೆಯೂ ಸೇರಿದಂತೆ ದೇಶದಾದ್ಯಂತ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಬಂದೋಬಸ್ತ್‌ ವ್ಯವಸ್ಥೆ ಮಾಡಲಾಗುತ್ತಿದೆ.

ಕೋಮುಗಲಭೆಗಳು ಉಂಟಾಗಬಹುದು ಎಂದು ಹೆದರಿರುವ ಅಯೋಧ್ಯೆ ನಿವಾಸಿಗಳು ತಮ್ಮ ಕುಟುಂಬಗಳ ಸದಸ್ಯರನ್ನು ಸುರಕ್ಷಿತ ಸ್ಥಳಗಳಿಗೆ ಕಳಿಸುತ್ತಿದ್ದಾರೆ. ಊರು ಬಿಡಲು ಸಾಧ್ಯವಿಲ್ಲದವರು ಆಹಾರ ಪದಾರ್ಥಗಳ ದಾಸ್ತಾನು ಮಾಡಿಕೊಳ್ಳುತ್ತಿದ್ದಾರೆ. ಈ ಮೊದಲೇ ಮುಹೂರ್ತ ನಿಶ್ಚಯವಾಗಿದ್ದಮದುವೆ ಸೇರಿದಂತೆ ಬಹುತೇಕ ಶುಭ ಕಾರ್ಯಗಳನ್ನು ಮುಂದೂಡಲಾಗಿದೆ.

‘ಹಲವು ತಲೆಮಾರುಗಳಿಂದ ನಾವು ಇಲ್ಲಿಯೇ ವಾಸವಾಗಿದ್ದೇವೆ. ಹಿಂದೂ–ಮುಸ್ಲಿಮರು ಅಕ್ಕಪಕ್ಕದ ಮನೆಗಳಲ್ಲಿ, ಬೀದಿಗಳಲ್ಲಿ ತೀರಾ ಸಹಜವಾಗಿ ಬದುಕಿದ್ದೇವೆ. ಸ್ಥಳೀಯರಿಂದ ನಮಗೆ ಸಮಸ್ಯೆಯಿಲ್ಲ. ಹೊರಗಿನಿಂದ ಬರುವವರ ಬಗ್ಗೆ ಭಯವಿದೆ’ ಎನ್ನುವ ಅಯೋಧ್ಯೆ ಪಟ್ಟಣದ ಹಿಂದೂಗಳು ಮತ್ತುಮುಸ್ಲಿಮರ ಹೇಳಿಕೆಗಳನ್ನು ಹಲವು ಮಾಧ್ಯಮ ಸಂಸ್ಥೆಗಳು ವರದಿ ಮಾಡಿವೆ.

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ಅವರು ನ.17ಕ್ಕೆ ನಿವೃತ್ತರಾಗಲಿದ್ದಾರೆ. ಅಷ್ಟರೊಳಗೆ ಅಯೋಧ್ಯೆಯ ತೀರ್ಪು ಹೊರ ಬೀಳುವ ನಿರೀಕ್ಷೆಯಿದೆ.

‘ಸುಪ್ರೀಂಕೋರ್ಟ್‌ ನೀಡುವ ತೀರ್ಪು ಗೌರವಿಸಬೇಕು. ಯಾವುದೇ ಬೆಲೆ ತೆತ್ತಾದರೂ ಸರಿ ದೇಶದ ಕೋಮು ಸೌಹಾರ್ದತೆ ಕಾಪಾಡಬೇಕು’ ಎಂದುಹಿಂದೂ ಪರ ಸಂಘಟನೆಗಳು ಮತ್ತು ಮುಸ್ಲಿಂ ಸಮುದಾಯದನಾಯಕರು ಕರೆ ನೀಡಿದ್ದಾರೆ.

ತೀರ್ಪು ಹಾಗಾದರೂ ಬರಲಿ, ದೇಶದ ಶಾಂತಿ ಕಾಪಾಡಬೇಕು ಎಂದು ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಾಯಕರು ಕರೆ ನೀಡಿದ್ದಾರೆ.
ತೀರ್ಪು ಹಾಗಾದರೂ ಬರಲಿ, ದೇಶದ ಶಾಂತಿ ಕಾಪಾಡಬೇಕು ಎಂದು ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಾಯಕರು ಕರೆ ನೀಡಿದ್ದಾರೆ.

ವಾಹನಗಳ ರಿಪೇರಿ, ಬಂದೂಕಿಗೆ ಪಾಲಿಶ್

ವಾಹನಗಳ ಸ್ಥಿತಿಗತಿ ಪರಿಶೀಲಿಸುತ್ತಿರುವ ಉತ್ತರ ಪ್ರದೇಶ ಪೊಲೀಸರು ಅಗತ್ಯ ರಿಪೇರಿ ಕಾರ್ಯಗಳನ್ನು ಮುಗಿಸಿ ಉತ್ತಮ ಕಾರ್ಯಾಚರಣೆ ಸ್ಥಿತಿಯಲ್ಲಿ ಇರುವಂತೆ ಎಚ್ಚರವಹಿಸುತ್ತಿದ್ದಾರೆ. ಲಾಠಿ, ಬಂದೂಕು, ಕಲ್ಲೇಟು ಬೀಳದಂತೆ ರಕ್ಷಣೆ ಕೊಡುವ ಸಾಧನಗಳನ್ನು ಸಿದ್ಧಪಡಿಸಿಕೊಳ್ಳುತ್ತಿದ್ದಾರೆ. ಕೊನೆಯ ಕ್ಷಣದಲ್ಲಿ ಯಾವ ಗೊಂದಲವೂ ಉಂಟಾಗಬಾರದು ಎನ್ನುವ ಎಚ್ಚರದಲ್ಲಿ ಅಗತ್ಯ ಪರಿಕರಗಳೊಡನೆ ಸಿಬ್ಬಂದಿಯನ್ನು ಈಗಾಗಲೇ ಸೂಕ್ಷ್ಮ ಸ್ಥಳಗಳಿಗೆ ನಿಯೋಜಿಸಲಾಗುತ್ತಿದೆ.

ಮೈಕ್ ಬಹಳ ಮುಖ್ಯ

ಪೊಲೀಸ್ ವಾಹನಗಳಿಗೆ ಮೈಕ್ ಅಳವಡಿಕೆಯನ್ನು ಉತ್ತರ ಪ್ರದೇಶ ಪೊಲೀಸರು ಆದ್ಯತೆಯ ವಿಷಯವಾಗಿ ಪರಿಗಣಿಸಿದ್ದಾರೆ.

‘1992ರಲ್ಲಿ ಬಾಬ್ರಿ ಮಸೀದಿ ಧ್ವಂಸದ ನಂತರ ಕೋಮುಗಲಭೆ ಭುಗಿಲೆದ್ದಿದ್ದ ಸಂದರ್ಭ ಎಲ್ಲೆಲ್ಲೂ ಗಾಳಿಸುದ್ದಿಯದ್ದೇ ಕಾರುಬಾರು. ನಾನಾಗ ಮೀರತ್‌ನಲ್ಲಿ ಎಸ್‌ಪಿ ಆಗಿದ್ದೆ. ನನ್ನ ಕೊಲೆಯಾಗಿದೆ ಎಂದು ಪುಕಾರು ಹಬ್ಬಿಸಿ, ಗೊಂದಲ ಸೃಷ್ಟಿಸಲು ಕೆಲವರು ಯತ್ನಿಸಿದ್ದರು. ಆಗ ಮೈಕ್ ಹಿಡಿದು ‘ನಾನು ಬದುಕಿದ್ದೇನೆ’ ಎಂದು ಸಾರಿ ಹೇಳಿ ಪರಿಸ್ಥಿತಿ ತಿಳಿಗೊಳಿಸಿದ್ದೆ’ ಎಂದು ನೆನಪಿಸಿಕೊಂಡರು ಮಾಜಿ ಪೊಲೀಸ್ ಮಹಾನಿರ್ದೇಶಕ ಬ್ರಿಜ್‌ಲಾಲ್.

‘ಕೋಮು ಗಲಭೆಗಳು ಉಂಟಾದಾಗ ಸುಳ್ಳುಸುದ್ದಿಗಳ ಮಹಾಪೂರವೇ ಹರಿದಾಡುತ್ತೆ. ಅಂಥ ಸಂದರ್ಭದಲ್ಲಿ ಜನರಿಗೆ ಇದು ಸತ್ಯ ಎಂದು ಸಾರಿ ಹೇಳಲು ಮೈಕ್‌ಗಳು ಅತ್ಯಗತ್ಯ. ಜನರು ಗುಂಪುಗೂಡಿದಾಗ ಅವರನ್ನು ಚದುರಿಸಲು ಮೈಕ್‌ಗಳು ಬೇಕು’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳುತ್ತಾರೆ.

ಮೀರತ್, ಆಗ್ರಾ, ಆಲಿಗಢ, ರಾಮ್‌ಪುರ, ಬರೇಲಿ, ಫಿರೋಜಾಬಾದ್, ಕಾನ್ಪುರ, ಲಖನೌ, ಸಹರಾನ್‌ಪುರ್, ಶಾಮ್ಲಿ, ಮುಝಾಫರ್‌ಪುರ್, ಬುಲಂದ್‌ಶಹರ್ ಮತ್ತು ಅಜಂಗಡ ಸೇರಿದಂತೆ ಒಟ್ಟು 34 ಜಿಲ್ಲೆಗಳನ್ನು ‘ಕೋಮು ಸೂಕ್ಷ್ಮ’ಎಂದು ಗುರುತಿಸಲಾಗಿದೆ. ಪೊಲೀಸ್ ಮುಖ್ಯ ಕಚೇರಿಯಿಂದ ಈ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಈಗಾಗಲೇ ಅಗತ್ಯ ಸೂಚನೆಗಳನ್ನು ನೀಡಲಾಗಿದೆ.

ಮುಸ್ಲಿಂ ನಾಯಕ ಮತ್ತು ಅಯೋಧ್ಯೆ ಪ್ರಕರಣದ ಕಕ್ಷಿದಾರ ಹಾಜಿ ಮೆಹಬೂಬ್ ಅಹ್ಮದ್
ಮುಸ್ಲಿಂ ನಾಯಕ ಮತ್ತು ಅಯೋಧ್ಯೆ ಪ್ರಕರಣದ ಕಕ್ಷಿದಾರ ಹಾಜಿ ಮೆಹಬೂಬ್ ಅಹ್ಮದ್

ಸಾಮಾಜಿಕ ಮಾಧ್ಯಮದ ಮೇಲೆ ನಿಗಾ

‘ಈಗ ಸಾಮಾಜಿಕ ಮಾಧ್ಯಮಗಳು ಪ್ರಬಲವಾಗಿವೆ. ಜನರು ಅಂಗೈಲಿ ಇರುವ ಮೊಬೈಲ್‌ಗಳನ್ನೇ ಹೆಚ್ಚು ನಂಬುತ್ತಾರೆ. ಹೀಗಾಗಿ ಕಾನೂನು ಸುವ್ಯವಸ್ಥೆ ಕಾಪಾಡುವುದು ಸವಾಲಿನ ಸಂಗತಿ’ ಎನ್ನುವುದು ಹಿರಿಯ ಪೊಲೀಸ್ ಅಧಿಕಾರಿಗಳ ಅಭಿಪ್ರಾಯ.

‘ಫೇಸ್‌ಬುಕ್, ಟ್ವಿಟರ್ ಸೇರಿದಂತೆ ಸಾಮಾಜಿಕ ಮಾಧ್ಯಮಗಳನ್ನು ಜಾಲಾಡುತ್ತಿರುವ ಪೊಲೀಸರು ಹಲವು ವಾಟ್ಸ್‌ಆ್ಯಪ್‌ ಗ್ರೂಪ್‌ಗಳಲ್ಲಿಯೂ ಸೇರಿಕೊಂಡಿದ್ದಾರೆ. ಗಾಳಿಸುದ್ದಿ ಹರಡುವವರನ್ನು ಗುರುತಿಸಿ ನಿಗಾ ಇಡಲಾಗುತ್ತಿದೆ’ ಎಂದು ಹೆಸರು ಹೇಳಲು ಇಚ್ಛಿಸದ ಪೊಲೀಸ್ ಅಧಿಕಾರಿಯೊಬ್ಬರು ಹೇಳುತ್ತಾರೆ.

ಅಯೋಧ್ಯೆ ಪೊಲೀಸರು ಒಂದು ಮೊಬೈಲ್‌ ಅಪ್ಲಿಕೇಶನ್‌ ಶುರು ಮಾಡಿದ್ದಾರೆ. ಅಯೋಧ್ಯೆ ಜಿಲ್ಲೆಯ 1600 ಹಳ್ಳಿಗಳತಲಾ 10 ಮಂದಿ ಅಂದರೆ ಒಟ್ಟು 16,000 ಮಂದಿ ಈ ಆ್ಯಪ್‌ನಲ್ಲಿ ಸ್ವಯಂಸೇವಕರಾಗಿ ನೋಂದಾಯಿಸಿಕೊಂಡಿದ್ದಾರೆ. ಗ್ರಾಮಮಟ್ಟದಲ್ಲಿ ನಡೆಯುವ ವಿದ್ಯಮಾನಗಳನ್ನು ಇವರು ಆ್ಯಪ್ ಮೂಲಕ ಪೊಲೀಸರ ಗಮನಕ್ಕೆ ತರುತ್ತಾರೆ.

ಕರ್ನಾಟಕದಲ್ಲಿಯೂ ಬಂದೋಬಸ್ತ್‌

ಕರ್ನಾಟಕದಲ್ಲಿಯೂ ಸೂಕ್ಷ್ಮ ಪ್ರದೇಶಗಳಿಗೆ ಮೀಸಲು ಪೊಲೀಸ್ ತುಕಡಿಗಳನ್ನು ನಿಯೋಜಿಸಲಾಗುತ್ತಿದೆ. ರಾಜ್ಯದಲ್ಲಿಯೂ ಸಾಮಾಜಿಕ ಜಾಲತಾಣಗಳು ಮತ್ತು ವಾಟ್ಸ್‌ಆ್ಯಪ್‌ ಗುಂಪುಗಳಲ್ಲಿ ಹರಿದಾಡುವ ಮೆಸೇಜ್‌ಗಳ ನಿಗಾ ಇರಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

‘ಸುಪ್ರೀಂಕೋರ್ಟಿನಲ್ಲಿ ಬಾಬರಿ ಮಸೀದಿ- ರಾಮ ಮಂದಿರ ಸಂಭವಿಸಿದ ಅಂತಿಮ ತೀರ್ಪು ಬರುವುದರಿಂದ ಎಲ್ಲಾ ವಾಟ್ಸಾಪ್ ಹಾಗೂ ಫೇಸ್ ಬುಕ್ ಸಾಮಾಜಿಕ ತಾಣಗಳಲ್ಲಿ ಈ ಈ ತೀರ್ಪಿನ ಬಗ್ಗೆ ಯಾವುದೇ ರೀತಿಯ ಪೋಸ್ಟ್‌,ಕಮೆಂಟ್‌ಮಾಡುವುದನ್ನು ಸರ್ಕಾರ ಹಾಗೂ ಪೊಲೀಸ್ ಇಲಾಖೆಯು ನಿರ್ಬಂಧಿಸಿದೆ’ ಎಂದು ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಡಾ.ಸಿ.ಬಿ.ವೇದಮೂರ್ತಿ ಗುರುವಾರ ರಾಯಚೂರಿನ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT