ಗುರುವಾರ, 3 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದಸರಾ ಉತ್ಸವಕ್ಕೆ ಚಾಲನೆ | ಯುದ್ಧ, ಹೆಣ್ಣು ಭ್ರೂಣಹತ್ಯೆ‌ ನಿಲ್ಲಲಿ: ಹಂಪನಾ

Published : 3 ಅಕ್ಟೋಬರ್ 2024, 6:31 IST
Last Updated : 3 ಅಕ್ಟೋಬರ್ 2024, 6:31 IST
ಫಾಲೋ ಮಾಡಿ
Comments

ಮೈಸೂರು: ‘ಯುದ್ಧ, ಅಮಾಯಕರ ಮಾರಣಹೋಮ ನಿಲ್ಲಲಿ, ಅದಕ್ಕಾಗಿ ರಾಷ್ಟ್ರ ನಾಯಕರು ಜೀವಪರ ಧೋರಣೆ ತಳೆಯಲು ಚಾಮುಂಡಿ ಪ್ರೇರಣೆ ನೀಡಲಿ, ಹೆಣ್ಣು ಭ್ರೂಣ ಹತ್ಯೆ ತಡೆಯಲು ತಾಯಿ ತಂದೆಯರಿಗೆ‌ ಸದ್ಬುದ್ಧಿ ಅನುಗ್ರಹಿಸಲಿ' ಎಂಬ ಕೋರಿಕೆಗಳನ್ನು ಮಂಡಿಸಿ ಪ್ರೊ. ಹಂಪ ನಾಗರಾಜಯ್ಯ ಗುರುವಾರ ಇಲ್ಲಿನ‌ ಚಾಮುಂಡಿ ಬೆಟ್ಟದಲ್ಲಿ ನಾಡಹಬ್ಬ ದಸರಾ ಮಹೋತ್ಸವಕ್ಕೆ‌ ಚಾಲನೆ ನೀಡಿದರು.

ಚಾಮುಂಡೇಶ್ವರಿ ದೇವಿಯನ್ನು ಲೋಕಮಾತೆ ಎಂದು ಕರೆದ ಅವರು, ರಾಜರ್ಷಿ ನಾಲ್ವಡಿ ಶ್ರೀಕೃಷ್ಣರಾಜ ಒಡೆಯರನ್ನು ಮೊದಲಿಗೆ ಸ್ಮರಿಸಿದರು.

'ಹೆಣ್ಣು ಭ್ರೂಣ ಹತ್ಯೆ ತಡೆಯುವಲ್ಲಿ ಹೆಣ್ಣು ದೇವತೆಗಳು ತೆಪ್ಪಗಿರುವುದು ಕಂಡು ಅಚ್ಚರಿಯಾಗುತ್ತದೆ' ಎಂದ ಅವರು, 'ದೇವರುಗಳಿಗೂ ಬಲಿಷ್ಠರನ್ನು ಕಂಡರೆ ಭಯ, ಅಮಾಯಕ ಮುಗ್ಧರಿಗೇ ಕಷ್ಟ ಕೊಡುವರು. ಈ ದೇವರುಗಳು ಕೂಡ ಕೋಳಿ, ಕುರಿ, ಮೇಕೆ ಬಲಿ ಬೇಡುವರೆ ಹೊರತು ಹುಲಿ, ಸಿಂಹ, ಚಿರತೆ ಕಿರುಬ ಬಲಿ ಕೊಡಿ ಎಂದು ಕೇಳಲು ಹೆದರಿಕೆ' ಎಂದು ವಿಷಾದಿಸಿದರು.

'ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ ಶಾಸನ ಸಭೆ ಲೋಕಸಭೆಯಲ್ಲಿ ಸ್ತ್ರೀಯರಿಗೆ ಸೂಕ್ತ ಪ್ರಾತಿನಿಧ್ಯ ಕೊಡುವ ಮಸೂದೆಗೆ ಅಡ್ಡಿ ಮಾಡುತ್ತಲೇ ಇದ್ದಾರೆ. ಹೆಣ್ಣುಮಕ್ಕಳು ಶಾಲೆಗೆ ಹೋಗಕೂಡದೆಂದು ಬೆದರಿಸುವ ಒಂದು ದೇಶವೂ ಇದೆಯೆಂಬುದು ಶೋಚನೀಯವಷ್ಟೇ ಅಲ್ಲ, ಖಂಡನೀಯ ಕೂಡ' ಎಂದು ಹೇಳಿದರು.

'ಬಹು ದೊಡ್ಡ ರಾಷ್ಟ್ರೀಯ ಸಮಸ್ಯೆಯಾದ ನಿರುದ್ಯೋಗದಿಂದ ಯುವಜನರು ಹತಾಶರಾಗಿದ್ದಾರೆ. ನಿರುದ್ಯೋಗ ನಿವಾರಣೆಗೆ ಆದ್ಯತೆಯಿತ್ತು, ಕೇಂದ್ರ ಸರಕಾರವು ಕ್ರಮ ಕೈಗೊಳ್ಳುವಂತೆ ದೇವಿ ಪ್ರೇರೇಪಿಸಲಿ' ಎಂದು ಪ್ರಾರ್ಥಿಸಿದರು.

‘ಹೋರಾಟಗಾರರನ್ನು ಕೊಲೆಗಾರರಂತೆ ಕಾಣದಿರಿ’

'ಕನ್ನಡ ನಾಡು, ನುಡಿ, ನೆಲ, ಜಲ, ಕಲೆ, ಸಂಸ್ಕೃತಿ ಸಂರಕ್ಷಣೆಗಾಗಿ ಹೋರಾಡುವವವರನ್ನು ಕೊಲೆಗಾರರಂತೆ ಕಾಣದೆ, ಪ್ರೀತಿ, ಅಭಿಮಾನಗಳಿಂದ ಕಾಣುವಂತೆ ಆಡಳಿತಾಂಗಕ್ಕೆ ಚಾಮುಂಡೇಶ್ವರಿ ಪ್ರೇರಣೆ ಕೊಡಲಿ' ಎಂದು ವಿನಂತಿಸಿದರು.

‘ಕೆಡವುಹುದು‌ ಸುಲಭ,‌ಕಟ್ಟುವುದು‌ ಕಷ್ಟ’

ರಾಜ್ಯದ ರಾಜಕೀಯ‌ ಬೆಳವಣಿಗೆಗಳ ಬಗ್ಗೆ ಗಮನ ಸೆಳೆದ ಅವರು, 'ಸರ್ಕಾರಗಳನ್ನು ಉರುಳಿಸುವ ದುರಾಲೋಚನೆ ಬರದಂತೆ ತಡೆದು, ಚುನಾಯಿತ ಸರಕಾರಗಳನ್ನು ಉಳಿಸುವ ಚಿಂತನೆಗಳನ್ನು ಲೋಕಾಂಬಿಕೆಯು ಮೂಡಿಸಲಿ' ಎಂದು ಆಶಿಸಿದ‌ರು.

'ಕೆಡವುಹುದು ಸುಲಭ, ಕಟ್ಟುವುದು ಕಷ್ಟ. ಮೊದಲೇ ದೊಡ್ಡ ಹೊರೆಗಳಿಂದ ಬಳಲಿ ಬಸವಳಿದಿರುವ ಶ್ರೀಸಾಮಾನ್ಯರ ಹೆಗಲಿಗೆ ಮತ್ತೆ ಮತ್ತೆ ನಡೆಯುವ ಚುನಾವಣೆಗಳು ಇನ್ನಷ್ಟು ಭಾರ ಹೇರಿದರೆ ಕುಸಿಯುತ್ತಾರಷ್ಟೆ. ಯಾವ ಪಕ್ಷವೂ ಶಾಶ್ವತವಾಗಿ ಅಧಿಕಾರದಲ್ಲಿ ಇರುವುದು ಅಸಾಧ್ಯ. ಸೋತ ಪಕ್ಷವು ಮತ್ತೆ ಅಧಿಕಾರಕ್ಕೆ ಬರಲು, ಜನಮನವನ್ನು ತಮ್ಮ ಪರವಾಗಿ ಒಲಿಸಿಕೊಳ್ಳಲು ಐದು ವರ್ಷದಲ್ಲಿ ಸಜ್ಜಾಗಬಹುದು' ಎಂದು ಪ್ರತಿಪಾದಿಸಿದರು.

'ದಿನನಿತ್ಯ ಪತ್ರಿಕೆಗಳಲ್ಲಿ ಪರಸ್ಪರ ದೋಷಾರೋಪಣೆ, ವೈಯಕ್ತಿಕ ನಿಂದನೆ, ಅವಾಚ್ಯ ಶಬ್ದಗಳ ಬಳಕೆ ಓದಿ, ಯುವಜನ ಇದನ್ನೇ ಮಾದರಿಯಾಗಿ ಮುಂದುವರಿಸಿದರೆ ಏನುಗತಿ ಎಂದು ಜನರು ಬೇಸರಗೊಂಡಿದ್ದಾರೆ. ತಾಯಿ ಚಾಮುಂಡೇಶ್ವರೀ ದೇವೀ, ಇನ್ನು ಮುಂದೆ ಈ ಪದ್ಧತಿ ನಿಂತು ಸಮಾಜಮುಖಿ ಚಿಂತನೆಯನ್ನು ಒಳಗೊಂಡು ಸಮೃದ್ಧ ರಾಷ್ಟ್ರ ನಿರ್ಮಾಣಕ್ಕೆ ಹಮ್ಮಿಕೊಂಡಿರುವ ಯೋಜನೆ ಯೋಚನೆಗಳನ್ನು ನಿರೂಪಿಸುವಂತೆ ಸ್ಪೂರ್ತಿ ಕೊಡಬೇಕೆಂದು ಪ್ರಾರ್ಥಿಸುತ್ತೇನೆ' ಎಂದರು.

ಬಾಲ್ಯದ ದಸರೆಯ ನೆನಪು

88 ವರ್ಷಗಳ ಹಂಪಾನಾ, ಉದ್ಘಾಟನೆ ಭಾಷಣದ‌ ನಡುವೆ ತಾವು ಬಾಲ್ಯದಲ್ಲಿ‌ ಕಂಡ ದಸರೆಯನ್ನು ಸ್ಮರಿಸಿದರು.

'ಪ್ರತಿ ವರ್ಷ ನವರಾತ್ರಿಯಲ್ಲಿ ನನ್ನ ತಾಯಿ ಜಾಕಾಯಿ ಪೆಟಾರಿಯಿಂದ ತನ್ನ ತವರುಮನೆಯ ಬಳುವಳಿಯಾಗಿ ತಂದಿದ್ದ ಎರಡು ಬಚ್ಚಣಿಗೆ ಬೊಂಬೆ ಮತ್ತಿತರ ಪ್ರದರ್ಶನ ವಸ್ತುಗಳನ್ನು ತೆಗೆದು ಕೊಡುತ್ತಿದ್ದರು. ನನ್ನ ತಮ್ಮ ತಂಗಿಯರೊಂದಿಗೆ ನೂರಾರು ಬೊಂಬೆಗಳನ್ನು ಅಲಂಕರಿಸಿ ಮೆಟ್ಟಿಲು ಮೆಟ್ಟಿಲಾಗಿ ಪೇರಿಸಿದ ಹಲಗೆಗಳ ಮೇಲೆ

ಒಪ್ಪವಾಗಿ ಜೋಡಿಸುತ್ತಿದ್ದೆವು. ಮರದಲ್ಲಿ ಮಾಡಿದ ಆ ಎರಡು ಬಚ್ಚಣಿಗೆ ಬೊಂಬೆಗಳನ್ನು ದೂರ ದೂರ ಇಟ್ಟರೆ ನನ್ನ ತಾಯಿ ಕೂಡಲೆ, ‘ಮಕ್ಕಳೇ ಅವು ಎರಡಿದ್ದರೂ ಒಂದೇನೆ. ಅವು ಜೋಡಿ, ಅವು ಶಾಶ್ವತ ದಂಪತಿಗಳು. ಅವನ್ನು ಅಗಲಿಸಬಾರದು. ಈ ಬೊಂಬೆಗಳಂತೆ ಅಗಲದೆ ಗಂಡಹೆಂಡತಿಯಾಗಿ ಬಾಳಿ ಎಂದು ನನ್ನ ತಾಯಿತಂದೆ ಹರಸಿ ಕೊಟ್ಟಿರುವರು. ಇವು ಬರೀ ಮರದ ಮೊಂಬೆಗಳಲ್ಲ, ಮನೆ ಬೆಳಗುವ ಜೋಡಿ’ ನನ್ನಮ್ಮ ಹೇಳಿದ ಮಾತುಗಳನ್ನು ಈಗಲೂ ಮೆಲಕು ಹಾಕುತ್ತೇನೆ ಎಂದರು.

'ಜೋಡಿ ಬೊಂಬೆಗಳು ಆದರ್ಶವನ್ನು ಬಿತ್ತುವ ರೂಪಕಗಳು, ಅರಮನೆ, ರಾಜರಾಣಿ, ದೇವತೆಗಳು ಇತ್ಯಾದಿ ಮಾತುಗಳು ಆಲಂಕಾರಿಕ ರೂಪಕಗಳು. ಸಹನೆ ಸೌಹಾರ್ದದಿಂದ ಬಾಳಿದರೆ, ನೆಮ್ಮದಿ ಇದ್ದರೆ ಪ್ರತಿ ಮನೆಯೂ ಅರಮನೆಯೇ, ಎಲ್ಲರೂ ರಾಜರಾಣಿಯರೇ' ಎಂದು ವಿಶ್ಲೇಷಿಸಿದರು.

ಪೈಲ್ವಾನ್ ಆಗುವಾಸೆಯಿಂದ ತಲೆ ಬೋಳಿಸಿಕೊಂಡ ನೆನಪು..

'ದಸರ ಹಬ್ಬದ ಸಂದರ್ಭದಲ್ಲಿ ಹಿಂದಿನಿಂದ ಪ್ರೋತ್ಸಾಹಿಸುತ್ತಿದ್ದ ದೇಸಿ ಪರಂಪರೆಗಳಲ್ಲಿ ಒಂದಾದ ಕುಸ್ತಿಗೆ ಹೆಚ್ಚು ಪ್ರೋತ್ಸಾಹ ಕೊಡಬೇಕು. ನಾಡಿನ ಉದ್ದಗಲಗಳಲ್ಲಿ ಗರಡಿಮನೆಗಳು ಇದ್ದುವು' ಎಂದ‌ ಅವರು ಬಾಲ್ಯದ ನೆನಪೊಂದನ್ನು ಬಿಚ್ಚಿಟ್ಟರು.

'ನಾನು ಮಂಡ್ಯದಲ್ಲಿ ಆರನೆಯ ತರಗತಿ ವಿದ್ಯಾರ್ಥಿಯಾಗಿದ್ದಾಗ 1948ರಲ್ಲಿ ಮೈಸೂರು ಉಸ್ತಾದ್ ಟೈಗರ್ ರಾಮು ತುಂಬಾ ಜನಪ್ರಿಯರಾಗಿದ್ದರು. ಅದನ್ನು ಕಂಡು ನಾನು ಪೈಲ್ವಾನ್ ಆಗಬೇಕೆಂದು ಗರಡಿಮನೆಗೆ ಹೋಗುತ್ತಿದ್ದೆ. ತಲೆತುಂಬ ಗುಂಗರು ಕೂದಲಿತ್ತು. ಆದರೆ ಉಸ್ತಾದ್ ಕಾಳಪ್ಪನವರು ಗರಡಿಯಲ್ಲಿ ಕ್ರಾಪು ಸರಿಯಿಲ್ಲವೆಂದರು. ನಾನು ತಲೆಬೋಳಿಸಿ ಮನೆಗೆ ಹೋದೆ. ನಮ್ಮ ಚಿಕ್ಕಪ್ಪ ಎಂಥಾ ತಪ್ಪು ಮಾಡಿದೆಯೋ ಬೇಕೂಫ, ತಂದೆ ಬದುಕಿರುವಾಗ ತಲೆಬೋಳಿಸಿ ಅಪಶಕುನವಾಯಿತು' ಎಂದು ಚೆನ್ನಾಗಿ ಬೈದು ಗರಡಿಮನೆಗೆ ಕಾಲಿಡದಂತೆ ಮಾಡಿದರು. ಅದರಿಂದ ಈ ನಾಡಿಗೆ ಒಬ್ಬ ಶ್ರೇಷ್ಠ ಪೈಲ್ವಾನ ಸಿಗಬಹುದಾದ ಅವಕಾಶ ತಪ್ಪಿತಲ್ಲಾ ಎಂದು ಈಗಲೂ ವ್ಯಸನವಿದೆ' ಎಂದಾಗ ಸಭಿಕರು ನಗೆಗಡಲಲ್ಲಿ ತೇಲಿದರು.

'ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಎಷ್ಟೇ ಅಡ್ಡಿ ಆತಂಕಗಳು ಎದುರಾಗುತ್ತಿದ್ದರೂ, ಎದೆಗುಂದದೆ ಸಡ್ಡು ಹೊಡೆದು ಗಟ್ಟಿಯಾಗಿ ನಿಂತಿರುವುದನ್ನು ನೋಡಿದರೆ ಅವರೂ ಕೂಡ ಗರಡಿಮನೆಯಲ್ಲಿ ಸಾಮು ಮಾಡಿರಬೇಕೆಂಬ ಗುಮಾನಿ ನನಗಿದೆ' ಎಂದ ಅವರು ಮತ್ತೆ ನಗೆ ಉಕ್ಕಿಸಿದರು.

ಉದ್ಘಾಟನೆ ಗೌರವ ಮಡದಿಗೆ ಅರ್ಪಣೆ

ಭಾಷಣದ ಕೊನೆಗೆ, 'ಒಟ್ಟು 71 ವರ್ಷಗಳ ಸ್ನೇಹದ ಸುಖ ನೀಡಿದ್ದಲ್ಲದೆ ಆರು ವರ್ಷ ಸಹಪಾಠಿಯಾಗಿಯೂ 63 ವರ್ಷ ಮಡದಿಯಾಗಿಯೂ ನನ್ನನ್ನು ರೂಪಿಸಿದ ಮಹಾಶಿಲ್ಪಿ ನಾಡೋಜ ಪ್ರೊಫೆಸರ್ ಕಮಲಾ ಹಂಪನಾ ಅವರ ದಿವ್ಯ ನೆನಪಿಗೆ ನನಗೆ ಸಂದಿರುವ ಈ ಗೌರವವನ್ನು ಸಮರ್ಪಿಸುತ್ತೇನೆ' ಎಂದು‌ ಅವರು ಗದ್ಗದಿತರಾದರು.

ತೀರ್ಥಂಕರರ ಪುತ್ಥಳಿ ನೀಡಿ‌ ಹಂಪಾನಾ ಅವರನ್ನು‌ ಸ್ವಾಗತಿಸಿದ್ದು ವಿಶೇಷವಾಗಿತ್ತು.

ಕುಮಾರಸ್ವಾಮಿ ವಿರುದ್ಧ ಜಿ.ಟಿ.ದೇವೇಗೌಡ ಆಕ್ರೋಶ; ಸಿದ್ದರಾಮಯ್ಯಗೆ ಶ್ಲಾಘನೆ

ಕಾರ್ಯಕ್ರಮದ ಅಧ್ಯಕ್ಷತೆ‌ ವಹಿಸಿದ್ದ ಶಾಸಕ ಜಿ.ಟಿ.ದೇವೇಗೌಡ ಅವರು, ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸುತ್ತಿರುವ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಬಿಜೆಪಿ-ಜೆಡಿಸ್ ಮುಖಂಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅವರೆಲ್ಲರಿಗೂ ದೇವಿ ಚಾಮುಂಡೇಶ್ವರಿ ಒಳ್ಳೆ ಬುದ್ಧಿ ಕೊಡಲಿ' ಎಂದರು.

'ಯಾರೆಲ್ಲರ‌ ವಿರುದ್ಧ ಎಫ್ ಐಆರ್ ದಾಖಲಾಗಿದೆಯೋ‌ ಎಲ್ಲರೂ ರಾಜೀನಾಮೆ‌ ಕೊಡಲಿ' ಎಂದು ಆಗ್ರಹಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜಕೀಯ ಏಳುಬೀಳುಗಳನ್ನು‌ ಸ್ವಾರಸ್ಯಕರವಾಗಿ ಸ್ಮರಿಸಿ, 'ಮೈಸೂರಿನ ಸಮಗ್ರ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ತಯಾರಿಸಬೇಕು' ಎಂದು ಕೋರಿದರು.

ಕಾರ್ಯಕ್ರಮದ ಕೊನೆಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಜಿ.ಟಿ.ದೇವೇಗೌಡರು ಮತ್ತು ತಮ್ಮ ನಡುವೆ ಚಾಮುಂಡೇಶ್ವರಿ ಕ್ಷೇತ್ರದ ಚುನಾವಣೆಗಳಲ್ಲಿ ಏರ್ಪಟ್ಟಿದ್ದ ಪೈಪೋಟಿಗಳ ಕುರಿತು ಸ್ಮರಿಸಿದರು.

ಅಧಿಕಾರಕ್ಕಾಗಿ ವಾಮಮಾರ್ಗ ಸಲ್ಲದು: ಸಿದ್ದರಾಮಯ್ಯ

ನಂತರ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, 'ಅಧಿಕಾರಕ್ಕಾಗಿ ವಾಮಮಾರ್ಗ ಹಿಡಿಯುವ ಪ್ರಜಾಪ್ರಭುತ್ವ ವಿರೋಧಿ ನಿಲುವು ಸರಿಯಲ್ಲ' ಎಂದರು.

'ಬೇರೆ ಪಕ್ಷದಲ್ಲಿದ್ದುಕೊಂಡೇ ಶಾಸಕ ಜಿ.ಟಿ.ದೇವೇಗೌಡರು ಸತ್ಯವನ್ನು ಹೇಳಿದ್ದಾರೆ. ಅವರು ಮುಡಾ ಸದಸ್ಯರು. ಸತ್ಯಕ್ಕೇ ಸದಾ ಜಯ. ಈ ವರ್ಷವೂ ಐದು ವರ್ಷ ಮುಖ್ಯಮಂತ್ರಿಯಾಗಿ ಅವಧಿ ಪೂರೈಸುವೆ. ಚಾಮುಂಡೇಶ್ವರಿ ಹಾಗೂ ಜನರ ಆಶೀರ್ವಾದ ಇರುವವರೆಗೂ ಯಾರೂ ಏನೂ ಮಾಡಲಾಗದು' ಎಂದರು.

'ಮಂತ್ರಿಯಾಗಿ 40 ವರ್ಷವಾಯಿತು. ಆದರೆ ದೇವಿಯ ಕೃಪೆಯಿಂದ ಯಾವ ತಪ್ಪನ್ನೂ ಮಾಡಿಲ್ಲ. ಮಾಡಿದ್ದರೆ ರಾಜಕಾರಣದಲ್ಲಿ ನಿಲ್ಲಲು ಆಗುತ್ತಿರಲಿಲ್ಲ' ಎಂದು ಪ್ರತಿಪಾದಿಸಿದರು.

‘9 ವರ್ಷ ಸರ್ಕಾರ ಅಬಾಧಿತ’

'ನವದುರ್ಗೆಯರ ಕೃಪಾಶೀರ್ವಾದದರಿಂದ ಕಾಂಗ್ರೆಸ್ ಸರ್ಕಾರ 9 ವರ್ಷ ಅಬಾಧಿತವಾಗಿರಲಿದೆ' ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.

ಉಸ್ತುವಾರಿ ಸಚಿವ ಎಚ್.ಸಿ.ಮಹಾದೇವಪ್ಪ ಮಾತನಾಡಿದರು.

ಸಚಿವರಾದ ಕೆ.ಎಚ್.ಮುನಿಯಪ್ಪ, ಶಿವರಾಜ ತಂಗಡಗಿ, ಎಚ್.ಕೆ.ಪಾಟೀಲ, ಕೆ.ವೆಂಕಟೇಶ್, ಶಾಸಕರಾದ ಡಿ.ರವಿಶಂಕರ್, ಜಿ.ಡಿ.ಹರೀಶ್ ಗೌಡ, ಟಿ.ಎಸ್.ಶ್ರೀವತ್ಸ, ಡಾ.ಟಿ.ತಿಮ್ಮಯ್ಯ, ದರ್ಶನ್ ಧ್ರುವನಾರಾಯಣ, ಅನಿಲ್ ಚಿಕ್ಕಮಾದು, ಎ.ಆರ್.ಕೃಷ್ಣ ಮೂರ್ತಿ, ರಮೇಶ್ ಬಂಡಿಸಿದ್ದೇಗೌಡ, ಕೆ.ಹರೀಶ್ ಗೌಡ, ತನ್ವೀರ್ ಸೇಟ್, ಸಿ.ಎನ್.ಮಂಜುನಾಥ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್, ಚಾಮುಂಡಿ‌ಬೆಟ್ಟ ಪಂಚಾಯಿತಿ ಅಧ್ಯಕ್ಷೆ ಮಾರಮ್ಮ, ಜಿಲ್ಲಾಧಿಕಾರಿ ಲಕ್ಷ್ಮಿಕಾಂತರೆಡ್ಡಿ, ಜಿಪಂ ಸಿಇಓ. ಕೆ.ಎಂ. ಗಾಯತ್ರಿ, ಐಜಿಪಿ ಬೋರಲಿಂಗಯ್ಯ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಮುಡಾ ಅಧ್ಯಕ್ಷ‌ ಕೆ.ಮರಿಗೌಡ, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಆಯೂಬ್ ಖಾನ್, ಪಾಲ್ಗೊಂಡಿದ್ದರು.

ಚಾಮುಂಡಿ ಬೆಟ್ಟ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಚ್. ರೂಪಾ ಸಂವಿಧಾನದ ಪ್ರಸ್ತಾವನೆಯನ್ನು ಬೋಧಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT