ರಕ್ಷಾ ಬಂಧನ ಅರ್ಥಾತ್ ರಾಖಿ ಹಬ್ಬ ಮತ್ತೆ ಬಂದಿದೆ. ಅಣ್ಣ-ತಂಗಿ, ಅಕ್ಕ-ತಮ್ಮನ ಬಾಂಧವ್ಯ ಸಾರಿ ಹೇಳಲು ಸಾವಿರಾರು ಮಾದರಿಯ ರಾಖಿಗಳು ಮಾರುಕಟ್ಟೆಯಲ್ಲಿ ಮಿಂಚುತ್ತಿವೆ. ಸ್ವತಃ ತಾವೇ ದಾರ, ವುಲನ್ ಹೆಣೆದು ಸುಂದರ ರಾಖಿ ಕೈಯಾರೆ ತಯಾರಿಸಿ ಅಣ್ಣತಮ್ಮನಿಗೆ ಕಟ್ಟಲು ಬಯಸುವ ಅಕ್ಕತಂಗಿಯರೂ ಇದ್ದಾರೆ.
ರಾಖಿ ಸಡಗರ ಹೆಚ್ಚಳ
ಸಹೋದರ–ಸಹೋದರಿಯರ ಬಾಂಧವ್ಯಕ್ಕೆ ಮೆರುಗು ನೀಡುವ ರಾಖಿ ಹಬ್ಬದ ಸಡಗರ ವರ್ಷ–ವರ್ಷವೂ ಹೆಚ್ಚಳವಾಗುತ್ತಿದೆ. ದಾರಗಳಿಗೆ ಮಣಿ ಪೋಣಿಸಿದಂಥ ರಾಖಿಗಳು ಹೆಚ್ಚಾಗಿ ಮಾರಾಟವಾಗುತ್ತವೆ. ₹ 1ರಿಂದ ಆರಂಭಿಸಿ ₹ 200 ದರದ ರಾಖಿಗಳನ್ನು ಮಹಿಳೆಯರು ಯುವತಿಯರು ಖರೀದಿಸುತ್ತಾರೆ. ಈಚೆಗೆ ಆನ್‌ಲೈನ್ ಮೂಲಕ ತರಿಸುವ ಪರಿಪಾಠ ಹೆಚ್ಚುತ್ತಿದೆ ಎಂದು ಹುಬ್ಬಳ್ಳಿಯ ರಾಖಿ ಹೋಲ್‌ಸೇಲ್ ಮಾರಾಟಗಾರರಾದ ಹನುಮಾನ್ ಸಿಂಗ್ ಜಿ. ಪುರೋಹಿತ್ ತಿಳಿಸಿದರು.