ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೊದಲ ಓದು | ಪತ್ರಕರ್ತರೊಬ್ಬರ ನೆನಪಿನ ಬುತ್ತಿ...

Published 15 ಜೂನ್ 2024, 23:30 IST
Last Updated 15 ಜೂನ್ 2024, 23:30 IST
ಅಕ್ಷರ ಗಾತ್ರ

ಪತ್ರಕರ್ತನ ವೃತ್ತಿಜೀವನದ ನೆನಪುಗಳು ಎಂಬ ಅಡಿಟಿಪ್ಪಣಿಯೊಂದಿಗೆ ಇರುವ ಈ ಪುಸ್ತಕ ಪತ್ರಿಕೋದ್ಯಮದ ಒಳಹೊರಗನ್ನು ಸರಳವಾಗಿ ಬಿಚ್ಚಿಡುತ್ತ ಹೋಗುತ್ತದೆ. ‘ಪ್ರಜಾವಾಣಿ’ಯಂಥ ದೊಡ್ಡ ಪರಂಪರೆ ಇರುವ ಪತ್ರಿಕೆಯನ್ನು ಮುನ್ನಡೆಸುವ ಜವಾಬ್ದಾರಿಯನ್ನು ಸುದೀರ್ಘ ಕಾಲ ನಿರ್ವಹಿಸಿದ ಪದ್ಮರಾಜ ದಂಡಾವತಿ ಅವರು ವೃತ್ತಿ ಜೀವನ, ವೈಯಕ್ತಿಕ ಜೀವನ ಎರಡನ್ನೂ ನಿಭಾಯಿಸುವ ಪರಿಯನ್ನು ಸರಳವಾಗಿ ನಿರೂಪಿಸುತ್ತ ಬಂದಿದ್ದಾರೆ.

ಪ್ರಜಾವಾಣಿ ಕಚೇರಿಯಲ್ಲ, ಅದೊಂದು ಬಳಗ ಮತ್ತು ಪರಿವಾರ ಇದ್ದಂತೆ. ಪರಿವಾರದಲ್ಲಿ ಬರುವ ಎಲ್ಲ ಸಣ್ಣತನ, ದೊಡ್ಡತನ, ಧಾರಾಳಿಯಾಗುವುದು, ಔದಾರ್ಯ ಮೆರೆಯುವುದು, ಹೊಟ್ಟೆಕಿಚ್ಚು ಪಡುವುದು ಎಲ್ಲವೂ ಈ ವೃತ್ತಿ ಜೀವನದಲ್ಲಿ ಕಂಡು ಬರುವ ಗುಣಗಳೇ ಆಗಿವೆ. ಇವನ್ನು ಕೆಲವೊಂದು ಕಡೆ ಚೂಟಿದ್ದು, ಕೆಲವೊಂದು ಕಡೆ ಹೆಮ್ಮೆಯಿಂದ ಎತ್ತಿ ಹಿಡಿದಿದ್ದು, ಮತ್ತೆ ಕೆಲವೊಮ್ಮೆ ಜೀವನಕ್ಕೆ ಆಸರೆ ಆಗಿದ್ದೂ ಇವೆ. ಇವೆಲ್ಲವನ್ನೂ ಹೇಳುವಾಗ ಒಂದು ಎಚ್ಚರವನ್ನು ಲೇಖಕರು ಕಾಯ್ದು ಕೊಂಡಿದ್ದಾರೆ. ಕೆಟ್ಟದನ್ನು ಹೇಳುವಾಗ ಮರಳ ಮೇಲೆಯೂ, ಒಳಿತನ್ನು ಹೇಳುವಾಗ ಬಂಡೆಯ ಮೇಲೆಯೂ ಬರೆಯೇಬೇಕು. ಹಾಗೆಯೇ ಇಲ್ಲಿ ಕೆಡುಕು ತಂದವರ ಹೆಸರು ಬಹಿರಂಗವಾಗಿಲ್ಲ. ಒಳಿತನ್ನು ಮಾಡಿದವರ ಹೆಸರನ್ನು ಸಂಜೆಯ ತಂಪು ಹೊತ್ತಿನಲ್ಲಿ ನೆನೆಸಿದಂತೆ ನೆನಪಿಸಿಕೊಂಡಿದ್ದಾರೆ.

ಬೆಳಗಾವಿಯ ದಿನಗಳು, ಸುದ್ದಿ ಕಳಿಸುವಾಗ ಟೆಲಿಪ್ರಿಂಟರ್‌ನಿಂದ ಕಂಪ್ಯೂಟರ್‌ ಯುಗದವರೆಗೂ ಆದ ಬದಲಾವಣೆಗಳನ್ನೂ ದಾಖಲಿಸುತ್ತಲೇ, ಒತ್ತಡ ನಿರ್ವಹಣೆಯ ತಂತ್ರಗಳನ್ನೂ ಹೇಳುತ್ತ ಹೋಗುತ್ತಾರೆ. ಪತ್ರಿಕೋದ್ಯಮಕ್ಕೆ ಬರಬೇಕೆನ್ನುವವರ ತಯಾರಿ, ವೃತ್ತಿಕ್ಷೇತ್ರದಲ್ಲಿರುವವರು ಸಜ್ಜುಗೊಳ್ಳುವ ಮತ್ತು ಬದ್ಧತೆಯಿಂದ ದುಡಿಯುವ ಬಗೆ, ಓದುಗರ ನಾಡಿಮಿಡಿತ ಅರಿಯುವ ಬಗೆ ಹೇಗೆ, ಜನರ ಗುಣಸ್ವಭಾವಗಳನ್ನು ಸ್ವೀಕರಿಸಿ ಅವರನ್ನು ಬೆಳೆಸುವ, ತಿದ್ದುವ ಕೆಲವೊಮ್ಮೆ ಉದಾಸೀನವೇ ಮದ್ದು ಎಂಬಂತೆ ಮುನ್ನಡೆಯುವ ಬಗೆಯನ್ನು ಈ ಪುಸ್ತಕದ ಓದು ದಕ್ಕಿಸಿಕೊಡುತ್ತದೆ.

ಉಳಿದಾವ ನೆನಪು

ಲೇ: ಪದ್ಮರಾಜ ದಂಡಾವತಿ

ಪ್ರ: ಅಂಕಿತ ಪುಸ್ತಕ

ಸಂ: 9019190502

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT