ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಗರೋತ್ಥಾನ ಕಾಮಗಾರಿ ಅವ್ಯವಹಾರ: ಆರೋಪ

Published : 31 ಡಿಸೆಂಬರ್ 2016, 4:56 IST
ಫಾಲೋ ಮಾಡಿ
Comments

ಇಳಕಲ್:  ಇಳಕಲ್‌ನಲ್ಲಿ ನಡೆದಿರುವ ನಗರೋತ್ಥಾನ ಯೋಜನೆಯ ಕಾಮಗಾರಿಗಳಲ್ಲಿ ಭ್ರಷ್ಟಾಚಾರ, ಅವ್ಯವಹಾರ, ವಂಚನೆ ನಡೆದಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ನಗರೋತ್ಥಾನ ಕಾಮಗಾರಿಯ ಕಾರ್ಯನಿರ್ವಾಹಕ ಎಂಜಿನಿಯರ್‌ ದೊಡಮನಿ ಹಾಗೂ ಸಿಬ್ಬಂದಿ ಖುದ್ದು ಪರಿಶೀಲನೆ ನಡೆಸಿದರು.

ನಗರೋತ್ಥಾನ ಯೋಜನೆಯಡಿ ರಸ್ತೆ ಕಾಮಗಾರಿಗೆ ₹ 12.71 ಕೋಟಿ ವೆಚ್ಚ ಮಾಡಲಾಗಿದೆ. ಆದರೆ ಅನೇಕ ರಸ್ತೆಗಳಲ್ಲಿ ಕಾಮಗಾರಿಯೇ ನಡೆದಿಲ್ಲ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಶಿಸ್ತಿನ ಕ್ರಮ ಕೈಗೊಳ್ಳಬೇಕು ಎಂದು ಇಲ್ಲಿಯ ಜನಜಾಗೃತಿ ವೇದಿಕೆಯು ಪೌರಾಡಳಿತ ನಿರ್ದೇಶನಾಲಯಕ್ಕೆ ಹಾಗೂ ಜಿಲ್ಲಾಧಿಕಾರಿಗೆ ದೂರು ನೀಡಿತ್ತು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ತಂಡ ಪರಿಶೀಲನೆ ಕೈಗೊಂಡಿತ್ತು.

ಅಧಿಕಾರಿಗಳ ಪರಿಶೀಲನೆಯಲ್ಲಿ ಮಾಡದ ಕಾಮಗಾರಿಗೆ ಹಣ ಖರ್ಚು ಮಾಡಿರುವ ನಗರಸಭೆ ಅಧಿಕಾರಿಯನ್ನು ತಕ್ಷಣವೇ ಅಮಾನತು ಮಾಡಬೇಕು ಎಂದು ನಾಗರಿಕರು ಒತ್ತಾಯಿಸಿದರು.

ನಗರಸಭೆ ಕಚೇರಿಯಿಂದ ಪೊಲೀಸ್ ಮೈದಾನ, ಬನ್ನಿಕಟ್ಟಿ, ದನದ ಆಸ್ಪತ್ರೆ, ಕೊಪ್ಪರದ ಪೇಟೆ, ಬಜಾರ, ಗಾಂಧಿ ಚೌಕ್‌, ಗ್ರಾಮ ಚಾವಡಿ ಮೂಲಕ ಕಂಠಿ ವೃತ್ತದವರೆಗಿನ ರಸ್ತೆಯನ್ನು ಡಾಂಬರ್ ರಸ್ತೆಯನ್ನಾಗಿ ನಿರ್ಮಿಸಲಾಗಿದೆ ಎಂದು ₹ 1.36 ಕೋಟಿ ಅಂದಾಜಿಗೆ ಪ್ರತಿಯಾಗಿ ₹ 1.20 ಕೋಟಿ ಖರ್ಚು ಮಾಡಲಾಗಿದೆ ಎಂದು ಹೇಳಿದರು.

ಅದೇ ರೀತಿ ದರ್ಗಾದಿಂದ ಮಾಬುಸುಬಾನಿ ಕಟ್ಟೆ, ನಾಲಾ, ಎಸಿಓ, (ನಾಲಾ- ಎಸಿಓ ಮಾತ್ರ ಡಾಂಬರ್  ರಸ್ತೆಯಾಗಿದೆ) ಮಟನ್ ಮಾರ್ಕೆಟ್‌, ಡಮಾಮ ಫ್ಯಾಕ್ಟರಿ, ಹಳೆ ಸರ್ಕಾರಿ ದವಾಖಾನೆ ಮಾರ್ಗವಾಗಿ ಈದ್ಗಾವರೆಗೆ ಡಾಂಬರೀಕರಣ ಕಾಮಗಾರಿ ನಡೆದಿಲ್ಲ.  ಬಿದರಿ ಅವರ ಮನೆಯಿಂದ ಪಿ.ಕೆ. ಗುಳೇದ ಅವರ ಮನೆವರೆಗಿನ ರಸ್ತೆ, ಅಲಂಪುರ ಪೇಟೆಯಲ್ಲಿ ವಾಲ್ಮೀಕಿ ಗುಡಿಯಿಂದ ಮಾನೆ ಅವರ ಮನೆವರೆಗೆ ಮತ್ತು ಅಗಸರ ಗಲ್ಲಿಯಲ್ಲಿನ 3 ಪ್ರಮುಖ ರಸ್ತೆಗಳ ಡಾಂಬರೀಕರಣ ಕಾಮಗಾರಿ ನಡೆದೇ ಇಲ್ಲ.  ಆದರೆ ಈ ಎಲ್ಲ ರಸ್ತೆಗಳನ್ನು ಡಾಂಬರ್ ರಸ್ತೆಗಳನ್ನಾಗಿ ನಿರ್ಮಿಸಲಾಗಿದೆ ಎಂದು ಖರ್ಚು ತೋರಿಸಲಾಗಿದೆ ಎಂದು ಹೇಳಿದರು.

ನಗರೋತ್ಥಾನದಡಿ ₹ 4.77 ಕೋಟಿ ವೆಚ್ಚದಲ್ಲಿ ರಸ್ತೆ ಬದಿ ಆರ್‌ಸಿಸಿ ಚರಂಡಿ ನಿರ್ಮಾಣ ಕಾಮಗಾರಿಗಳಲ್ಲಿ ಬಹುತೇಕ ಕಾಮಗಾರಿಗಳು ಪ್ರಗತಿಯಲ್ಲಿ ಇಲ್ಲದಿದ್ದರೂ ಅವುಗಳಿಗೆ ₹ 2.25 ಕೋಟಿ ವೆಚ್ಚ ತೋರಿಸಲಾಗಿದೆ ಎಂದು ಕಾರ್ಯ ನಿರ್ವಾಹಕ ಎಂಜಿನಿಯರ್ ತಂಡದ ಖುದ್ದು ಪರಿಶೀಲನೆ ಸಂದರ್ಭದಲ್ಲಿ ನಾಗರಾಜ ಹೊಂಗಲ್‌, ಯಲ್ಲಪ್ಪ ಪೂಜಾರಿ ಸೇರಿದಂತೆ ವಿವಿಧ ಬಡಾವಣೆಗಳ ನಾಗರೀಕರು ಅಧಿಕಾರಿಗಳ ಗಮನ ಸೆಳೆದರು.

ನಗರಸಭೆಯ ಯಾವುದೇ ಕಾಮಗಾರಿಗಳಲ್ಲಿ ಪಾರದರ್ಶಕತೆ ಅಳವಡಿಸಿಕೊಂಡಿಲ್ಲ, ಕಾಮಗಾರಿಗಳ ವಿವರಗಳು ಹಾಗೂ ಷರತ್ತುಗಳ ಬಗ್ಗೆ ನಾಮಫಲಕ ಹಾಕಿಲ್ಲ. ಮಾರ್ಗಸೂಚಿಗಳನ್ನು ಪಾಲಿಸುತ್ತಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ ಸುಳ್ಳು ಕೇಸು ದಾಖಲಿಸುತ್ತಾರೆ. ಕಾಮಗಾರಿಗಳು ಮುಗಿದಿವೆ ಎಂದು ಸುಳ್ಳು ಹೇಳಿ ಖರ್ಚು ತೋರಿಸಿದ್ದೇಕೆ? ಈ ಹಣ ಎಲ್ಲಿ ಹೋಯಿತು? ನಗರಸಭೆ ಅಧಿಕಾರಿಗಳಿಂದ ಈ ಬಗ್ಗೆ ಲಿಖಿತ ಹೇಳಿಕೆ ಪಡೆಯಬೇಕು ಎಂದು ಜನಜಾಗೃತಿ ವೇದಿಕೆಯ ಜಗದೀಶ ಸರಾಫ್‌ ಒತ್ತಾಯಿಸಿದರು. 

  2013-14ನೇ ಸಾಲಿನಿಂದ ಇಲ್ಲಿಯವರೆಗೆ ನಗರಸಭೆಗೆ ಎಸ್ಎಫ್‌ಸಿ, 13, 14ನೇ ಹಣಕಾಸು ಆಯೋಗ, ನಗರೋತ್ಥಾನ ಯೋಜನೆಗಳಡಿ ಒಟ್ಟಾರೆ ₹ 32.43 ಕೋಟಿ ಅನುದಾನದಲ್ಲಿ  ₹  22.83 ಕೋಟಿ ಖರ್ಚಾಗಿದೆ. 9.60 ಕೋಟಿ ಅನುದಾನ ಬಳಕೆಯಾಗಿಲ್ಲ ಎಂದು ಪರಿಶೀಲನಾ ತಂಡಕ್ಕೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT