ಗುರುವಾರ, 3 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರಲ್ಲಿ ಪಾಕಿಸ್ತಾನದ ಮತ್ತೊಂದು ಕುಟುಂಬ ಬಂಧನ

ಹೆಸರು ಬದಲಿಸಿಕೊಂಡು ಮಗಳೊಂದಿಗೆ ಪೀಣ್ಯದಲ್ಲಿದ್ದ ಕರಾಚಿ ದಂಪತಿ
Published : 3 ಅಕ್ಟೋಬರ್ 2024, 16:57 IST
Last Updated : 3 ಅಕ್ಟೋಬರ್ 2024, 16:57 IST
ಫಾಲೋ ಮಾಡಿ
Comments

ಆನೇಕಲ್: ಜಿಗಣಿಯಲ್ಲಿ ಐದು ದಿನಗಳ ಹಿಂದೆ ಬಂಧಿಸಲಾದ ಪಾಕಿಸ್ತಾನ ಕುಟುಂಬ ಸದಸ್ಯರು ವಿಚಾರಣೆ ವೇಳೆ ಬಾಯ್ಬಿಟ್ಟ ಮಾಹಿತಿ ಬೆನ್ನಟ್ಟಿದ ಜಿಗಣಿ ಪೊಲೀಸರು ಗುರುವಾರ ಬೆಂಗಳೂರಿನ ಪೀಣ್ಯದಲ್ಲಿ ಒಂದೇ ಕುಟುಂಬದ ಮೂವರು ಪಾಕಿಸ್ತಾನಿಯರನ್ನು ಬಂಧಿಸಿದ್ದಾರೆ.

ಬಂಧಿತರು ಪಾಕಿಸ್ತಾನದ ಕರಾಚಿ ನಿವಾಸಿಗಳಾದ ತಾರೀಖ್ ಸಯೀದ್, ಆತನ ಪತ್ನಿ ಅನಿಲ ಸಯೀದ್ ಮತ್ತು ಮಗಳು ಇಶ್ರತ್ ಸಯೀದ್ ಎಂದು ತಿಳಿದು ಬಂದಿದೆ. ಈ ಮೂವರೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದ ಪಾಕಿಸ್ತಾನದ ಒಟ್ಟು ಏಳು ಪ್ರಜೆಗಳನ್ನೂ ಬಂಧಿಸಿದಂತಾಗಿದೆ.

ಭಾನುವಾರ ರಾತ್ರಿ ಜಿಗಣಿಯ ರಾಜಾಪುರ ಬಡಾವಣೆಯಲ್ಲಿ ಬಂಧಿಸಲಾದ ರಷೀದ್‌, ತಮ್ಮೊಂದಿಗೆ ಭಾರತಕ್ಕೆ ಬಂದಿದ್ದ ಮತ್ತೊಂದು ಕುಟುಂಬ ಬೆಂಗಳೂರಿನ ಪೀಣ್ಯದಲ್ಲಿ ನೆಲೆಸಿದೆ ಎಂದು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದ.

ಈ ಸುಳಿವು ಆಧರಿಸಿ ಡಿವೈಎಸ್‌ಪಿ ಮೋಹನ್, ಜಿಗಣಿ ಠಾಣೆ ಇನ್‌ಸ್ಪೆಕ್ಟರ್‌ ಮಂಜುನಾಥ್ ನೇತೃತ್ವದ ತಂಡ ಪೀಣ್ಯದ ಮನೆಯೊಂದರರಲ್ಲಿ ನೆಲೆಸಿದ್ದ ಮೂವರನ್ನು ವಶಕ್ಕೆ ಪಡೆಯಿತು.

ಬಂಧಿತರನ್ನು ಜಿಗಣಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಕೀಯ ತಪಾಸಣೆ ನಡೆಸಿ, ಆನೇಕಲ್ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ನ್ಯಾಯಾಲಯವು ಆರೋಪಿಗಳನ್ನು ಹತ್ತು ದಿನ ಪೊಲೀಸ್ ಕಸ್ಟಡಿಗೆ ನೀಡಿದೆ.

ಬಾಂಗ್ಲಾದೇಶದ ಮೂಲಕ ಕೇರಳಕ್ಕೆ ಬಂದಿದ್ದ ಆರೋಪಿಗಳು ಅಲ್ಲಿಂದ ದಾವಣಗೆರೆಗೆ ಹೋಗಿ ಅಲ್ಲಿ ಒಂದು ವರ್ಷ ನೆಲೆಸಿದ್ದರು. ನಾಲ್ಕು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಪೀಣ್ಯದಲ್ಲಿ ಬಾಡಿಗೆ ಮನೆ ಪಡೆದು ವಾಸವಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪಾಕ್‌ ಪೌರತ್ವ; ಭಾರತೀಯ ಹೆಸರು ಬಂಧಿತರು ಪಾಕಿಸ್ತಾನದ ಕರಾಚಿಯವರಾಗಿದ್ದು ಹೆಸರು ಬದಲಿಸಿಕೊಂಡು ಆಧಾರ್ ಕಾರ್ಡ್ ಡ್ರೈವಿಂಗ್ ಲೈಸನ್ಸ್ ಪಾಸ್‌ಪೋರ್ಟ್ ಪಡೆದಿದ್ದಾರೆ. ಪೀಣ್ಯದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ಕುಟುಂಬ ಯೂನಸ್ ಆಲ್ಗೋರ್ ಧರ್ಮಗುರು ಪರ ಪ್ರಚಾರಕ್ಕಾಗಿ ಭಾರತಕ್ಕೆ ಬಂದಿದ್ದಾರೆ ಎಂದು ತಿಳಿದು ಬಂದಿದೆ. ಕುಟುಂಬದ ಮುಖ್ಯಸ್ಥ ತಾರೀಖ್ ಸಯೀದ್ ತನ್ನ ಹೆಸರನ್ನು ಸನ್ನಿ ಚೌಹಾಣ್ ಎಂದು ಮತ್ತು ಆತನ ಪತ್ನಿ ಅನಿಲ ಸಯೀದ್ ದೀಪಾ ಚೌಹಾಣ್ ಎಂಬ ಹೆಸರಿನಲ್ಲಿ ಆಧಾರ್‌ ಪಾಸ್‌ಪೋರ್ಟ್ ಪಡೆದಿದ್ದಾರೆ. ಪಾಕಿಸ್ತಾನದಿಂದ ಒಟ್ಟು ಏಳು ಮಂದಿ ಬೆಂಗಳೂರಿಗೆ ಬಂದಿದ್ದು ಎಲ್ಲ ಏಳು ಮಂದಿ ಸೆರೆ ಸಿಕ್ಕಂತಾಗಿದೆ. ಉಳಿದವರು ಅಸ್ಸಾಂ ಒಡಿಶಾ ಚೆನ್ನೈ ದೆಹಲಿ ಮತ್ತು ಹೈದರಾಬಾದ್‌ನಲ್ಲಿ ನೆಲೆಸಿರುವ ಮಾಹಿತಿ ಇದೆ. ಅಲ್ಲಿ ಯೂನಸ್ ಆಲ್ಗೋರ್ ಧರ್ಮಗುರು ಪರ ಪ್ರಚಾರದಲ್ಲಿ ತೊಡಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT