ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ-ಅಗಲ | ಗುಜರಾತ್‌: ಸತ್ಯ ನುಡಿವ ಮರಣ ನೋಂದಣಿ

ಕೋವಿಡ್‌ ಸಂದರ್ಭದಲ್ಲಿ ಘೋಷಿತ ಸಾವಿಗಿಂತ 2.8 ಲಕ್ಷ ಹೆಚ್ಚು ಸಾವು ಸಾಧ್ಯತೆ
Last Updated 17 ಆಗಸ್ಟ್ 2021, 2:30 IST
ಅಕ್ಷರ ಗಾತ್ರ

ಗುಜರಾತ್‌ನ ಅಮ್ರೇಲಿ ಪಟ್ಟಣದಲ್ಲಿರುವ ಎರಡು ಚಿತಾಗಾರಗಳಲ್ಲಿ ಒಂದು ಕೈಲಾಸ ಮುಕ್ತಿಧಾಮ. ಅದರಲ್ಲಿ ನಾಲ್ಕು ಕುಂಡಗಳಿವೆ. ಆ ನಾಲ್ಕರ ಶಿಥಿಲಾವಸ್ಥೆಯು ವಿವಿಧ ಹಂತಗಳಲ್ಲಿವೆ. ಮೃತದೇಹವನ್ನು ಸುಡುವುದಕ್ಕಾಗಿ ಇರಿಸುವ ಕಬ್ಬಿಣದ ಚೌಕಟ್ಟು ನಿರಂತರ ಬೆಂಕಿಯಿಂದಾಗಿ ಕರಗಿ ಹೋಗಿದೆ.

‘ಒಂದು ತಿಂಗಳ ಕಾಲ ದಿನದ 24 ಗಂಟೆಯೂ ಚಿತೆ ಉರಿಯುತ್ತಲೇ ಇತ್ತು’ ಎಂದವರು ಚಿತಾಗಾರದಲ್ಲಿ ಸ್ವಯಂಪ್ರೇರಿತರಾಗಿ ಕೆಲಸ ಮಾಡುವ ಸ್ಥಳೀಯ ರೈತ ಮಗನ್‌ಭಾಯ್‌. ಕೋವಿಡ್‌–19ರಿಂದಾಗಿ 2021ರ ಏಪ್ರಿಲ್‌ ಮತ್ತು ಮೇಯಲ್ಲಿ ತರಗುಟ್ಟಿದ್ದ ನಗರದ ಚಿತ್ರಣವನ್ನು ಅವರು ಕಟ್ಟಿ ಕೊಟ್ಟರು. ಚಿತಾಗಾರದಲ್ಲಿ ಕಟ್ಟಿಗೆ ಮುಗಿದಿದೆ ಎಂದು ಸ್ಥಳೀಯ ಪತ್ರಿಕೆಗಳಲ್ಲಿ ಜಾಹೀರಾತು ಕೊಡಲಾಗಿತ್ತು. ಚಿತಾಗಾರದ ನಿರ್ವಹಣೆಯಲ್ಲಿದ್ದ 20 ಜನರ ತಂಡದಲ್ಲಿ ಮೂವರು ಕೋವಿಡ್‌ಗೆ ಬಲಿಯಾಗಿದ್ದಾರೆ.

ಎರಡು ತಿಂಗಳಲ್ಲಿ 1,161 ಅಂತ್ಯ ಸಂಸ್ಕಾರಗಳು ಇಲ್ಲಿನ ಎರಡು ಚಿತಾಗಾರಗಳಲ್ಲಿ ನಡೆದಿವೆ. ಈ ಚಿತಾಗಾರಗಳಲ್ಲಿ ನಡೆಸಬಹುದಾಗಿದ್ದ ಅಂತ್ಯಸಂಸ್ಕಾರದ ಗರಿಷ್ಠ ಸಂಖ್ಯೆ ಅದು. ಹಾಗಾಗಿ ಉಳಿದ ದೇಹಗಳನ್ನು ಹತ್ತಿರದ ಗ್ರಾಮಗಳ ಚಿತಾಗಾರಗಳಿಗೆ ಕಳುಹಿಸಲಾಗಿದೆ. ಹಾಗೆಯೇ ಇಲ್ಲಿನ ಮುಸ್ಲಿಂ ಸಮಾಧಿಸ್ಥಳದಲ್ಲಿ ನೂರು ಮಂದಿಯನ್ನು ದಫನ ಮಾಡಲಾಗಿದೆ. ಹಲವು ದೇಹಗಳು ಇದ್ದುದರಿಂದ ಜೆಸಿಬಿಗಳನ್ನು ತಂದು ಗುಂಡಿ ತೋಡಲಾಗಿತ್ತು.

ಭಾರತದ ಇತರ ಭಾಗಗಳ ರೀತಿಯಲ್ಲಿಯೇ ಗುಜರಾತ್‌ನ ಎಲ್ಲ ಪಟ್ಟಣಗಳಲ್ಲಿಯೂ ಕೋವಿಡ್‌–19ರ ಎರಡನೇ ಅಲೆ ತೀವ್ರವಾಗಿತ್ತು. ಸಾವಿನ ಸಂಖ್ಯೆಯೂ ಗರಿಷ್ಠ ಮಟ್ಟ
ದಲ್ಲಿಯೇ ಇತ್ತು.

ಸಾವಿನ ನಿಖರ ದತ್ತಾಂಶ ಇರಿಸಿಕೊಳ್ಳಬೇಕು ಎಂದು ಗುಜರಾತ್‌ ಹೈಕೋರ್ಟ್‌, ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರೂ 2020ರಲ್ಲಿ ಆರಂಭಗೊಂಡ ಕೋವಿಡ್‌ ಸಾಂಕ್ರಾಮಿಕದ ಎರಡು ಅಲೆಗಳ ನಡುವಣ ಅವಧಿಯಲ್ಲಿ ಮೃತಪಟ್ಟವರ ಸಂಖ್ಯೆ 10,075 ಮಾತ್ರ ಎಂದು ಸರ್ಕಾರದ ವರದಿ ಹೇಳುತ್ತಿದೆ (ಈ ವರದಿ ಸಿದ್ಧವಾಗುತ್ತಿದ್ದ ಹೊತ್ತಿನ ಅಂಕಿ ಸಂಖ್ಯೆ). ಕೋವಿಡ್‌ ಬಿಕ್ಕಟ್ಟನ್ನು ಗುಜರಾತ್‌ ಅತ್ಯುತ್ತಮವಾಗಿ ನಿರ್ವಹಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಕೋವಿಡ್‌ನಿಂದಾಗಿ ಆಗಿರುವ ಸಾವಿನ ಸಂಖ್ಯೆ ಮತ್ತು ವಿನಾಶದ ದತ್ತಾಂಶವನ್ನು ಸರ್ಕಾರ ಮುಚ್ಚಿಟ್ಟಿದೆ ಎಂದು ಈಗ ದೊರೆತಿರುವ ಅಧಿಕೃತ ದಾಖಲೆಗಳೇ ಹೇಳುತ್ತಿವೆ.

ಗುಜರಾತ್‌ನ 170 ಪುರಸಭೆಗಳ ಪೈಕಿ, 68 ಪುರಸಭೆಗಳಲ್ಲಿ ದಾಖಲಾದ ಮರಣ ದಾಖಲಾತಿಗಳು ಲಭ್ಯವಾಗಿವೆ. ಮೃತಪಟ್ಟವರ ಮಾಹಿತಿಯನ್ನು ಒದಗಿಸುವ ಈ ದಾಖಲಾತಿಗಳನ್ನು ಮೊದಲಿಗೆ ಅಧಿಕಾರಿಗಳೇ ಭರ್ತಿ ಮಾಡಿದ್ದಾರೆ. ಇವೆಲ್ಲವೂ ಜನವರಿ 2019ರಿಂದ ಏಪ್ರಿಲ್‌ 2021ರ ಅವಧಿಯಲ್ಲಿ ಕೈಯಿಂದ ಬರೆದವುಗಳಾಗಿದ್ದು, ಈ ದಾಖಲಾತಿಯು ಸಾವಿರಾರು ಪುಟಗಳಲ್ಲಿದೆ.

ಲಭ್ಯವಾದ ಈ ದಾಖಲೆಯ ಪ್ರಕಾರ,2019ರ ಮಾರ್ಚ್‌ನಿಂದ 2020ರ ಏಪ್ರಿಲ್‌ ಅವಧಿಗೆ ಹೋಲಿಸಿದರೆ2020ರ ಮಾರ್ಚ್‌ ಮತ್ತು 2021ರ ಏಪ್ರಿಲ್‌ ಅವಧಿಯಲ್ಲಿ ಮೃತಪಟ್ಟವರ ಸಂಖ್ಯೆಯು ಬಹಳ ಹೆಚ್ಚು. ಹಿಂದಿನ ವರ್ಷದಲ್ಲಿ ಸಂಭವಿಸಿದ್ದಕ್ಕಿಂತ, 16,892 ಹೆಚ್ಚು ಸಾವಿನ ಪ್ರಕರಣಗಳು ದಾಖಲಾಗಿವೆ. ಈ 68 ಪುರಸಭೆಗಳ ವ್ಯಾಪ್ತಿಯಲ್ಲಿನ ಜನಸಂಖ್ಯೆಯು, ರಾಜ್ಯದ ಜನಸಂಖ್ಯೆಯ ಶೇ 6ರಷ್ಟು ಇದೆ. ರಾಜ್ಯದ ಜನಸಂಖ್ಯೆಯು 6.03 ಕೋಟಿ. ಪುರಸಭೆಯಲ್ಲಿನ ಸಾವುಗಳ ಸಂಖ್ಯೆಯನ್ನು ರಾಜ್ಯದ ಜನಸಂಖ್ಯೆಗೆ ಅನುಗುಣವಾಗಿ ಲೆಕ್ಕ ಹಾಕಿದರೆ,ಕೋವಿಡ್‌ ಸಾಂಕ್ರಾಮಿಕದಿಂದ, ಕನಿಷ್ಠ ಪಕ್ಷ 2.81 ಲಕ್ಷದಷ್ಟು ಹೆಚ್ಚುವರಿ ಸಾವುಗಳು ಆಗಿರಬೇಕು. ಈ ಸಂಖ್ಯೆಯು, ಗುಜರಾತ್‌ ರಾಜ್ಯ ಸರ್ಕಾರವು ಹೇಳಿರುವ ಸಾವಿನ ಸಂಖ್ಯೆಗಿಂತ 27 ಪಟ್ಟು ಹೆಚ್ಚು.

‘ಕೋವಿಡ್‌ನಿಂದ ಆಗಿರುವ ಮರಣದ ಸಂಖ್ಯೆಯ ಬಹುಭಾಗವು ಅಧಿಕೃತ ಅಂಕಿಅಂಶದಲ್ಲಿ ಇಲ್ಲ ಎಂಬುದನ್ನು ಈ ನಗರ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಪತ್ತೆಯಾಗಿರುವ ಹೆಚ್ಚುವರಿ ಸಾವಿನ ಪ್ರಕರಣಗಳು ತೋರಿಸುತ್ತವೆ’ ಎಂದುಸಾರ್ವಜನಿಕ ಆರೋಗ್ಯದ ಹಾರ್ವರ್ಡ್‌ನ ಟಿ.ಎಚ್‌.ಚಾನ್‌ ಸ್ಕೂಲ್‌ನ ಸಾಂಕ್ರಾಮಿಕ ರೋಗ ವಿಭಾಗಗಳ ಪ್ರಾಧ್ಯಾಪಕರಾದ ಡಾ. ಕ್ಯಾರೊಲಿನ್‌ ಬ್ಯೂಕಿ ಹೇಳಿದ್ದಾರೆ.

ಸಾಮಾನ್ಯ ವರ್ಷಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾದ ಎಲ್ಲ ಸಾವುಗಳು ಕೋವಿಡ್–19 ನಿಂದಲೇ ಆದಂಥವುಗಳು ಎಂದು ಹೇಳಲಾಗದು. ಆದರೆ, ಆ ಸಾವುಗಳು ಸಾಂಕ್ರಾಮಿಕ ಅಥವಾ ಅದರಿಂದಾಗಿ ಉಂಟಾದ ಸಾರ್ವಜನಿಕ ಆರೋಗ್ಯ ಸೇವೆಯಲ್ಲಿನ ವ್ಯತ್ಯಯದಿಂದ ಆದಂಥವು ಎನ್ನುತ್ತಾರೆ ತಜ್ಞರು.

ಗುಜರಾತ್‌ನ ಹೆಚ್ಚುವರಿ ಸಾವಿನ ಸಂಖ್ಯೆಯ ವ್ಯಾಪ್ತಿ ಸೀಮಿತ ಎಂದೇ ಹೇಳಬೇಕು. ಏಕೆಂದರೆ, ಅಧ್ಯಯನಕ್ಕೆ ಆಯ್ದುಕೊಂಡ ಪುರಸಭೆಗಳಿಂದ ಪಡೆದ ದತ್ತಾಂಶವು ಗ್ರಾಮೀಣ ಪ್ರದೇಶದ ಮಾಹಿತಿಯನ್ನು ಒಳಗೊಂಡಿಲ್ಲ. ಒಟ್ಟು ಜನಸಂಖ್ಯೆಯ ಶೇ 57ರಷ್ಟು ಜನರು ಗ್ರಾಮೀಣ ಪ್ರದೇಶದವರಾಗಿದ್ದು, ಅವರಿಗೆ ಆರೋಗ್ಯ ಸೌಕರ್ಯವು ಕನಿಷ್ಠ ಪ್ರಮಾಣದಲ್ಲಿ ಮಾತ್ರ ಲಭ್ಯವಿದೆ. ಮೂರು ಪುರಸಭೆಗಳಲ್ಲಿ ಮಾತ್ರ ಮೇ ಅಂತ್ಯದವರೆಗಿನ ಮಾಹಿತಿಯು ದಾಖಲಾಗಿದ್ದರಿಂದ, 2021 ಮೇ ತಿಂಗಳ ಅಂಕಿ–ಅಂಶಗಳನ್ನು ಕೈಬಿಡಲಾಗಿದೆ. ಮತ್ತು ಈ ತಿಂಗಳಲ್ಲಿನ ಸಾವಿನ ಸಂಖ್ಯೆ ಏಪ್ರಿಲ್‌ಗಿಂತ ಹೆಚ್ಚು ಇತ್ತು ಎಂಬುದನ್ನು ಸರ್ಕಾರಿ ಅಂಕಿ–ಅಂಶಗಳೂ ಹೇಳಿವೆ.

2021ರ ಏಪ್ರಿಲ್‌ ತಿಂಗಳೊಂದರಲ್ಲೇ ರಾಜ್ಯದ ಶೇ 6 ರಷ್ಟು ಜನಸಂಖ್ಯೆಯು ಇರುವ ಪ್ರದೇಶದಲ್ಲಿ 10,238 ಹೆಚ್ಚುವರಿ ಸಾವುಗಳಾಗಿವೆ. ಆದರೆ, ಸರ್ಕಾರವು ಇಡೀ ಸಾಂಕ್ರಾಮಿಕದ ಅವಧಿಯಲ್ಲಿ ರಾಜ್ಯದಾದ್ಯಂತ ತೋರಿಸಿರುವ ಅಧಿಕೃತ ಸಾವಿನ ಸಂಖ್ಯೆ ಕೇವಲ 10,077.

ಈ ವಿಧಾನದಲ್ಲಿ ಹೇಳುವುದಾದರೆ, ರಾಜ್ಯದಾದ್ಯಂತ ಏಪ್ರಿಲ್‌ ಒಂದೇ ತಿಂಗಳಲ್ಲಿ 1.71 ಲಕ್ಷ ಹೆಚ್ಚುವರಿ ಸಾವುಗಳಾಗಿವೆ. ಕೊರೊನಾ ವೈರಸ್‌ನ ಅಲೆ ತೀವ್ರವಾಗಿದ್ದ ಮೇ ತಿಂಗಳಲ್ಲಿನ ಸಾವಿನ ಸಂಖ್ಯೆ ಇನ್ನಷ್ಟೇ ಲಭ್ಯವಾಗಬೇಕಿದೆ.

ಜಿಲ್ಲಾಡಳಿತ ನೀಡಿರುವ ಸಾವಿನ ಲೆಕ್ಕವೂ ನಿಜವನ್ನು ಹೇಳುತ್ತಿಲ್ಲ. ಉದಾಹರಣೆಗೆ, ಸೌರಾಷ್ಟ್ರ ಪ್ರಾಂತದ ಸುರೇಂದ್ರನಗರ ಜಿಲ್ಲೆ. ಅದರ ಜನಸಂಖ್ಯೆ 17.56 ಲಕ್ಷ (2011ರ ಜನಗಣತಿ ಪ್ರಕಾರ). ಸರ್ಕಾರದ ಪ್ರಕಾರ, ಆ ಜಿಲ್ಲೆಯಲ್ಲಿ ಕೋವಿಡ್‌–19ನಿಂದ ಮೃತಪಟ್ಟವರು 136 ಮಂದಿ ಮಾತ್ರ. ಆದರೆ, ಆ ಜಿಲ್ಲೆಯ ಶೇ 14ರಷ್ಟು ಜನಸಂಖ್ಯೆ ಇರುವ ಪುರಸಭೆಯೊಂದರ ಮರಣ ನೋಂದಣಿ ಪುಸ್ತಕ ಹೇಳುವ ಪ್ರಕಾರ, ಮಾರ್ಚ್‌–ಏಪ್ರಿಲ್‌ ಅವಧಿಯಲ್ಲಿ ಅಲ್ಲಿ 1,210 ಹೆಚ್ಚುವರಿ ಸಾವುಗಳಾಗಿವೆ!

ಈ ಬಗ್ಗೆ ಸ್ಪಷ್ಟ ಮಾರ್ಗಸೂಚಿ ಇದ್ದರೂ, ಭಾರತದಲ್ಲಿ ಕೋವಿಡ್‌–19ನಿಂದ ಆದ ಬಹಳಷ್ಟು ಸಾವುಗಳು ದಾಖಲಾಗಿಲ್ಲ ಎಂಬುದು ತೋರುತ್ತದೆ; ಇದಕ್ಕೆ ಹಲವು ಕಾರಣಗಳು ಇರಬಹುದು. ಕೆಲವು ಪ್ರಕರಣಗಳಲ್ಲಿ, ಕೋವಿಡ್‌ನಿಂದ ಮೃತಪಟ್ಟವರ ಮೇಲೆ ನಿಗಾ ವಹಿಸದೇ ಇರುವುದು ಕಾರಣವಾಗಿರಬಹುದು’ ಎನ್ನುತ್ತಾರೆ, ಲಂಡನ್‌ನ ಮಿಡಲ್‌ಎಸೆಕ್ಸ್‌ ವಿಶ್ವವಿದ್ಯಾಲಯದ ಗಣಿತವಿಜ್ಞಾನಿ ಮುರಾದ್‌ ಬನ್ಜಿ.

ಕೆಲವು ರಾಜ್ಯ ಸರ್ಕಾರಗಳು, ಕೋವಿಡ್–19 ಮರಣ ದಾಖಲೆಯ ಮಾರ್ಗಸೂಚಿಯನ್ನು ಉದ್ದೇಶಪೂರ್ವಕವಾಗಿಯೇ ಕಡೆಗಣಿಸಿವೆ ಎಂದು ತೋರುತ್ತದೆ. ಡೆತ್‌ ಆಡಿಟ್‌ ಸಮಿತಿಯು, ಬೇರೆ ಕಾಯಿಲೆಯಿಂದ ಮೃತಪಟ್ಟಕೋವಿಡ್‌ ರೋಗಿಗಳ ಸಾವನ್ನು ಅಧಿಕೃತ ಅಂಕಿ–ಸಂಖ್ಯೆಯಿಂದ ಹೊರಗಿಟ್ಟಿರಬಹುದು. ಗುಜರಾತ್‌ ಸೇರಿದಂತೆ ಹಲವು ರಾಜ್ಯಗಳಿಂದ ಇಂಥದೇ ವರದಿಗಳು ಬಂದಿವೆ ಎಂದೂ ಅವರು ಹೇಳಿದ್ದಾರೆ.

ಮರಣ ದಾಖಲಾತಿಗೆ ಅಪೂರ್ಣ ಮಾಹಿತಿ ನೀಡುವುದು, ಸಾವಿನ ನಿಖರ ಕಾರಣ ನಮೂದಿಸದೇ ಇರುವುದು ಸೇರಿದಂತೆ ರಾಜಕೀಯ ಕಾರಣಕ್ಕಾಗಿ ಮಾಹಿತಿಯನ್ನು ಮುಚ್ಚಿಡುವುದರಿಂದ ಭಾರತದಲ್ಲಿ ಕೋವಿಡ್‌ ಸಂಬಂಧಿ ಸಾವುಗಳ ನಿಖರ ಲೆಕ್ಕ ದೊರೆಯುವುದೇ ಅಸಾಧ್ಯ. ಹೀಗಾಗಿ, ಕೋವಿಡ್‌–19 ಸಂಬಂಧಿ ಸಾವುಗಳ ಬಗ್ಗೆ ಸರ್ಕಾರದ ಮಾಹಿತಿ ಲಭ್ಯವಾಗದೇ ಹೋದಾಗ, ಜಾಗತಿಕವಾಗಿ ಶಿಫಾರಸು ಮಾಡಲಾದ ‘ಹೆಚ್ಚುವರಿ ಸಾವುಗಳ’ ದತ್ತಾಂಶವನ್ನು ಬಳಸಬೇಕು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಇದರಿಂದ ಆಗಿರುವ ಹಾನಿಯ ಪ್ರಮಾಣ ಎಷ್ಟು ಎಂಬುದು ವೇದ್ಯವಾಗುತ್ತದೆ ಎಂದು ಅವರು ಹೇಳುತ್ತಾರೆ.

ಪುರಸಭೆಗಳಿಂದ ಪಡೆದ ದತ್ತಾಂಶ ಆಧರಿಸಿ ಪಡೆದಿರುವ ಫಲಿತಾಂಶವನ್ನು ಮರುಪರಿಶೀಲಿಸುವುದಕ್ಕಾಗಿ, ಬೋಟಾದ್ ಜಿಲ್ಲೆಯ ಪುರಸಭೆ, ನಗರಸಭೆ ಹಾಗೂ ಗ್ರಾಮ ಪಂಚಾಯಿತಿಗಳೆಲ್ಲದರಿಂದ ಮರಣ ದಾಖಲಾತಿಯನ್ನುರಿಪೋರ್ಟರ್ಸ್‌ ಕಲೆಕ್ಟಿವ್‌ ಪಡೆಯಿತು.

ಈ ಜಿಲ್ಲೆಯಲ್ಲಿ ಕೋವಿಡ್‌ ಸಂಬಂಧಿ ಸಾವುಗಳು 42 ಎಂದು ಸರ್ಕಾರ ಹೇಳಿದೆ. ಆದರೆ, ಪಡೆದಿದ್ದ ಮರಣ ದಾಖಲಾತಿಗಳ ಪ್ರಕಾರ ಆ ಜಿಲ್ಲೆಯಲ್ಲಿ ಮಾರ್ಚ್‌ 2020– ಜೂನ್‌ 2021ರ ಅವಧಿಯಲ್ಲಿ ವರದಿಯಾದ ಹೆಚ್ಚುವರಿ ಸಾವಿನ ಸಂಖ್ಯೆ 3,117. ಈ ಸಂಖ್ಯೆಯು, ಸರ್ಕಾರ ನೀಡಿದ ಅಧಿಕೃತ ಸಂಖ್ಯೆಗಿಂತ 74 ಪಟ್ಟಗಳಿಗಿಂತಲೂ ಹೆಚ್ಚು!

ದತ್ತಾಂಶ ಪಾರದರ್ಶಕತೆ

ಗುಜರಾತ್‌ನ 68 ಪುರಸಭೆಗಳಿಂದ ದತ್ತಾಂಶವನ್ನು ಪಡೆದಿರುವುದು ‘ರಿಪೋರ್ಟರ್ಸ್ ಕಲೆಕ್ಟಿವ್‌’ನ ಸಾಮೂಹಿಕ ಯತ್ನದಭಾಗವಾಗಿದ್ದು, ದೇಶಾದ್ಯಂತ ಸಂಭವಿಸಿರುವ ಅಧಿಕ ಸಾವಿನ ದತ್ತಾಂಶವನ್ನು ಸಂಗ್ರಹಿಸಿ, ಪ್ರಕಟಿಸುವ ಉದ್ದೇಶ ಹೊಂದಿದೆ. ವರದಿ ಮಾಡುವ ಸಮಯದಲ್ಲಿ, 100ಕ್ಕೂ ಹೆಚ್ಚು ಗುಜರಾತ್ ಪುರಸಭೆಗಳು ಮತ್ತು ಇತರ ರಾಜ್ಯಗಳ 35ಕ್ಕೂ ಹೆಚ್ಚು ಜಿಲ್ಲೆಗಳಿಂದ ಸಾವಿನ ದಾಖಲೆಗಳನ್ನು ಒಟ್ಟುಗೂಡಿಸಲಾಗಿದೆ.

ಈ ದತ್ತಾಂಶವನ್ನು ಆನ್‌ಲೈನ್ ವಾಲ್ ಆಫ್ ಗ್ರೀಫ್‌ನಲ್ಲಿ ಕ್ರಿಯೇಟಿವ್ ಕಾಮನ್ಸ್ ಪರವಾನಗಿ ಅಡಿಯಲ್ಲಿ ಸಾರ್ವಜನಿಕವಾಗಿ ಲಭ್ಯವಾಗುವಂತೆ ಮಾಡಲಾಗುತ್ತಿದೆ. ಇದು ನಾಗರಿಕ ಸಮಾಜ, ಮಾಧ್ಯಮ ಸಂಸ್ಥೆಗಳು ಮತ್ತು ಆಸಕ್ತ ವ್ಯಕ್ತಿಗಳ ನಡುವಿನ ಸಹಯೋಗದ ಪ್ರಯತ್ನವಾಗಿದ್ದು, ಸಾಂಕ್ರಾಮಿಕ ರೋಗದಿಂದ ಕಣ್ಮರೆಯಾದವರನ್ನು ಒಟ್ಟಾಗಿ ನಾವು ನೆನಪಿಸಿಕೊಳ್ಳುತ್ತೇವೆ.

ವಿಪತ್ತನ್ನು ಅರ್ಥಮಾಡಿಕೊಳ್ಳಲು ಇಬ್ಬರು ವರದಿಗಾರರ ಪೈಕಿ ಒಬ್ಬರು ಜೂನ್‌ನಲ್ಲಿ ಗುಜರಾತ್‌ ಮೂಲಕ ಪ್ರಯಾಣಿಸಿದ್ದರು. ಬಹುಪಾಲು ಪುರಸಭೆಗಳ ಮಾಹಿತಿಯ ಪ್ರಕಾರ, ಇತರ ವಯೋಮಾನದವರಿಗೆ ಹೋಲಿಸಿದರೆ, 50ರಿಂದ 80 ವಯೋಮಾನದವರಲ್ಲಿ ಸಾವುತೀವ್ರ ಏರಿಕೆ ದಾಖಲಿಸಿದೆ ಎಂದುದತ್ತಾಂಶಗಳನ್ನು ವಿಶ್ಲೇಷಿಸಿದಾಗ ತಿಳಿದುಬಂದಿದೆ. ಆಸ್ಪತ್ರೆಗಳಲ್ಲಿ ಮರಣ ಹೊಂದಿದವರ ಸಂಖ್ಯೆ ಎರಡನೇ ಅಲೆಯ ವೇಳೆ ವಿಪರೀತ ಹೆಚ್ಚಾಗಿರುವುದು ಕಂಡುಬಂದಿದೆ.

ಸತ್ತವರ ಎಣಿಕೆ

ಎಲ್ಲ ರಾಜ್ಯಗಳಂತೆ ಗುಜರಾತಿನಲ್ಲಿಯೂ ಸ್ಥಳೀಯ ಮಾಧ್ಯಮಗಳು ಸಾವಿನ ಎಣಿಕೆಯ ಗೊಂದಲದ ಬಗ್ಗೆ ಬೆಳಕು ಚೆಲ್ಲಿದವು. ಎರಡನೇ ಅಲೆಯು ಗರಿಷ್ಠ ಮಟ್ಟದಲ್ಲಿ ಇದ್ದ ಸಮಯದಲ್ಲಿ ಸರ್ಕಾರ ನೀಡಿದ ದತ್ತಾಂಶಗಳಿಗೂ, ಚಿತಾಗಾರದ ದತ್ತಾಂಶಗಳಿಗೂ ವ್ಯತ್ಯಾಸಗಳು ಇರುವುದು ಕಂಡುಬಂದಿದೆ. ಸರ್ಕಾರ ಈ ವಿಚಾರದಲ್ಲಿ ಅಸ್ಪಷ್ಟ ನಿಲುವು ಹೊಂದಿದೆ ಎಂಬ ಆರಂಭಿಕ ಸೂಚನೆಗಳು ಸಿಕ್ಕಿದ್ದವು.

ಜನನ ಮತ್ತು ಮರಣದ ದಾಖಲೆಗಳು ರಾಷ್ಟ್ರೀಯ ಮಟ್ಟದಲ್ಲಿ ಸಂಗ್ರಹಗೊಳ್ಳುವ ‘ನಾಗರಿಕ ನೋಂದಣಿ ವ್ಯವಸ್ಥೆ’ಯ (ಸಿಆರ್‌ಎಸ್) ದತ್ತಾಂಶವನ್ನು ಆಧರಿಸಿ ಹೆಚ್ಚುವರಿ ಸಾವುಗಳು ಸಂಭವಿಸಿರುವ ಮುನ್ಸೂಚನೆಯನ್ನು ಮಾಧ್ಯಮಗಳು ನೀಡಿದ್ದವು. ಸಿಆರ್‌ಎಸ್ ಪರಿಷ್ಕರಣೆ ಆಗಲು ಸಮಯ ತೆಗೆದುಕೊಳ್ಳುತ್ತದೆ ಎಂದು ಹೇಳುತ್ತಾ, ಕೇಂದ್ರ ಸರ್ಕಾರ ಈ ವರದಿಗಳನ್ನು ತಳ್ಳಿಹಾಕಿತ್ತು.

(ಚಿತ್ರ 2: ಕೇಡ್‌ಬ್ರಮ ನಗರಸಭೆಯ ಮರಣ ನೋಂದಣಿಯ ಒಂದು ಪುಟ ಚಿತ್ರ: ಶ್ರೀಗಿರೀಶ್‌ ಜಾಲಿಹಾಳ್‌)
(ಚಿತ್ರ 2: ಕೇಡ್‌ಬ್ರಮ ನಗರಸಭೆಯ ಮರಣ ನೋಂದಣಿಯ ಒಂದು ಪುಟ ಚಿತ್ರ: ಶ್ರೀಗಿರೀಶ್‌ ಜಾಲಿಹಾಳ್‌)

‘ದತ್ತಾಂಶ ಸಂಗ್ರಹಣೆ, ಸಂಯೋಜನೆ ಮತ್ತು ಸಂಖ್ಯೆಗಳನ್ನು ಪ್ರಕಟಿಸುವ ಪ್ರಕ್ರಿಯೆಯನ್ನು ಸಿಆರ್‌ಎಸ್ ಅನುಸರಿಸುತ್ತದೆ. ಆದರೂ ಇದೊಂದು ದೀರ್ಘಾವಧಿಯ ಪ್ರಕ್ರಿಯೆಯಾಗಿದೆ. ಯಾವುದೇ ಸಾವಿನ ಲೆಕ್ಕವು ಇಲ್ಲಿ ತಪ್ಪುವುದಿಲ್ಲ. ಈ ಸಂಖ್ಯೆಗಳನ್ನು ಸಾಮಾನ್ಯವಾಗಿ ಮುಂದಿನ ವರ್ಷ ಪ್ರಕಟಿಸಲಾಗುತ್ತದೆ’ ಎಂದು ಆಗಸ್ಟ್ 4ರಂದು ಹೊರಡಿಸಿದ್ದ ಪತ್ರಿಕಾ ಪ್ರಕಟಣೆಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿತ್ತು.

ಹೀಗಾಗಿ ಪ್ರಾಥಮಿಕ ಮೂಲದಿಂದ ಸಾವಿನ ದಾಖಲೆಗಳ ದತ್ತಾಂಶವನ್ನು ಸಂಗ್ರಹಿಸಲು ಮತ್ತು ವಿಶ್ಲೇಷಿಸಲು ‘ರಿಪೋರ್ಟರ್ಸ್‌ ಕಲೆಕ್ಟಿವ್‌’ಗೆ ಮೂರು ತಿಂಗಳು ತೆಗೆದುಕೊಂಡಿತು. ಮೂಲದಿಂದಲೇ ಸಾವಿನ ದತ್ತಾಂಶಗಳನ್ನು ಸಿಎಸ್‌ಆರ್ ಸಂಗ್ರಹಿಸುತ್ತದೆ.

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 2019-20ರ ಪ್ರಕಾರ ಗುಜರಾತ್‌ನಲ್ಲಿ ಶೇ 93ರಷ್ಟು ಸಾವುಗಳು ದಾಖಲಾಗಿವೆ. ವಿವಿಧ ಕಾರಣಗಳಿಂದ ಶೇ 7ರಷ್ಟು ದಾಖಲಾಗದೇ ಹೋಗಿವೆ. ಕುಟುಂಬದಲ್ಲಿ ಸಂಭವಿಸಿದ ಸಾವನ್ನು ವರದಿ ಮಾಡಲು ಜನರು ಸ್ವಲ್ಪ ಸಮಯ ತೆಗೆದುಕೊಳ್ಳುತ್ತಾರೆ.ಮೂಲದಿಂದ ದತ್ತಾಂಶ ಸಂಗ್ರಹವಾಗುತ್ತದೆ.ನಗರ ಪ್ರದೇಶಗಳಲ್ಲಿಪುರಸಭೆಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿಗ್ರಾಮ ಪಂಚಾಯಿತಿಗಳಿಂದ ಜಿಲ್ಲಾ ಕೇಂದ್ರದವರೆಗೆ ಡಿಜಿಟಲೀಕೃತ ಸಿಆರ್‌ಎಸ್‌ನಲ್ಲಿ ರಾಜ್ಯ ಮಟ್ಟದ ಚಿತ್ರಣವನ್ನು ಪರಿಷ್ಕರಿಸಲಾಗುತ್ತದೆ.ಆದರೆ ರಾಜ್ಯ ಹಾಗೂರಾಷ್ಟ್ರೀಯ ಮಟ್ಟದಲ್ಲಿ ಸಮನ್ವಯ ಮತ್ತು ಮೌಲ್ಯಮಾಪನಕ್ಕೆ ಸಮಯ ತೆಗೆದುಕೊಳ್ಳುತ್ತದೆ. ಸಾಂಕ್ರಾಮಿಕ ರೋಗದಿಂದಾಗಿ ಹೆಚ್ಚಿದ ಸಾವುಗಳ ಬಗ್ಗೆ ತಜ್ಞರ ಸ್ವತಂತ್ರ ವಿಶ್ಲೇಷಣೆಯನ್ನು ತಡೆಹಿಡಿಯಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಲು ಇದು ಕಾರಣ.

‘ರಾಷ್ಟ್ರೀಯ ಮಟ್ಟದಲ್ಲಿ ಸಿಆರ್‌ಎಸ್ ನೈಜ ದತ್ತಾಂಶ ಕಾಣಸಿಗಲು ಎರಡು ವರ್ಷಗಳು ಬೇಕಾಗಬಹುದು. ಆದರೆ ಅಂತಿಮ ಸಿಆರ್‌ಎಸ್ ದತ್ತಾಂಶಕ್ಕೆ ಕಾಯದೇ, ಮರಣ ಪ್ರಮಾಣವನ್ನು ತಿಳಿಯಲು ಅತ್ಯುತ್ತಮ ಪ್ರಾಥಮಿಕ ಮೂಲವಾದಪುರಸಭೆಯ ಸಾವಿನ ದಾಖಲಾತಿಗಳನ್ನು ಗಮನಿಸಬಹುದು’ ಎಂದು ಕೇಂದ್ರ ಸರ್ಕಾರಿ ಸಂಸ್ಥೆಯಲ್ಲಿ ಜನಸಂಖ್ಯಾಶಾಸ್ತ್ರದ ಮೇಲೆ ಕೆಲಸ ಮಾಡುತ್ತಿದ್ದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT